ವಿಶ್ವದ ಮಿಲಿಟರಿ ವೆಚ್ಚ ವರ್ಷಕ್ಕೆ 162 ಲಕ್ಷಕೋಟಿ; ಭಾರತದ ಪಾಲೆಷ್ಟು?
ಸ್ವೀಡನ್, ಏ. 25: ಕೋವಿಡ್ ಸಂಕಷ್ಟದಿಂದ ಆರ್ಥಿಕತೆ ಬಸವಳಿದಿದ್ದರೂ ವಿವಿಧ ದೇಶಗಳು ಮಾಡುವ ಮಿಲಿಟರಿ ವೆಚ್ಚಗಳಿಗೆ ಕಡಿವಾಣ ಬಿದ್ದಿಲ್ಲ. ಇಡೀ ವಿಶ್ವದ ಎಲ್ಲಾ ದೇಶಗಳು ಸೇರಿ ಮಾಡಿರುವ ಒಟ್ಟಾರೆ ಮಿಲಿಟರಿ ವೆಚ್ಚ ಇದೇ ಮೊದಲ ಬಾರಿ 2 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. 2021ರಲ್ಲಿ ವಿವಿಧ ದೇಶಗಳು 2.1 ಟ್ರಿಲಿಯನ್ ಅಥವಾ 2113 ಬಿಲಿಯನ್ ಡಾಲರ್ (ಸುಮಾರು 162 ಲಕ್ಷಕೋಟಿ ರೂಪಾಯಿ) ಹಣವನ್ನು ಶಸ್ತ್ರಾಸ್ತ್ರ ಖರೀದಿ, ತಯಾರಿ ಮತ್ತಿತರೆ ಮಿಲಿಟರಿ ವೆಚ್ಚಕ್ಕೆ ಬಳಸಿಕೊಂಡಿವೆ. ಈ ಮಾಹಿತಿಯನ್ನು ಸ್ವೀಡನ್ ದೇಶದ ಸ್ಟಾಕ್‌ಹಾಂ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಸಂಸ್ಥೆ ಇಂದು ಸೋಮವಾರ ನೀಡಿದೆ. ಅಮೆರಿಕ ದೇಶ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. "ಒಟ್ಟಾರೆ ಜಾಗತಿಕ ಮಿಲಿಟರಿ ವೆಚ್ಚ 2021ರಲ್ಲಿ ಶೇ. 0.7ರಷ್ಟು ಹೆಚ್ಚಳವಾಗಿದೆ" ಎಂದು ಎಸ್‌ಐಪಿಆರ್‌ಐ (SIPRI) ತನ್ನ ವರದಿಯಲ್ಲಿ ತಿಳಿಸಿದೆ.
"ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕತೆ ಹಿನ್ನಡೆ ಆಗಿದ್ದರೂ ವಿಶ್ವದ ಮಿಲಿಟರಿ ವೆಚ್ಚ ದಾಖಲೆ ಮಟ್ಟ ಮುಟ್ಟಿದೆ. ಹಣದುಬ್ಬರದ ಕಾರಣದಿಂದ ರಿಯಲ್ ಟರ್ಮ್ ಏರಿಕೆ ದರದಲ್ಲಿ ಕಡಿಮೆ ಇದೆ. ಮಾಮೂಲಿಯ ಲೆಕ್ಕಾಚಾರದಲ್ಲಿ ಮಿಲಿಟರಿ ವೆಚ್ಚ 2021ರಲ್ಲಿ ಶೇ. 6.1ರಷ್ಟು ಹೆಚ್ಚಿದೆ" ಎಂದು ಹಿರಿಯ ಸಂಶೋಧಕ ಡಾ. ಡಿಯೇಗೊ ಲೋಪೆಸ್ ಡಾ ಸಿಲ್ವ ತಿಳಿಸಿದ್ದಾರೆ. ವಿಶ್ವದ ಒಟ್ಟಾರೆ ಜಿಡಿಪಿ ತೆಗೆದುಕೊಂಡರೆ ಮಿಲಿಟರಿಗೆ ಮಾಡಿರುವ ಖರ್ಚು ಶೇ. 2.2 ಎಂದು ಹೇಳಲಾಗಿದೆ.

ಮಿಲಿಟರಿ ವೆಚ್ಚ: ಟಾಪ್-5 ಪಟ್ಟಿ:
2021ರಲ್ಲಿ ಅತಿ ಹೆಚ್ಚು ಮಿಲಿಟರಿ ವೆಚ್ಚ ಮಾಡಿದ ದೇಶಗಳಲ್ಲಿ ಅಮೆರಿಕ ನಂಬರ್ ಒನ್ ಸ್ಥಾನ ಆಕ್ರಮಿಸಿಕೊಂಡಿದೆ. ಭಾರತ ಮೂರನೇ ಸ್ಥಾನದಲ್ಲಿದೆ. 2021ರಲ್ಲಿ ಅತಿ ಹೆಚ್ಚು ಮಿಲಿಟರಿ ವೆಚ್ಚ ಮಾಡಿದ ಟಾಪ್-5 ದೇಶಗಳ ವಿವರ ಈ ಕೆಳಕಂಡಂತಿವೆ:
1) ಅಮೆರಿಕ- 801 ಬಿಲಿಯನ್ ಡಾಲರ್ (61 ಲಕ್ಷಕೋಟಿ ರೂಪಾಯಿ)
2) ಚೀನಾ- 293 ಬಿಲಿಯನ್ ಡಾಲರ್ (22 ಲಕ್ಷಕೋಟಿ ರೂ)
3) ಭಾರತ- 76.6 ಬಿಲಿಯನ್ ಡಾಲರ್ (5.9 ಲಕ್ಷ ಕೋಟಿ ರೂ)
4) ಬ್ರಿಟನ್- 68.4 ಬಿಲಿಯನ್ ಡಾಲರ್ (5.2 ಲಕ್ಷಕೋಟಿ ರೂ)
5) ರಷ್ಯಾ- 65.9 ಬಿಲಿಯನ್ ಡಾಲರ್ (5 ಲಕ್ಷಕೋಟಿ ರೂ)

ಶೇ. 4.7ರಷ್ಟು ಹೆಚ್ಚು ಖರ್ಚು ಮಾಡಿದ ರಷ್ಯಾ:
ವಿಶ್ವದ ಒಟ್ಟಾರೆ ಆಗಿರುವ 162 ಲಕ್ಷಕೋಟಿಯಷ್ಟು ಮಿಲಿಟರಿ ವೆಚ್ಚದಲ್ಲಿ ಈ ಮೇಲಿನ ಐದು ದೇಶಗಳ ಪಾಲು ಶೇ. 62ರಷ್ಟಿದೆ. ಅಮೆರಿಕವೇ ಅತಿ ಹೆಚ್ಚು ಖರ್ಚು ಮಾಡಿದ್ದರೂ 2020ಕ್ಕೆ ಹೋಲಿಸಿದರೆ ಅದರ ಮಿಲಿಟರಿ ವೆಚ್ಚದಲ್ಲಿ ಶೇ. 1.4ರಷ್ಟು ಇಳಿಕೆಯಾಗಿದೆ.
ಆದರೆ, ಚೀನಾದ ಮಿಲಿಟರಿ ವೆಚ್ಚ ಶೇ. 4.7ರಷ್ಟು ಹೆಚ್ಚಾಗಿದೆ. ಬ್ರಿಟನ್ ದೇಶ ಶೇ. 3 ಮತ್ತು ರಷ್ಯಾ ಶೇ. 2.9ರಷ್ಟು ಹೆಚ್ಚು ಖರ್ಚು ಮಾಡಿವೆ. ಭಾರತ 2020ಕ್ಕೆ ಹೋಲಿಸಿದರೆ ಮಿಲಿಟರಿ ವೆಚ್ಚದಲ್ಲಿ ಹೆಚ್ಚಿಸಿದ್ದು ಶೇ. 0.9 ಮಾತ್ರ.
ಅಮೆರಿಕದಿಂದ ಮಿಲಿಟರಿ ಸಂಶೋಧನೆಗೆ ಹೆಚ್ಚು ಒತ್ತು:
2021ರಲ್ಲಿ ಅಮೆರಿಕ 61 ಲಕ್ಷಕೋಟಿ ರೂಪಾಯಿಯಷ್ಟು ಹಣವನ್ನು ಮಿಲಟರಿಗೆ ಖರ್ಚು ಮಾಡಿದೆ. ಆದರೆ, 2012ರಿಂದ 2021ರ ಹತ್ತು ವರ್ಷಗಳ ಅವಧಿಯಲ್ಲಿ ಅಮೆರಿಕ ಶಸ್ತ್ರಾಸ್ತ್ರ ಖರೀದಿಗಿಂತ ಹೆಚ್ಚಾಗಿ ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟಿದೆ. ಸಂಶೋಧನೆ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 24ರಷ್ಟು ಹೆಚ್ಚಳವಾಗಿದೆ. ಶಸ್ತ್ರಾಸ್ತ್ರ ಖರೀದಿಗೆ ವಿನಿಯೋಗವಾದ ಹಣ ಶೇ. 6.4ರಷ್ಟು ಕಡಿಮೆ ಆಗಿದೆ.

ಚೀನಾಗೆ ವಿಶ್ವಶಕ್ತಿ ಗುರಿ:
ವಿಶ್ವ ಮಿಲಿಟರಿ ಶಕ್ತಿಯಲ್ಲಿ ಅಮೆರಿಕಕ್ಕೂ ಸೆಡ್ಡು ಹೊಡೆಯಲು ತಯಾರಾಗಿರುವ ಚೀನಾ ದೇಶ ಮಿಲಿಟರಿ ವೆಚ್ಚದಲ್ಲಿ ಎರಡನೇ ಸ್ಥಾನದಲ್ಲಿದೆ. 2021ರಲ್ಲಿ ಚೀನಾ ಬರೋಬ್ಬರಿ 21 ಲಕ್ಷ ಕೋಟಿ ರೂ ಹಣವನ್ನು ಮಿಲಿಟರಿಗಾಗಿ ಖರ್ಚು ಮಾಡಿದೆ. ಅತ್ಯಾಧುನಿಕ ಮತ್ತು ಸುಧಾರಿತ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಚೀನಾ ಗಮನ ಕೊಟ್ಟಿದೆ.

ಭಾರತದಿಂದ ಕಳೆದ 10 ವರ್ಷದಲ್ಲಿ ಶೇ. 33ರಷ್ಟು ಹೆಚ್ಚು ಖರ್ಚು:
2021ರಲ್ಲಿ ಭಾರತದ ಮಿಲಿಟರಿ ವೆಚ್ಚ ಹೆಚ್ಚೂಕಡಿಮೆ 6 ಲಕ್ಷಕೋಟಿ ರೂ ಇದೆ. 2012ಕ್ಕೆ ಹೋಲಿಸಿದರೆ ಈ ವೆಚ್ಚದಲ್ಲಿ ಶೇ. 33ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಬಹುಪಾಲು ಹಣವನ್ನು ದೇಶೀಯವಾಗಿ ನಿರ್ಮಿತವಾದ ಶಸ್ತ್ರಾಸ್ತ್ರಗಳ ಖರೀದಿಗಾಗಿ ವಿನಿಯೋಗಿಸಲಾಗಿದೆ.

ರಷ್ಯಾದ ಕಾಸಿಗೆ ತಕ್ಕಷ್ಟು ಕಜ್ಜಾಯ:
ಕಳೆದ ಕೆಲ ವರ್ಷಗಳಿಂದ ರಷ್ಯಾದ ಮಿಲಿಟರಿ ವೆಚ್ಚ ಗಣನೀಯವಾಗಿ ಹೆಚ್ಚುತ್ತಾ ಬಂದಿದೆ. 2021ರಲ್ಲಿ ಅದು 5 ಲಕ್ಷ ಕೋಟಿ ರೂ ನಷ್ಟು ಹಣವನ್ನು ಮಿಲಿಟರಿಗೆ ಖರ್ಚು ಮಾಡಿದೆ. ಇದು ಆ ದೇಶದ ಜಿಡಿಪಿಯ ಶೇ. 4.1ರಷ್ಟು ಮೊತ್ತವಾಗಿದೆ. ರಷ್ಯಾ ಇಷ್ಟೊಂದು ವೆಚ್ಚ ಮಾಡಲು ಸಾಧ್ಯವಾಗಿದ್ದು ತೈಲ ಬೆಲೆ ಹೆಚ್ಚಳದಿಂದ. 2019ಕ್ಕೆ ಮುನ್ನ ತೈಲ ಬೆಲೆ ಕಡಿಮೆ ಇದ್ದಾಗ ರಷ್ಯಾದ ಮಿಲಿಟರಿ ವೆಚ್ಚ ಕಡಿಮೆ ಇತ್ತು ಎಂದು ಸಿಪ್ರಿ ಸಂಸ್ಥೆಯ ನಿರ್ದೇಶಕರೊಬ್ಬರು ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications