36 ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡ; 20,000 ಕ್ಕೂ ಹೆಚ್ಚು ಜನರ ವಾಸ
ಒಂದು ಅಪಾರ್ಟ್‌ಮೆಂಟ್‌ನಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ಜನ ವಾಸಿಸಬಹುದು, ಎರಡು - ಮೂರು ಸಾವಿರ ಜನ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರೆ ಅದೇ ಸಖತ್ ದೊಡ್ಡದು ಎನಿಸುತ್ತದೆ. ಒಂದು ಅಪಾರ್ಟ್‌ನೆಂಟ್ ಒಂದು ಊರಿನಷ್ಟು ದೊಡ್ಡಾಗಿದ್ದರೆ ಅದು ಹೇಗಿರುತ್ತದೆ ಗೊತ್ತಾ?
ಚೀನಾದ ಹ್ಯಾಂಗ್‌ಝೌನಲ್ಲಿರುವ ರೀಜೆಂಟ್ ಇಂಟರ್‌ನ್ಯಾಶನಲ್ ಅಪಾರ್ಟ್‌ಮೆಂಟ್ ಕಟ್ಟಡವನ್ನು ಒಂದು ಸಣ್ಣ ಪಟ್ಟಣ ಎಂದೇ ಹೇಳಬಹುದು. 36 ಅಂತಸ್ತಿನ ಕಟ್ಟಡದಲ್ಲಿ 20,000 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಈ ಕಟ್ಟಡ ಹಲವು ಕಾರಣಗಳಿಂದ ಈಗ ಜಗತ್ತಿನ ಗಮನ ಸೆಳೆಯುತ್ತಿದೆ.

ಹ್ಯಾಂಗ್‌ಝೌನ ಕೇಂದ್ರ ವ್ಯಾಪಾರ ಜಿಲ್ಲೆಯ ಕಿಯಾನ್‌ಜಿಯಾಂಗ್ ಸೆಂಚುರಿ ಸಿಟಿಯಲ್ಲಿ ಈ ಕಟ್ಟಡ ಇದೆ, ಈ ಕಟ್ಟಡವನ್ನು ಹೋಟೆಲ್ ಉದ್ದೇಶಕ್ಕಾಗಿ ನಿರ್ಮಿಸಲಾಗಿತ್ತು, ಬಳಿಕ ಅಪಾರ್ಟ್‌ಮೆಂಟ್ ಕಟ್ಟಡವಾಗಿ ಪರಿವರ್ತಿಸಲಾಯಿತು, ಹೋಟೆಲ್‌ಗಾಗಿ ನಿರ್ಮಿಸಿದ್ದ ಕೊಠಡಿಗಳನ್ನು ಸಾವಿರಾರು ಉನ್ನತ-ಮಟ್ಟದ ವಸತಿ ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತಿಸಲಾಯಿತು.
ಅಪಾರ್ಟ್‌ಮೆಂಟ್‌ನಲ್ಲೇ ಎಲ್ಲಾ ಸೌಲಭ್ಯ
ವರದಿಗಳ ಪ್ರಕಾರ, ಕಟ್ಟಡವು 206 ಮೀಟರ್ ಎತ್ತರ ಮತ್ತು 36 ಮಹಡಿಗಳನ್ನು ಹೊಂದಿದೆ. ಈ ಅಪಾರ್ಟ್‌ನೆಂಟ್ ನಿವಾಸಿಗಳು ತಮ್ಮ ದೈನಂದಿನ ವಸ್ತುಗಳಿಗೆ ಹೊರಗೆ ಹೋಗುವ ಅಗತ್ಯವೇ ಇಲ್ಲ. ಅಪಾರ್ಟ್‌ಮೆಂಟ್‌ನಲ್ಲೇ ಈಜುಕೊಳಗಳು, ಸಲೂನ್‌ಗಳು, ಬ್ಯೂಟಿ ಪಾರ್ಲರ್, ಸೂಪರ್ ಮಾರ್ಕೆಟ್, ಇಂಟರ್ನೆಟ್ ಕೆಫೆ, ಹೋಟೆಲ್ ಎಲ್ಲವನ್ನೂ ಒಳಗೊಂಡಿದೆ.
ಚೈನೀಸ್ ನ್ಯೂಸ್ ಏಜೆನ್ಸಿ, ಸಿನಾ ಪ್ರಕಾರ, ಸಿಂಗಾಪುರ್ ಸ್ಯಾಂಡ್ಸ್ ಹೋಟೆಲ್‌ನ ಮುಖ್ಯ ವಿನ್ಯಾಸಕಿ ಅಲಿಸಿಯಾ ಲೂ ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ. 2013 ರಲ್ಲಿ ಉದ್ಘಾಟನೆಯಾದ ವಿಶ್ವದ ಎರಡನೇ ಸೆವೆನ್-ಸ್ಟಾರ್ ಹೋಟೆಲ್ ಅನ್ನು ಕೂಡ ಅಲಿಸಿಯಾ ಲೂ ವಿಸ್ಯಾಸ ಮಾಡಿದ್ದರು, ಇದು ಜನಪ್ರಿಯ ಕಟ್ಟಡಗಳಲ್ಲಿ ಒಂದಾಗಿದೆ.
ಮಾಹಿತಿ ಪ್ರಕಾರ, ಈ ಅಪಾರ್ಟ್‌ಮೆಂಟ್‌ನಲ್ಲಿ ಉನ್ನತ ಸಂಸ್ಥೆಗಳಿಂದ ಪದವಿ ಪಡೆದ ಅಥವಾ ಪದವೀಧರರಾಗಲಿರುವ ಯುವ ವೃತ್ತಿಪರರು ಹೆಚ್ಚಾಗಿ ವಾಸವಿರದ್ದಾರೆ. ಸಣ್ಣ ವ್ಯಾಪಾರಿಗಳು ಕೂಡ ಹೆಚ್ಚಾಗಿ ಇಲ್ಲಿ ನೆಲೆಸಿದ್ದಾರೆ. 260,000 ಚದರ ಮೀಟರ್‌ಗಿಂತಲೂ ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿರುವ ರೀಜೆಂಟ್ ಇಂಟರ್‌ನ್ಯಾಶನಲ್ ಅಪಾರ್ಟ್‌ಮೆಂಟ್ ಕಟ್ಟಡವು ಚೀನಾದಲ್ಲೇ ದೊಡ್ಡ ವಸತಿ ಕಟ್ಟಡವಾಗಿದೆ.
The Regent International apartment building in Hangzhou, China, is renowned for housing approximately 20,000 people, akin to a small town. pic.twitter.com/C6t0odfSLI
— M O I B E N S H I R E (@Kapyoseiin) April 8, 2024
ಬಾಡಿಗೆ ಎಷ್ಟು ಗೊತ್ತಾ?
ಇನ್ನು ಈ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಏನೂ ಕಡಿಮೆ ಇಲ್ಲ, ಕಿಟಕಿಗಳು ಇಲ್ಲದ ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಮಾಡಬೇಕು ಅಂದರೆ ಒಂದು ತಿಂಗಳಿಗೆ 1,500 RMB ($220) ಬಾಡಿಗೆ ನೀಡಬೇಕು. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು 19,000 ರೂಪಾಯಿ ಆಗುತ್ತದೆ. ಬಾಲ್ಕನಿ ಹೊಂದಿರುವ ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಬೇಕು ಎಂದರೆ ತಿಂಗಳಿಗೆ 4,000 RMB (550 USD) ಅಥವಾ ಅದಕ್ಕಿಂತ ಹೆಚ್ಚು ಬಾಡಿಗೆ ಪಾವತಿಸಬೇಕಾಗುತ್ತದೆ. ಬೇರೆ ಕಡೆ ಹೋಲಿಸಿದರೆ ಇಲ್ಲಿ ಬಾಡಿಗೆ ಇರುವುದರಿಂದ ಹೆಚ್ಚಿನ ಜನ ಇಲ್ಲಿ ವಾಸಿಸಲು ಬಯಸುತ್ತಾರೆ.
ರೀಜೆಂಟ್ ಇಂಟರ್‌ನ್ಯಾಷನಲ್ ಕಟ್ಟಡದ ಫೋಟೋಗಳು ಮತ್ತು ವೀಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ದೊಡ್ಡ ಅಪಾರ್ಟ್‌ಮೆಂಟ್ ಕಟ್ಟಡ, ವಾಸಿಸುವ ಜನಸಂಖ್ಯೆಯನ್ನು ಕೇಳಿ ನೆಟ್ಟಿಗರು ಕೂಡ ಸೋಜಿಗಗೊಂಡಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳು, ಸಣ್ಣ ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಇಂತಹ ಕಟ್ಟಡಗಳು ಅಚ್ಚರಿಯಾಗಿ ಕಾಣಿಸುತ್ತವೆ.












Click it and Unblock the Notifications