ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಬಗ್ಗೆ ತಿಳಿಯಿರಿ
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರ ಚಿಕಿತ್ಸೆಗೆ ಸಹಕಾರಿಯಾಗಿದೆ. ಈ ಯೋಜನೆಯ ಅಡಿ ದೊರೆಯವ ಸೌಲಭ್ಯಗಳ ಮಾಹಿತಿ ಇಲ್ಲಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಕಾರ್ಡ್‌ಗಳ ಮೂಲಕ ದೇಶದಾದ್ಯಂತ ನೋಂದಾಯಿತ ಆಸ್ಪತ್ರ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಪಡೆಯಲು ಅನುಕೂಲಕರವಾಗಿದೆ. ಜನರು ಈ ಯೋಜನೆ ಸದುಪಯೋಗವನ್ನು ಪಡೆದುಕೊಳ್ಳಬಹುದು. ಕರ್ನಾಟಕದಲ್ಲಿ ಜನರು ಈ ಯೋಜನೆಯ ಸೌಲಭ್ಯ ಪಡೆಯಲು ತಮ್ಮ ಹತ್ತಿರದ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೆಂಟರ್‌ಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ಯೋಜನೆಯಡಿ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಆನ್‌ಲೈನ್ ಮೂಲಕ ರೆಫೆರಲ್ ನೀಡಲು ಕಾರ್ಡ್‌ಗಳ ಅವಶ್ಯಕತೆ ಇದೆ. ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಆಧಾರದ ಮೇಲೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ನೋಂದಣಿ ಮಾಡಿ ಕಾರ್ಡ್ ನೀಡಲಾಗುತ್ತದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಅಡಿ ನೀಡಲಾಗುವ ಕಾರ್ಡ್‌ಗಳನ್ನು ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್ ಎನ್ನುತ್ತಾರೆ. ಈ ಕಾರ್ಡ್ 14 ಸಂಖ್ಯೆಯ ನಂಬರ್ ಹೊಂದಿದೆ. ಕಾರ್ಡ್‌ನಲ್ಲಿ ರೋಗಿಯ ಆರೋಗ್ಯ ದತ್ತಾಂಶವನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಚಿಕಿತ್ಸೆ ಸಂದರ್ಭದಲ್ಲಿ ರೋಗಿಯ ಹಿಂದಿನ ಚಿಕಿತ್ಸೆಯ ದತ್ತಾಂಶ ದೊರೆಯಲಿದ್ದು, ಮುಂದಿನ ಚಿಕಿತ್ಸೆಗೆ ಶೀಘ್ರವಾಗಿ ಸಹಕಾರಿಯಾಗುತ್ತದೆ.

ಎಷ್ಟು ವೆಚ್ಚದ ಚಿಕಿತ್ಸೆ ಲಭ್ಯವಿದೆ?
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರು ಮತ್ತು ರಾಷ್ಟ್ರೀಯ ಸ್ವಾಸ್ತ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಎಪಿಎಲ್ ಕಾರ್ಡ್ ಹೊಂದಿರುವವರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರಿಗೆ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಚಿಕಿತ್ಸೆಗೆ ಅವಕಾಶವಿದೆ.
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಆರೋಗ್ಯ ಮಿತ್ರರನ್ನು ಅಥವಾ ಆರೋಗ್ಯ ಸಹಾಯವಾಣಿ 104 ಮತ್ತು 14555 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಚಿಕಿತ್ಸೆ 4 ಹಂತಗಳಲ್ಲಿ ವಿಭಜನೆ
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಲ್ಲಿ ರೋಗಗಳ ಚಿಕಿತ್ಸೆಯನ್ನು 4 ಹಂತದಲ್ಲಿ ವಿಭಜಿಸಲಾಗಿದೆ. ಚಿಕಿತ್ಸಾ ಕೋಡ್‌ಗಳಾದ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು (2ಎ), ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು (2ಬಿ), ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು (3ಎ) ಮತ್ತು ತುರ್ತು ಚಿಕಿತ್ಸೆ 169 ಚಿಕಿತ್ಸಾ ವಿಧಾನಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು (4ಎ) ಆಗಿದ್ದು ಯೋಜನೆಯಡಿ ಒಟ್ಟು 1650 ಚಿಕಿತ್ಸಾ ಕೋಡ್‌ಗಳು ಲಭ್ಯವಿರುತ್ತದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾ ಆರೋಗ್ಯ ಯೋಜನೆ ಕಾರ್ಡ್‌ಗಳನ್ನು ಪಡೆಯುವಲ್ಲಿ ಯಾವುದೇ ಸಂದೇಹಗಳಿದ್ದಲ್ಲಿ ಹತ್ತಿರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದಾಗಿದೆ.

ಯೋಜನೆಯಡಿ ಸೌಲಭ್ಯಗಳು
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯಲು ಯಾವುದೇ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪ್ರಥಮವಾಗಿ ಹತ್ತಿರದ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಖಾಯಿಲೆಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ರೆಫರಲ್ ನೀಡಲಾಗುತ್ತದೆ.
ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.

ತೃತೀಯ ಲಿಂಗಿಗಳಿಗೂ ಚಿಕಿತ್ಸಾ ಸೌಲಭ್ಯ
ಆಯುಷ್ಮಾನ್ ಭಾರತ್-ಪಿಎಂಜೆವೈ ಅಡಿಯಲ್ಲಿ ತೃತೀಯಲಿಂಗಿಗಳಿಗೆ ಸಮಗ್ರ ಆರೋಗ್ಯ ಪ್ಯಾಕೇಜ್ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಯಡಿ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ತೃತೀಯಲಿಂಗಿ ಸಮುದಾಯಕ್ಕೆ ಸೂಕ್ತವಾದ ಮತ್ತು ಗೌರವದ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯಕವಾಗಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಹೆಚ್‌ಎ) ಹಾಗೂ ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಸಚಿವಾಲಯ ನಡುವಿನ ಇಂದಿನ ತಿಳಿವಳಿಕಾ ಒಪ್ಪಂದವು ದೇಶಾದ್ಯಂತ ತೃತೀಯಲಿಂಗಿಗಳಿಗೆ (ತೃತೀಯಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್ ನೀಡಿದ ತೃತೀಯಲಿಂಗಿ ಪ್ರಮಾಣಪತ್ರವನ್ನು ಹೊಂದಿರುವವರಿಗೆ) ಎಲ್ಲ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ ಹೇಳಿದ್ದಾರೆ.












Click it and Unblock the Notifications