ಔಷಧ ಸೇವನೆ ಯಾವ ರಾಜ್ಯದಲ್ಲಿ ಹೆಚ್ಚು? ಕರ್ನಾಟಕದವರ ಕಥೆ?
ಔಷಧದ ಮೇಲೆ ನಾವು ತೀರಾ ಅವಲಂಬಿತವಾಗಿರುವುದು ಹೌದು. ಕೆಮ್ಮಿಗೂ ಔಷಧ, ನೆಗಡಿಗೂ ಔಷಧ, ಸಣ್ಣ ತಲೆನೋವಿಗೂ ಔಷಧ ಬೇಕು. ಮನೆಯಲ್ಲಿ ಬಾಕ್ಸ್ ಬಾಕ್ಸ್‌ಗಳಲ್ಲಿ ಔಷಧಗಳೇ ತುಂಬಿರುತ್ತವೆ.
ಒಂದು ಸಾಮಾನ್ಯ ಕುಟುಂಬ ಇದ್ದರೆ ಒಂದು ತಿಂಗಳಿಗೆ ಸಾವಿರ ರೂ ಆದರೂ ಔಷಧಕ್ಕೆ ಖರ್ಚಾಗುವುದುಂಟು. ಬಿಪಿ, ಶುಗರ್ ಇತ್ಯಾದಿ ಕಾಯಿಲೆ ಕಸಾಲೆಗಳು ಬಂದರಂತೂ ತಿಂಗಳಿಗೆ ಐದಾರು ಸಾವಿರ ರೂ ಎತ್ತಿಡಬೇಕು.
ಅಂದಹಾಗೆ, ಮಾತ್ರೆ ಇತ್ಯಾದಿ ಔಷಧಗಳ ಸೇವನೆಯಲ್ಲಿ ಕೇರಳಿಗರನ್ನು ಮೀರಿಸುವವರಿಲ್ಲವಂತೆ. ಇಲ್ಲಿ ಒಬ್ಬ ವ್ಯಕ್ತಿ ಸರಾಸರಿಯಾಗಿ ಔಷಧಕ್ಕೆ ಮಾಡುವ ವೆಚ್ಚ ವರ್ಷಕ್ಕೆ 2,567 ರೂ ಅಂತೆ. ಇದು ಲೋಕಸಭೆಯಲ್ಲಿ ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ. ಇದರಲ್ಲಿ ವೈದ್ಯರು ಕೊಟ್ಟ ಪ್ರಿಸ್‌ಕ್ರಿಪ್ಚನ್ ಬಳಸಿ ಶೇ. 88.43ರಷ್ಟು ಔಷಧಗಳನ್ನು ಕೇರಳಿಗರು ಕೊಳ್ಳುತ್ತಾರೆ. ಇನ್ನುಳಿದ ಶೇ. 11.57 ಔಷಧವನ್ನು ಮೆಡಿಕಲ್ ಸ್ಟೋರ್‌ಗಳಲ್ಲಿ ಜನರು ನೇರವಾಗಿ ಖರೀದಿ ಮಾಡುತ್ತಾರೆನ್ನಲಾಗಿದೆ.
ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಸರಾಸರಿ ಔಷಧ ಸೇವನೆಯಲ್ಲಿ ಕೇರಳದ ನಂತರದ ಸ್ಥಾನದಲ್ಲಿವೆ.

ಕರ್ನಾಟಕ ಪರವಾಗಿಲ್ಲ
ಅತಿ ಕಡಿಮೆ ಔಷಧ ಸೇವನೆಯ ಪಟ್ಟಿಯಲ್ಲಿ ಕರ್ನಾಟಕ ಇರುವುದು ಸಮಾಧಾನದ ಸಂಗತಿ. ನಮ್ಮ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಸರಾಸರಿಯಾಗಿ ವರ್ಷಕ್ಕೆ 510 ರೂ ಹಣವನ್ನು ಔಷಧಕ್ಕೆ ವ್ಯಯಿಸುತ್ತಾನಂತೆ. ಬಿಹಾರದಲ್ಲಿ ಇದು ಅತೀ ಕಡಿಮೆ. ಇಲ್ಲಿ ಔಷಧಕ್ಕೆ ಪರ್ ಕ್ಯಾಪಿಟಾ ವೆಚ್ಚ 298 ರೂ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಹೀಗೆ ಅತಿ ಕಡಿಮೆ ವೆಚ್ಚದ ರಾಜ್ಯಗಳನ್ನು ಪಟ್ಟಿ ಮಾಡಿದರೆ ಕರ್ನಾಟಕ ಐದನೇ ಸ್ಥಾನ ಪಡೆಯುತ್ತದೆ.

ಅತಿ ಹೆಚ್ಚು ಔಷಧ ಸೇವಿಸುವ ರಾಜ್ಯಗಳು
1) ಕೇರಳ: 2,567 ರೂ
2) ಹಿಮಾಚಲ ಪ್ರದೇಶ: 1700 ರೂ
3) ಪಶ್ಚಿಮ ಬಂಗಾಳ: 1499 ರೂ
4) ಆಂದ್ರಪ್ರದೇಶ: 1488 ರೂ
5) ಉತ್ತರಪ್ರದೇಶ: 1118 ರೂ
6) ಪಂಜಾಬ್ 1224 ರೂ
(ವಾರ್ಷಿಕ ತಲಾವಾರು ಲೆಕ್ಕ)

ಅತಿ ಕಡಿಮೆ ಔಷಧ ಸೇವಿಸುವ ರಾಜ್ಯಗಳು
1) ಬಿಹಾರ: 298 ರೂ
2) ಅಸ್ಸಾಂ: 386 ರೂ
3) ಛತ್ತೀಸ್‌ಗಡ: 401 ರೂ
4) ಉತ್ತರಾಖಂಡ್: 411 ರೂ
5) ಕರ್ನಾಟಕ: 510 ರೂ
6) ಗುಜರಾತ್: 590 ರೂ
(ವಾರ್ಷಿಕ ತಲಾವಾರು ಲೆಕ್ಕ)

ಕೇರಳದಲ್ಲಿ ವಿಪರೀತ
ಕೇರಳ ಮೊದಲಿಂದಲೂ ಔಷಧ ಸೇವನೆಯಲ್ಲಿ ವಿಪರೀತವೇ. ಇಡೀ ಭಾರತದಲ್ಲಿ ಆಗುವ ಒಟ್ಟಾರೆ ಔಷಧ ಮಾರಾಟದಲ್ಲಿ ಕೇರಳದ ಪಾಲು ಶೇ. 10ಕ್ಕಿಂತಲೂ ಅಧಿಕವೇ ಇರುತ್ತದೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇರಳದ ಪಾಲು ಶೇ. 2.8 ಇರಬಹುದು. ಆದರೆ, ಔಷಧ ಮಾರಾಟದಲ್ಲಿ ಮಾತ್ರ ಹೆಚ್ಚಿನ ಪಾಲು ಹೊಂದಿರುವುದು ಕೇರಳಿಗರು ಮೆಡಿಸಿನ್‌ಗೆ ಎಷ್ಟು ಅವಲಂಬಿತರಾಗಿದ್ದಾರೆಂದು ಸೂಚಿಸುತ್ತದೆ.
ಕೇರಳದಲ್ಲಿ ಆಂಟಿ ಬಯೋಟಿಕ್ಸ್, ಪೇನ್ ಕಿಲ್ಲರ್‌ಗಳು ಹೆಚ್ಚು ಖರ್ಚಾಗುತ್ತವಂತೆ. ನ್ಯೂಟ್ರಿನ್ ಇತ್ಯಾದಿ ಪೌಷ್ಟಿಕಾಂಶಕ್ಕೆ ತೆಗೆದುಕೊಳ್ಳುವ ಗುಳಿಗೆಗಳಿಗೂ ಕೇರಳದಲ್ಲಿ ಬೇಡಿಕೆ ಇದೆ. ಕರ್ನಾಟಕದಲ್ಲೂ ಇತ್ತೀಚೆಗೆ ಔಷಧ ಸೇವನೆಯ ಪ್ರವೃತ್ತಿ ಹೆಚ್ಚುತ್ತಿದೆ. ಇಲ್ಲಿಯೂ ಸಣ್ಣ ಪುಟ್ಟದ್ದಕ್ಕೆಲ್ಲಾ ಆಸ್ಪತ್ರೆಗೆ, ಔಷಧದಂಗಡಿಗಳಿಗೆ ಮುಗಿಬೀಳುವುದು ಸಾಮಾನ್ಯವಾಗಿ ಹೋಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications