ಕರ್ನಾಟಕಕ್ಕೆ ಹೀಟ್ ವೇವ್ ಭೀತಿ; ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಗೆ ಸಲಹೆಗಳು
ಈ ಬಾರಿಯ ಬೇಸಿಗೆಗೆ ಜನರು ಬಸವಳಿದಿದ್ದಾರೆ. ಸುಡುಬಿಸಿಲು ದಿನೇನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಹೀಟ್ ವೇವ್ ಆತಂಕ ಶುರುವಾಗಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಉಷ್ಣಾಂಶ 38-39ರ ಆಸುಪಾಸಿನಲ್ಲಿದೆ. ಬೆಂಗಳೂರು ನಗರದಲ್ಲಿಯೇ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪವು ಹೆಚ್ಚಾಗಿರುವುದರಿಂದ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಜನರು ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.
ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ಎಲ್. ಜನಾರ್ಧನ ತಿಳಿಸಿದ್ದಾರೆ. ಬೇಸಿಗೆಯಲ್ಲಿ ಜನರು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೇ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕದ ಕರಾವಳಿ, ದಕ್ಷಿಣ ಕರ್ನಾಟಕದಲ್ಲಿ ತಾಪಮಾನ ವಾಡಿಕೆಯಷ್ಟೇ ಇದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ದಿನೇದಿನೇ ಏರಿಕೆಯಾಗುತ್ತಿದೆ.

ಬೇಸಿಗೆಯಲ್ಲಿ ಏನು ಮಾಡಬೇಕು?; ಬೇಸಿಗೆ ಸಮಯದಲ್ಲಿ ಜನರು ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಿ. ಆಗಾಗ ನಿಧಾನವಾಗಿ ಧಾರಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ. ಹಣ್ಣಿನ ರಸ ಮತ್ತು ಪಾನಕಗಳನ್ನು ಕುಡಿಯಿರಿ. ಹತ್ತಿಯ ನುಣುಪಾದ ಬಟ್ಟೆ ಮತ್ತು ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಿರಿ. ನೀರು, ಮಜ್ಜಿಗೆ ಮತ್ತು ಎಳೆನೀರು ಕುಡಿಯಬಹುದು. ಬೆಚ್ಚಗಿನ, ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಿರಿ. ಗಾಳಿಯಾಡುವಂತಿರುವ ಪಾದರಕ್ಷೆ ಧರಿಸಿ. ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಬೇಕು.
ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದ್ದಲ್ಲಿ, ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿರಿ. ಕೆಳಗೆ ಮಲಗಿಸಿ, ಕಾಲುಗಳನ್ನು ಮೇಲಕೆತ್ತಿ ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಿರಿ (ತಂಪಾದ ಅಥವಾ ಐಸ್ ನೀರಿನಿಂದ ಒರೆಸಬೇಡಿ). ಚರ್ಮ ಕೆಂಪಾದರೆ, ಬೆವರು ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀವ್ರ ಉಸಿರಾಟವಿದ್ದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕಿಸಿ ಹತ್ತಿರದ ವೈದ್ಯರನ್ನು ಕರೆಸಿರಿ ಅಥವಾ 104ಕ್ಕೆ ಕರೆ ಮಾಡಿರಿ.

ನೀವು ಕೈಗೊಳ್ಳುವ ಶೀಘ್ರ ಸಮಯೋಚಿತ ಪ್ರಜ್ಞಾಪೂರ್ವಕ ಕ್ರಮವು ಆಘಾತಕ್ಕೊಳಗಾದ ವ್ಯಕ್ತಿಯ ಪ್ರಾಣ ಉಳಿಸಬಲ್ಲದು. ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ಧೀಕರಿಸಿದ ಅಥವಾ ನೀರು ಶುದ್ದೀಕರಣ ಘಟಕದ ನೀರನ್ನು ಕುಡಿಯಲು ಬಳಸಿ. ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್‍ಗಳ ಕಾಲ ತೊಳೆದುಕೊಂಡ ನಂತರ ಆಹಾರ ಸೇವಿಸಿ. ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಿರಿ. ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಿ ಮತ್ತು ಸುರಕ್ಷಿತ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು. ಶಾಖಾಘಾತಕ್ಕೆ ಒಳಗಾದಾಗ ಸಂಭ್ರಾಂತಿ, ಅಸಂಗತ ಮಾತು, ವ್ಯತ್ಯಸ್ಥ ಪ್ರಜ್ಞೆ ಲಕ್ಷಣಗಳಾಗಿವೆ.
ಬೇಸಿಗೆಯಲ್ಲಿ ಏನು ಮಾಡಬಾರದು?; ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್ ಬಟ್ಟೆ ಧರಿಸಬಾರದು. ಕುಷನ್‍ಯುಕ್ತ ಕುರ್ಚಿಯಲ್ಲಿ ಕೂಡಬೇಡಿ. ಸೋಡಾ ಮತ್ತು ಇತ್ಯಾದಿ ಕಾರ್ಬೋನೇಟೆಡ್ ತಂಪು ಪಾನಿಯಗಳನ್ನು ಕುಡಿಯಬೇಡಿ (ಬಾಯಾರಿಕೆಯಾದಾಗಲೆಲ್ಲಾ ಕಡ್ಡಾಯವಾಗಿ ನೀರನ್ನು ಕುಡಿಯಿರಿ). ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬಾರದು. ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬಾರದು. ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬಾರದು, ಮಾಂಸಹಾರ ವರ್ಜಿಸಿ ಮತ್ತು ಮಧ್ಯಪಾನ ವರ್ಜಿಸಬೇಕು.
ಬಿಗಿಯಾದ ಗಾಳಿಯಾಡದ ಪಾದರಕ್ಷೆ ಮತ್ತು ಶೂ ಧರಿಸಬಾರದು. ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ ಅಥವಾ ಶೀತಲೀಕರಿಸಿದ ನೀರಿನಿಂದ ಒರೆಸಬಾರದು (ಇದರಿಂದ ವ್ಯಕ್ತಿಯ ದೇಹದ ಹೊರಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು ದೇಹದ ಒಳಗಿನ ಉಷ್ಣತೆ ದೇಹದೊಳಗೆ ಬಂಧಿತವಾಗಿ ಆತನ ಅಂಗಾಂಗಗಳನ್ನು ನಿಷ್ಕ್ರಿಯಗೊಂಡು, ಹೆಚ್ಚಿನ ಹಾನಿಯಾಗಬಹುದು.) ವ್ಯಕ್ತಿಯ ತೊದಲು ತೊದಲಾಗಿ, ವಿಚಿತ್ರವಾಗಿ ಮಾತನಾಡಿದರೆ ಆತಂಕ ಪಡಬೇಡಿ. ಶಾಂತಿ ಸಮಾಧಾನದಿಂದ ಶೀಘ್ರವಾಗಿ ಕ್ರಮ ಕೈಗೊಳ್ಳಿರಿ.
ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ಧೀಕರಿಸದೇ ಇರುವ ಅಥವಾ ಕೆರೆ, ಕುಂಟೆಗಳ ನೀರನ್ನು ನೇರವಾಗಿ ಕುಡಿಯಬೇಡಿ. ಕೈಗಳನ್ನು ತೊಳೆದುಕೊಳ್ಳದೇ ಆಹಾರವನ್ನು ಸೇವಿಸಬೇಡಿ. ನೀರಿನ ಸಂಗ್ರಹಣಗಳ ಮೇಲೆ ಮುಚ್ಚಳ ಮುಚ್ಚದೇ ಬಿಡಬೇಡಿ. ಬಯಲು ಪ್ರದೇಶಗಳಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬಾರದು. ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮತ್ತು ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನಬಾರದು. ತಯಾರಿಸಿದ ಆಹಾರವನ್ನು ಮುಚ್ಚಳ ಮುಚ್ಚದಂತೆ ಇಡಬಾರದು.












Click it and Unblock the Notifications