ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ರಹಸ್ಯ, ಇದೀಗ ಬಯಲು!

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಸಿಎಂ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ವಿಧಾನಸಭೆಯನ್ನು ಪ್ರವೇಶಿಸಲೇಬೇಕು ಎಂಬ ಕಾರಣಕ್ಕಾಗಿ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರೆ, ಗೌಡ್ರ ಕುಟುಂಬದ ಮೇಲೆ ತಮಗೆ ಸಂಪೂರ್ಣ ಹಿಡಿತವಿರಲಿ ಎಂಬ ಕಾರಣಕ್ಕಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಬೆಳವಣಿಗೆ ಇಂಟರೆಸ್ಟಿಂಗ್ ಆಗಿದೆ.

ಅಂದ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಉದ್ದೇಶವೇನೂ ಇರಲಿಲ್ಲ. ಹಾಗೆಯೇ ತಾವು ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿಯೇ ಸ್ಪರ್ಧಿಸಿದ್ದರೆ ಈ ಬಾರಿ ಅವರು ಎರಡು ವಿಧಾನಸಬಾ ಕ್ಷೇತ್ರಗಳಿಂದ ಸ್ಪರ್ಧಿಸುವ ಅಗತ್ಯವೂ ಇರಲಿಲ್ಲ.

'ಜೆಡಿಎಸ್‌ ಯೋಜನೆಗಳನ್ನು ಅನುಷ್ಠಾನಕ್ಕೆ ಸಮ್ಮತಿಸಿದವರ ಜೊತೆ ಮೈತ್ರಿ''ಜೆಡಿಎಸ್‌ ಯೋಜನೆಗಳನ್ನು ಅನುಷ್ಠಾನಕ್ಕೆ ಸಮ್ಮತಿಸಿದವರ ಜೊತೆ ಮೈತ್ರಿ'

ಯಾಕೆಂದರೆ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಶಕ್ತಿ ಈಗಲೂ ಹೆಚ್ಚು. ಹಾಗಂತ ತಾವು ಅಲ್ಲಿಂದ ಸ್ಪರ್ಧಿಸಿದರೆ ಮಗ ಯತೀಂದ್ರ ಅವರಿಗೆ ಸೇಫ್ ಅನ್ನುವ ಕ್ಷೇತ್ರ ಯಾವುದು? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಪವರ್ ಇದೆಯಾದರೂ ಸಹಜವಾಗಿಯೇ ಅಲ್ಲಿ ಜೆಡಿಎಸ್ ಮತ್ತಷ್ಟು ಪವರ್ ಫುಲ್.

ಯಾಕೆಂದರೆ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಿ.ಟಿ. ದೇವೇಗೌಡರೇ ಆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ. ಅದಲ್ಲದೆ ಜೆಡಿಎಸ್ ವರಿಷ್ಠ ದೇವೇಗೌಡರ ಪ್ರಭಾವ ಕೂಡಾ ಆ ಕ್ಷೇತ್ರದಲ್ಲಿ ಸುನಾಮಿಯ ರೂಪದಲ್ಲಿದೆ. ಅಂಥಲ್ಲಿ ಯತೀಂದ್ರ ಸ್ಪರ್ಧಿಸಿದರೆ ಮಗುಚಿ ಬೀಳುವುದು ನಿಶ್ಚಿತ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು.

ಅಚ್ಚರಿ ಹುಟ್ಟಿಸಿದ ಕುಮಾರಸ್ವಾಮಿಯವರ ಆ ಹೇಳಿಕೆ!ಅಚ್ಚರಿ ಹುಟ್ಟಿಸಿದ ಕುಮಾರಸ್ವಾಮಿಯವರ ಆ ಹೇಳಿಕೆ!

ಹೀಗಾಗಿ ಮಗ ಯತೀಂದ್ರ ಅವರನ್ನು ರಿಸ್ಕ್ ಗೆ ಸಿಲುಕಿಸಿ, ತಾವು ಸೇಫೆಸ್ಟ್ ಕ್ಷೇತ್ರದಿಂದ ಸ್ಪರ್ಧಿಸುವುದು ಸರಿಯಲ್ಲ ಎಂಬ ಕಾರಣಕ್ಕಾಗಿ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವಲ್ಲದೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುವ ತೀರ್ಮಾನಕ್ಕೆ ಬಂದರು.

ಇದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ವಿಷಯವೇ. ಆದರೆ ಕುಮಾರಸ್ವಾಮಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದರ ಹಿಂದಿನ ರಹಸ್ಯ ಇದುವರೆಗೆ ಎಲ್ಲೂ ಬಯಲಾಗಿಲ್ಲ.

ಡಿಕೆಶಿ ಮತ್ತು ಎಚ್ಡಿಕೆ ಒಳ ಒಪ್ಪಂದ?

ಡಿಕೆಶಿ ಮತ್ತು ಎಚ್ಡಿಕೆ ಒಳ ಒಪ್ಪಂದ?

ನೋಡುವವರ ಕಣ್ಣಿಗೆ ಇದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಹಾಲಿ ಎಮ್ಮೆಲ್ಲೆ, ಬಿಜೆಪಿ ಕ್ಯಾಂಡಿಡೇಟ್ ಸಿ.ಪಿ. ಯೋಗೇಶ್ವರ್ ಅವರನ್ನು ಸೋಲಿಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಮಾಡಿಕೊಂಡಿರುವ ಒಳ ಒಪ್ಪಂದ. ಆದರೆ ವಾಸ್ತವ ಪರಿಸ್ಥಿತಿಯೇ ಬೇರೆ. ಚನ್ನಪಟ್ಟಣ ಕ್ಷೇತ್ರ ರಾಜಕೀಯವಾಗಿ ಜೆಡಿಎಸ್ ನ ಸುಭದ್ರ ಕೋಟೆಗಳಲ್ಲಿ ಒಂದು. ಆದರೆ ಚಿತ್ರದುರ್ಗದ ಕೋಟೆಗೆ ನುಗ್ಗಲು ಕಿಂಡಿಯಿದ್ದುದನ್ನು ಅರಿತ ಹೈದರಾಲಿಯ ಸೈನಿಕರು ಧಿಡೀರನೆ ಒಳನುಗ್ಗಿದಂತೆ ಸಿ.ಪಿ. ಯೋಗೇಶ್ವರ್ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ನ ದೌರ್ಬಲ್ಯದ ಕಿಂಡಿಯನ್ನು ಹಿಡಿದುಕೊಂಡೇ ಚನ್ನಪಟ್ಟಣದಲ್ಲಿ ಸೆಟ್ಲ್ ಆಗಿದ್ದಾರೆ.

ಜೆಡಿಎಸ್ ಕೋಟೆ ಅಸ್ಥಿರವಾಗುವ ಆತಂಕ

ಜೆಡಿಎಸ್ ಕೋಟೆ ಅಸ್ಥಿರವಾಗುವ ಆತಂಕ

ಈ ಕೋಟೆಯನ್ನು ಮರಳಿ ಪಡೆಯುವುದು ಮಾತ್ರವಷ್ಟೇ ಅಲ್ಲ, ತಮ್ಮ ಕುಟುಂಬದಲ್ಲಿ ಸಂಭವಿಸಲಿದ್ದ ದೊಡ್ಡ ಒಡಕನ್ನು ತಪ್ಪಿಸುವುದು ಕುಮಾರಸ್ವಾಮಿ ಅವರ ಲೆಕ್ಕಾಚಾರ. ವಾಸ್ತವವಾಗಿ ಕುಮಾರಸ್ವಾಮಿ ಅವರಿಗೆ ರಾಮನಗರ ಕ್ಷೇತ್ರ ಸೇಫ್ ಆಗಿಯೇ ಇದೆ. ಆದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟರೆ ಅಲ್ಲಿಂದ ಸ್ಪರ್ಧಿಸಲು ಸಹೋದರ ರೇವಣ್ಣ ಅವರ ಪುತ್ರ ಪ್ರಜ್ವಲ್ ಸಿದ್ಧರಾಗಿದ್ದಾರೆ. ಅದೇ ಕಾರಣಕ್ಕಾಗಿ ತಮ್ಮಜ್ಜ ದೇವೇಗೌಡರ ಬಳಿ ಇಂಡೆಂಟ್ ಹಾಕಿ ಕುಳಿತಿದ್ದಾರೆ ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ನಿಲುವುಗಳು ಜೆಡಿಎಸ್ ಕೋಟೆಯನ್ನು ಅಸ್ಥಿರಗೊಳಿಸುವಂತಿವೆ ಎಂಬುದು ಕುಮಾರಸ್ವಾಮಿ ಅವರ ಆತಂಕ. ಹೀಗಾಗಿಯೇ ಪ್ರಜ್ವಲ್ ರೇವಣ್ಣ ಎಲ್ಲೆಲ್ಲಿಂದ ಸ್ಪರ್ಧಿಸಲು ಮನಸ್ಸು ಮಾಡಿದರೋ? ಅದರ ಹಿಂದೆ ತಮ್ಮ ಶತ್ರುಗಳಿದ್ದಾರೆ ಎಂಬುದು ಕುಮಾರಸ್ವಾಮಿ ಅವರಿಗಿರುವ ಮೆಸೇಜು.

ರೇವಣ್ಣ ಮನದಲ್ಲಿ ಉರಿಯುತ್ತಿರುವ ಕಿಡಿಯೇ ಇದು

ರೇವಣ್ಣ ಮನದಲ್ಲಿ ಉರಿಯುತ್ತಿರುವ ಕಿಡಿಯೇ ಇದು

ಹೀಗಾಗಿ ಪ್ರಜ್ವಲ್ ರೇವಣ್ಣ ಅವರೇನಾದರೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರೆ, ತಾವೇ ತಮ್ಮ ಕೈಯ್ಯಾರೆ ಜೆಡಿಎಸ್ ದುರ್ಬಲವಾಗಲು ದಾರಿ ಮಾಡಿಕೊಟ್ಟಂತೆ. ಯಾಕೆಂದರೆ ರಾಜಕಾರಣದಲ್ಲಿ ತಮ್ಮ ಸಹೋದರ ರೇವಣ್ಣ ತಮಗಿಂತ ಹಿರಿಯರಾದರೂ ಕನಿಷ್ಠ ಪಕ್ಷ ಉಪಮುಖ್ಯಮಂತ್ರಿಯಾಗಿಲ್ಲ. ರಾಜಕೀಯ ಲೆಕ್ಕಾಚಾರಗಳ ನಡುವೆ ಇದು ಸಹಜವೇ ಆದರೂ ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರಲ್ಲಿ ಇದು ಬೇರೆ ರೀತಿಯ ಕಿಡಿಯಾಗಿ ಸೇರಿಕೊಂಡಿದೆ. ತಮ್ಮ ತಂದೆ ಅರ್ಹರಾಗಿದ್ದರೂ ಅವರು ಉಪಮುಖ್ಯಮಂತ್ರಿಯಾಗುವುದನ್ನು ತಮ್ಮ ಚಿಕ್ಕಪ್ಪ ಕುಮಾರಸ್ವಾಮಿ ಅವರೇ ತಪ್ಪಿಸಿದರು ಎಂಬುದು ಅವರ ಮನಸ್ಸಿನಲ್ಲಿರುವ ಕಿಡಿ.

ಪ್ರಜ್ವಲ್ ರೇವಣ್ಣ ಅಸಮಾಧಾನಕ್ಕೆ ಕಾರಣ

ಪ್ರಜ್ವಲ್ ರೇವಣ್ಣ ಅಸಮಾಧಾನಕ್ಕೆ ಕಾರಣ

2006ರಲ್ಲಿ ಬಿಜೆಪಿಯ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಪ್ರಕ್ರಿಯೆ ಸುಗಮವಾಗುವಂತೆ ನೋಡಿಕೊಂಡಿದ್ದರೆ ರಗಳೆಯೇ ಇರುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದ ಚಿಕ್ಕಪ್ಪ ಕುಮಾರಸ್ವಾಮಿ, ಎರಡನೇ ಕಂತಿನಲ್ಲಿ ಉಪಮುಖ್ಯಮಂತ್ರಿಯಾಗಲು ಪ್ಲಾನು ಮಾಡಿದರು. ಅವರ ಈ ಪ್ಲಾನೇ ಜೆಡಿಎಸ್-ಬಿಜೆಪಿ ಸರ್ಕಾರ ಮುಂದುವರಿಯಲು ಅಡ್ಡಿಯಾಯಿತು. ಅಷ್ಟೇ ಅಲ್ಲ, ಆಗ ಉಪಮುಖ್ಯಮಂತ್ರಿಯಾಗುವ ಅವಕಾಶ ತಮ್ಮ ತಂದೆ ರೇವಣ್ಣ ಅವರಿಗೆ ತಪ್ಪಿತು ಎಂಬುದು ಪ್ರಜ್ವಲ್ ರೇವಣ್ಣ ಅವರ ಅಸಮಾಧಾನ.

ಯೋಗೇಶ್ವರರಿಗೆ ಸಿಗಲ್ಲ ಒಕ್ಕಲಿಗರ ಮತ

ಯೋಗೇಶ್ವರರಿಗೆ ಸಿಗಲ್ಲ ಒಕ್ಕಲಿಗರ ಮತ

ಇಂತಹ ಅಸಮಾಧಾನವನ್ನು ತುಂಬಿಕೊಂಡ ಸಹೋದರನ ಮಗ ನಾಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರೆ ತಮಗೆ ಕಂಟಕಪ್ರಾಯರಾಗುತ್ತಾರೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ. ಹೀಗಾಗಿಯೇ ಅವರು ರಾಮನಗರ ವಿಧಾನಸಭಾ ಕ್ಷೇತ್ರದ ಜತೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಲು ನಿರ್ಧರಿಸಿದರು. ಯಾರೇನೇ ಹೇಳಿದರೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಪ್ರಬಲವಾದ ಮತ ಬ್ಯಾಂಕ್ ಇದೆ. ಆದರೆ ರೀತಿ ಸಿ.ಪಿ. ಯೋಗೇಶ್ವರ್ ಏನೇ ಹೇಳಲಿ, ಒಕ್ಕಲಿಗ ಸಮುದಾಯದ ಬಹುತೇಕ ಮತಗಳು ಅವರಿಗೆ ದಕ್ಕುವುದಿಲ್ಲ. ಅವರ ಗೆಲುವಿಗೆ ಹಿಂದಿನಿಂದಲೂ ನೆರವಾಗುತ್ತಿರುವುದು ಅಹಿಂದ ಸಮುದಾಯದ ಮತಗಳು.

ಮತ್ತೊಂದು ಲೆಕ್ಕಾಚಾರದಲ್ಲಿ ಎಚ್ಎಂ ರೇವಣ್ಣ

ಮತ್ತೊಂದು ಲೆಕ್ಕಾಚಾರದಲ್ಲಿ ಎಚ್ಎಂ ರೇವಣ್ಣ

ಆದರೆ ಈ ಸಲ ಕಾಂಗ್ರೆಸ್ ವತಿಯಿಂದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸ್ಪರ್ಧಿಸಿದ್ದಾರೆ. ಒಕ್ಕಲಿಗರ ಮತಗಳು ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಅವರ ನಡುವೆ ಒಡೆದು ಹೋಳಾದರೆ ಗೆಲುವು ತಮ್ಮದು ಎಂಬುದು ಎಚ್.ಎಂ.ರೇವಣ್ಣ ಅವರ ಲೆಕ್ಕಾಚಾರ. ಈ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ. ಆದರೆ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದರ ಹಿಂದಿರುವ ನೈಜ ಕಾರಣ ಇದು. ಅಷ್ಟೇ ಅಲ್ಲ, ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಜಯಗಳಿಸಿದರೆ ಅವರು ರಾಮನಗರ ವಿಧಾನಸಭಾ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್

ಚನ್ನಪಟ್ಟಣದಲ್ಲಿ ಗೆದ್ದರೆ ರಾಮನಗರ ಹೆಂಡತಿಗೆ

ಚನ್ನಪಟ್ಟಣದಲ್ಲಿ ಗೆದ್ದರೆ ರಾಮನಗರ ಹೆಂಡತಿಗೆ

ಹಾಗಂತ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಡಲು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಸುತಾರಾಂ ಸಿದ್ಧರಿಲ್ಲ. ಬದಲಿಗೆ ತಮ್ಮ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರನ್ನು ರಾಮನಗರ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿ ಸ್ಪರ್ಧಿಸುವಂತೆ ಮಾಡುವುದು ಅವರ ಲೆಕ್ಕಾಚಾರ. ಯಾಕೆಂದರೆ ಅನಿತಾ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕಿಂತ ರಾಮನಗರ ವಿಧಾನಸಭಾ ಕ್ಷೇತ್ರವೇ ಸೇಫು. ಕಳೆದ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಇದೇ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿರುದ್ಧ ಕೇವಲ ಆರೂವರೆ ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಪತಿ ಮುಖ್ಯಮಂತ್ರಿ, ಪತ್ನಿ ಮಂತ್ರಿ!

ಪತಿ ಮುಖ್ಯಮಂತ್ರಿ, ಪತ್ನಿ ಮಂತ್ರಿ!

ಹಾಗೆ ಕುಮಾರಸ್ವಾಮಿ ಅವರೇನಾದರೂ ಚನ್ನಪಟ್ಟಣದ ಶಾಸಕರಾಗಿ ಉಳಿದುಕೊಂಡು, ಅನಿತಾ ಕುಮಾರಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದ ಸದಸ್ಯರಾದರೆ ಮತ್ತು ಅದೇ ಕಾಲಕ್ಕೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಒಂದೇ ಸರ್ಕಾರದಲ್ಲಿ ಪತಿ ಮುಖ್ಯಮಂತ್ರಿಯಾಗಿ, ಪತ್ನಿ ಮಂತ್ರಿಯಾಗುವ ದಾಖಲೆಯೂ ನಿರ್ಮಾಣವಾಗಬಹುದು. ಅದೇನೇ ಇರಲಿ, ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಕುಮಾರಸ್ವಾಮಿ ಅವರು ಗೌಡ್ರ ಕುಟುಂಬದಲ್ಲಿ ತಮ್ಮದೇ ಪಾಳೇಪಟ್ಟನ್ನು ಗಟ್ಟಿಗೊಳಿಸಿಕೊಳ್ಳಲು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ರಿಯಲಿ ಇಂಟರೆಸ್ಟಿಂಗ್ ಅಲ್ಲವೇ?

English summary
Karnataka Assembly Elections 2018 : Why JDS Karnataka president H D Kumaraswamy chose to contest in Channapatna too, apart from contesting in Ramanagara constituency? The secret is out. HDK had apprehension that if does not contest, Prajwal Revanna will latch on the opportunity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X