ಇವರೇ ನೋಡಿ ಕರ್ನಾಟಕ ಸರ್ಕಾರಕ್ಕೆ ಕೊರೊನಾ ನಿಯಂತ್ರಣ ಸಲಹೆ ನೀಡುವ 'ತಜ್ಞರು'!
ಬೆಂಗಳೂರು, ಜ.17: ಕೋವಿಡ್-19ಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಮೊದಲು ಹೇಳುವುದು, 'ತಜ್ಞರ ಸಮಿತಿ ಸಲಹೆ ಮೇರೆಗೆ ಈ ಆದೇಶ ಮಾಡಿದ್ದೇವೆ' ಎಂದು.
ಹಾಗಾದರೆ ತಜ್ಞರು ಯಾರು, ಎಷ್ಟು ಸಮಿತಿಗಳನ್ನು ರಚಿಸಲಾಗಿದೆ, ಆ ಸಮಿತಿಯಲ್ಲಿ ಯಾರು ಯಾರು ಇದ್ದಾರೆ, ಇವರ ಜವಾಬ್ದಾರಿಗಳು ಏನು ಎಂಬ ಕುತೂಹಲ ಸಾರ್ವಜನಿಕರಲ್ಲಿ ಇದ್ದೇ ಇದೆ. ಬಹುತೇಕ ನಿರ್ಧಾರಗಳು ಕಠಿಣ ಎನಿಸಿದರೂ ತಜ್ಞರು ಹೇಳಿದ್ದಾರೆ ಎಂಬ ಒಂದೇ ಮಾತಿಗೆ ಎಲ್ಲರೂ ಒಪ್ಪಿಕೊಂಡ ಅನೇಕ ಉದಾಹರಣೆಗಳಿವೆ.
ಕೋವಿಡ್ ಆರಂಭವಾಗಿದ್ದು ಬಹುತೇಕ 2020ರ ಆರಂಭದಲ್ಲಿ. ಆಗ ಮುಖ್ಯಮಂತ್ರಿ ಆಗಿದ್ದವರು ಬಿ.ಎಸ್. ಯಡಿಯೂರಪ್ಪ. ಇವರ ಅವಧಿಯಲ್ಲಿಯೇ ಅಂದರೆ, 2020ರ ಏಪ್ರಿಲ್ 13ರಂದು ಮೊದಲ ಬಾರಿಗೆ ತಜ್ಞರ ಸಮಿತಿ ನೇಮಕ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಈ ಸಮಿತಿ ಸದಸ್ಯರು ಸರ್ಕಾರಕ್ಕೆ ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಬದಲಾದರೂ ಸಹ ತಜ್ಞರ ಸಮಿತಿ ಹೇಳಿದ ಬಳಿಕ ಯಾರೂ ಮರು ಪ್ರಶ್ನೆ ಮಾಡದೆ ಅದನ್ನು ಅಧಿಕಾರದಲ್ಲಿ ಇರುವವರು ಒಪ್ಪಿಕೊಂಡಿದ್ದಾರೆ.

ಕೋವಿಡ್ ಎರಡನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದರು
ಕೋವಿಡ್ ಎರಡನೇ ಅಲೆ ಪ್ರಾರಂಭವಾಗುತ್ತದೆ, ಸೂಕ್ತ ಸಿದ್ಧತೆ ಮಾಡಿಕೊಳ್ಳಿ ಎಂದು ತಜ್ಞರ ಸಮಿತಿ 2020ರ ಡಿಸೆಂಬರ್‌ನಲ್ಲಿಯೇ ಹೇಳಿತ್ತು. ಆದರೆ, ಸರ್ಕಾರ ಆಗ ಸ್ವಲ್ಪ ನಿರ್ಲಕ್ಷ್ಯ ವಹಿಸಿದ ಕಾರಣದಿಂದ 2021ರ ಮಾರ್ಚ್‌ನಿಂದ ಬಹುತೇಕ ಜೂನ್‌ವರೆಗೆ ಕೋವಿಡ್ -19 ಡೆಲ್ಟಾ ರೂಪಾಂತರ ತಳಿ ಅಬ್ಬರಿಸಿತು. ನಾವು ಹೇಳಿದ್ದೆವು, 'ಸರ್ಕಾರ ನಮ್ಮ ಸಲಹೆ ಗಣನೆಗೆ ತೆಗೆದುಕೊಳ್ಳಲಿಲ್ಲ' ಎಂದು ಅಬ್ಬರಿಸಿತು. ಇದರ ತರುವಾಯ ತಜ್ಷರ ಸಮಿತಿ ಏನೇ ಸಲಹೆಗಳನ್ನು ನೀಡಿದರೂ ಸರ್ಕಾರ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದೆ.

ತಾಂತ್ರಿಕ ಸಲಹಾ ಸಮಿತಿಯಲ್ಲಿ ಯಾರಿದ್ದಾರೆ?
ಸರ್ಕಾರ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಿ ಬಹುತೇಕ 19 ತಿಂಗಳ ಹಿಂದೆಯೇ ಆದೇಶ ಹೊರಡಿಸಿದೆ.
* ಡಾ.ಎಂ.ಕೆ. ಸುದರ್ಶನ (ಅಧ್ಯಕ್ಷ)- ಕೆಂಪೇಗೌಡ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್‌ನ ನಿರ್ದೇಶಕ
* ಡಾ.ಗಿರಿಧರ ಬಾಬು, ಸಾಂಕ್ರಾಮಿಕ ರೋಗಶಾಸ್ತ್ರಜ್ಞ (ಸದಸ್ಯ)
* ಡಾ.ರವಿ/ ಡಾ.ಅನಿತಾ- ನಿಮ್ಹಾನ್ಸ್ ಆಸ್ಪತ್ರೆಯ ವೈರಾಲಜಿಸ್ಟ್ ವಿಭಾಗ (ಸದಸ್ಯ)
* ಡಾ.ಪ್ರದೀಪ್/ ಡಾ.ಗುರುರಾಜ್- ನಿಮ್ಹಾನ್ಸ್‌ನ ಸಾಂಕ್ರಾಮಿಕ ರೋಗ ತಜ್ಞರು (ಸದಸ್ಯ)
* ಡಾ.ಕೆ.ರವಿ- ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮೆಡಿಸಿನ್ ವಿಭಾಗ ಮುಖ್ಯಸ್ಥ (ಸದಸ್ಯ)
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು (ಸದಸ್ಯ ಕಾರ್ಯದರ್ಶಿ)

ಕ್ಲಿನಿಕಲ್ ತಜ್ಞರ ಸಮಿತಿ
ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರದ ಹಂತದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ.ಕೆ. ರವಿ ಅವರ ಅಧ್ಯಕ್ಷತೆಯಲ್ಲಿ ಕ್ಲಿನಿಕಲ್ ತಜ್ಞರ ಸಮಿತಿಯನ್ನು ಪುನಾರಚಿಸಿ ಕಳೆದ ಡಿ.6ರಂದು ಆದೇಶವೊಂದನ್ನು ಹೊರಡಿಸಲಾಗಿದೆ.
ಸಮಿತಿಯು ಕೋವಿಡ್-19 ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸೂಚನೆ/ ಆದೇಶಗಳನ್ನು ಕಾರ್ಯಗತಗೊಳಿಸಲು ಮತ್ತು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮಧ್ಯೆ ಸಮನ್ವಯ ಸಾಧಿಸಿ ಅಗತ್ಯ ಸಲಹೆಗಳನ್ನು ನೀಡುವುದು ಈ ಸಮಿತಿಯ ಕೆಲಸ.

ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು
ಕೋವಿಡ್-19 ಗೆ ತುತ್ತಾದ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ಬೆಡ್‌ಗಳ ವ್ಯವಸ್ಥೆ ಮಾಡುವುದು, ಚಿಕಿತ್ಸೆಗೆ ನಿಗದಿಪಡಿಸಲಾದ ನಿರ್ದಿಷ್ಟ ಶಿಷ್ಟಾಚಾರಗಳನ್ನು ಪಾಲಿಸುವುದು, ಉಳಿದಂತೆ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಈ ಸಮಿತಿಯ ಕೆಲಸ. ಡಾ.ರವಿ ಅವರ ಈ ಕೆಳಕಂಡವರು ಸದಸ್ಯರಿದ್ದಾರೆ.

ಕ್ಲಿನಿಕಲ್ ತಜ್ಞರ ಸಮಿತಿ ಸದಸ್ಯರು
* ಡಾ.ಗಿರೀಶ್ ಪಿ.ಜಿ- ವೈದ್ಯಕೀಯ ಶಿಕ್ಷಣ ನಿರ್ದೇಶ (ಸದಸ್ಯ ಕಾರ್ಯದರ್ಶಿ)
* ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ (ಸದಸ್ಯ)
* ಡಾ.ಸಿ. ನಾಗರಾಜ್, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಎಸ್‌ಡಿಎಸ್ (ಸದಸ್ಯ)
* ಡಾ.ಕೆ.ಎನ್. ರಮೇಶ್, ಕನ್ಸಲ್ಟಂಟ್ ಫಿಸಿಷಿಯನ್, ಫೋರ್ಟೀಸ್ ಆಸ್ಪತ್ರೆ (ಸದಸ್ಯ)
* ಡಾ.ಜಾರ್ಜ್ ಡಿಸೌಜಾ- ಸೇಂಟ್ ಜಾನ್ ಮೆಡಿಕಲ್ ಕಾಲೇಜು ಡೀನ್ (ಸದಸ್ಯ)
* ಡಾ.ಕೆ.ಎಸ್. ಸತೀಶ್ - ವಿಕ್ರಮ್ ಆಸ್ಪತ್ರೆ ಶ್ವಾಸಕೋಶ ತಜ್ಞ (ಸದಸ್ಯ)
* ಡಾ. ಬಾಲಕೃಷ್ಣ ಶೆಟ್ಟಿ, ತುಮಕೂರು ಸಿದ್ಧಾರ್ಥ ವಿಶ್ವವಿದ್ಯಾಲಯ ಕುಲಪತಿ (ಸದಸ್ಯ)
* ಡಾ.ಭದ್ರಿನಾರಾಯಣ, ನಿಮಾನ್ಸ್ ಅನಸ್ತ್ರೇಷಿಯಾಲಜಿ ವಿಭಾಗ ಪ್ರಾಧ್ಯಾಪಕ (ಸದಸ್ಯ)
* ಡಾ. ಬಿ.ಎಲ್. ಶಶಿ ಭೂಷಣ- ಬಿಎಂಆರ್‌ಸಿಐ ಶ್ವಾಸಕೋಶ ರೋಗಗಳ ವಿಭಾಗ ಮುಖ್ಯಸ್ಥ (ಸದಸ್ಯ)
* ಡಾ.ಪ್ರದೀಪ್ ರಂಗಪ್ಪ, ಕೊಲಂಬಿಯಾ ಏಷಿಯಾ ಆಸ್ಪತ್ರೆ ತುರ್ತು ರೋಗ ವಿಭಾಗ ತಜ್ಞ (ಸದಸ್ಯ)
* ಡಾ.ಕೆ.ಎಸ್. ಚಂದ್ರಮೌಳಿ, ಸೇಂಟ್ ಜಾನ್ ಮೆಡಿಕಲ್ ಕಾಲೇಜು ಮೆಡಿಸಿನ್ ವಿಭಾಗ ಪ್ರಾಧ್ಯಾಪಕ (ಸದಸ್ಯ)
* ಡಾ.ರವೀಂದ್ರ ಮೆಹ್ತಾ, ಅಪೊಲೊ ಆಸ್ಪತ್ರೆ ಎದೆರೋಗ ತಜ್ಞ (ಸದಸ್ಯ)
* ಡಾ.ಸುನೀಲ್ ಕಾರಂತ್, ಮಣಿಪಾಲ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ (ಸದಸ್ಯ)
* ಡಾ.ಬಸವರಾಜ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಪ್ರಾಧ್ಯಾಪಕ
* ಡಾ.ಸವಿತಾ, ಬಿಎಂಆರ್‌ಸಿಐ ಓಬಿಜಿ ವಿಭಾಗ ಮುಖ್ಯಸ್ಥೆ (ಸದಸ್ಯೆ)
* ಡಾ. ಸಂಪತ್, ಇಎನ್‌ಟಿ ತಜ್ಞ ಮಣಿಪಾಲ ಆಸ್ಪತ್ರೆ (ಸದಸ್ಯ)












Click it and Unblock the Notifications