ಉಪ ಚುನಾವಣೆ: ಎಚ್‌ಡಿಕೆ ಪಾಲಿಗೆ ಅಕ್ಷರಶಃ ವಿಲನ್ ಆದ ಜಮೀರ್ ಅಹ್ಮದ್
ಉಪ ಚುನಾವಣೆ ನಡೆದ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ಸಿಂಧಗಿಯಲ್ಲಿ ಪಕ್ಷಕ್ಕೆ ಬೇಸ್ ಇದೆ ಎಂದು ದಳಪತಿಗಳು ಬಹಳ ಪರಿಶ್ರಮ ಪಟ್ಟು ಕೆಲಸ ಮಾಡಿದ್ದರು. ಹಾನಗಲ್‌ನಲ್ಲಿ ನೆಲೆಯಿಲ್ಲ ಎನ್ನುವುದನ್ನು ಖುದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೇ ಒಪ್ಪಿಕೊಂಡಿದ್ದರು.
ಆದರೆ, ಪಕ್ಷಕ್ಕಾದ ಈ ಅವಮಾನಕರ ಸೋಲಿಗೆ ಗೌಡ್ರು ಅಥವಾ ಕುಮಾರಸ್ವಾಮಿಯವರಿಗೆ ಬೇಸರವಿಲ್ಲವೇ ಎನ್ನುವುದಿಲ್ಲಿ ಎದುರಾಗುವ ಪ್ರಶ್ನೆ. ಯಾಕೆಂದರೆ, ಉಪ ಚುನಾವಣೆಯಲ್ಲಿ ಸೋತ ನಂತರ ಎಚ್‌ಡಿಕೆ ನೀಡಿದ್ದ ಪ್ರತಿಕ್ರಿಯೆ. "ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ, ಮಿಷನ್ 123 ಯೋಜನೆಯಂತೆ ಗೆಲ್ಲುವುದು" ಎಂದು ಕುಮಾರಸ್ವಾಮಿ ಹೇಳಿದ್ದರು.
ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು JDS ಕಣಕ್ಕಿಳಿಸಿದ್ಯಾಕೆ? ದೇವೇಗೌಡರು ಕೊಟ್ಟ ಕಾರಣ!
ಒಂದು ವೇಳೆ, ಉಪ ಚುನಾವಣೆಯನ್ನು ಜೆಡಿಎಸ್ ಮುಖಂಡರು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲಾಂದರೆ, ಸಿಂಧಗಿಯಲ್ಲಿ ಹಿರಿಯ ಜೀವ ದೇವೇಗೌಡ್ರು ಸುಮಾರು ಹತ್ತು ದಿನಗಳ ಠಿಕಾಣಿ ಹೂಡಿದ್ದು, ಕುಮಾರಸ್ವಾಮಿ ಸತತ ಪ್ರಚಾರ ನಡೆಸಿದ್ದು, ಸಂಸದ ಪ್ರಜ್ವಲ್ ರೇವಣ್ಣ ಮನೆಮನೆಗೆ ಹೋಗಿ ಮತಯಾಚಿಸಿದ್ದೆಲ್ಲಾ ಯಾಕೆ ಎನ್ನುವ ಪ್ರಶ್ನೆ ಕಾರ್ಯಕರ್ತರಿಗೆ ಕಾಡದೇ ಇರುತ್ತದೆಯೇ?
ಡಿ.ಕೆ.ಶಿವಕುಮಾರ್ ಪ್ರಾರ್ಥನೆಗೆ ಕಣ್ಬಿಟ್ಟ ಗ್ರಾಮ ದೇವತೆ, ಹರಕೆ ಸಲ್ಲಿಕೆ
ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಹಾನಗಲ್‌ನಲ್ಲಿ ಹೋಗಲಿ ನೆಲೆಯಿಲ್ಲ ಎಂದು ಜೆಡಿಎಸ್ ಒಪ್ಪಿಕೊಂಡಿತ್ತು, ಹಾಗಾದರೆ ಸಿಂಧಗಿಯಲ್ಲಿನ ಮುಸ್ಲಿಂ ಮತಗಳು ಎಲ್ಲಿಗೆ ಹೋದವು? ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಅವರ ಪ್ರಚಾರ, ಜೆಡಿಎಸ್ ಪಾಲಿಗೆ ಮುಳುವಾಯಿತೇ, ಕುಮಾರಸ್ವಾಮಿ ಪಾಲಿಗೆ ಜಮೀರ್ ವಿಲನ್ ಆದರೇ?

ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ
ಸಿಂಧಗಿ ಮತ್ತು ಹಾನಗಲ್‌ನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎನ್ನುವುದು ಮೂರೂ ಪಕ್ಷಗಳಿಗೆ ಗೊತ್ತಿರುವ ಜಾತಿ ಲೆಕ್ಕಾಚಾರ. ಸಿಂಧಗಿಯಲ್ಲಿ ಸುಮಾರು 33-38 ಸಾವಿರ, ಹಾನಗಲ್‌ನಲ್ಲಿ ಸುಮಾರು 25-30 ಸಾವಿರ ಮತಗಳಿವೆ. ಈ ಎರಡು ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಜೆಡಿಎಸ್ಸಿಗೆ ಬಿದ್ದ ಮತಗಳೆಷ್ಟು? ಕ್ರಮವಾಗಿ 4,353 ಮತ್ತು 927. ಆ ಮೂಲಕ ಜೆಡಿಎಸ್ ಹೀನಾಯವಾಗಿ ಠೇವಣಿಯನ್ನು ಕಳೆದುಕೊಂಡಿತ್ತು. ಹಾಗಾದರೆ, ಈ ಸಮುದಾಯ ಜೆಡಿಎಸ್ ಕೈಯಾಕೆ ಹಿಡಿಯಲಿಲ್ಲ ಎಂದಾಗ , ಜಮೀರ್ ಅಹ್ಮದ್ ಮಾಡಿದ ವ್ಯವಸ್ಥಿತ ಪ್ರಚಾರ ಎಂದು ಬೊಟ್ಟು ಮಾಡಲಾಗುತ್ತಿದೆ.

ಈ ಬಾರಿಯ ಅಭ್ಯರ್ಥಿಯಾಗಿದ್ದ ನಾಜಿಯಾ ವಿದ್ಯಾವಂತೆ, ರಾಜಕೀಯ ಹಿನ್ನೆಲೆಯುಳ್ಳವರು
ಸಿಂಧಗಿಯಲ್ಲಿ ಕಳೆದ ಬಾರಿ ಜೆಡಿಎಸ್ ಗೆದ್ದಿತ್ತು ಮತ್ತು ಈ ಬಾರಿಯ ಅಭ್ಯರ್ಥಿಯಾಗಿದ್ದ ನಾಜಿಯಾ ಅಂಗಡಿ ವಿದ್ಯಾವಂತೆಯಾಗಿದ್ದು, ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದವರಾಗಿದ್ದವರು. ಗೌಡ್ರು ಎಂಡ್ ಕುಟುಂಬ ಅವಿರತ ಪರಿಶ್ರಮವನ್ನು ಪಟ್ಟಿತ್ತು. ಆದರೆ, ಇನ್ನೊಂದು ಕಡೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಖುಲ್ಲಂಖುಲ್ಲವಾಗಿ ಸೂಟ್ಕೇಸ್ ಬಂದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದದ್ದು ಜೆಡಿಎಸ್ಸಿಗೆ ಭರ್ಜರಿ ಹಿನ್ನಡೆಯನ್ನು ನೀಡಿತ್ತು.

ಅಲ್ಪಸಂಖ್ಯಾತ ಸಮುದಾಯದವರನ್ನು ಕಣಕ್ಕಿಳಿಸಿದ ವಿಚಾರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ
ಎರಡು ಕಡೆ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯದವರನ್ನು ಕಣಕ್ಕಿಳಿಸಿದ ವಿಚಾರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ಆರಂಭಿಸಿದ್ದರು, ಅದನ್ನು ದಡಕ್ಕೆ ಸೇರಿಸಿದವರು ಜಮೀರ್ ಅಹ್ಮದ್ ಎಂದೇ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. "ಕುಮಾರಸ್ವಾಮಿಯವರನ್ನು ನಾನು ಹತ್ತಿರದಿಂದ ಬಲ್ಲೆ, ಸ್ವಂತ ಲಾಭವಿಲ್ಲದೇ ಯಾವುದೇ ಕೆಲಸವನ್ನು ಅವರು ಮಾಡುವವರಲ್ಲ. ಹಾನಗಲ್‌ನಲ್ಲಿ ಸೂಟ್ಕೇಸ್ ಬಂದಿರುತ್ತದೆ ಅದಕ್ಕೆ ಅಪ್ಪ-ಮಗ ಪ್ರಚಾರ ಮಾಡುತ್ತಿದ್ದಾರೆ. ಸಿಂಧಗಿಯಲ್ಲಿ ಅರ್ಧ ಸೂಟ್ಕೇಸ್ ಬಂದಿರುತ್ತೆ, ಅದಕ್ಕೆ ಒಂದೆರಡು ದಿನ ಪ್ರಚಾರ ಮಾಡಿ ಹೋಗಿದ್ದಾರೆ"ಎಂದು ಜಮೀರ್ ಪ್ರತೀ ಚುನಾವಣಾ ಸಭೆಯಲ್ಲಿ ಒತ್ತಿಒತ್ತಿ ಹೇಳುತ್ತಿದ್ದರು.

ಮುಸ್ಲಿಂ ಮತ ಕಾಂಗ್ರೆಸ್ ಬಿಟ್ಟು ಹೋಗದಂತೆ ನೋಡಿಕೊಳ್ಳುವಲ್ಲಿ ಬಹುತೇಕ ಯಶಸ್ವಿ
ಹಾನಗಲ್ ಜೆಡಿಎಸ್ ಅಭ್ಯರ್ಥಿ 'ಮೇರಾ ಚೋಕ್ರಾ ಹೇ' ಎಂದು ಕಾಂಗ್ರೆಸ್ ಸಭೆಯಲ್ಲಿ ಹೇಳುತ್ತಿದ್ದ ಜಮೀರ್, ಮುಸ್ಲಿಂ ಸಮುದಾಯದ ಮತವನ್ನು ಕಾಂಗ್ರೆಸ್ ಬಿಟ್ಟು ಹೋಗದಂತೆ ನೋಡಿಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಪಕ್ಷಕ್ಕೆ ಭರವಸೆಯಿದ್ದ ಸಿಂಧಗಿಯಲ್ಲಿ ಕನಿಷ್ಠ ಶೇ. 25ರಷ್ಟು ಮತವನ್ನು ಸೆಳೆಯಲು ಜೆಡಿಎಸ್ಸಿಗೆ ಸಾಧ್ಯವಾಗಿಲ್ಲ. ಖುದ್ದು ಮಾಜಿ ಪ್ರಧಾನಿಗಳು, ಮಾಜಿ ಸಿಎಂ ಭಯಂಕರ ಪ್ರಚಾರ ನಡೆಸಿಯೂ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದರೆ ಇದು ಹಿನ್ನಡೆ ಅಲ್ಲದೇ ಇನ್ನೇನು. ಅಲ್ಲವೇ..