ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಚಾಮುಂಡಿ ಬೆಟ್ಟ ಭೇಟಿ ಭವಿಷ್ಯ: ಬಿಜೆಪಿ ಹಿನ್ನಡೆಗೆ ಕಾರಣವಾಗಬಹುದಾದ ಅಂಶಗಳು ಯಾವುವು..?

|
Google Oneindia Kannada News

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್‌ 20, 2022ರಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮುನ್ನಲೆಗೆ ಬಂದ ವಿಚಾರವೊಂದು ಚರ್ಚೆಗೆ ಗ್ರಾಸವಾಗಿತ್ತು.

ರಾಜಕೀಯ ವಿಶ್ಲೇಷಕರೂ ಆಗಿರುವ ಗುರುರಾಜ್ ಅಂಜನ್ ಎನ್ನುವವರು ಪ್ರಧಾನಿ ಮೋದಿಯ ಮೈಸೂರು ಭೇಟಿಯ ಬಗ್ಗೆ ವಿಶ್ಲೇಷಣೆ ಮಾಡಿದ್ದರು. ಈ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದ ಗುರುರಾಜ್ ಅವರು, "ಪ್ರಧಾನಿ ಮೋದಿಯವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ದಿನವೇ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಮುಂಬರುವ ಅಂದರೆ 2023ರ ಚುನಾವಣೆಗಳಲ್ಲಿ ಪ್ರಧಾನಿ ಮೋದಿಯವರು ಬಯಸಿದ ಫಲಿತಾಂಶ ಸಿಗುವುದಿಲ್ಲ ಮತ್ತು ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸಲಿದ್ದಾರೆ"ಎಂದು ಗುರುರಾಜ್ ಟ್ವೀಟ್ ಮಾಡಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ 2023ರ ಚುನಾವಣೆಗಳಲ್ಲಿ ಮೋದಿಯವರು ಬಯಸಿದ ಫಲಿತಾಂಶ ಸಿಗುವುದಿಲ್ಲ ಎನ್ನುವ ವಿಚಾರದ ಬಗ್ಗೆ ಪರಾಮರ್ಶಿಸುವುದಾದರೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾಗಬಹುದಾದ ಅಂಶಗಳ ಇಲ್ಲಿವೆ.

ಬಿಜೆಪಿ ವಿರುದ್ಧ ಪ್ರಬಲ ನಾಯಕರ ಬೆಂಬಲಿಗರ ಅಸಮಾಧಾನ

ಬಿಜೆಪಿ ವಿರುದ್ಧ ಪ್ರಬಲ ನಾಯಕರ ಬೆಂಬಲಿಗರ ಅಸಮಾಧಾನ

ಬಿಜೆಪಿ ಸಚಿವ ಸಂಪುಟದಲ್ಲಿ ಅವಕಾಶ ಸಿಗದೇ ಅಸಮಾಧಾನಗೊಂಡಿರುವ ಹಲವು ನಾಯಕರಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಕೆಲ ಶಾಸಕರು ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಆರೋಪ ಹೊತ್ತು ಸಚಿವ ಸ್ಥಾನ ಕಳೆದುಕೊಂಡ ರಮೇಶ್‌ ಜಾರಕಿಹೊಳಿ ಹಾಗೂ ಕೆ.ಎಸ್‌ ಈಶ್ವರಪ್ಪ ಇನ್ನೂ ಕೂಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಸಿ.ಡಿ ಪ್ರಕರಣದಲ್ಲಿ ಆರೋಪ ಎದುರಿಸಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ನೈತಿಕ ಹೊಣೆ ಹೊತ್ತು ತಮ್ಮ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆಲವು ಸಮಯದ ಬಳಿಕ ಸಚಿವ ಸ್ಥಾನಕ್ಕಾಗಿ ಮತ್ತೆ ಲಾಬಿ ಆರಂಭಿಸಿದ್ದ, ರಮೇಶ್‌ ಜಾರಕಿಹೊಳಿ, ಸಿಎಂ ಬೊಮ್ಮಾಯಿ, ಆರ್‌ಎಸ್‌ಎಸ್‌ ನಾಯಕರನ್ನು ಮತ್ತು ಹೈಕಮಾಂಡ್‌ ನಾಯಕರನ್ನು ಪದೇ ಪದೇ ಭೇಟಿಯಾಗಿದ್ದರು. ಆದರೆ ಈವರೆಗೂ ಬಿಜೆಪಿ ಸರ್ಕಾರದಲ್ಲಿ ರಮೇಶ್‌ ಜಾರಕಿಹೊಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇದರಿಂದ ಅಸಮಾಧಾನಗೊಂಡಿರುವ ರಮೇಶ್‌ ಜಾರಕಿಹೊಳಿ ಒಂದು ವೇಳೆ ಪಕ್ಷದ ವಿರುದ್ಧ ತಿರುಗಿ ಬಿದ್ದರೆ, ಬಿಜೆಪಿಗೆ ಬಹುದೊಡ್ಡ ಮಟ್ಟದ ಹೊಡೆತ ಬೀಳಲಿದೆ. ರಮೇಶ್‌ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು, ಅವರು ಯಾವ ಪಕ್ಷವನ್ನು ಬೆಂಬಲಿಸಿದರೂ ಕೂಡ ಅವರ ಸಮುದಾಯದ ಹಾಗೂ ಬೆಂಬಲಿಗರ ಲಕ್ಷಾಂತರ ಮತಗಳು ಆ ಪಕ್ಷದ ಪಾಲಾಗಲಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನು ಗುತ್ತಿಗೆದಾರ ಸಂತೋಷ್‌ ಸಾವಿನ ಪಕ್ರರಣದಲ್ಲಿ 40% ಕಮಿಷನ್‌ ಆರೋಪ ಎದುರಿಸಿದ್ದ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಕೂಡ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರು ಆರೋಪ ಮುಕ್ತರಾಗಿದ್ದರೂ ಕೂಡ ಇನ್ನೂ ಈಶ್ವರಪ್ಪಗೆ ಸಚಿವ ಸ್ಥಾನ ನೀಡಿದೇ ಇರುವುದು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಶ್ರೀರಾಮುಲು ನಡೆ ಯಾವ ಕಡೆ..?

ಶ್ರೀರಾಮುಲು ನಡೆ ಯಾವ ಕಡೆ..?

ಮಾಜಿ ಸಚಿವ, ಒಂದು ಕಾಲದಲ್ಲಿ ಬಿಜೆಪಿಯ ಬಲಿಷ್ಠ ನಾಯಕರಾಗಿದ್ದ ಜನಾರ್ದನ ರೆಡ್ಡಿ, ಸದ್ಯ ಬಿಜೆಪಿ ಪಕ್ಷಕ್ಕೆ ಗುಡ್‌ ಬೈ ಹೇಳಿ ತಮ್ಮದೇ ಸ್ವಂತ ಪಕ್ಷ ಘೋಷಣೆ ಮಾಡಿದ್ದಾರೆ. ತಾವು ಕಷ್ಟದಲ್ಲಿದ್ದಾಗ ತಾವೇ ಸ್ವತಃ ಕಟ್ಟಿ ಬೆಳೆಸಿದ ಪಕ್ಷ ನನ್ನ ಸಹಾಯಕ್ಕೆ ಬಂದಿಲ್ಲ ಎನ್ನುವುದು ಜರ್ನಾನ ರೆಡ್ಡಿ ಅವರ ಬೇಸರಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವನ್ನು ಜನಾರ್ದನ ರೆಡ್ಡಿ ಸ್ಥಾಪನೆ ಮಾಡಿದ್ದು, ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಜನಾರ್ದನ ರೆಡ್ಡಿ ಬೆಂಬಲಿಗರು, ಬಿಜೆಪಿಯ ಪ್ರಮುಖ ಮುಖಂಡರಾಗಿದ್ದವರು, ಪಕ್ಷಕ್ಕೆ ರಾಜೀನಾಮೆ ನೀಡಿ, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಬಳ್ಳಾರಿ ಹಾಗೂ ಗಂಗಾವತಿಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಜನಾರ್ದನ ರೆಡ್ಡಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಮೂರು ದಶಕಗಳಿಂದ ಆಪ್ತ ಸ್ನೇಹಿರಾಗಿದ್ದು, ಇದೀಗ ಶ್ರೀರಾಮುಲುಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಸ್ನೇಹ ಮುಖ್ಯವೋ..? ಪಕ್ಷ, ಅಧಿಕಾರ ಮುಖ್ಯವೋ..? ಎನ್ನುವ ಪ್ರಶ್ನೆ ಸಚಿವ ಶ್ರೀರಾಮುಲು ಮುಂದಿದ್ದು, ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿಪಕ್ಷಗಳಿಗೆ ಅಸ್ತ್ರವಾದ 40% ಕಮಿಷನ್‌ ಆರೋಪ

ವಿಪಕ್ಷಗಳಿಗೆ ಅಸ್ತ್ರವಾದ 40% ಕಮಿಷನ್‌ ಆರೋಪ

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮೇಲಿಂದ ಮೇಲೆ ಕೇಳು ಬರುತ್ತಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ರಾಜ್ಯ ಗುತ್ತಿದಾರ ಸಂಘದ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್‌ ಆರೋಪ ಮಾಡಿದ್ದರು. ಯಾವುದೇ ಗುತ್ತಿಗೆ ಪಡೆದರೂ ಸಚಿವರಿಗೆ 40% ಕಮಿಷನ್‌ ನೀಡಬೇಕು ಎಂದು ಆರೋಪಿಸಿ ಪ್ರಧಾನ ಮಂತ್ರಿ ಕಚೇರಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಪ್ರಕರಣಕ್ಕೆ ಪುಷ್ಟಿಕೊಡುವಂತೆ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ ಕೂಡ ನಡೆಯಿತು.

ಸಚಿವರಾದ ಡಾ.ಸುಧಾಕರ್‌, ಗೋವಿಂದ ಕಾರಜೋಳ, ಮುನಿರತ್ನ ಹಾಗೂ ಸಿಸಿ ಪಾಟೀಲ್‌ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡ ವಿಪಕ್ಷಗಳು ಬಿಜೆಪಿ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ವ್ಯಂಗ್ಯ ಮಾಡಿದ್ದು, ಸದನದಲ್ಲಿಯೂ ಈ ಬಗ್ಗೆ ಭಾರೀ ಚರ್ಚೆ ನಡೆಸಲಾಗಿತ್ತು. ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಚಾರದಿಂದ ಜನಸಾಮಾನ್ಯರು ತತ್ತರಿಸಿದ್ದು, ಈವರೆಗೂ ಗಂಭೀರವಾಗಿ ಈ ವಿಚಾರವನ್ನು ತೆಗೆದುಕೊಳ್ಳದ ಬಿಜೆಪಿಗೆ, 40% ಕಮಿಷನ್‌ ಆರೋಪ ಕೂಡ ಮುಂದಿನ ಚುನಾವಣೆಯಲ್ಲಿ ಮುಳ್ಳಾಗುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ವಿಭಜನೆಯಾಗುತ್ತಾ ಹಿಂದೂ ಕಾರ್ಯಕರ್ತರ ಮತ..?

ವಿಭಜನೆಯಾಗುತ್ತಾ ಹಿಂದೂ ಕಾರ್ಯಕರ್ತರ ಮತ..?

ಹಿಂದೂ ಮುಖಂಡ ಪ್ರವೀಣ್‌ ನೆಟ್ಟಾರು, ಶಿವಮೊಗ್ಗ ಹರ್ಷ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರು ಬಿಜೆಪಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಹಿಂದೂಗಳಿಂದ ಬಹುಮತ ಪಡೆದ ಬಿಜೆಪಿ ಪಕ್ಷದ ಆಡಳಿತದಲ್ಲಿಯೇ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎನ್ನುವ ಅಸಮಾಧಾನ ಹಿಂದೂ ಕಾರ್ಯಕರ್ತರಲ್ಲಿ ಬಂದಿದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್, ಮುಂದಿನ ವಿಧಾನ ಸಭೆಯಲ್ಲಿ ಸ್ಫರ್ಧಿಸುವ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಬಿಜೆಪಿ ಪರ ಹಿಂದೂ ಮತಗಳಿರುವ ಅನೇಕ ಭಾಗಗಳಲ್ಲಿ ಹಿಂದೂ ಮುಖಂಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುವ ಬಗ್ಗೆ ಸಹ ತಿಳಿಸಿದ್ದು, ಇದರಿಂದ ಬಿಜೆಪಿ ಮತಗಳು ವಿಭಜನೆಯಾಗುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಬಿಜೆಪಿ ಹಿನ್ನಡೆಗೆ ಕಾರಣವಾಗುತ್ತಾ, ಭಾರತ್‌ ಜೋಡೋ, ಪಂಚರತ್ನ..?

ಬಿಜೆಪಿ ಹಿನ್ನಡೆಗೆ ಕಾರಣವಾಗುತ್ತಾ, ಭಾರತ್‌ ಜೋಡೋ, ಪಂಚರತ್ನ..?

ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಭಾರೀ ರಣತಂತ್ರ ರಚಿಸುತ್ತಿವೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೂಡ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದೆ.

ದಾವಣಗೆರೆಯಲ್ಲಿ ನಡೆದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಸಿದ್ದರಾಮೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ಇನ್ನು ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಹೀಗಾಗಿ ಕರ್ನಾಟಕದ ಮತದಾರರಿಗೆ ಕಾಂಗ್ರೆಸ್‌ ಅಧಿಕಾರದ ಮೇಲೆ ಒಲವು ಇದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಂಚರತ್ನ ಯಾತ್ರೆಗೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಮೂಲಕ ಜೆಡಿಎಸ್‌ ಪಕ್ಷ ಮತದಾರರ ಮನೆ, ಮನ ತಲುಪುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರಿಂದ ಕಳೆದ ಬಾರಿ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಜೆಡಿಎಸ್ ಹೆಚ್ಚಿನ ಬಹುಮತ ಪಡೆಯಲಿದೆ ಎನ್ನುವ ಅಭಿಪ್ರಾಯ ಸಹ ಕೇಳಿಬರುತ್ತಿದ್ದು, ಇದರಿಂದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹಲವರು ವಿಶ್ಲೇಷಿಸಿದ್ದಾರೆ.

English summary
PM Narendra Modi Visit to Chamundi Hills in Mysuru and other setback for Karnataka BJP in Upcoming assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X