Karnataka 7th Pay Commission; ರಜೆ, ಭತ್ಯೆ, ಪಿಂಚಣಿಯ ಉತ್ತರಗಳು
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿರುವ ಉತ್ತರಗಳಲ್ಲಿ ರಜೆ, ಪಿಂಚಣಿ, ಭತ್ಯೆಗಳ ಏರಿಕೆ ಬಗ್ಗೆ ಈ ರೀತಿಯ ವಿವರಗಳನ್ನು ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯ 7ನೇ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಿದ್ದಾರೆ. ಆಯೋಗ ಸರ್ಕಾರಿ ನೌಕರರ ವೇತನ, ಭತ್ಯ, ರಜೆ, ಪಿಂಚಣಿ ಮುಂತಾದ ಸೌಲಭ್ಯಗಳನ್ನು ಪರಿಶೀಲಿಸಲು ಪ್ರಶ್ನಾವಳಿ ರಚನೆ ಮಾಡಿತ್ತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಉತ್ತರಗಳನ್ನು ಸಲ್ಲಿಕೆ ಮಾಡಿದೆ. ಸಿ. ಎಸ್. ಷಡಾಕ್ಷರಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
7ನೇ ವೇತನ ಆಯೋಗವು ಪ್ರಶ್ನಾವಳಿಗಳಿಗೆ ಮಾತ್ರ ಉತ್ತರವನ್ನು ಕೋರಿದ್ದು, ಅದರನ್ವಯ ಮಾಹಿತಿಗಳನ್ನು ಒದಗಿಸಲಾಗಿದೆ. ಆಯೋಗವು ಶೀಘ್ರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವೃಂದವಾರು ಹಾಗೂ ಇಲಾಖಾವಾರು ಮಾಹಿತಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಲು ಸಮಯವನ್ನು ನೀಡಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಆ ಸಂಧರ್ಭದಲ್ಲಿ ಬಹಳಷ್ಟು ಇಲಾಖೆಗಳು ಹಾಗೂ ವೃಂದ ಸಂಘಗಳ ಸೇವಾ ವಿಷಯಗಳ ಕುರಿತು ನೀಡಿರುವ ಮಾಹಿತಿಗಳನ್ನು ರಾಜ್ಯ ಸಂಘದಿಂದ ಸಂಗ್ರಹ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಇಲಾಖೆಗಳ-ವೃಂದವಾರು ಕ್ರೋಢೀಕೃತ ಮಾಹಿತಿಯನ್ನು ಪೂರಕ ದಾಖಲೆಗಳೊಂದಿಗೆ ವಾಸ್ತವ ಅಂಶಗಳನ್ನೊಳಗೊಂಡ ಸಮಗ್ರ ಮಾಹಿತಿಯನ್ನು ಆಯೋಗದ ಮುಂದೆ ಮಂಡಿಸಲಾಗುವುದು ಎಂದು ಸಿ. ಎಸ್. ಷಡಾಕ್ಷರಿ ಹೇಳಿದ್ದಾರೆ.

ಮಹಿಳಾ ನೌಕರರ ಸೌಲಭ್ಯಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ಉತ್ತರದಲ್ಲಿ ಸರ್ಕಾರಿ ನೌಕರರು ವಂತಿಗೆ ನೀಡುವುದರಿಂದ ಅವಲಂಬಿತರ ಆದಾಯದ ಮಿತಿಯನ್ನು ತೆಗೆದುಹಾಕುವುದು. ವಿವಾಹಿತ ಮಹಿಳಾ ಸರ್ಕಾರಿ ನೌಕರರ ತಂದೆ-ತಾಯಿಯವರನ್ನು ಈ ಯೋಜನೆಯ ವ್ಯಾಪ್ತಿಗೆ ತರುವುದು. ಎಲ್ಲಾ ವೈದ್ಯಕೀಯ ಸೇವೆಗಳು ವಿಳಂಬವಿಲ್ಲದೇ ಸರಳವಾಗಿ ಹಾಗೂ ತ್ವರಿತಗತಿಯಲ್ಲಿ ಲಭ್ಯವಾಗಬೇಕು ಎಂದು ಹೇಳಿದೆ.
ಮಹಿಳಾ ಉದ್ಯೋಗಿಗಳಿಗೆ ಈಗಿರುವ ಸೌಲಭ್ಯಗಳ ಜೊತೆಗೆ ಮಕ್ಕಳಿಗೆ ದಿನಕ್ಕೆ 2 ಬಾರಿ ಸ್ತನ್ಯಪಾನಕ್ಕಾಗಿ ಅವಕಾಶ ನೀಡುವುದು. ನಿಗದಿತ ವೇಳೆಯ ನಂತರ ಕೆಲಸ ಮಾಡಿದ ಸಂದರ್ಭದಲ್ಲಿ ಸುರಕ್ಷಿತವಾಗಿ ಮನೆಗೆ ಬಿಡುವುದು. ತಮ್ಮ ಕಾರ್ಯವ್ಯಾಪ್ತಿಯಲ್ಲಿ ಶುಚಿತ್ವವಾದ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು. ಬಾಡಿಗೆ ತಾಯ್ತನದ ಮಹಿಳಾ ನೌಕರರಿಗೆ ಶಿಶುಪಾಲನಾ ಹೆರಿಗೆ ರಜೆ ಮಂಜೂರು ಮಾಡುವುದು ಹಾಲಿ ಇರುವ ಶಿಶುಪಾಲನಾ ರಜೆಯ ಮಂಜೂರಾತಿಯನ್ನು ಕನಿಷ್ಠ 15 ದಿನಗಳ ಬದಲಾಗಿ 7 ದಿನಗಳಿಗೆ ನಿಗದಿಪಡಿಸುವುದು. ಪತ್ನಿ ಇಲ್ಲಾದ ಪುರಷ ನೌಕರರಿಗೆ ಮಕ್ಕಳ ಪಾಲನೆ ಹಿತದೃಷ್ಟಿಯಿಂದ ಶಿಶುಪಾಲನ ರಜೆಯನ್ನು ವಿಸ್ತರಿಸುವಂತೆಯೂ ಹೇಳಿದೆ.

ನೌಕರರ ಇತರೆ ಭತ್ಯೆಗಳ ವಿವರಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಟ್ಟಗುಡ್ಡಗಳಿರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ನೌಕರರಿಗೆ ಗಿರಿಭತ್ಯೆಯನ್ನು ಮಂಜೂರು ಮಾಡುವುದು. ಪ್ರಸ್ತುತ ನೀಡುತ್ತಿರುವ ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅನ್ಯಸೇವೆ ಭತ್ಯೆ, ವಿಶೇಷಭತ್ಯೆಗಳನ್ನು ದ್ವಿಗುಣಗೊಳಿಸುವುದು. ನಿಗದಿತ ಪ್ರಯಾಣ ಭತ್ಯೆ, ಅನ್ಯಸೇವೆ ಭತ್ಯೆ ಹಾಗೂ ಪ್ರಭಾರ ಭತ್ಯೆ ದರವನ್ನು ಹೆಚ್ಚಿಸುವುದು.
ಕೇಂದ್ರದ ಮಾದರಿಯಂತೆ ವರ್ಗಾವಣೆಗೊಂಡ/ ವಯೋನಿವೃತ್ತಿ ಹೊಂದುವ ರಾಜ್ಯ ಸರ್ಕಾರಿ ನೌಕರರಿಗೆ ಕೊನೆ ಮಾಹೆಯ ಮೂಲವೇತನದ ಶೇ. 80 ರಷ್ಟು ವರ್ಗಾವಣೆ ಅನುದಾನ ಮತ್ತು ಸಾಮಾನು ಸರಂಜಾಮು ಸಾಗಣೆ ಭತ್ಯೆಯನ್ನು ನೀಡುವಂತೆ ಶಿಫಾರಸ್ಸು ಮಾಡುವುದು ಎಂದು ಹೇಳಿದೆ.

ಭತ್ಯೆ ಮತ್ತು ರಜೆ ಸೌಲಭ್ಯಗಳು
ಇಂಧನ ಬೆಲೆ, ಪ್ರಯಾಣ ಸಾರಿಗೆ ವೆಚ್ಚ, ವಸತಿ ಹಾಗೂ ಊಟ-ಉಪಹಾರಗಳು ದುಬಾರಿಯಾಗಿರುವುದರಿಂದ ಪ್ರಯಾಣ ಭತ್ಯೆ, ದಿನಭತ್ಯೆ ವಿಮಾನ, ರೈಲು ಮತ್ತು ಬಸ್ಸಿನ ದರಗಳನ್ನು ಹೆಚ್ಚಿಸುವುದು. ರಜೆ ಸೌಲಭ್ಯವನ್ನು ಪಡೆಯುವ ಉದ್ದೇಶಕ್ಕಾಗಿ ಮಾತ್ರ ಗಳಿಕೆ ರಜೆಯ ಮಿತಿಯನ್ನು ತೆಗೆದು ಹಾಕುವುದು. ನಿವೃತ್ತಿ ನಂತರ 300 ಗಳಿಕೆ ರಜಾ ದಿನಗಳ ನಗದೀಕರಣ ಸೌಲಭ್ಯದ ಗರಿಷ್ಠ ಮಿತಿಯನ್ನು 330ಕ್ಕೆ ಹೆಚ್ಚಿಸುವುದು.
ಬೈಸಿಕಲ್, ಮೋಟಾರು ವಾಹನ, ಗೃಹ ನಿರ್ಮಾಣ, ಗೃಹ ರಿಪೇರಿ ಮುಂಗಡ ರೂ. 25,000 ಗಳ ಬಡ್ಡಿರಹಿತ ಹಬ್ಬದ ಮುಂಗಡವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಎಲ್ಲಾ ನೌಕರರಿಗೂ ಮಂಜೂರು ಮಾಡುವುದು. ಎಲ್ಲಾ ಮುಂಗಡಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವುದು. ಮುಂಗಡದ ಮೊತ್ತವನ್ನು ಮಾರುಕಟ್ಟೆಗಳಿಗೆ ಅನುಗುಣವಾಗಿ ಹೆಚ್ಚಿಸುವುದು. ಕನಿಷ್ಠ ವೇತನದ ಮಿತಿಯನ್ನು (Home take Salary) ಶೇ. 60 ರಿಂದ ಶೇ. 40ಕ್ಕೆ ನಿಗದಿಗೊಳಿಸುವುದು ಎಂದು ಹೇಳಿದೆ.

ಸಾಮೂಹಿಕ ವಿಮಾ ಯೋಜನೆ
ತನ್ನ ಉತ್ತರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಂಧ ಮತ್ತು ಅಂಗವಿಕಲ ನೌಕರರ ವಾಹನ ಭತ್ಯೆಯನ್ನು ಮೂಲ ವೇತನದ ಶೇ. 6 ರಿಂದ ಶೇ. 10 ಕ್ಕೆ ಹೆಚ್ಚಳ ಮಾಡಲು ಶಿಫಾರಸ್ಸು ಮಾಡಬೇಕು ಎಂದು ಹೇಳಿದೆ. ಒಂದು ಯುನಿಟ್ ದರ ರೂ. 120 ರಿಂದ 1200ಕ್ಕೆ ಹೆಚ್ಚಿಸುವ ಮೂಲಕ ವಿಮಾ ಮೊತ್ತವನ್ನು ಹೆಚ್ಚಿಸುವುದು. ಉಳಿತಾಯ ನಿಧಿ ಮತ್ತು ವಿಮಾ ನಿಧಿ ಸದ್ಯದ 70:30ರ ಅನುಪಾತವನ್ನು 75:25 ಕೈ ಮಾರ್ಪಡಿಸುವುದು. ಉಳಿತಾಯ ನಿಧಿ ಮೇಲಿನ ಬಡ್ಡಿ ದರವನ್ನು ಶೇ. 2 ರಷ್ಟು ಹೆಚ್ಚಿಸುವುದು. ಸ್ವಇಚ್ಛಾ ನಿವೃತ್ತಿಗೆ 15 ವರ್ಷ ಕನಿಷ್ಠ ಸೇವೆ ಅಥವಾ 50 ವರ್ಷ ವಯಸ್ಸು ಎನ್ನುವ ಬದಲಾಗಿ 12 ವರ್ಷಗಳ ಸೇವಾವಧಿ ಅಥವಾ 45 ವರ್ಷಗಳ ವಯಸ್ಸಾಗಿರಬೇಕೆಂದು ತಿದ್ದುಪಡಿ ಮಾಡುವುದು ಎಂದು ತಿಳಿಸಿದೆ.
ನಿವೃತ್ತಿ ಪಿಂಚಣಿಗಾಗಿ ಕನಿಷ್ಠ ಸೇವೆ 30 ರಿಂದ 25 ಕ್ಕೆ ಇಳಿಸುವುದು. ಕುಟುಂಬ/ ವಿಶ್ರಾಂತಿ ಪಿಂಚಣಿ- ಕನಿಷ್ಠ ಕುಟುಂಬ ರೂ.16,500ಕ್ಕೆ ಮತ್ತು ಗರಿಷ್ಠ ರೂ.1,50,000ಕ್ಕೆ ಹೆಚ್ಚಿಸುವುದು. ಮರಣ-ನಿವೃತ್ತಿಉಪದಾನ-ಗರಿಷ್ಠ ಮಿತಿಯನ್ನು 20 ಲಕ್ಷಗಳಿಂದ 25 ಲಕ್ಷಗಳಿಗೆ ಹೆಚ್ಚಿಸುವುದು. ಪರಿವರ್ತಿತ ಹಣವನ್ನು 15 ವರ್ಷಗಳ ಕಾಲ ಪ್ರತಿ ತಿಂಗಳ ಪಿಂಚಣಿಯಲ್ಲಿ ಕಟಾಯಿಸುವ ಪದ್ಧತಿಯನ್ನು ಕೈಬಿಟ್ಟು 12 ವರ್ಷಗಳ ಕಾಲ ಮಾತ್ರ ಪಿಂಚಣಿಯಲ್ಲಿ ಕಟಾಯಿಸುವುದು.

ಪಿಂಚಣಿ ಪಾವತಿ ನಿಯಮ ಸರಳೀಕರಣ
ಸರ್ಕಾರಿ ನೌಕರರ ಸಂಘ ಎಲೆಕ್ಟ್ರಾನಿಕ್ ಸರ್ವೀಸ್ ರಿಜಿಸ್ಟರ್ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸಿ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಸವಲತ್ತುಗಳನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದ ಮೂಲಕವೇ ಪಡೆಯುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದೆ. ಸೇವಾನಿರತ ನೌಕರರಿಗೆ ನೀಡುವ ವಾರ್ಷಿಕ ವೇತನ ಬಡ್ತಿ ದರದಲ್ಲಿಯೇ ನಿವೃತ್ತ ನೌಕರರಿಗೂ ಸಹ ಸಮನಾಂತರ ತುಟ್ಟಿಭತ್ಯೆಯನ್ನು ನೀಡಲು ಶಿಫಾರಸ್ಸು ಮಾಡುವುದು. 80 ವರ್ಷ ಮೇಲ್ಪಟ್ಟವರಿಗೆ ಪಿಂಚಣಿದಾರರಿಗೆ ವಯೋಮಾನವನ್ನಾಧರಿಸಿ ಹೆಚ್ಚುವರಿ ಪಿಂಚಣಿಯನ್ನು ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಹಾಲಿ ಇರುವ ಶೇ. 30 ಕುಟುಂಬ ಪಿಂಚಣಿಯ ಪ್ರಮಾಣವನ್ನು ಮೂಲ ವೇತನದ ಶೇ. 40ಕ್ಕೆ ಹೆಚ್ಚಳ ಮಾಡುವುದು. ರಾಷ್ಟ್ರದ ಕೆಲವು ರಾಜ್ಯಗಳು ಈಗಾಗಲೇ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿರುವ ಮಾದರಿಯಂತೆ ರಾಜ್ಯದಲ್ಲೂ ಸಹ ಎನ್.ಪಿ.ಎಸ್ ಯೋಜನೆಯನ್ನು ರದ್ದುಗೊಳಿಸಿ ದಿನಾಂಕ 01/4/2006 ರಿಂದ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಎಂದು ಹೇಳಿದೆ.
ಸೇವೆಯಲ್ಲಿರುವ ಎನ್.ಪಿ.ಎಸ್. ಯೋಜನೆಗೆ ಒಳಪಡುವ ನೌಕರನಿಂದ ಇದುವರೆವಿಗೂ ಕಟಾವಣೆಗೊಂಡಿರುವ ಯೋಜನೆಯ ಒಟ್ಟು ಮೊತ್ತವನ್ನು ನೌಕರನಿಗೆ ಹಿಂದಿರುಗಿಸುವುದು ಅಥವಾ ಸಾಮಾನ್ಯ ಭವಿಷ್ಯನಿಧಿ ಖಾತೆ (ಜಿ.ಪಿ.ಎಫ್) ತೆರೆದು ವರ್ಗಾಯಿಸುವುದು. ವಯೋನಿವೃತ್ತಿ/ಮೃತಪಟ್ಟಿರುವ ನೌಕರನ ಸೇವಾವಧಿಯಲ್ಲಿ ಕಟಾವಣೆಗೊಂಡ ಎನ್.ಪಿ.ಎಸ್. ಮೊತ್ತವನ್ನು ಅವಲಂಬಿತ ಕುಟುಂಬ ಸದಸ್ಯರಿಗೆ ಮರುಪಾವತಿಸುವುದು. ಈಗಾಗಲೇ ಎನ್.ಪಿ.ಎಸ್. ಯೋಜನೆಗೆ ಒಳಪಟ್ಟು ವಯೋನಿವೃತ್ತಿ/ ಮೃತಪಟ್ಟಿರುವ ನೌಕರರಿಗೆ ಹಳೆ ಪಿಂಚಣಿದಾರರ ಮಾದರಿಯಲ್ಲಿ ನಿವೃತ್ತಿ ವೇತನ ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸುವುದು ಎಂದು ತಿಳಿಸಿದೆ.












Click it and Unblock the Notifications