ರಾಜ್ಯ ರಾಜಕೀಯದಲ್ಲಿ ಬಿರುಗಾಳಿ: ಕೆಲವೇ ದಿನಗಳಲ್ಲಿ ಬೊಮ್ಮಾಯಿ ರಾಜೀನಾಮೆ?
ಕೆಲವು ದಿನಗಳ ಹಿಂದೆ ಸಚಿವ ಕೆ.ಎಸ್.ಈಶ್ವರಪ್ಪನವರು ನೀಡಿದ್ದ ಹೇಳಿಕೆ, ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆ, ಹಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ವೈರಾಗ್ಯದ ಭಾವನಾತ್ಮಕ ಹೇಳಿಕೆ ಒಂದಕ್ಕೊಂದು ಸಿಂಕ್ ಆಗಲು ಆರಂಭಿಸಿದೆ.
ವಿಧಾನ ಮಂಡಲದ ಅಧಿವೇಶನದ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಚಿವ ಮುರುಗೇಶ್ ನಿರಾಣಿ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದರು. ಇದು ಕೂಡಾ, ಬಿಜೆಪಿ ವಲಯದಲ್ಲೇ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು.
ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಸಿಎಂ ಹೆಸರಿನಲ್ಲಿ ಮಂಚೂಣಿಯಲ್ಲಿ ಬರುತ್ತಿದ್ದ ಹೆಸರು ಮುರುಗೇಶ್ ನಿರಾಣಿ ಮತ್ತು ಅರವಿಂದ್ ಬೆಲ್ಲದ್ ಅವರ ಹೆಸರು. ಎಲ್ಲೂ, ಬೊಮ್ಮಾಯಿಯವರ ಹೆಸರು ಕೇಳಿ ಬರುತ್ತಿರಲಿಲ್ಲ.
ಆದರೆ, ಯಡಿಯೂರಪ್ಪನವರ ಬಯಸಿದ್ದ ಹೆಸರು ಬೇರೆಯಾಗಿದ್ದರಿಂದ ಬೊಮ್ಮಾಯಿಯವರ ಅದೃಷ್ಟ ಖುಲಾಯಿಸಿತ್ತು. ಮಿಕ್ಕವರೆಲ್ಲಾ ದೆಹಲಿ ಸುತ್ತಿದರೆ, ಬೊಮ್ಮಾಯಿಯವರು ಬಿಎಸ್ವೈಗೆ ನಿಷ್ಟರಾಗಿದ್ದರು. ಅದೇ ಮುಖ್ಯಮಂತ್ರಿ ಹುದ್ದೆಗೇರಲು ಸಾಕಾಗಿತ್ತು. ಬೊಮ್ಮಾಯಿ ನೋವಿನ ಭಾಷಣ.. ಮುಂದೆ ಓದಿ...

ತೀವ್ರ ಮಂಡಿ ನೋವಿನಿಂದ ಬಳಲುತ್ತಿರುವ ಬೊಮ್ಮಾಯಿ
ಎಲ್ಲರಿಗೂ ಗೊತ್ತಿರುವ ಹಾಗೆ ಬಸವರಾಜ ಬೊಮ್ಮಾಯಿಯವರು ಕೆಲವು ದಿನಗಳಿಂದ ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ವೈದ್ಯರ ಪ್ರಕಾರ, ಆದಷ್ಟು ಬೇಗ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಇದಾದ ನಂತರ ಕನಿಷ್ಟ ಮೂರು ತಿಂಗಳ ವಿಶ್ರಾಂತಿಯ ಅವಶ್ಯಕತೆಯೂ ಅವರಿಗಿದೆ. ಈ ಸಮಯದಲ್ಲಿ ಆಡಳಿತ ಯಂತ್ರ ಕುಸಿಯಬಾರದು ಎನ್ನುವ ಕಾರಣಕ್ಕಾಗಿ ಸಿಎಂ ಹುದ್ದೆಗೆ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿ ಬರಲಾರಂಭಿಸಿದೆ. ಆದರೆ, ಸಿಎಂ ರಾಜೀನಾಮೆ ನೀಡಬೇಕಾದ ಸಂದರ್ಭ ಎದುರಾದರೆ, ಅದಕ್ಕೆ ಇದೇ ಒಂದು ಕಾರಣನಾ ಎನ್ನುವ ಪ್ರಶ್ನೆಗೆ ಅಲ್ಲ ಎನ್ನುತ್ತದೆ ಬಿಜೆಪಿ ಮೂಲಗಳು.

ಬೊಮ್ಮಾಯಿಯವರ ಹಾವೇರಿಯಲ್ಲಿನ ನೋವಿನ ಭಾಷಣ
ಅಧಿವೇಶನದ ನಂತರದ ಒಂದೆರಡು ವಾರದಲ್ಲಿ ಅಮೆರಿಕಾಗೆ ಬೊಮ್ಮಾಯಿ ಶಸ್ತ್ರಚಿಕಿತ್ಸೆಗೆ ಹೋಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ, ಅಮೆರಿಕ ವೀಸಾಗೆ ಬೊಮ್ಮಾಯಿ ಅರ್ಜಿ ಹಾಕಿದ್ದಾರೆ. ಪೋಸ್ಟ್ ಸರ್ಜರಿಯ ನಂತರ ಕೆಲವು ತಿಂಗಳು ಮುಖ್ಯಮಂತ್ರಿ ಬೊಮ್ಮಾಯಿಯವರು ಯಾವುದೇ ಕಾರ್ಯಕ್ರಮ, ಸಂಪುಟ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಜನವರಿ ಮೊದಲ ವಾರದಲ್ಲಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಗೆ ಬೊಮ್ಮಾಯಿಯವರ ಹಾವೇರಿಯಲ್ಲಿನ ನೋವಿನ ಭಾಷಣ ಇನ್ನಷ್ಟು ಪುಷ್ಠಿ ನೀಡಿದೆ.

ಬಿಟ್ ಕಾಯಿನ್ ವಿಚಾರವೂ ಇನ್ನೊಂದು ಪ್ರಮುಖ ಕಾರಣ
ಮಂಡಿ ನೋವು ಎನ್ನುವುದು ಪ್ರಮುಖ ಕಾರಣವಾಗಿದ್ದರೂ, ಬಿಟ್ ಕಾಯಿನ್ ವಿಚಾರವೂ ಇನ್ನೊಂದು ಪ್ರಮುಖ ಕಾರಣ ಎಂದು ಹೈಕಮಾಂಡ್ ಪರಿಗಣಿಸಿದ್ದಾರೆ ಎನ್ನುವ ಸುದ್ದಿಯೂ ಇದೆ. ಬಿಟ್ ಕಾಯಿನ್ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತಹ ಸಂದರ್ಭದಲ್ಲಿ ಬೊಮ್ಮಾಯಿಯವರು ದೆಹಲಿಗೆ ಹೋಗಿದ್ದರು. ಆಗಲೇ, ಎರಡ್ಮೂರು ತಿಂಗಳಲ್ಲಿ ರಾಜೀನಾಮೆ ನೀಡಬೇಕೆನ್ನುವ ಸೂಚನೆ ವರಿಷ್ಠರಿಂದ ಬಂದಿದೆ ಎನ್ನುವ ಅಂತೆಕಂತೆ ಸುದ್ದಿಗಳು ಹರಿದಾಡಲಾರಂಭಿಸಿದೆ.

ಕೆ.ಎಸ್.ಈಶ್ವರಪ್ಪನವರ ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ ಎನ್ನುವ ಹೇಳಿಕೆ
ಕೆಲವು ದಿನಗಳ ಹಿಂದೆ ಕೆ.ಎಸ್.ಈಶ್ವರಪ್ಪನವರು ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ ಎನ್ನುವ ಹೇಳಿಕೆಯನ್ನು ನೀಡಿ ನಂತರ ವಾಪಸ್ ಪಡೆದಿದ್ದರು. ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಗೆ ಪುಷ್ಠಿ ನೀಡುವಂತೆ, "ಕೆಲವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಸುವರ್ಣ ಸೌಧದ ಪಡಶಾಲೆಯಲ್ಲಿ ತಿರುಗಾಡಿಕೊಂಡಿದ್ದಾರೆ"ಎಂದು ನಿರಾಣಿ ಹೆಸರನ್ನು ಉಲ್ಲೇಖಿಸದೇ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ನೀಡಿದ್ದಾರೆ.

ನಾವು ಎಷ್ಟು ದಿನ ಇರುತ್ತೇವೆ ಎಂದು ಗೊತ್ತಿಲ್ಲ, ಸ್ಥಾನಮಾನಗಳು ಶಾಶ್ವತವಲ್ಲ
"ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವನೂ ಆಗಿದೆ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತವೇ ಹೊರತು, ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೆ ಎಂದು ಗೊತ್ತಿಲ್ಲ, ಸ್ಥಾನಮಾನಗಳು ಶಾಶ್ವತವಲ್ಲ" ಎಂದು ಸಿಎಂ ಬೊಮ್ಮಾಯಿ ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದ ಸಭೆಯಲ್ಲಿ ಹೇಳಿರುವುದು ಸಿಎಂ ಬದಲಾವಣೆ ಸುದ್ದಿಗೆ ಹೊಸ ಸ್ವರೂಪ ನೀಡುತ್ತಿದೆ.

ಬಿಜೆಪಿಯಲ್ಲಿ ಮತ್ತೊಬ್ಬರು ಮುಖ್ಯಮಂತ್ರಿಯಾಗುವುದು ಖಚಿತ, ಡಿಕೆಶಿ
ಈ ಬಾರಿಯೂ ಬಿಜೆಪಿಯಲ್ಲಿ ಮೂವರು ಮುಖ್ಯಮಂತ್ರಿಗಳಿರುತ್ತಾರೆ ಎಂದು ಬಿಟ್ ಕಾಯಿನ್ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಮೊನ್ನೆಮೊನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ, "ಬಿಜೆಪಿಯಲ್ಲಿ ಮತ್ತೊಬ್ಬರು ಮುಖ್ಯಮಂತ್ರಿಯಾಗುವುದು ಖಚಿತ, ಬಸವರಾಜ ಬೊಮ್ಮಾಯಿಯವರ ಮೇಲೆ ಅವರದ್ದೇ ಶಾಸಕರಿಗೆ ನಂಬಿಕೆಯಿಲ್ಲ, ಹಾಗಾಗಿ ಅವರು ರಾಜೀನಾಮೆ ನೀಡಲಿದ್ದಾರೆ"ಎಂದು ಹೇಳಿದ್ದರು. ಎಲ್ಲಾ ಬೆಳವಣಿಗೆಗಳನ್ನು ಅವಲೋಕಿಸಿದಾಗ ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಖಚಿತವಾಗುತ್ತಾ ಸಾಗುತ್ತಿದೆ.












Click it and Unblock the Notifications