Women's Day 2025: ಹೆಣ್ಣಿನ ಮಹತ್ವ ತಿಳಿದವರ ಬಾಳು ಬಂಗಾರ: ಇಲ್ಲದಿದ್ರೆ..
ಹೆಣ್ಣು ಶಕ್ತಿ, ಶಾಂತಿ, ಸಹನೆ, ಸಹಾನುಭೂತಿ, ಸಂಯಮ, ಸಾಮರಸ್ಯ, ಸೌಂದರ್ಯ, ಸಂಸ್ಕೃತಿಗೆ ಹೆಸರಾದವಳು. ತಾಯಿಯೇ ಮೊದಲ ಗುರು, ಒಬ್ಬ ಆದರ್ಶ ತಾಯಿ ನೂರು ಶಿಕ್ಷಕರಿಗೆ ಸಮಾನ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಸಮಾಜದ ಕಣ್ಣು, ಹೆಣ್ಣು ಪೂಜ್ಯನೀಯ ಎಂಬಿತ್ಯಾದಿಯಾಗಿ ಬಿಂಬಿಸಲಾಗುತ್ತದೆ. ಆದರೆ, ಪುರುಷ ಪ್ರಧಾನ ಪ್ರಪಂಚ ಅವಳನ್ನು ನಡೆಸಿಕೊಳ್ಳುವ ರೀತಿ ಬೇರೆಯದ್ದೇ ಆಗಿದೆ.
ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ ಶಿಕ್ಷಣ, ಪರಿಸರ, ತಂತ್ರಜ್ಞಾನ, ಕೃಷಿ, ಬಾಹ್ಯಾಕಾಶ ಅಷ್ಟೇ ಯಾಕೆ ದೇಶದ ಗಡಿ ಕಾಯುವ ರಕ್ಷಣಾ ಕ್ಷೇತ್ರದಲ್ಲೂ ಸಹ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಳೆ. ತಾಯಿ ಜೀಜಾಬಾಯಿ ಶಿವಾಜಿಗೆ ಆದರ್ಶಗುರುವಾಗಿದ್ದಳು, ಕಿತ್ತೂರಿನ ಚನ್ನಮ್ಮ ತನ್ನ ತಾಯ್ನಾಡಿಗಾಗಿ ಹೋರಾಡಿ ವೀರಮಹಿಳೆ ಎನಿಸಿದಳು.

ಅಕ್ಕಮಹಾದೇವಿ ತನ್ನ ವಚನಗಳಲ್ಲಿ ದೈವತ್ವವನ್ನು ಕಂಡಳು. ಅಂತೆಯೇ ಮದರ್ ತೆರೆಸಾ, ಮಾಂಟೆಸ್ಸೋರಿ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್, ಶಕುಂತಲಾ ದೇವಿ, ಸಾಲುಮರದ ತಿಮ್ಮಕ್ಕ, ಮಲಾಲಾಯುಸಪ್‌ಝೈರಂತಹ ಸಾಲು ಸಾಲು ಮಹಿಳಾ ಸಾಧಕರನ್ನು ನಮ್ಮ ಸಮಾಜ ಕಂಡಿದೆ. ಸ್ತ್ರೀಯನ್ನು ಗೌರವದಿಂದ ಕಾಣುವ ರಾಷ್ಟ್ರದಲ್ಲಿ ದೇವತೆಗಳು ನೆಲೆಸಿರುತ್ತಾರೆ. ಅಲ್ಲದೆ, ಅಂತಹ ದೇಶಗಳು ಉನ್ನತ ಅಭಿವೃದ್ಧಿಯನ್ನು ಕಾಣುತ್ತವೆ ಎಂಬ ಪ್ರತೀತಿ ಇದೆ.
ಸಾರಾ ಸಿಲ್ವರ್ ಮ್ಯಾನ್, ಯಹೂದಿ-ಅಮೇರಿಕನ್ ನಟಿಯೊಬ್ಬರ ಹೇಳಿಕೆ ಹೀಗಿದೆ. 'ಮಹಿಳೆ ಪ್ರಬುದ್ದಳಾಗುತ್ತಿರುವಂತೆ, ವಯಸ್ಸಾದಂತೆ ಸ್ಪಷ್ಟವಾಗಿ, ನೇರವಾಗಿ ಅಭಿಪ್ರಾಯಗಳನ್ನು ಮಂಡಿಸುತ್ತಾಳೆ. ಆಗ ವ್ಯವಸ್ಥಿತವಾಗಿ ಹಣಿಯುವ ಕೆಲಸ ಆರಂಭವಾಗುತ್ತದೆ. ಒಂದು ಹಂತದ ಮಾಗುವಿಕೆಯಲ್ಲಿ ಇನ್ನಷ್ಟು ಸಶಕ್ತಳಾಗುವಾಗ ಆಕೆಯನ್ನು ಮರೆಯಲ್ಲೇ ಕೂರಿಸುವ ಪ್ರಯತ್ನ ಬಲವಾಗಿ ನಡೆಯುತ್ತಿತ್ತು. ಇದು ನಮ್ಮ ಸಮಾಜದಲ್ಲಿ ಇದು ಸಹಜವಾಗಿಬಿಟ್ಟಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗಿದೆ.
ಒಬ್ಬ ಪುರುಷನಿಗೆ ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಪ್ರೇಯಸಿಯಾಗಿ ಹೆಣ್ಣು ಬೇಕು. ಆದರೆ, ಮಗಳಾಗಿ ಮಾತ್ರ ಬೇಡ. ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಬೇಕಂತೆ, ಮನೆಯಲ್ಲಿ ಗಂಡು ಹುಟ್ಟಬೇಕು ಎಂಬ ನಿಯಮ ಹಿಂದೆ ಇತ್ತು. ಈಗಲೂ ಇದೆ ಅಷ್ಟೊಂದು ಇಲ್ಲ. ಮನೆಗೆ ಕುಲದೀಪ ಬೇಕು. ಕೊಟ್ಟಿಗೆಯಲ್ಲಾದರೆ ಮತ್ತೆ ಮತ್ತೆ ಹಾಲು ಕೊಡುವ ಹಸು ಬೇಕು. ಇದು ಪ್ರಸ್ತುತ ಆಗಿನ ಕಾಲಾದ ಸಮಾಜ ಯೋಚಿಸುವ ರೀತಿಯಾಗಿತ್ತು.
ಮಹಿಳೆಯರಿಗೆ ಹಿಂದಿನಿಂದಲೂ ಇರುವ ಸಮಸ್ಯೆ ಎಂದರೆ ವೇತನ ತಾರತಮ್ಯದ್ದೇ, ಕೂಲಿ ಕಾರ್ಮಿಕರಿರಲಿ, ಖಾಸಗಿ ಸಂಸ್ಥೆಯಾಗಿರಲಿ ಪುರುಷ ಮತ್ತು ಮಹಿಳೆಯರಿಗೆ ಒಂದೇ ರೀತಿಯ ಹುದ್ದೆ, ಸಮಾನ ಕೆಲಸ, ಜವಾಬ್ದಾರಿಗಳ ಹಂಚಿಕೆಯಾಗಿದ್ದರೂ ವೇತನದಲ್ಲಿ ಮಾತ್ರ ಹೆಚ್ಚು-ಕಡಿಮೆ. ಹೆಣ್ಣಿನ ಸೌಂದರ್ಯವನ್ನು ಸೆಕ್ಸಿಯಾಗಿ ಕಾಣುವುದೇ ಗ್ಲಾಮರ್ ಎಂಬಂತೆ ಜಾಹೀರಾತು, ಸಿನೆಮಾ, ದಾರಾವಾಹಿಗಳಲ್ಲಲ್ಲದೇ, ಹಲವು ಕ್ರೀಡೆಗಳಲ್ಲೂ ಬಿಂಬಿಸುವುದು ಮತ್ತು ನಂಬಿಸುವುದು ಮಹಿಳೆಯರ ಮೇಲಿನ ದೌರ್ಜನ್ಯವಲ್ಲದೆ ಮತ್ತೇನು.?
ಸ್ವತಃ ಮಹಿಳೆ ತಾನೂ ಒಂದು ಹೆಣ್ಣಾಗಿ, ಹೆಣ್ಣು ಮಗುವಿಗೆ ಜನ್ಮವಿತ್ತಾಗ ಏಕೆ ಈ ಹೆಣ್ಣು ಹುಟ್ಟಿತು ಎಂದು ಕೊರಗುತ್ತಾಳೆ. ಕೆಲವೊಮ್ಮೆ ಗರ್ಭಾವಸ್ಥೆಯಲ್ಲೇ ಮಗು ಹೆಣ್ಣು ಎಂದು ಗೊತ್ತಾದರೆ ಭ್ರೂಣಹತ್ಯೆಗೂ ಮುಂದಾಗಿರುವ ಘಟನೆಗಳೂ ನಡೆದಿವೆ. ಕಾರಣ ಆ ಮಗುವಿಗೆ ಅನ್ನ-ಬಟ್ಟೆ, ಶಿಕ್ಷಣ, ಮದುವೆ ಇವುಗಳನ್ನು ನಿರ್ವಹಿಸಲಾಗುವುದಿಲ್ಲ ಎಂದಲ್ಲ. ಬದಲಾಗಿ ಹೆಣ್ಣು ತಾನು ಕೆಲಸ ಮಾಡುವ ಜಾಗ, ಸರ್ಕಾರಿ, ಖಾಸಗಿ ಸಂಸ್ಥೆ, ಕಛೇರಿಗಳಲ್ಲಿ ಎಸಗುವ ಲೈಂಗಿಕ ಕಿರುಕುಳ, ಅಸುಗೂಸು, ವೃದ್ದೇ ಎನ್ನದೆ ಹುರಿದು ಮುಕ್ಕುವ ಕ್ರೂರ, ಪುಂಡ, ಪೋಕಿರಿ, ಕಾಮುಕರ ಅತ್ಯಾಚಾರ, ಕೊಲೆಗಳಂಥ ಪೈಶಾಚಿಕ ಕೃತ್ಯಗಳು.
ಹೀಗೆ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವುದರಿಂದ ಲಿಂಗಾನುಪಾತ ಕುಸಿಯುತ್ತಿದೆ. ಈ ಹಿಂದೆ ಸಾಮಾಜಿಕ ಸಮಸ್ಯೆಗಳು ಯಾವುವು ಎಂದು ಕೇಳಿದರೆ ಬಡತನ, ನಿರುದ್ಯೋಗ, ಹೆಚ್ಚೆಂದರೆ ವರದಕ್ಷಿಣೆ ಪದ್ದತಿ ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಇವುಗಳ ಜೊತೆಗೆ ಅತ್ಯಾಚಾರ ಒಂದು ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಬಹುತೇಕ ಅತ್ಯಾಚಾರಗಳು ಸೇಡು, ಕಾಮ, ಕ್ರೌರ್ಯದ ಮನಸ್ಸುಳ್ಳವರಿಂದ ನಡೆಯುತ್ತದೆ. ಇದಕ್ಕೆ ಅವರ ಕುಟುಂಬದ ಹಿನ್ನೆಲೆ, ಬಡತನ, ನಿರುದ್ಯೋಗ, ಒಂಟಿತನ, ಅನಾಥಪ್ರಜ್ಞೆ ಮುಂತಾದ ಕಾರಣಗಳಿರಬಹುದು.
ಇಂಥವರಿಗೆ ಸೂಕ್ತವಾದ ಮೌಲ್ಯ ಶಿಕ್ಷಣವನ್ನು ನೀಡಿ ತಿದ್ದಬಹುದಾಗಿದೆ. ಬದಲಾಗದಿದ್ದ ಪಕ್ಷದಲ್ಲಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯ ಭಯವನ್ನು ಹುಟ್ಟಿಸಿಯಾದರೂ ಇಂತಹವರನ್ನು ಎಚ್ಚರಿಸಬೇಕು. ಈ ನಿಟ್ಟಿನಲ್ಲಿ ಪತ್ರಿಕೆ, ಮಾದ್ಯಮ, ಸರ್ಕಾರ, ಆಡಳಿತಾತ್ಮಕ, ಅಧಿಕಾರಿವರ್ಗ ಅಷ್ಟೇ ಅಲ್ಲದೇ ಜನಸಾಮಾನ್ಯರೂ ಕೂಡ ಕಾರ್ಯಪ್ರೌರುತ್ತರಾಗಬೇಕಿದೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಬಡತನ, ಅಸಹಾಯಕತೆಯನ್ನು ದಾಳವಾಗಿಸಿಕೊಂಡು ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ಲೈಂಗಿಕ ಕಾರ್ಯಕರ್ತೆಯನ್ನಾಗಿ ರೂಪಿಸುವುದು, ಭಿಕ್ಷಾಟನೆಗೆ ಬಿಡುವುದು, ವೇಶ್ಯಾವಾಟಿಕೆಯ ಕಾಸಾಯಿಖಾನೆಗೆ ತಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಬಾಲ್ಯವಿವಾಹ ಬಹುತೇಕ ಮರೆಯಾಗಿ, ಇದರ ಬದಲಾಗಿ ಅಪ್ರಾಪ್ತ ಬಾಲಕಿಯರ ಮದುವೆ ಅಲ್ಲಲ್ಲಿ ಕಾಣಸಿಗುತ್ತವೆ.
ಇನ್ನು ಕೌಟುಂಬಿಕ ಕಲಹ, ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಗಂಡ, ಅತ್ತೆ, ಮಾವಂದಿರು ನೀಡುವ ವರದಕ್ಷಿಣೆ ಕಿರುಕುಳ ಆಗಾಗ ಪತ್ರಿಕೆ, ಮಾದ್ಯಮಗಳಲ್ಲಿ ಸದ್ದು ಮಾಡುತ್ತಿರುತ್ತವೆ. ಕೆಲವೊಮ್ಮೆ ಇವು ವಿವಾಹ ವಿಚ್ಛೇಧನ ಅಥವಾ ಆತ್ಮಹತ್ಯೆಗಳಲ್ಲಿ ಕೊನೆಗೊಳ್ಳುತ್ತವೆ. ಹೆಣ್ಣು ಬೆಳೆದು ತಾರುಣ್ಯಾವಸ್ಥೆ ತಲುಪಿದಾಗ ಹಾರ್ಮೋನುಗಳ ಸ್ರವಿಕೆಯಿಂದಾಗಿ ತನ್ನ ದೇಹದಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ.
ಋತುಚಕ್ರ ಆರಂಭಗೊಂಡು, ಪ್ರತೀ ತಿಂಗಳೂ ಆ ಮೂರು ದಿನಗಳಲ್ಲಿ ನೋವು-ಆತಂಕಗಳನ್ನು ಅನುಭವಿಸಬೇಕಾಗುತ್ತದೆ. ಇನ್ನು 9 ತಿಂಗಳು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಕೊನೆಗೆ ಜನ್ಮ ನೀಡುವಷ್ಟರಲ್ಲಿ ತನ್ನದು ಮರುಜನ್ಮವಾಗಿರತ್ತದೆ. ಇದೆಲ್ಲಾ ಗಂಡು ಮನಸ್ಸಿಗೆ ಹೇಗೆ ಅರ್ಥವಾದೀತು.?
ಗಂಡಿನ ಸೃಷ್ಠಿಗೆ ಹೆಣ್ಣು ಬೇಕು. ಅಷ್ಟೇ ಯಾಕೆ ನನ್ನ ನಿಮ್ಮನ್ನೆಲ್ಲಾ ಸೃಷ್ಠಿಸಿದ ಬ್ರಹ್ಮನಿಗೂ ಒಬ್ಬ ಅಮ್ಮನಿರಬೇಕಲ್ವೇ.
ಸಮಾಜ ಸೃಷ್ಠಿಯಲ್ಲಿ ಗಂಡು-ಹೆಣ್ಣಿನ ಪಾತ್ರ ಸಮಾನವಾಗಿರುತ್ತದೆ. ಆದಾಗ್ಯೂ ಕೆಳಹಂತದ ಕೆಲವು ಜೀವಿಗಳಲ್ಲಿ ವಂಶಾಭಿವೃದ್ದಿ ಗಂಡಿನ ಅವಶ್ಯಕತೆ ಇಲ್ಲದೇ ನಡೆಯುತ್ತದೆ. ಮುಂದೊಂದು ದಿನ ಇದು ಮನಷ್ಯನಲ್ಲೂ ಸಾದ್ಯವಾದರೆ ಗಂಡಿನ ಪಾಡೇನು? ಹಾಗೆ ನೋಡಿದರೆ ಮಗುವಿನ (ಗಂಡು ಅಥವಾ ಹೆಣ್ಣು) ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ. ಆದರೆ, ಹೆಣ್ಣು ಮಗುವಿಗೆ ಜನ್ಮಕೊಡುವ ಮಹಿಳೆಯನ್ನು ದೂಷಿಸುವುದರಲ್ಲಿ ಯಾವ ಅರ್ಥವಿದೆ ಹೇಳಿ.?
ಕುಟುಂಬದಲ್ಲಿ ಮಹಿಳೆಯ ಪಾತ್ರ ತುಂಬಾ ಪ್ರಮುಖವಾದದ್ದು. ತಾನು ಹುಟ್ಟಿದ ಮನೆಯಲ್ಲಿ ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಸಹೋದರ-ಸಹೋದರಿಯರೊಂದಿಗೆ, ಮದುವೆ. ನಂತರದಲ್ಲಿ ಅತ್ತೆ-ಮಾವ, ಗಂಡ, ಮೈದುನ-ನಾದಿನಿ, ತನ್ನ ಮಕ್ಕಳೊಂದಿಗಿನ ಹೊಂದಾಣಿಕೆ ಅನಿವಾರ್ಯ ಎಂಬಂತಾಗಿದೆ. ಅಡುಗೆ ಮನೆಯಲ್ಲಿ ಮೂರು ಹೊತ್ತು ಅತ್ತೆ-ಮಾವರ ವಯಸ್ಸಿಗೆ ಒಗ್ಗುವ, ಗಂಡನಿಗೆ ನೆಚ್ಚಿನ, ಮಕ್ಕಳಿಗೆ ಇಷ್ಟವಾದ ಅಡುಗೆಯನ್ನು ಮಾಡಿ ಉಣಬಡಿಸುವ ಕರ್ಮ ಅವಳದ್ದಾಗಿರುತ್ತದೆ.
ಕುಟುಂಬದ ಆದಾಯವನ್ನು ಕೂಡಿ, ಕಳೆದು, ಭಾಗಿಸಿ ಇದ್ದುದರಲ್ಲೇ ಸ್ವಲ್ಪ ಉಳಿಸಿ ಸಂಸಾರವನ್ನು ಸರಿದೂಗಿಸುವಳು ಹೆಣ್ಣು. ಜೊತೆಗೆ ಕುಟುಂಬದಲ್ಲಿ ಎಲ್ಲರ ಆರೋಗ್ಯದ ಕಾಳಜಿಯನ್ನು ಹೊತ್ತು ತನ್ನ ಆರೋಗ್ಯವನ್ನೇ ಮರೆತು ಬಿಟ್ಟಿರುತ್ತಾಳೆ. ಹಬ್ಬ-ಹರಿದಿನಗಳನ್ನು ಸಂಭ್ರಮದಿಂದ ಆಚರಿಸಿ, ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸಿ, ಅತ್ತೆ-ಮಾವಂದಿರ ಆರ‍್ಯೆಕೆ ಮಾಡಿ, ಗಂಡನ ಕೆಲಸಗಳಲ್ಲೂ ಭಾಗಿಯಾಗಿ, ಮಕ್ಕಳ ವಿದ್ಯಾಬ್ಯಾಸದ ಕಡೆಗೂ ಗಮನ ನೀಡಬೇಕು.
ಇಷ್ಟೆಲ್ಲಾ ನಿಭಾಯಿಸಿ, ಸಾಕು-ಸಾಕಾಗಿ, ಸೋತು-ಸುಣ್ಣವಾಗಿ, ಬೇಯಿಸಿ ಬೆಂದು ಹೋಗಿರುತ್ತಾಳೆ. ಒಟ್ಟಾರೆ ಹೆಣ್ಣಿನ ಬದುಕು ಬಿರುಗಾಳಿಗೊಡ್ಡಿದ ದೀಪದಂತೆ. ಮಡಿಲಿನಲ್ಲಿ ಸುಣ್ಣವನ್ನು ಕಟ್ಟಿಕೊಂಡು ಮಡುವಿಗೆ ಬಿದ್ದಹಾಗೆ. ಇಂಥವಳಿಗೆ ಮೊಸರಲ್ಲಿ ಕಲ್ಲು ಹುಡುಕದೆ, ಅವಳಿಗೆ ನೀಡುವ ಒಂದಿಷ್ಟು ಸಾಂತ್ವನ, ಪ್ರಶಂಸೆ, ಪ್ರೋತ್ಸಾಹ ಅವಳಿಗಿಷ್ಟು ನೆಮ್ಮದಿಯನ್ನು ತಂದೀತು.
ಹೆಣ್ಣಿನ ಭಾವನೆಗಳಿಗೆ ಸ್ಪಂದಿಸಬೇಕಿದೆ, ಅವಳನ್ನು ಗೌರವ ಮನೋಭಾವದಿಂದ ಕಾಣಬೇಕಿದೆ. ಅವಳ ಬೇಜಾರು, ಕೋಪ-ತಾಪಗಳಿಗೆ ಬೆಲೆಕೊಡಬೇಕಿದೆ. ಪ್ರೀತಿ, ಬಾಲ್ಯ, ಶಿಕ್ಷಣ, ಆರೋಗ್ಯ, ಕಾಳಜಿ, ರಕ್ಷಣೆ ಮುಂತಾದ ಹೆಣ್ಣಿನ ಹಕ್ಕು-ಬಾದ್ಯತೆಗಳನ್ನು ನಿರ್ವಹಿಸಬೇಕಿದೆ. ಕೇವಲ ಮಹಿಳಾ ದಿನವನ್ನು ಆಚರಿಸಿ, ಮೀಸಲಾತಿ, ಆದ್ಯತೆಗಳನ್ನು ಕೊಟ್ಟಮಾತ್ರಕ್ಕೆ ಮಹಿಳಾ ಸಬಲೀಕರಣ ಹೇಗಾದೀತು..?
ಬಾಲ್ಯವಿವಾಹ, ವಿವಾಹ ವಿಚ್ಛೇಧನೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ, ದೌರ್ಜನ್ಯ, ಶೋಷಣೆ, ಲೈಂಗಿಕ ಕಿರುಕುಳ ಅತ್ಯಾಚಾರ ಕೊಲೆಗಳಂತಹ ಸಾಮಾಜಿಕ ಪಿಡುಗುಗಳನ್ನು ತಡೆಯರ‍್ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಗಂಡುಸಮಾಜ ಉತ್ತರಿಸುವ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಇಲ್ಲವಾದರೆ 'ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ' ಎಂಬ ನಾಣ್ನುಡಿಯಂತೆ, ಹೆಣ್ಣು ಈಗಾಗಲೇ ಗಂಡಿಗೆ ಒಲಿದಿದ್ದಾಗಿದೆ ಇನ್ನು ಮುನಿಯುವುದಕ್ಕೂ ಮುನ್ನ ಗಂಡು ಎಚ್ಚೆತ್ತುಕೊಳ್ಳಬೇಕಿದೆ.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications