
ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ 2022- ಈ ವರ್ಷದ ಥೀಮ್, ಇತಿಹಾಸ ತಿಳಿಯಿರಿ
ಸಮಾಜದಲ್ಲಿರುವ ಕಟ್ಟುಪಾಡುಗಳಲ್ಲಿ ಹೆಣ್ಣು ಮಕ್ಕಳಿಗೇ ಹೆಚ್ಚು ಎಂಬ ಸಂಗತಿ ನಿರ್ವಿವಾದ. ವಿವಿಧ ಕಾಲಘಟ್ಟಗಳು, ಸಮಾಜಗಳಿಗೆ ತಕ್ಕಂತೆ ಕಟ್ಟುಪಾಡುಗಳು ಬೆಳೆದಿವೆ, ಬದಲಾಗಿವೆ. ಇವೆಲ್ಲಾ ಅಡೆತಡೆಗಳ ಮಧ್ಯೆಯೂ ಬಹಳಷ್ಟು ಹೆಣ್ಮಕ್ಕಳು ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದಾರೆ. ಅಂತೆಯೇ ಇಂದು ಅಕ್ಟೋಬರ್ 11 ಹೆಣ್ಣು ಮಗುವಿಗೆ ಗೌರವ ಸಲ್ಲಿಸಲಾಗುತ್ತಿದೆ.
ಕಳೆದ 10 ವರ್ಷಗಳಿಂದ ಪ್ರತೀ ವರ್ಷ ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಆಚರಿಸಲಾಗುತ್ತಿದೆ. 2012ರಲ್ಲಿ ವಿಶ್ವಸಂಸ್ಥೆ ಮೊದಲ ಬಾರಿಗೆ ಈ ದಿನದ ಆಚರಣೆಯನ್ನು ನಡೆಸಿತು. ಈ ವರ್ಷ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನದ 10ನೇ ವಾರ್ಷಿಕೋತ್ಸವ ಕೂಡ ಹೌದು.
Mental Health Day- ಕರ್ನಾಟಕದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ, ಚಿಕಿತ್ಸಾ ವ್ಯವಸ್ಥೆ
ಹಲವು ಸಂಕೋಲೆಗಳ ಮಧ್ಯೆ ಬದುಕುತ್ತಿರುವ ಹೆಣ್ಣು ಮಕ್ಕಳಿಗೆ ಇಂದು ಎದುರಾಗಿರುವ ಸವಾಲುಗಳನ್ನು ಅವಲೋಕಿಸಲು ಮತ್ತು ಅವರ ಸಬಲೀಕರಣ ಮತ್ತು ಹಕ್ಕಿಗೆ ಏನು ಮಾಡಬಹುದು ಎಂಬ ಚಿಂತನೆಗಳನ್ನು ನಡೆಸಲು ಈ ದಿನ ಸೂಕ್ತ ವೇದಿಕೆಯಾಗಿದೆ.

ಹೆಣ್ಣು ಮಗು ದಿನದ ಇತಿಹಾಸ
2012ರಲ್ಲಿ ವಿಶ್ವಸಂಸ್ಥೆಯೇ ಹೆಣ್ಣು ಮಗು ದಿನದ ಆಚರಣೆ ಆರಂಭಿಸಿತು. ಅದಕ್ಕೆ ಮುನ್ನ 2011 ಡಿಸೆಂಬರ್ 19ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಹೊರಡಿಸಿ, ಪ್ರತೀ ವರ್ಷ ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಆಚರಿಸಬೇಕು ಎಂದು ಘೋಷಿಸಿತು. ಹೆಣ್ಮಕ್ಕಳ ಹಕ್ಕು ಮತ್ತು ಅವರು ಎದುರಿಸುತ್ತಿರುವ ವಿಶೇಷ ಸವಾಲುಗಳನ್ನು ಗುರುತಿಸಿ ಅವಲೋಕಿಸಲು ಈ ದಿನವನ್ನು ಮುಡಿಪಾಗಿಡಲಾಗುತ್ತದೆ.
Indian Air Force Day 2022; ಹೊಸ ಸಮವಸ್ತ್ರ, ಹೊಸ ಸ್ಥಳದಲ್ಲಿ ಪೆರೇಡ್

ಈ ವರ್ಷದ ಥೀಮ್
"ನಮ್ಮ ಹಕ್ಕು, ನಮ್ಮ ಭವಿಷ್ಯ- ಈಗ ಸಮಯ ಬಂದಿದೆ" - ಇದು 2022 ಅಂತಾರಾಷ್ಟ್ರೀಯ ಹೆಣ್ಣು ಮಗು ದಿನದ ಥೀಮ್ ಆಗಿದೆ.
ಶಿಕ್ಷಣ, ಬಾಲ್ಯ ವಿವಾಹ, ಕಾನೂನು ಹಕ್ಕು, ವೈದ್ಯಕೀಯ ಹಕ್ಕು ಇತ್ಯಾದಿ ವಿಚಾರಗಳಲ್ಲಿ ಹೆಣ್ಮಕ್ಕಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗುತ್ತಿದೆ.
"ಮುಂದಡಿ ಇಡಲು ಹೆಣ್ಮಕ್ಕಳು ಸಿದ್ಧರಿದ್ದಾರೆ. ಸಮಾಜದ ಪ್ರತಿಯೊಬ್ಬರೂ ಕೂಡ ಹೆಣ್ಮಕ್ಕಳ ಜೊತೆ ನಿಂತುಕೊಳ್ಳುವ ಸಮಯ ಬಂದಿದೆ. ಹೆಣ್ಮಕ್ಕಳ ನಾಯಕತ್ವ ಮತ್ತು ಅವರ ಅಗಾಧ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟು ಭವಿಷ್ಯ ಉಜ್ವಲಗೊಳಿಸುವ ಸಮಯ ಬಂದಿದೆ" ಎಂದು ವಿಶ್ವಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಈ ದಿನದ ಬಗ್ಗೆ ಬರೆಯಲಾಗಿದೆ.

ಭಾರತದಲ್ಲಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ
ಹೆಣ್ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಪುರುಷರ ಮನೋಭಾವ ಯಾವುದೇ ಒಂದು ದೇಶಕ್ಕೆ ಸೀಮಿತವಾದುದಲ್ಲ, ಅದು ಜಾಗತಿಕವಾದುದು. ಕೆಲ ಸಮಾಜಗಳಲ್ಲಿ ಹೆಚ್ಚು, ಕೆಲ ಸಮಾಜಗಳಲ್ಲಿ ಅದು ಕಡಿಮೆ ಇರಬಹುದು.
ಇನ್ನು, ಭಾರತದಲ್ಲಿ ಹೆಣ್ಮಕ್ಕಳನ್ನು ಗುರಿಯಾಗಿಸಿ ಮಾಡಿದ ಅಪರಾಧ ಪ್ರಕರಣಗಳು ಬಹಳ ಹೆಚ್ಚಿದೆ. ನಿತ್ಯವೂ ಎಲ್ಲಾದರೊಂದು ಕಡೆ ಹೆಣ್ಮಗು ಮೇಲೆ ಅತ್ಯಾಚಾರ ನಡೆಯುತ್ತಿರುತ್ತದೆ. ರಾಷ್ಟ್ರರಾಜಧಾನಿ ದೆಹಲಿಯಂತೂ ಹೆಣ್ಮಕ್ಕಳಿಗೆ ಅಸುರಕ್ಷಿತವೇನೋ ಎನ್ನುವಷ್ಟು ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲಿ ಪ್ರತೀ ದಿನ ಸರಾಸರಿಯಾಗಿ ಇಬ್ಬರು ಅಪ್ರಾಪ್ತ ಮಹಿಳೆಯರ ರೇಪ್ ಆಗುತ್ತಿದೆ ಎಂದು 2021ರ ಎನ್‌ಸಿಆರ್‌ಬಿ ವರದಿ ಹೇಳುತ್ತದೆ.

4.28 ಲಕ್ಷ ಪ್ರಕರಣಗಳು
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಬಿಡುಗಡೆ ಮಾಡಿದ ವರದಿ ಪ್ರಕಾರ 2021ರಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧ ಘಟನೆಗಳ ಸಂಖ್ಯೆ ಬರೋಬ್ಬರಿ 4,28,278 ಎಂದಿದೆ. ಅಸ್ಸಾಮ್, ಒಡಿಶಾ, ತೆಲಂಗಾಣ, ಹರಿಯಾಣ, ನವದೆಹಲಿಯಲ್ಲಿ ಅತಿ ಹೆಚ್ಚು ಅಪರಾಧ ಘಟನೆಗಳು ಸಂಭವಿಸಿವೆ. ಜೈಪುರ, ನವದೆಹಲಿ, ಇಂದೋರ್, ಲಕ್ನೋ, ನಾಗಪುರ ನಗರಗಳು ಮಹಿಳೆಯರ ಮೇಲಿನ ದೌರ್ಜನ್ಯ ಘಟನೆಗಳಲ್ಲಿ ಮುಂಚೂಣಿಯಲ್ಲಿವೆ.
ಇನ್ನು, ಮಹಿಳೆಯರ ಮೇಲಿನ 4.28 ಲಕ್ಷ ಅಪರಾಧ ಘಟನೆಗಳಲ್ಲಿ ಕೌಟುಂಬಿಕ ಹಿಂಸಾಚಾರವೇ ಹೆಚ್ಚು. ಈ ವಿಚಾರದಲ್ಲಿ 1,36,234 ಪ್ರಕರಣಗಳು ದಾಖಲಾಗಿವೆ. ಅದು ಮಹಿಳೆ ಮೇಲಿನ ಹಲ್ಲೆ ಘಟನೆಗಳು 89,200 ಇದೆ. 75 ಸಾವಿರಕ್ಕೂ ಹೆಚ್ಚು ಅಪಹರಣ ಘಟನೆಗಳು ಬೆಳಕಿಗೆ ಬಂದಿವೆ. ಇನ್ನು 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
(ಒನ್ಇಂಡಿಯಾ ಸುದ್ದಿ)