ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ ವಿಮಾ ಸೌಲಭ್ಯ, ವಿವರಗಳು
ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುತ್ತಾರೆ. ಈ ಕಾರ್ಮಿಕರಿಗಾಗಿಯೇ ಸರ್ಕಾರಿ ವಿಮೆ ಯೋಜನೆ ಜಾರಿಗೆ ತಂದಿದೆ.
ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗೆ ಇ-ಶ್ರಮ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕು. ಈ ಯೋಜನೆಗೆ 'ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ' ಎಂದು ಹೆಸರಿಡಲಾಗಿದೆ.
ಈ ಕಾರ್ಮಿಕರಲ್ಲಿ ಬಹುತೇಕರು ದಿನಪತ್ರಿಕೆ ವಿತರಿಸಲು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಈ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ಇಲಾಖೆ ಯೋಜನೆಯನ್ನು ಜಾರಿಗೊಳಿಸಿದೆ.

ವಿಮೆ ಸೌಲಭ್ಯದ ಮಾಹಿತಿ: ವ್ಯಕ್ತಿ ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ. 2 ಲಕ್ಷ ಹಾಗೂ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. 2 ಲಕ್ಷಗಳವರೆಗೆ (ಶೇಕಡಾವಾರು ದುರ್ಬಲತೆ ಆಧಾರದ ಮೇಲೆ) ದೊರೆಯಲಿದೆ.
ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ರೂ. 1 ಲಕ್ಷಗಳವರೆಗೆ ದೊರೆಯುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ವಯೋಮಿತಿ 16 ರಿಂದ 59 ವರ್ಷಗಳು.
ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು ಹಾಗೂ ಭವಿಷ್ಯನಿಧಿ ಮತ್ತು ಇಎಸ್ಐ ಫಲಾನುಭವಿಯಾಗಿರಬಾರದು. ಅಲ್ಲದೇ, ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್‍ನಲ್ಲಿ 'ನ್ಯೂಸ್ ಪೇಪರ್ ಬಾಯ್' ಎಂಬ ವರ್ಗದಡಿ ನೋಂದಣಿಯಾಗಿರಬೇಕು.
ಕ್ಲೇಮ್ ವಿಧಾನದ ಮಾಹಿತಿ; ಅರ್ಜಿದಾರ/ ಫಲಾನುಭವಿಯು ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ವೈದ್ಯಕೀಯ ಸೌಲಭ್ಯ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ 1 ವರ್ಷದೊಳಗೆ ನಿಗದಿತ ನಮೂನೆಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
* ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತ ಗುರುತಿನ ಚೀಟಿ
* ನಿಗದಿತ ನಮೂನೆಯಲ್ಲಿ ಉದ್ಯೋಗ ಪ್ರಮಾಣ ಪತ್ರ
* ಪಥಮ ವರ್ತಮಾನ ವರದಿ ಪ್ರತಿ
* ಮರಣ ಪ್ರಮಾಣ ಪತ್ರ, ಮರಣ ಪ್ರಕರಣಗಳಲ್ಲಿ
* ಮರಣೋತ್ತರ ಪರೀಕ್ಷಾ ವರದಿ,
* ಆಸ್ಪತ್ರೆಯ ಮೂಲ ಬಿಲ್‌ಗಳು, ಆಸ್ಪತ್ರೆ ವೆಚ್ಚ ಮರುಪಾವತಿ ಪ್ರಕರಣಗಳಲ್ಲಿ
* ಮೂಲ ಡಿಸ್ಮಾರ್ಜ್ ಸಾರಾಂಶ
* ಸರ್ಕಾರಿ ವೈದ್ಯಕೀಯ ದುರ್ಬಲತೆ ಪ್ರಮಾಣ ಪತ್ರ (ದುರ್ಬಲತೆ ಪ್ರಕರಣಗಳಲ್ಲಿ)
* ಕಂದಾಯ ಇಲಾಖೆಯ ವಂಶ ವೃಕ್ಷ ಪ್ರಮಾಣ ಪತ್ರ (ಮರಣ ಪ್ರಕರಣಗಳಲ್ಲಿ ಮಾತ್ರ)
* ಪಡಿತರ ಚೀಟಿ (ಲಭ್ಯವಿದ್ದಲ್ಲಿ),
* ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ
* ನಾಮನಿರ್ದೇಶಿತರ/ ಫಲಾನುಭವಿಯ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತ್ರಿ
* ಅವಶ್ಯಕವಿರುವ ಇತರೆ ದಾಖಲೆಗಳನ್ನು ಸಲ್ಲಿಸಬೇಕು
ಒಂದು ವೇಳೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅಪಘಾತದ ವೇಳೆ ಮಾದಕ ದ್ರವ್ಯ, ಮದ್ಯ ಸೇವಿಸಿದ್ದಲ್ಲಿ. ಫಲಾನುಭವಿಯ ಬುದ್ಧಿ ಭ್ರಮಣೆಯ ಕಾರಣ ಅಪಘಾತ ಸಂಭವಿಸಿದಲ್ಲಿ, ಫಲಾನುಭವಿ ಅಪರಾಧದ ಉದ್ದೇಶದಿಂದ ಮಾಡಿದ ಯಾವುದಾದರೂ ಕಾನೂನು ಉಲ್ಲಂಘನೆಯ ಕಾರಣ ಅಪಘಾತ ಸಂಭವಿಸಿದಲ್ಲಿ ಕ್ಲೇಮು ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 08272-201534. ಕಾರ್ಮಿಕ ಸಹಾಯವಾಣಿ 155214 (24x7), ಕಾರ್ಮಿಕ ಅಧಿಕಾರಿಗಳು ಹಾಗೂ ಹಿರಿಯಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರ ಕಛೇರಿಗಳು, ಕಾರ್ಮಿಕ ಇಲಾಖೆ.











Click it and Unblock the Notifications