Insta Maids service: ಇನ್ಮುಂದೆ 15 ನಿಮಿಷದಲ್ಲೇ ಸಿಗ್ತಾರೆ ಮನೆ ಕೆಲಸದವರು, ಬಂತು ಹೊಸ ಸೇವೆ
ಈಗೆಲ್ಲ ಆನ್‌ಲೈನ್ ಸರ್ವೀಸ್‌ನಲ್ಲಿ ಮುಳುಗಿರುವ ಜಮಾನ. ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬೇಕಾದ ವಸ್ತುಗಳು ಬಂದು ತಲುಪುತ್ತಿವೆ. ಇದಕ್ಕಾಗಿ ಹಲವು ಇ-ಕಾಮರ್ಸ್ ಸಂಸ್ಥೆಗಳು ಕೂಡ ಪೈಪೋಟಿಯಲ್ಲಿ ಸೇವೆ ನೀಡುತ್ತಿವೆ. ಆರ್ಡರ್ ಮಾಡಿದ 10ರಿಂದ 15 ನಿಮಿಷದಲ್ಲೇ ದಿನಸಿ, ಆಹಾರ ಸೇರಿ ಹಲವು ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿವೆ. ಇದೀಗ ಆನ್‌ಲೈನ್ ಮೂಲಕವೇ ಮನೆ ಕೆಲಸಕ್ಕೆ ಸಿಬ್ಬಂದಿಯನ್ನು ಕೂಡ ಕರೆಸಿಕೊಳ್ಳಬಹುದಾಗಿದೆ. 15 ನಿಮಿಷದಲ್ಲೇ ಮನೆ ಕೆಲಸದ ಸಿಬ್ಬಂದಿ ನಿಮಗೆ ಲಭ್ಯವಾಗುತ್ತಾರೆ. ಇಂತಹ ಇನ್‌ಸ್ಟಾ ಮೇಡ್ (Insta Maids) ಎಂಬ ಸೇವೆಯನ್ನು ಅರ್ಬನ್ ಕಂಪನಿ (Urban Company) ಪರಿಚಯಿಸಿದೆ. ಈ ಸೇವೆ ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು ಅರ್ಬನ್ ಕಂಪನಿ ಈ ಇನ್‌ಸ್ಟಾ ಮೇಡ್ಸ್ ಅಥವಾ ಇನ್‌ಸ್ಟಾ ಹೆಲ್ಪ್ ಎನ್ನುವ ವಿನೂತನ ಸೇವೆಯನ್ನು ಘೋಷಿಸಿದೆ. ಅರ್ಬನ್ ಕಂಪನಿಯಡಿ ಈ ಇನ್‌ಸ್ಟಾ ಮೇಡ್ಸ್ ಸೇವೆ ಗ್ರಾಹಕರಿಗೆ ಸಿಗಲಿದೆ. ನಮ್ಮ ಸೇವಾ ಪಾಲುದಾರರ ಯೋಗಕ್ಷೇಮಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ಈ ಹೊಸ ಸೇವೆ ನೀಡುವವರು ಗಂಟೆಗೆ ₹150ರಿಂದ 180 ರೂಪಾಯಿ ಗಳಿಸಲಿದ್ದಾರೆ. ಅವರಿಗೆ ಉಚಿತ ಆರೋಗ್ಯ ವಿಮೆ, ಕೆಲಸದ ಸ್ಥಳದಲ್ಲಿ ಜೀವ ಮತ್ತು ಅಪಘಾತ ವಿಮೆ ಸೌಲಭ್ಯ ಕೂಡ ನೀಡಲಾಗುವುದು. ತಿಂಗಳಿಗೆ 132 ಗಂಟೆಗಳ ಕಾಲ ಕೆಲಸ ಮಾಡಿದರೂ ಅವರು ಮಾಸಿಕ ಕನಿಷ್ಠ 20,000 ರೂಪಾಯಿವರೆಗೆ ಗಳಿಸಲಿದ್ದಾರೆ ಎಂದು ವಿವರಿಸಿದೆ.

ಈ ಹೊಸ ಸೇವೆಯ ಆಫರ್ ಆಗಿ ಗ್ರಾಹಕರಿಗೆ ಈ ಸೇವೆಯನ್ನು ಗಂಟೆಗೆ ₹49ರೂಪಾಯಿಯಂತೆ ಪರಿಚಯಿಸುತ್ತಿದ್ದೇವೆ. ಗ್ರಾಹಕ ಸ್ನೇಹಿಯಾಗಿ ನಮ್ಮ ಸೇವೆ ನೀಡುವ ಸೇವಕರ ಆರ್ಥಿಕ ಮಟ್ಟ ಸುಧಾರಿಸಲು ಈ ಬೆಲೆಗಳು ಪೂರಕವಾಗಿರುತ್ತವೆ ಎಂದು ಖಚಿತಪಡಿಸಿದೆ. ಸದ್ಯ ಈ ಸೇವೆಯನ್ನು ಮುಂಬೈನಲ್ಲಿ ಪರಿಚಯಿಸಲಾಗಿದ್ದು, ಶೀಘ್ರದಲ್ಲೇ ಗ್ರಾಹಕರ ಬೇಡಿಕೆ ಮೇರೆಗೆ ಉಳಿದ ಇನ್ನಿತರ ನಗರಗಳಿಗೂ ವಿಸ್ತರಿಸಲು ಮುಂದಾಗಿದೆ.
ಮುಂಬೈನಲ್ಲಿ ಹೊಸದಾಗಿ ಪ್ರಾರಂಭಿಸಲಾದ ನಮ್ಮ ಇನ್‌ಸ್ಟಾ ಮೇಡ್ಸ್, ಇನ್‌ಸ್ಟಾ ಹೆಲ್ಪ್ ಸೇವೆಗೆ ಗ್ರಾಹಕರಿಂದ ಸಿಕ್ಕಿರುವ ಸಕಾರಾತ್ಮಕ ಸ್ಪಂದನೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಪ್ರಸ್ತುತ, ಈ ಸೇವೆಯು ಪೈಲಟ್ ಹಂತದಲ್ಲಿದೆ. ಶೀಘ್ರದಲ್ಲೇ ಇದನ್ನು ದೇಶದ ಇನ್ನಿತರ ಪ್ರಮುಖ ನಗರಗಳಿಗೂ ವಿಸ್ತರಿಸುವ ಚಿಂತನೆ ಇದೆ ಎಂದು ಅರ್ಬನ್ ಕಂಪನಿ ಹೇಳಿದೆ. ಅರ್ಬನ್ ಕಂಪನಿಯಲ್ಲಿ, ನಾವು ಶ್ರಮದ ಘನತೆಯನ್ನು ದೃಢವಾಗಿ ನಂಬುತ್ತೇವೆ. ಈ ತತ್ವವು ನಾವು ಈ ಸೇವೆಯನ್ನು ವಿಸ್ತರಿಸುವಾಗ ನಮಗೆ ಮಾರ್ಗದರ್ಶನ ನೀಡುತ್ತದೆ. ನಮ್ಮ ಗ್ರಾಹಕರು ಮತ್ತು ಸೇವೆ ನೀಡುವವರಿಂದಲೇ ನಮಗೆ ನಿಜವಾದ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಪರ-ವಿರೋಧದ ಅಭಿಪ್ರಾಯಾಗಳು ವ್ಯಕ್ತವಾಗಿವೆ. ಕೆಲವರು ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಅಗತ್ಯವಿರುವ ಸೇವೆಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಮಕ್ಕಳ ಆರೈಕೆ ಸೇವೆ ಪರಿಚಯಿಸುವುದು ಕೂಡ ಒಳ್ಳೆಯದು ಎಂದಿದ್ದಾರೆ. ಆದರೆ ಮನೆ ಕೆಲಸದ ಸಿಬ್ಬಂದಿಗೆ ಗಂಟೆಗೆ 49 ರೂಪಾಯಿ ತುಂಬಾ ಕಡಿಮೆ, ಇದನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಈ ಸೇವೆಯಿಂದ ಸಂಭವಿಸಬಹುದಾದ ಅಪಾಯಗಳ ಬಗ್ಗೆಯೂ ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಹೆಚ್ಚಾಗಿ ಮನೆ ಕೆಲಸದ ಸೇವೆ ನೀಡುವುದರಿಂದ ಅವರಿಗೆ ರಕ್ಷಣೆ ನೀಡುವುದು ದೊಡ್ಡ ಸವಾಲು ಎಂದಿದ್ದಾರೆ.












Click it and Unblock the Notifications