ತಾಳೆ ಎಣ್ಣೆ ತುಟ್ಟಿ: ಭಾರತದಲ್ಲಿ ಏ.28ರ ನಂತರ ಪಾಮ್ ಆಯಿಲ್ ಬೆಲೆಯೂ ಏರಿಕೆ
ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ಬೆಲೆ ಏರಿಕೆಗೆ ಒಂದರ ಹಿಂದೆ ಒಂದರಂತೆ ನಂಟು ಬೆಸೆದುಕೊಂಡಿದೆ. ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಈಗಾಗಲೇ ಗಗನಮುಖಿ ಆಗಿದೆ. ಸರಬರಾಜು ವೆಚ್ಚ ದುಬಾರಿ ಆಗಿದೆ. ತರಕಾರಿ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆಯು ಹೆಚ್ಚಿದೆ. ಇದರ ಮಧ್ಯೆ ಏಪ್ರಿಲ್ 28ರ ನಂತರ ಭಾರತದಲ್ಲಿ ತಾಳೆ ಎಣ್ಣೆ (ಪಾಮ್ ಆಯಿಲ್)ಯೂ ತುಟ್ಟಿ ಆಗಲಿದೆ.
ಭಾರತದಲ್ಲಿ ಪಾಮ್ ಆಯಿಲ್ ಬೆಲೆ ಏರಿಕೆಗೆ ಇಂಡೋನೆಷ್ಯಾ ಮುಖ್ಯ ಕಾರಣವಾಗಿದೆ. ತಾಳೆ ಎಣ್ಣೆ ಉತ್ಪಾದನೆಯಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರ ಎನಿಸಿರುವ ಇಂಡೋನೇಷ್ಯಾ ಏಪ್ರಿಲ್ 28ರಿಂದ ವಿದೇಶಗಳಿಗೆ ತಾಳೆಎಣ್ಣೆಯ ರಫ್ತುಗಳನ್ನು ನಿಷೇಧಿಸುವುದಕ್ಕೆ ನಿರ್ಧರಿಸಿದೆ. ಏಕೆಂದರೆ ಇಂಡೋನೇಷ್ಯಾ ಕೂಡ ಈಗಾಗಲೇ ದೇಶೀಯ ಅಡುಗೆ ಎಣ್ಣೆ ಕೊರತೆ ಮತ್ತು ಬೆಲೆ ಏರಿಕೆಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದೆ.
ಇಂಡೋನೆಷ್ಯಾದಲ್ಲಿ ಅಡುಗೆ ಎಣ್ಣೆ ಕೊರತೆ ಸೃಷ್ಟಿಯಾಗಿರುವು ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ?, ದೇಶದಲ್ಲಿ ತಾಳೆ ಎಣ್ಣೆ ಬೆಲೆ ಏರಿಕೆಗೆ ಹೇಗೆ ಕಾರಣವಾಗಲಿದೆ?, ಇಂಡೋನೆಷ್ಯಾ ಮತ್ತು ಭಾರತದ ನಡುವಿನ ಆಮದು-ರಫ್ತು ವ್ಯವಹಾರ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ ನೋಡಿ.

ಭಾರತ, ಚೀನಾಳು ಅತಿಹೆಚ್ಚು ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತವೆ
ಇಂಡೋನೆಷ್ಯಾ ಜಗತ್ತಿಗೆ ಸರಬರಾಜು ಮಾಡುವ ಒಟ್ಟು ತಾಳೆ ಎಣ್ಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಮ್ ಆಯಿಲ್ ಅನ್ನು ಭಾರತ ಮತ್ತು ಚೀನಾ ರಾಷ್ಟ್ರಗಳೇ ಆಮದು ಮಾಡಿಕೊಳ್ಳುತ್ತವೆ. ಆ ಮೂಲಕ ಇಂಡೋನೆಷ್ಯಾದಿಂದ ಅತಿಹೆಚ್ಚು ಪಾಮ್ ಆಯಿಲ್ ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ. ಉಕ್ರೇನ್‌ನ ಮೇಲೆ ರಷ್ಯಾದ ಯುದ್ಧದ ನಂತರ ಜಾಗತಿಕ ಅಡುಗೆ ಎಣ್ಣೆಯ ಬೆಲೆಗಳು ಈ ವರ್ಷ ಏರಿಕೆಯಾಗಿವೆ. ಇದು ಆ ಪ್ರದೇಶದಿಂದ ಸೂರ್ಯಕಾಂತಿ ಎಣ್ಣೆಯ ಸಾಗಣೆಕೆಯ ಮೇಲೆ ಪೆಟ್ಟು ಕೊಟ್ಟಿದೆ.

ಪಾಮ್ ಆಯಿಲ್ ಬಳಕೆಯಾಗುವುದು ಏನಕ್ಕೆ?
ಈ ಪಾಮ್ ಎಣ್ಣೆಯನ್ನು ಅಡುಗೆ ಎಣ್ಣೆಯಿಂದ ಸಂಸ್ಕರಿಸಿದ ಆಹಾರಗಳು, ಸೌಂದರ್ಯ ವರ್ಧಕಗಳು ಮತ್ತು ಜೈವಿಕ ಇಂಧನಗಳವರೆಗೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಸಸ್ಯಜನ್ಯ ಎಣ್ಣೆಯಾಗಿದೆ. ಬಿಸ್ಕತ್ತುಗಳು, ಮಾರ್ಗರೀನ್, ಲಾಂಡ್ರಿ ಡಿಟರ್ಜೆಂಟ್ ಗಳು ಮತ್ತು ಚಾಕೊಲೇಟ್ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಇದೇ ತಾಳೆ ಎಣ್ಣೆಯನ್ನು ಬಳಸಲಾಗುತ್ತದೆ.

ದೇಶದಲ್ಲಿ ಅಡುಗೆ ಎಣ್ಣೆ ದುಬಾರಿಯಾಗಲು ಕಾರಣ?
ಇಂಡೋನೇಷ್ಯಾದಿಂದ ಸರಬರಾಜು ಸ್ಥಗಿತಗೊಂಡರೆ ಭಾರತಕ್ಕೆ ಪ್ರತಿ ತಿಂಗಳು ಸುಮಾರು 4 ಮಿಲಿಯನ್ ಟನ್ ತಾಳೆ ಎಣ್ಣೆ ನಷ್ಟವಾಗುತ್ತದೆ. ಉಕ್ರೇನ್ ಯುದ್ಧದ ನಂತರ ಭಾರತದ ಸೂರ್ಯಕಾಂತಿ ತೈಲ ಪೂರೈಕೆಯು ತಿಂಗಳಿಗೆ ಸುಮಾರು 1,00,000 ಟನ್‌ಗಳಿಗೆ ಅರ್ಧದಷ್ಟು ಕಡಿಮೆಯಾಗಿದೆ. ಇದು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕತೆಗೆ ಭಾರಿ ಪೆಟ್ಟು ಕೊಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಸಗಟು ಹಣದುಬ್ಬರ
ಕಳೆದ ಒಂದು ವರ್ಷದಿಂದ ಭಾರತದ ಸಗಟು ಹಣದುಬ್ಬರವು ಎರಡಂಕಿಯಲ್ಲಿ ಸ್ಥಿರವಾಗಿ ಉಳಿದಿದೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಸರಕುಗಳ ಬೆಲೆಗಳಲ್ಲಿ ನಿರಂತರ ಏರಿಕೆಯಾಗಿದೆ. ಅದರ ಹೊರತಾಗಿಯೂ ಮಾರ್ಚ್‌ನಲ್ಲಿ ಹಣದುಬ್ಬರ ಪ್ರಮಾಣವು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಫೆಬ್ರವರಿಯಲ್ಲಿ 13.11% ರಿಂದ ಮಾರ್ಚ್‌ನಲ್ಲಿ ಶೇ.14.55ರಷ್ಟು ಹೆಚ್ಚಾಗಿದೆ. ಇದರ ಮಧ್ಯೆಯೇ ದೇಶದಲ್ಲಿ ಉತ್ಪಾದಿಸುವ ಎಣ್ಣೆಕಾಳುಗಳ ಖರೀದಿಯನ್ನು ಪ್ರಾರಂಭಿಸಲು ಭಾರತೀಯ ಕಂಪನಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.












Click it and Unblock the Notifications