ವಿಶ್ವದ ಬೆಸ್ಟ್ ಚಿಕನ್ ಖಾದ್ಯಗಳಲ್ಲಿ ಭಾರತದ ಬಟರ್ ಚಿಕನ್‌ಗೆ ಮೂರನೇ ಸ್ಥಾನ: ಇನ್ನು ಏನೆಲ್ಲಾ ಇದೆ ನೋಡಿ
ಸಾಂಪ್ರದಾಯಿಕ ಆಹಾರ, ವಿಮರ್ಶೆಗಳು ಮತ್ತು ವಿಮರ್ಶಕರ ಆನ್‌ಲೈನ್ ಟ್ರಾವೆಲ್ ಗೈಡ್ ಜಗತ್ತಿನಾದ್ಯಂತ 50 ಅತ್ಯುತ್ತಮ ಚಿಕನ್ ಖಾದ್ಯಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹುಟ್ಟಿದ ಸಾಂಪ್ರದಾಯಿಕ ಭಾರತೀಯ ಖಾದ್ಯ ಬಟರ್ ಚಿಕನ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಟೇಸ್ಟ್ ಅಟ್ಲಾಸ್ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಪಟ್ಟಿಯನ್ನು ಹಂಚಿಕೊಳ್ಳಲಾಗಿದ್ದು, ಜಗತ್ತಿನ ಹಲವು ರಾಷ್ಟ್ರಗಳ ಚಿಕನ್ ಖಾದ್ಯಗಳು ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ಭಾರತದ ನಾಲ್ಕು ಚಿಕನ್ ಖಾದ್ಯಗಳು ಸ್ಥಾನ ಪಡೆದುಕೊಂಡಿರುವುದು ವಿಶೇಷ.

ಇರಾನ್‌ನ ಸಾಂಪ್ರದಾಯಿಕ ಚಿಕನ್ ಖಾದ್ಯ ಜೂಜೆಹ್ ಕಬಾಬ್ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಕಲ್ಲಿದ್ದಲಿನ ಕೆಂಡ್ ಮೇಲೆ ಬೋನ್‌ಲೆಸ್ ಚಿಕನ್ ಅನ್ನು ಸಾಂಪ್ರದಾಯಿಕ ಮಸಾಲೆ ಪದಾರ್ಥಗಳನ್ನು ಹಚ್ಚಿ ಹದವಾಗಿ ಬೇಯಿಸಲಾಗುತ್ತದೆ. ಇದನ್ನು ವಿಶ್ವದ ಬೆಸ್ಟ್ ಚಿಕನ್ ಖಾದ್ಯ ಎಂದು ಪಟ್ಟಯಲ್ಲಿ ಹೇಳಿದೆ.
ಕೊರಿಯಾದ ಡಾಕ್ ಕಲ್ಬಿ ಎನ್ನುವ ಚಿಕನ್ ಖಾದ್ಯಕ್ಕೆ ಎರಡನೇ ಸ್ಥಾನ ದೊರೆತಿದೆ. ತರಕಾರಿ, ಬೋನ್‌ಲೆಸ್ ಚಿಕನ್, ರೈಸ್ ಕೇಕ್ ಜೊತೆ ಕೊರಿಯಾದ ಸಾಂಪ್ರದಾಯಿಕ ಮಸಾಲೆ ಪದಾರ್ಥಗಳನ್ನು ಬಳಸಿ ಈ ಖಾದ್ಯ ಸಿದ್ದಪಡಿಸಲಾಗುತ್ತದೆ. ಈ ಖಾದ್ಯ ಖಾರದಿಂದಲೇ ಹೆಸರುವಾಸಿಯಾಗಿದೆ.
ಮೂರು, ನಾಲ್ಕನೇ ಸ್ಥಾನದಲ್ಲಿ ಭಾರತದ ಖಾದ್ಯಗಳು
ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಬಟರ್ ಚಿಕನ್ ಖಾದ್ಯ ಮೂರನೇ ಸ್ಥಾನ ಪಡೆದುಕೊಂಡಿದೆ. ಇತಿಹಾಸ ಹೇಳುವ ಪ್ರಕಾರ ಈ ಖಾದ್ಯ ಮೊದಲು ದೆಹಲಿಯಲ್ಲಿ ಶುರುವಾಗಿ ನಂತರ ದೇಶದ ಎಲ್ಲಾ ಕಡೆಗೂ ಪಸರಿಸಿದೆ, ಈಗ ಜಗತ್ತಿನ ಮೂಲೆ ಮೂಲೆಯಲ್ಲೂ ಈ ಖಾದ್ಯವನ್ನು ನೀವು ಸವಿಯಬಹುದು.
ರೊಟ್ಟಿ, ಪರೋಟಾ, ತಂದೂರ್ ರೋಟಿ ಜೊತೆ ಬಟರ್ ಚಿಕನ್ ಅನ್ನು ಸವಿಯಬಹುದು. ಭಾರತದ ಮಸಾಲೆ ಪದರ್ಥಗಳ ಜೊತೆ ಗೋಡಂಬಿಯನ್ನು ಕೂಡ ಈ ಖಾದ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಭಾರತದ ಯಾವುದೇ ಡಾಬಾ, ಮಾಂಸಾಹಾರಿ ಹೋಟೆಲ್‌ಗಳಲ್ಲಿ ಈ ಖಾದ್ಯ ಸಿಗುತ್ತದೆ.
ಇನ್ನು ನಾಲ್ಕನೇ ಸ್ಥಾನದಲ್ಲಿ ಚಿಕನ್ ಟಿಕ್ಕಾ ಸ್ಥಾನ ಪಡೆದುಕೊಂಡಿದೆ. ತಂದೂರಿ ಚಿಕನ್ ಈ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದುಕೊಂಡಿದ್ದರೆ, ಚಿಕನ್ 65 ಖಾದ್ಯ 25ನೇ ಸ್ಥಾನ ಪಡೆದುಕೊಂಡಿದೆ. ಪಾಕಿಸ್ತಾನದ ಘೋಷ್ಟ್ ಕರಾಹಿ ಕೂಡ ಈ ಪಟ್ಟಿಯಲ್ಲಿದ್ದು, 27ನೇ ಸ್ಥಾನ ಪಡೆದುಕೊಂಡಿದೆ.
ಇಷ್ಟು ಮಾತ್ರವಲ್ಲದೆ ಜಪಾನ್, ಚೀನಾ, ಕೊರಿಯಾ, ಅರ್ಜೆಂಟೀನಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಖಾದ್ಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಜಗತ್ತೇ ಈಗ ಬೆರಳ ತುದಿಯಲ್ಲಿದ್ದು, ಈ ಪಟ್ಟಿಯಲ್ಲಿರುವ ಎಲ್ಲಾ ರೆಸಿಪಿಗಳು, ಯೂಟ್ಯೂಬ್, ವೆಬ್ ಸೈಟ್‌ಗಳಲ್ಲಿ ಲಭ್ಯವಿದೆ. ಮಾಂಸಾಹಾರ ಪ್ರಿಯರು, ಅಡುಗೆ ಮಾಡಲು ಆಸಕ್ತಿ ಹೊಂದಿದವರು ಮನೆಯಲ್ಲೇ ಇವುಗಳನ್ನು ತಯಾರಿಸಿ ರುಚಿ ನೋಡಬಹುದಾಗಿದೆ.












Click it and Unblock the Notifications