ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಹುತ್ತರಿ ಹಬ್ಬದ ವಿಶೇಷತೆ ಬಗ್ಗೆ ನೀವು ತಿಳಿಯಲೇಬೇಕು.. ಇಲ್ಲಿದೆ ಸಂಪೂರ್ಣ ವಿವರ

By ಕೊಡಗು ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್‌, 07: ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಭೂಕುಸಿತ, ಮಹಾಮಳೆ, ಕೊರೊನಾ ಸಂಕಷ್ಟದ ಬಳಿಕ ಈ ಬಾರಿ ಎಲ್ಲ ಹಬ್ಬಗಳನ್ನು ಜನ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅದರಂತೆಯೇ ಕೊಡವರ ಕೊನೆಯ ಹಬ್ಬವಾದ ಹುತ್ತರಿಗೆ ಜನರು ಎಲ್ಲಾ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಈ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುಲು ಕಾರ್ಯನಿರತರಾಗಿದ್ದಾರೆ.

ಹುತ್ತರಿ ಹಬ್ಬ ಡಿಸೆಂಬರ್‌ 7ರಂದು ರಾತ್ರಿ ಆರಂಭವಾಗಿದೆ. ಹಬ್ಬದ ಸಂಪ್ರದಾಯದಂತೆ ರಾತ್ರಿ 7:20ಕ್ಕೆ ಕೊಡಗಿನ ಮಳೆದೇವರು ಎಂದೇ ಕರೆಯಲ್ಪಡುವ ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿ ನೆರೆ ಕಟ್ಟಲಾಗಿದೆ. ನಂತರ 8:20ಕ್ಕೆ ಕದಿರು ಕೊಯ್ಯುವ ಕಾರ್ಯಕ್ರಮ ನಡೆದಿದ್ದು, ರಾತ್ರಿ 9:20ಕ್ಕೆ ಪ್ರಸಾದ ಸ್ವೀಕಾರ, ಬೋಜನ ಕೂಟ ನಡೆಸಲು ಸಮಯ ನಿಗದಿಯಾಗಿದೆ.

Kodagu Coffee Mela : ಡಿಸೆಂಬರ್ 10, 11ರಂದು ಕೊಡಗು ಕಾಫಿ ಮೇಳKodagu Coffee Mela : ಡಿಸೆಂಬರ್ 10, 11ರಂದು ಕೊಡಗು ಕಾಫಿ ಮೇಳ

ಕೊಡಗಿನ ಹುತ್ತರಿ ಹಬ್ಬದ ವಿಶೇಷತೆಯೇ ಧಾನ್ಯ ಲಕ್ಷ್ಮಿ ಆಗಿದೆ. ಇದರ ಅರ್ಥ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವುದಾಗಿದೆ. ಈ ಮೊದಲು ಕೊಡಗು ಈಗಿನಂತೆ ಇರಲಿಲ್ಲ, ಬದಲಾಗಿ ಅಲ್ಲಿ ಭತ್ತವೇ ಪ್ರಧಾನ ಕೃಷಿಯಾಗಿತ್ತು. ಕೊಡಗಿನಲ್ಲಿ ನೀರಾವರಿ ಪ್ರದೇಶ ಹೆಚ್ಚಾಗಿದ್ದು, ಬಯಲುಗಳೆಲ್ಲ ಭತ್ತದ ಗದ್ದೆಗಳಾಗಿದ್ದವು. ಆದ್ದರಿಂದ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಹೀಗಾಗಿ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬವಾಗಿ ಹುತ್ತರಿ ಬಿಂಬಿತವಾಗುತ್ತಿತ್ತು. ಹುತ್ತರಿ ಹಬ್ಬ ಕಳೆಯುತ್ತಿದ್ದಂತೆಯೇ ಭತ್ತದ ಕುಯ್ಲು ಕೆಲಸ ಆರಂಭವಾದರೆ ಅದು ಮುಗಿಯುವ ವೇಳೆಗೆ ಜನವರಿ ಕಳೆದು ಹೋಗುತ್ತಿತ್ತು.

ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿ ಪ್ರಮಾಣ ಕಡಿಮೆ

ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿ ಪ್ರಮಾಣ ಕಡಿಮೆ

ಬದಲಾದ ಕಾಲಘಟ್ಟದಲ್ಲಿ ಭತ್ತದ ಕೃಷಿ ಕೊಡಗಿನ ಮಟ್ಟಿಗೆ ಪ್ರಯಾಸ ಎಂಬಂತಾಗಿದೆ. ಹೀಗಾಗಿ ಭತ್ತದ ಕೃಷಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಆದರೂ ಬಹಳಷ್ಟು ಜನ ಭತ್ತದ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೆ. ಇನ್ನು ಹುತ್ತರಿ ಹಬ್ಬದ ವಾತಾವರಣವೇ ವಿಭಿನ್ನವಾಗಿರುತ್ತದೆ. ಮಳೆ ಕಡಿಮೆಯಾಗಿ ಇದೀಗ ಚಳಿ ಆರಂಭವಾಗುತ್ತಿದೆ. ಮತ್ತೊಂದೆಡೆ ಅಚ್ಚಹಸಿರಾಗಿದ್ದ ಭತ್ತದ ಗದ್ದೆಯ ಬಯಲುಗಳು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತಿವೆ. ಮನೆಗೆ ಸುಣ್ಣಬಣ್ಣ ಬಳಿದು ಹಬ್ಬಕ್ಕೆ ಸಿದ್ಧತೆಗಳು ಕೂಡ ಜೋರಾಗಿ ನಡೆದಿದ್ದವು.

ಕುಟುಂಬದ ಸದಸ್ಯರಿಂದ ಹಬ್ಬದ ಸಂಭ್ರಮ

ಕುಟುಂಬದ ಸದಸ್ಯರಿಂದ ಹಬ್ಬದ ಸಂಭ್ರಮ

ದಿನದ ಮೊದಲು "ದೇವಪೊಳ್ದ್", ಮಾರನೆಯ ದಿನ "ನಾಡುಪೊಳ್ದ್" ಎಂದು ಆಚರಿಸಲಾಗುತ್ತದೆ. ಹುತ್ತರಿ ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ ಐನ್‌ಮನೆಯಲ್ಲಿ ಸೇರಿ ಮನೆಯ "ನೆಲ್ಲಕ್ಕಿ" ನಡುಬಾಡೆಯಲ್ಲಿ ತೂಗು ದೀಪದ ಕೆಳಗೆ ಚಾಪೆ ಹಾಸುತ್ತಾರೆ. ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಹಲಸಿನ ಎಲೆ, ಕುಂಬಳಿ ಎಲೆ, ಕಾಡು ಗೇರು ಎಲೆ ಹೀಗೆ ಐದು ತರಹದ ಎಲೆಯನ್ನು ಹಾಗೂ ಕಾಡಿನಲ್ಲಿ ಸಿಗುವ ಅಚ್ಚುನಾರನ್ನು ಇರಿಸಲಾಗುತ್ತದೆ. ಮತ್ತೊಂದು ಕುಕ್ಕೆಯಲ್ಲಿ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರಿನಷ್ಟು ಅಕ್ಕಿ ತುಂಬಿಡಲಾಗುತ್ತದೆ. ಹುತ್ತರಿ ಕುಡಿಕೆಯಲ್ಲಿ ಅಕ್ಕಿಯನ್ನು ತಂಬಿಟ್ಟು ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳನ್ನು ಇಡಲಾಗುತ್ತದೆ. ಇದರ ಪಕ್ಕದಲ್ಲಿ ಕುಡುಗೋಲು, ಮುಕ್ಕಾಲಿಯ ಮೇಲೆ ತಳಿಯಕ್ಕಿ ಬೊಳ್ಚ, ಮೂರು ವೀಳ್ಯದೆಲೆ ಹಾಗೂ ಮೂರು ಅಡಿಕೆಯ ತುಂಡನ್ನು ಇಡಲಾಗುತ್ತದೆ.

ಅಕ್ಕಿ ಹಿಟ್ಟಿನಿಂದ ಹಬ್ಬ ಆಚರಣೆ

ಅಕ್ಕಿ ಹಿಟ್ಟಿನಿಂದ ಹಬ್ಬ ಆಚರಣೆ

ಮುತ್ತೈದೆಯರು ಅಕ್ಕಿ ಹಿಟ್ಟಿನಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅಲ್ಲದೆ ಅಲ್ಲಿ ಇರಿಸಲಾದ ವಸ್ತುಗಳ ಮುಂದೆ ರಂಗೋಲಿ ಬಿಡುತ್ತಾರೆ. ಬಳಿಕ ದೇವರನ್ನು ಪ್ರಾರ್ಥಿಸುತ್ತಾ ಎಲೆಗಳನ್ನು ಸಂಪ್ರದಾಯದಂತೆ ಒಂದರ ಮೇಲೊಂದು ಇಟ್ಟು ನಾರಿನಿಂದ ಕಟ್ಟಲಾಗುತ್ತದೆ. ಇದನ್ನು ನೆರೆ ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾರೆ. ಜೊತೆಗೆ ಇತರೆ ತಿಂಡಿ ತೀರ್ಥಗಳೂ ಇದ್ದು, ಇದನ್ನು ಫಲಹಾರ ಎಂದು ಕರೆಯುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ.

ಹಬ್ಬದಲ್ಲಿ ಮುತ್ತೈದೆಯರ ಪಾತ್ರವೇನು?

ಹಬ್ಬದಲ್ಲಿ ಮುತ್ತೈದೆಯರ ಪಾತ್ರವೇನು?

ಫಲಹಾರದ ಬಳಿಕ ಸಿದ್ದಪಡಿಸಲಾದ ಕುತ್ತಿಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಮೈದಾನಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬಂಧಿಕರು ಆಗಮಿಸುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭದಲ್ಲಿ ಮುತ್ತೈದೆಯೊಬ್ಬರು ತಳಿಯಕ್ಕಿ ಬೊಳ್ಚವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.

ಗುಂಡನ್ನು ಹಾರಿಸಲು ಕಾರಣವೇನು?

ಗುಂಡನ್ನು ಹಾರಿಸಲು ಕಾರಣವೇನು?

ಗದ್ದೆ ತಲುಪಿದ ಬಳಿಕ ಹಾಲುಜೇನು ಸೇರಿದಂತೆ ಮೊದಲಾದುವುಗಳನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊಂದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡುತ್ತಾರೆ. ಈ ಸಂದರ್ಭದಲ್ಲಿ ಆಗಮಿಸಿದವರು "ಪೊಲಿ ಪೊಲಿ ದೇವಾ" ಎಂದು ಘೋಷಣೆ ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ಹುತ್ತರಿ ಹಬ್ಬದ ವಿಧಿವಿಧಾನಗಳ ವಿವರ

ಹುತ್ತರಿ ಹಬ್ಬದ ವಿಧಿವಿಧಾನಗಳ ವಿವರ

ಕದಿರು ತುಂಬಿದ ಕುಕ್ಕೆಯನ್ನು ತಲೆಯಲ್ಲಿ ಹೊತ್ತು "ಪೊಲಿ ಪೊಲಿ ದೇವಾ" ಎಂದು ಘೋಷಣೆ ಕೂಗುತ್ತಾ ಬರಲಾಗುತ್ತದೆ. ಅಲ್ಲದೆ ಕದಿರನ್ನು ಕೆಲವು ಕುಟುಂಬದವರು ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಬಳಿಕ ಮನೆಗೆ ತೆರಳಿದರೆ, ಇನ್ನು ಕೆಲವರು ನೇರವಾಗಿ ಒಕ್ಕಲು ಕಣಕ್ಕೆ ತೆರಳುತ್ತಾರೆ. ಮನೆಯಲ್ಲಿದ್ದ ಮುತ್ತೈದೆ ಕದಿರು ಕೊಯ್ದವನ ಕಾಲು ತೊಳೆದು ಹಾಲು ನೀಡಿ ಧಾನ್ಯಗಳನ್ನು ಮನೆತುಂಬಿಸಿಕೊಳ್ಳುತ್ತಾರೆ. ಧಾನ್ಯವನ್ನು ಮನೆಗೆ ತುಂಬಿಸಿಕೊಂಡ ನಂತರ ಕದಿರನ್ನು ಆಯುಧ, ವಾಹನ ಮುಂತಾದವುಗಳಿಗೆ ಕಟ್ಟಲಾಗುತ್ತದೆ. ಬಳಿಕ ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಸದಸ್ಯರೆಲ್ಲಾ ಒಂದೆಡೆ ಕುಳಿತು ಊಟ ಮಾಡುತ್ತಾರೆ.

ಹಬ್ಬದ ಮಾರನೆಯ ದಿನ ಮನೆಮನೆಗಳಲ್ಲಿ ಹುತ್ತರಿ ಹಾಡನ್ನು ಹಾಡುವ ಪದ್ಧತಿಯೂ ಇದೆ. ಅಲ್ಲದೆ, ಊರಿನ ದೊಡ್ಡ ಮೈದಾನದಲ್ಲಿ ಊರಿನವರೆಲ್ಲ ಸೇರಿ ಹುತ್ತರಿ ಕೋಲಾಟ ಆಡುತ್ತಾರೆ. ನಂತರ ಹಬ್ಬದ ಕಡೆಯ ದಿನವಾಗಿ "ಊರೋರ್ಮೆ" ನಡೆಯುತ್ತದೆ. ಊರಿನ ಜನರೆಲ್ಲ ಗ್ರಾಮದ ಮೈದಾನದಲ್ಲಿ ಸೇರಿ, ಮನೆಯಿಂದ ತಂದ ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿಯನ್ನು ಸೇವಿಸುತ್ತಾರೆ. ಅಲ್ಲಿಗೆ ಹಬ್ಬವೂ ಕೂಡ ಮುಕ್ತಾಯವಾಗುತ್ತದೆ. ಕಾಲ ಕಳೆದಂತೆ ಬದಲಾದ ತಲೆಮಾರು ಹಿಂದಿನ ಕಾಲದಲ್ಲಿದ್ದ ಸಂಪ್ರದಾಯವನ್ನೆಲ್ಲ ರೂಢಿಸಿಕೊಂಡು ಬರುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಒಂದಷ್ಟು ಬದಲಾವಣೆ ಆಗಿದ್ದರೂ ಸಂಭ್ರಮ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿ ಪಟ್ಟಣದಲ್ಲಿದ್ದವರು ಹಬ್ಬದ ಸಮಯದಲ್ಲಿ ತಮ್ಮ ಊರಿಗೆ ಬಂದು ಕುಟುಂಬದವರೊಂದಿಗೆ ಸೇರಿ ಸಂಭ್ರಮಿಸುತ್ತಾರೆ.

English summary
Kodagu People celebrating Huttri festival from today, Here See Huttari festival Celebration complete details about speciality, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X