• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಡವರ ನಾಡಲ್ಲಿ ಹುತ್ತರಿ ಹಬ್ಬ: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಉತ್ಸವ

By Coovercolly Indresh
|

ಮಡಿಕೇರಿ, ನವೆಂಬರ್ 30: ಕೊಡಗಿನ ಎರಡು ಪ್ರಮುಖ ಹಬ್ಬಗಳೆಂದರೆ ಒಂದು ಕೈಲು ಮುಹೂರ್ತ, ಇನ್ನೊಂದು ಹುತ್ತರಿ. ಕೊಡಗಿನಲ್ಲಿ ನೆಲೆಸಿರುವ ಕೃಷಿಕ ಗೌಡ ಜನಾಂಗದವರು ಮತ್ತು ಕೊಡವರು ಇದನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಸೋಮವಾರ ರಾತ್ರಿ ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆ ನಡೆಯಲಿದ್ದು, ಧಾನ್ಯಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಮನೆ ತುಂಬಿಸಿಕೊಳ್ಳುವ ಉತ್ಸವ ಆಗಿದೆ.

ಕೊಡವ ಭಾಷೆಯಲ್ಲಿ ಪುತ್ತರಿ ಅಂದರೆ ಹೊಸ ಅಕ್ಕಿ ಎಂದರ್ಥ. ಕನ್ನಡದಲ್ಲಿ ಅದೇ ಶಬ್ಧ ಹುತ್ತರಿ ಆಗಿದೆ. ಕೃಷಿ ಪ್ರಧಾನವಾದ ನಾಡಿನಲ್ಲಿ ಭೂಮಿತಾಯಿಗೆ ಕೃತಜ್ಞತೆ ಅರ್ಪಿಸಲು ಹಲವಾರು ಆಚರಣೆಗಳು ಇದ್ದು, ತನ್ನ ವಿಶಿಷ್ಟ ಆಚಾರ, ಸಂಪ್ರದಾಯ, ಊಟ, ಉಪಚಾರ, ಉಡುಗೆ ತೊಡುಗೆಗಳಿಂದಲೂ ಇಲ್ಲಿನ ಜನರು ‌ಪ್ರಕೃತಿಯೊಂದಿಗೆ ಅವಿನಾಭಾವ ‌ಸಂಬಂಧವನ್ನು ಹೊಂದಿದ್ದಾರೆ.

ಎಲ್ಲ ಕೊಡವರೂ ಆಚರಿಸುವ ಹುತ್ತರಿ ಹಬ್ಬ-ಸಮೃದ್ಧಿಯ ಸಂಕೇತ...

ಹುತ್ತರಿ ಹಬ್ಬಕ್ಕೆ ಕುಂಬಾರರು ಹುತ್ತರಿ ಕುಡಿಕೆ,‌ ಮರದ‌ ಕೆಲಸದವರು ಕದಿರು ತುಂಬಲು ಬುಟ್ಟಿ, ಬಿದಿರು ನೇಯುವವರು ಹುತ್ತರಿ ಕುಕ್ಕೆ ಮಾಡುವ ಸಂಪ್ರದಾಯವಿದೆ. ಶ್ರದ್ಧಾ ಭಕ್ತಿ ಹಾಗೂ ಸಡಗರದಿಂದ ಅಗ್ನಿ, ನೀರು ಮತ್ತು ಪ್ರಕೃತಿಗೆ ವಿಶೇಷ ಸ್ಥಾನ ನೀಡುವ ಹುತ್ತರಿ ಹಬ್ಬದಲ್ಲಿ ಹೊಸ ಬೆಳೆಯನ್ನು ನೀಡಿದ ಭೂಮಾತೆಗೆ, ಧಾನ್ಯಲಕ್ಷ್ಮಿಗೆ ಭಕ್ತಿಭಾವದಿಂದ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಒಂದು ಸಮುದಾಯದ ನಂಬಿಕೆ ಆಚರಣೆಗಳು ಆ ಸಮುದಾಯದ ಪ್ರತಿಬಿಂಬಗಳೇ ಆಗಿವೆ.

ಗುಂಡು ಹಾರಿಸುವ ಮೂಲಕ ಚಾಲನೆ

ಗುಂಡು ಹಾರಿಸುವ ಮೂಲಕ ಚಾಲನೆ

ಹುತ್ತರಿ ಹಬ್ಬದಂದು ಸಾಂಕೇತಿಕವಾಗಿ ಬೆಳೆದ ಬೆಳೆಯ ಮೊದಲ ಧಾನ್ಯವನ್ನು ಕೊಡವರ ಪ್ರಮುಖ ಆರಾಧ್ಯ ದೈವಗಳಾದ ಕಾವೇರಿ ಅಮ್ಮ ಹಾಗೂ ಮಳೆ-ಬೆಳೆ ತರುವ ದೇವರು ಇಗ್ಗುತಪ್ಪನಿಗೆ ಕೃತಜ್ಞತೆಯಿಂದ ಸಮರ್ಪಿಸುತ್ತಾರೆ. ಇಗ್ಗುತಪ್ಪ ದೇವಸ್ಥಾನದ ಗದ್ದೆಯಲ್ಲಿ ಕದಿರು ಮೂರ್ತವಾದ ಮೇಲೆ ಸಾರ್ವಜನಿಕರು ತಮ್ಮ ಗದ್ದೆಯಿಂದ ಕದಿರು ತಂದು ಹಬ್ಬ ಆಚರಿಸುತ್ತಾರೆ. ನಿಶ್ಚಿತವಾದ ಗದ್ದೆಗೆ ಕದಿರು ಕೊಯ್ಯುವವರು ಕತ್ತಿಹಿಡಿದು ಉಳಿದವರು ಕುಕ್ಕೆ, ಚಾಪೆ‌ ಹಾಗೂ‌ ಕೋವಿ ಹಿಡಿದು‌ ತೆರಳುವರು. ಓಲಗ, ಹುತ್ತರಿ ಹಾಡು ಹಾಡುತ್ತಾ, ಡೋಲುಬಾರಿಸುತ್ತಾ, ಹುತ್ತರಿ ಹಬ್ಬಕ್ಕೆ ಕೋವಿಯಿಂದ ಗುಂಡು ಹಾರಿಸುವ ಮೂಲಕ ಚಾಲನೆ ನೀಡುವರು. ಕದಿರು ‌ಹೊತ್ತು‌ಮನೆ ಪ್ರವೇಶಿಸಿಸುವಾಗ ಮನೆಯ ಹೆಂಗಸರು ಕಾಲು ತೊಳೆದು ಕುಡಿಯಲು ಹಾಲು, ಬಾಳೆಹಣ್ಣು, ಜೇನು ತುಪ್ಪ ತಿನ್ನಿಸಿ ಕದಿರನ್ನು ಆದರದಿ ಬರಮಾಡಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ಒಲಿದು ಬಾ..ದೇವರೇ ಎಂದು ಪ್ರಾರ್ಥನೆ

ಒಲಿದು ಬಾ..ದೇವರೇ ಎಂದು ಪ್ರಾರ್ಥನೆ

ಹುತ್ತರಿ ಬರುವಾಗ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬಂತು, ಹೋಗುವಾಗ‌ ಹೇಳದೆ ಹೊಯಿತು ಎನ್ನುವ ಜನಪದವಿದೆ. ಪರವೂರಲ್ಲಿ ವಾಸಿಸುವವರು ಅಗತ್ಯವಾಗಿ ಈ ಹಬ್ಬಕ್ಕೆ ಊರಿಗೆ ತೆರಳುತ್ತಾರೆ. ಕೊಡವರ ಕುಟುಂಬದ ಐನ್ ಮನೆಗಳಲ್ಲಿ ಕುಟುಂಬಸ್ಥರು ಸೇರಿ ಕದಿರು ಕಟ್ಟಿದ ನಂತರ ಕದಿರನ್ನು ಅಂಗಳದ ಮೇಟೀಕಂಬಕ್ಕೆ, ಮನೆಯ ಕಿಟಿಕಿ ಬಾಗಿಲಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ, ಅಶ್ವತದೆಲೆಯಲ್ಲಿ ಸುತ್ತಿನಾರಿನಿಂದ ‌ಕಟ್ಟುತ್ತಾ "ಒಲಿದು ಬಾ..ದೇವರೇ" ಎಂದು ಪ್ರಾರ್ಥಿಸುತ್ತಾರೆ.

ತಾಮ್ರದ ಬೋಗುಣಿಯಲ್ಲಿ ಅಕ್ಕಿ ತುಂಬಿಸುವುದು

ತಾಮ್ರದ ಬೋಗುಣಿಯಲ್ಲಿ ಅಕ್ಕಿ ತುಂಬಿಸುವುದು

ಹುತ್ತರಿಯಂದು "ನೆರೆ ಕಟ್ಟುವೋ" ಎಂಬ‌ ಕ್ರಮವಿದ್ದು ಆಲ, ಅಶ್ವತ್ಥ ಮತ್ತು ಕೇಕು ಮರದ ಎಲೆಗಳನ್ನು ‌ಸೇರಿಸಿ ಸಿದ್ಧಪಡಿಸಿಕೊಂಡು ಕದಿರು ಕಟ್ಟುವ ಗದ್ದೆಯಲ್ಲಿ ಭತ್ತದ ತೆನೆಗಳಿಗೆ ಹೂವಿನಿಂದ ಅಲಂಕರಿಸಲಾಗುತ್ತದೆ. ದೇವರ ಮುಂದೆ ಚಾಪೆಹಾಕಿ ಮೂರುಕಾಲಿನ ಮಣೆ ಇಟ್ಟು ತಾಮ್ರದ ಬೋಗುಣಿಯಲ್ಲಿ ಅಕ್ಕಿ ತುಂಬಿಸಿ ಅದರ ಮೇಲೆ ಕಳಶವಿಟ್ಟು ಹಣತೆ ಹಚ್ಚಿ, ಪಕ್ಕದಲ್ಲಿ ವೀಳ್ಯ ದೆಲೆ ಅಡಿಕೆಯಿಟ್ಟು ಶೃಂಗರಿಸಿ, ಹೂವಿನ ಮಾಲೆಹಾಕಿ ಅಲಂಕರಿಸಿದ ಬಿದಿರಿನ ಕೋಲನ್ನು ದೇವರ ಎದುರಿಗೆ ಇಟ್ಟು ಅಡ್ಡ ಕತ್ತರಿಸಿದ ಸೌತೆಕಾಯಿಯನ್ನು ಅಕ್ಕಿ ಹಿಟ್ಟಿನಲ್ಲಿ ಅದ್ದಿ ಕುಡಗೋಲು, ಸೇರು, ಕುಡಿಕೆ ಮನೆಯ ಕಿಟಕಿ ಬಾಗಿಲಿಗೆ ಅದರ ಮುದ್ರೆಯನ್ನು ಒತ್ತಿತ್ತಾರೆ.

‌ಪಾಯಸ‌ ಮಾಡುವಾಗ ಹೊಸ ಅಕ್ಕಿ ‌ಸೇರಿಸುವುದು

‌ಪಾಯಸ‌ ಮಾಡುವಾಗ ಹೊಸ ಅಕ್ಕಿ ‌ಸೇರಿಸುವುದು

ಮನೆಯ ಹಿರಿಯ, ಕಿರಿಯರೆಲ್ಲಾ ಸೇರಿ ತೂಗುದೀಪದೆದುರು ಪ್ರಾರ್ಥಿಸುತ್ತಾರೆ. ಹಾಲು ಜೇನು ಹಾಕಿ ಅಕ್ಕಿ‌ಹಿಟ್ಟಿನಿಂದ ಮಾಡಿದ ವಿಶೇಷ ತಿಂಡಿ ಹಾಗೂ ಎಳ್ಳು, ಶುಂಠಿ, ತೆಂಗಿನ ತುರಿ, ಬಾಳೆ ಹಣ್ಣು, ಜೇನಿನೊಂದಿಗೆ ಕಲಸಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಹೊಸ ಚಾಪೆ ಮೇಲೆ ‌ಹಾಸಿದ ಅಶ್ವತ್ಥ ಎಲೆಗಳ ಮೇಲೆ ಇಟ್ಟು, ನಂತರ ದಿವಂಗತ ಹಿರಿಯರನ್ನು ನೆನಪಿಸಿಕೊಂಡು ಮೀಸಲು ಇಡುತ್ತಾರೆ. ಬೆಲ್ಲ, ಅಕ್ಕಿ ‌ಸೇರಿಸಿ ‌ಪಾಯಸ‌ ಮಾಡುವಾಗ ಹೊಸ ಅಕ್ಕಿ ‌ಸೇರಿಸುವುದು ಸಂಪ್ರದಾಯ. ಎಲ್ಲರೂ ಒಟ್ಟಾಗಿ ಕುಳಿತು ಬೇಯಿಸಿದ ಗೆಣಸ್ಸಿಗೆ ಜೇನು‌ಸೇರಿಸಿ ಅದ್ದಿತಿನ್ನುವ ಕ್ರಮವಿದೆ.

ಕೋಲಾಟ, ಸುಗ್ಗಿ ಕುಣಿತ

ಕೋಲಾಟ, ಸುಗ್ಗಿ ಕುಣಿತ

ಹುತ್ತರಿ ಹಬ್ಬವಾದ ಮೇಲೆ ‌ಸಾಂಪ್ರದಾಯಿಕ ಉಡುಗೆ ಧರಿಸಿ, ವ್ರತ್ತಾಕಾರದಲ್ಲಿ ಕುಣಿಯುತ್ತಾ, ಹಾಡುತ್ತಾ, ವಿಶಾಲ ಮೈದಾನದಲ್ಲಿ ಕೋಲಾಟ, ಸುಗ್ಗಿ ಕುಣಿತ ಕುಣಿಯುತ್ತಾರೆ. ಮಹಿಳೆಯರು ಸಾಂಪ್ರದಾಯಿಕ ‌ಮಹಿಳಾ ನೃತ್ಯ (ಉಮ್ಮತ್ತಾಟ್) ದಲ್ಲಿ ಭಾಗವಹಿಸುತ್ತಾರೆ. ಊರಿನವರೆಲ್ಲಾ ಒಟ್ಟಿಗೆ ಸೇರಿ ವಿವಿಧ ಕ್ರೀಡೆ, ಸಾಂಸ್ಕೃತಿಕ ‌ಕಾರ್ಯಕ್ರಮಗಳು ನಡೆಸುವರು. ಈ ಹುತ್ತರಿ ಹಬ್ಬ ಎಷ್ಟು ‌ಪ್ರಖ್ಯಾತವೆಂದರೆ ಪಂಜೆ ಮಂಗೇಶರಾಯರು ಹುತ್ತರಿ ಹಾಡು‌ ಎಂಬ‌ ಪದ್ಯ ರಚಿಸಿ ‌ಕೊಡಗಿನ ಸೌಂದರ್ಯ ಹಾಗೂ ಹಬ್ಬ ಆಚರಣೆಯನ್ನು ವಿವರಿಸಿದ್ದಾರೆ.

English summary
The Huttari festival is celebrated with great fervor in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X