Hubli-Dharwad Central; ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗಲ್ವಾ?
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ 6 ಬಾರಿ ಗೆಲುವು ಕಂಡಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದಿಲ್ಲವೇ?.
ಕರ್ನಾಟಕಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಕ್ಷೇತ್ರ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್. ಇದೇ ಕ್ಷೇತ್ರದಿಂದ ಗೆದ್ದಿದ್ದ ಎಸ್. ಆರ್. ಬೊಮ್ಮಾಯಿ ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದರು. 21ನೇ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್ ಸಹ ಇದೇ ಕ್ಷೇತ್ರದವರು. ಹಾಲಿ ಕ್ಷೇತ್ರದ ಶಾಸಕರು ಸಹ ಜಗದೀಶ್ ಶೆಟ್ಟರ್.
1994ರಲ್ಲಿ ಎಸ್. ಆರ್. ಬೊಮ್ಮಾಯಿ ಸೋಲಿಸಿ ವಿಧಾನಸಭೆ ಪ್ರವೇಶ ಪಡೆದ ಜಗದೀಶ್ ಶೆಟ್ಟರ್. ಆರು ಬಾರಿ ಕ್ಷೇತ್ರದಿಂದ ಗೆದ್ದು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗಲಿದೆಯೇ? ಎನ್ನುವುದು ಚರ್ಚೆಯ ವಿಚಾರ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜನರು ಬದಲಾವಣೆ ಬಯಸುವುದಿಲ್ಲ ಎಂದರೂ ತಪ್ಪಿಲ್ಲ. 1957 ರಿಂದ 2018ರ ತನಕ ನಾಲ್ವರು ಮಾತ್ರ ಕ್ಷೇತ್ರದಿಂದ ಗೆದ್ದು ಬರುತ್ತಿದ್ದಾರೆ. ಕ್ಷೇತ್ರದಿಂದ ಅತಿ ಹೆಚ್ಚು ಅಂದರೆ 6 ಬಾರಿ ಗೆದ್ದ ಕೀರ್ತಿ ಜಗದೀಶ್ ಶೆಟ್ಟರ್ ಹೆಸರಿನಲ್ಲಿದೆ.
ಜಾತಿ ಲೆಕ್ಕಾಚಾರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ ಎಂದರೆ ಒಪ್ಪಲೇಬೇಕು. ಲಿಂಗಾಯತ ಮತದಾರರು ಇಲ್ಲಿ ನಿರ್ಣಾಯಕ. ಇದೇ ಕ್ಷೇತ್ರದಿಂದ ಆರು ಬಾರಿ ಗೆದ್ದ ಶೆಟ್ಟರ್ ಮುಖ್ಯಮಂತ್ರಿ, ಸ್ಪೀಕರ್, ವಿರೋಧ ಪಕ್ಷದ ನಾಯಕ, ಸಚಿವ, ಪಕ್ಷದ ಅಧ್ಯಕ್ಷ ಹೀಗೆ ವಿವಿಧ ಹುದ್ದೆ ಅಲಂಕರಿಸಿದ್ದಾರೆ. ಆದರೆ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಬೇಕು ಅದರಲ್ಲೂ ಕುಡಿಯುವ ನೀರಿನ ವಿಚಾರದಲ್ಲಿ ಎಂಬ ಮಾತು ಕೇಳಿ ಬರುತ್ತದೆ.

ಜಗದೀಶ್ ಶೆಟ್ಟರ್ ರಾಜಕೀಯ ನಿವೃತ್ತಿ?
ಮಾಜಿ ಮುಖ್ಯಮಂತ್ರಿಯಾಗಿದ್ದರೂ 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಜಗದೀಶ್ ಶೆಟ್ಟರ್ ಸಂಪುಟ ಸೇರಿ ಸಚಿವರಾದರು. ಆದರೆ ಯಡಿಯೂರಪ್ಪ ರಾಜೀನಾಮೆ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಸಂಪುಟ ಸೇರುವುದಿಲ್ಲ ಎಂದು ಘೋಷಣೆ ಮಾಡಿಬಿಟ್ಟರು.
2023ರ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಖಚಿತ ಎಂಬ ಮಾತಿದೆ. ಆದರೆ ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರೆ, ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಒಂದು ವೇಳೆ ಟಿಕೆಟ್ ಶೆಟ್ಟರ್ ಕೈ ತಪ್ಪಿದರೆ ಮಹೇಶ್ ನಾಲವಾಡ, ಮಹೇಶ್ ಟೆಂಗಿನಕಾಯಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು.

ಮೂವರು ಒಂದೇ ಪಕ್ಷದಲ್ಲಿದ್ದಾರೆ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಚ್ಚರಿಯ ಅಂಶ ಒಂದಿದೆ. 2018ರ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಎದುರಾಳಿಯಾಗಿದ್ದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಈಗ ಬಿಜೆಪಿಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ. ಮಹೇಶ್ ನಾಲವಾಡ ಶೆಟ್ಟರ್‌ಗೆ ತೀವ್ರ ಪೈಪೋಟಿ ನೀಡಲಿದ್ದಾರೆ ಎಂಬ ಮಾತಿತ್ತು.
ಆದರೆ ಚುನಾವಣೆಯಲ್ಲಿ ಶೆಟ್ಟರ್ 21,306 ಮತಗಳ ಅಂತರದಲ್ಲಿ ಗೆದ್ದು ಬೀಗಿದರು. ಚುನಾವಣೆ ಬಳಿಕ ಡಾ. ಮಹೇಶ್ ನಾಲವಾಡ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಬಿಜೆಪಿಗೆ ಬಂದರು. ಮತ್ತೊಂದು ಕಡೆ ಶೆಟ್ಟರ್ ಎದುರಾಳಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ರಾಜಣ್ಣ ಕೊರವಿ ಸಹ ಈಗ ಬಿಜೆಪಿಯಲ್ಲಿದ್ದಾರೆ.
2018ರಲ್ಲಿ ಜಗದೀಶ್ ಶೆಟ್ಟರ್ 75,974 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಮಹೇಶ್ ನಾಲವಾಡ 54,488 ಮತ ಪಡೆದರೆ, ಜೆಡಿಎಸ್‌ನ ರಾಜಣ್ಣ ಕೊರವಿ 10,754 ಮತ ಪಡೆದಿದ್ದರು.

ಅಭ್ಯರ್ಥಿ ಹುಡುಕುವುದು ಎರಡೂ ಪಕ್ಷಕ್ಕೆ ಅನಿವಾರ್ಯ
ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದವರು ಬಿಜೆಪಿ ಸೇರಿದ್ದಾರೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಬೆಂಬಲಿಗ ಗಿರೀಶ್ ಗದಿಗೆಪ್ಪಗೌಡ, ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ, ಅನಿಲ್ ಕುಮಾರ್ ಪಾಟೀಲ್ ಆಕಾಂಕ್ಷಿಗಳು.
ಜೆಡಿಎಸ್‌ನಿಂದ ಉದ್ಯಮಿಯಾದ ತಬ್ರೇಜ್ ಸಂಶಿ ಹೆಸರು ಕೇಳಿ ಬರುತ್ತಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮತದಾರರು
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಒಟ್ಟು ಮತದಾರರು 248904. ಪುರುಷರು 126255, ಮಹಿಳೆಯರು 122620, ಇತರರು 29.
ಜಾತಿವಾರು ಲೆಕ್ಕಾಚಾರ; ಲಿಂಗಾಯತ 74,000, ಮುಸ್ಲಿಂ 23,000, ಎಸ್‌ಸಿ 18,000, ಸೋಮವಂಶ ಕ್ಷತ್ರೀಯ 29,000, ಮರಾಠ 14,000, ಬ್ರಾಹ್ಮಣ 11,000, ಇತರೆ 25,000 ಮತದಾರರು.












Click it and Unblock the Notifications