ಮಳೆಗಾಲದಲ್ಲಿ ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ?
ಮೈಸೂರು, ಏಪ್ರಿಲ್ 26: ಬೇಸಿಗೆಯಲ್ಲಿ ಮೈ ಸುಡುವ ಬಿಸಿಲನ್ನು ಬಯ್ಯುತ್ತಾ ಕೆಲಸ ಮಾಡುವ ಜನ, ಮಳೆ ಬಂದರೆ ಸಾಕಪ್ಪಾ ಎಂದು ಮುಗಿಲತ್ತ ನೋಡುವುದು ಮಾಮೂಲಿ. ಅದರಲ್ಲೂ ಬೇಸಿಗೆಯ ಕೊನೆಯ ದಿನಗಳಲ್ಲಿ ಇದ್ದಕ್ಕಿದ್ದಂತೆಯೇ ಬಿಸಿಲಿಗೆ ಸೆಡ್ಡು ಹೊಡೆದು ಸುರಿಯುವ ಮಳೆ ಮತ್ತು ಅದರ ಜತೆಯಲ್ಲಿ ಅಬ್ಬರಿಸುವ ಮಿಂಚು, ಗುಡುಗು ನಮಗೆ ತಂಪು ನೀಡಿದರೂ ಕೂಡ ಕೆಲವೊಮ್ಮೆ ನಮ್ಮ ಪಾಲಿಗೆ ಯಮನಾಗುವ ಸಾಧ್ಯತೆಯೇ ಹೆಚ್ಚು.
ಈಗಾಗಲೇ ಮಳೆ ಸುರಿದ ವೇಳೆ ಅಲ್ಲಲ್ಲಿ ಸಿಡಿಲು ಬಡಿದು ಮನುಷ್ಯರು ಮತ್ತು ಜಾನುವಾರುಗಳು ಸಾವನ್ನಪ್ಪಿದ ಘಟನೆಗಳ ಕುರಿತಂತೆ ವರದಿಗಳು ಬಂದಿವೆ. ಮುಂದೆಯೂ ಇಂತಹ ಪ್ರಕರಣಗಳು ನಡೆಯುತ್ತವೆ. ಕೆಲವೊಮ್ಮೆ ಮಳೆಯೊಂದಿಗೆ ಬರುವ ಗುಡುಗು ಸಿಡಿಲು ನಮ್ಮ ಜೀವವನ್ನೇ ತೆಗೆದು ಬಿಡುತ್ತದೆ.

ಸಿಡಿಲು ಬಡಿದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚು
ಬಹಳಷ್ಟು ಸಂದರ್ಭಗಳಲ್ಲಿ ಸಿಡಿಲಿಗೆ ಬಲಿಯಾಗುವವರು ಬಯಲಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಜಮೀನಿನಲ್ಲಿ ದುಡಿಯುವ, ದನ, ಕುರಿ ಮೇಯಿಸುವ ರೈತರು ಎಂದರೆ ತಪ್ಪಾಗಲಾರದು. ಇನ್ನು ಕೆಲವು ಸಂದರ್ಭಗಳಲ್ಲಿ ದಾರಿಯಲ್ಲಿ ಹೋಗುತ್ತಿದ್ದವರು ಮಳೆ ಬಂತೆಂದು ಬಯಲಿನಲ್ಲಿರುವ ಮರದ ಕೆಳಗೆ ನಿಂತ ವೇಳೆ ಸಿಡಿಲು ಬಡಿದ ಸಾವನ್ನಪ್ಪಿದ ಪ್ರಕರಣಗಳು ಇಲ್ಲದಿಲ್ಲ.
ಮಳೆಗಾಲ ಆರಂಭಕ್ಕೂ ಬರುವ ಬೇಸಿಗೆ ಕಾಲದ ಪೂರ್ವ ಮುಂಗಾರು ಇಡೀ ವಾತಾವರಣವನ್ನು ತಂಪುಗೊಳಿಸಿ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮುನ್ನುಡಿ ಬರೆಯುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸುರಿಯುವ ಮಳೆಯೇ ಹಾಗೆ. ಅದು ಯಾವಾಗ? ಯಾವ ರೀತಿಯ ಅನಾಹುತಗಳನ್ನು ಸೃಷ್ಟಿ ಮಾಡಿಬಿಡುತ್ತದೆ ಎನ್ನುವುದನ್ನು ಹೇಳಲಾಗದು.

ವಿಪತ್ತು ನಿರ್ವಹಣಾ ಕೇಂದ್ರದ ಸಲಹೆ
ಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ಬೀಸುವ ಗಾಳಿಗೆ, ಸುರಿಯುವ ಮಳೆಗೆ ಮರ ಮುರಿದು ಬೀಳುವುದು, ಮನೆಯ ಛಾವಣಿ ಹಾರುವುದು, ರೈತರ ಕೃಷಿ ಫಸಲು ನಾಶವಾಗುವುದು ಹೀಗೆ ಹತ್ತಾರು ಸಮಸ್ಯೆಗಳಾಗುವುದು ಮಾಮೂಲಿ. ಇದು ಇವತ್ತು ನಿನ್ನೆಯದಲ್ಲ. ಹಿಂದಿನಿಂದಲೂ ಪುನಾರಾವರ್ತನೆ ಆಗುತ್ತಲೇ ಇದೆ.
ಆದರೆ ಬೇಸಿಗೆಯಲ್ಲಿ ಮಳೆಯೊಂದಿಗೆ ಬರುವ ಸಿಡಿಲು ಬರೀ ನಷ್ಟವನ್ನು ಮಾತ್ರವಲ್ಲ ನಮ್ಮ ಪ್ರಾಣವನ್ನೇ ತೆಗೆದುಬಿಡುತ್ತದೆ. ಹೀಗಾಗಿ ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ? ಸಿಡಿಲು, ಗುಡುಗು ಕಾಣಿಸಿಕೊಂಡಾಗ ಯಾವ ರೀತಿಯ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು? ಎಂಬುದರ ಬಗ್ಗೆ ಸಾರ್ವಜನಿಕರಿಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಒಂದಷ್ಟು ಸಲಹೆಗಳನ್ನು ನೀಡಿದೆ.

ಮಳೆ ಮುನ್ಸೂಚನೆ ಅರಿತು ಎಚ್ಚರಗೊಳ್ಳಿ
ಆ ಪ್ರಕಾರ, ಬೇಸಿಗೆಯಲ್ಲಿ ಮಳೆ ಬರುವ ಮುನ್ಸೂಚನೆ ಕಾಣುತ್ತಿದ್ದಂತೆಯೇ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಅದರಲ್ಲೂ ಬಯಲಲ್ಲಿ ಕೆಲಸ ಮಾಡುವ ರೈತರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಗುಡುಗು- ಮಿಂಚು ಬರಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಯಾರಾದರೂ ಬಯಲು ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರೆ ತಕ್ಷಣವೇ ತಗ್ಗು ಪ್ರದೇಶದತ್ತ ಹೋಗಬೇಕು. ಜತೆಗೆ ಅಲ್ಲಿ ನಿಲ್ಲುವ ಬದಲು ಕುಳಿತುಕೊಳ್ಳಬೇಕು.
ಒಂದು ವೇಳೆ ತಗ್ಗು ಪ್ರದೇಶವಿಲ್ಲದೆ ಬಯಲಿನಲ್ಲೆ ಇರಬೇಕಾದ ಪರಿಸ್ಥಿತಿ ಎದುರಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ. ಇನ್ನು ಮರಗಿಡವಿರುವ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಏಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ವಿದ್ಯುತ್ ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಪರಿಣಾಮ ಅಂತಹ ಪ್ರದೇಶಗಳ ಮೇಲೆಯೇ ಸಿಡಿಲು ಬಡಿಯಬಹುದು. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನೀವು ಇದ್ಯಾವುದನ್ನು ಮಾಡಲೇಬೇಡಿ
ಒಮ್ಮೊಮ್ಮೆ ಎತ್ತರದ ಗುಡ್ಡದ ಮೇಲಿದ್ದರೆ ತಗ್ಗು ಪ್ರದೇಶದ ಕಡೆಗೆ ಹೋಗಿ. ಕುರಿ ಮೇಯಿಸುತ್ತಾ ಮಂದೆ ಅಥವಾ ಜಾನುವಾರುಗಳ ಮಧ್ಯೆ ನಿಂತಿದ್ದರೆ, ಅವುಗಳ ನಡುವೆ ಬಗ್ಗಿ ಕುಳಿತುಕೊಳ್ಳಿ, ಹೀಗೆ ಮಾಡುವುದರಿಂದ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ನಮ್ಮನ್ನು ಆವರಿಸಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ. ವಿದ್ಯುತ್ ಕಂಬ, ಎಲೆಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ. ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೂರವಿರಿ. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸ್‌ನ್ನು ಸ್ವಚ್ಛ ಮಾಡುವ ಸಾಹಸ ಬೇಡ. ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಬಳಕೆ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಕೆಲಸವನ್ನಂತೂ ಮಾಡಲೇಬೇಡಿ.

ನಮ್ಮನ್ನು ನಾವೇ ರಕ್ಷಿಸಿಕೊಳ್ಳೋಣ
ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಕಂಪ್ಯೂಟರ್‌ಗಳಿಂದ ದೂರ ಇರಿ. ಮನೆಯ ಕಾಂಕ್ರೀಟ್ ಗೋಡೆಗಳನ್ನು ಸ್ಪರ್ಶಿಸದೆ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.
ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಈ ಸಲಹೆಯನ್ನು ಗಮನಿಸಿ ಒಂದಷ್ಟು ಮುಂಜಾಗ್ರತೆಯನ್ನು ನಾವು ತೆಗೆದುಕೊಂಡಿದ್ದೇ ಆದರೆ ಸಿಡಿಲಿನಿಂದ ಪ್ರಾಣ ಹೋಗುವುದನ್ನು ತಪ್ಪಿಸಬಹುದಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಮಧ್ಯಾಹ್ನದ ನಂತರ ಹಾಗೂ ರಾತ್ರಿ ಹೊತ್ತು ಮಳೆ, ಗುಡುಗು, ಸಿಡಿಲು ಬರುವುದು ಸಾಮಾನ್ಯ. ಮಲೆನಾಡಿನಲ್ಲಿ ಗುಡುಗು ಸಿಡಿಲಿನ ಆರ್ಭಟ ತುಸು ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಸಿಡಿಲಿನಿಂದಾಗುವ ಅನಾಹುತ ಅರಿತು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವತ್ತ ಮುತುವರ್ಜಿ ವಹಿಸುವುದು ಬಹುಮುಖ್ಯವಾಗಿದೆ.












Click it and Unblock the Notifications