Get Updates
Get notified of breaking news, exclusive insights, and must-see stories!

ಮನೆಯಿಲ್ಲದಿದ್ದರೂ ಯಾವ ಕೋಟ್ಯಧೀಶನಿಗೂ ಕಮ್ಮಿಯಿಲ್ಲದಂತೆ ಜೀವನ ನಡೆಸ್ತಿರುವ 1,000 ಹಸುಗಳ ಸಂತ-ಹೇಗೆ ಸಾಧ್ಯ?

ಭರಮಣ್ಣ ಎನ್ನುವಾತ 13 ವರ್ಷದನಿದ್ದಾಗ ಕೇವಲ 40 ದನಗಳನ್ನು ಸಾಕಿದ್ದನು. ಇದೀಗ ಈ ಹಸುಗಳು 80ರ ಗಡಿದಾಟಿವೆ. ಇವರಿಗೆ ಮನೆಯಿಲ್ಲ, ಆದರೂ ಇವರು ಇಷ್ಟೊಂದು ದನಗಳನ್ನು ಹೇಗೆ ಪೋಷಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಂತಹವರ ತಲೆಯಲ್ಲೂ ಹುಟ್ಟಿಕೊಳ್ಳುತ್ತದೆ. ಹೌದು ಇದನ್ನು ನಂಬಲೇಬೇಕು. ಹಾಗಾದರೆ ಯುವ ರೈತರಿಗೆ ಮಾದರಿಯಾದ ಭರಮಣ್ಣನ ಈ ಇಂಟರೆಸ್ಟಿಂಗ್‌ ಸ್ಟೋರಿಯನ್ನು ನೀವು ಒಮ್ಮೆಯಾದರೂ ಓದಲೇಬೇಕು.

ಇವರಿಗೆ ಮನೆಯಿಲ್ಲ, 13 ವರ್ಷದವನಿದ್ದಾಗ ಮನೆ ಬಿಟ್ಟ ಈತನಿಗೆ ಜಾನುವಾರುಗಳನ್ನು ಸಾಕುವುದೇ ಜೀವನ. ಅಂದು 40 ದನಗಳು, ಈಗ ಭರಮಣ್ಣ 800 ದನಗಳ ಮಾಲೀಕ. ಅವುಗಳನ್ನು ಮೇಯಿಸುತ್ತಾ ಊರಿಂದ ಊರಿಗೆ ಅಲೆಯುತ್ತ, ಟೆಂಟುಗಳಲ್ಲಿ ತಂಗುತ್ತಾ ಈವರೆಗೆ 36 ವರ್ಷಗಳನ್ನು ಕಳೆದಿದ್ದಾರೆ. ಓರ್ವ ಸೋದರ, ಮತ್ತು ಅಳಿಯಂದಿರ ಜೊತೆಗೆ ಈ ದನಗಳ ಹಿಂಡಿನೊಂದಿಗೆ ಊರೂರು ತಿರುಗಿ ಅವುಗಳನ್ನು ಹೊಲಗಳಲ್ಲಿ ಮೇಯಲು ಬಿಟ್ಟು, 15 ದಿನಗಳ ಬಳಿಕ ಮತ್ತೊಂದು ಊರಿಗೆ ಸಾಗುವ ಅಲೆಮಾರಿ ಜೀವನ ಇವರದ್ದಾಗಿದೆ.

How this Homeless Poor Man Owns 1000 Cows? Know the interesting story

ಹೋದಲ್ಲೆಲ್ಲ ಆ ಊರ ರೈತರಿಗೆ ಉಪಕಾರಿ ಭರಮಣ್ಣ. ಇವರ ಬಳಿಯಿರುವ 800 ದನಗಳೆಲ್ಲ ಹೊಲದಲ್ಲಿ ಒಂದು ದಿನ ತಂಗಿದರೂ ಸಾಕು, ಸಗಣಿ, ಮೂತ್ರ ಸೇರಿ ಮಣ್ಣು ಜೀವಾಮೃತವಾಗುವುದು. ತಣ್ಣಗೆ ಮಳೆ ಸುರಿದು ಬೀಜ ಬಿತ್ತಿದರೆ ಚಿನ್ನದಂತಹ ಬೆಳೆ, ಈ ಗೋವಳರು ಕಾಲಿಟ್ಟ ಆ ಊರು ನಂದಗೋಕುಲ. ಈಗ ಭರಮಣ್ಣ ಗುರಿಕಾರ ಹೊಸಪೇಟೆಯ ಸಮೀಪದ ಒಂದು ಹಳ್ಳಿಯಲ್ಲಿದ್ದಾರೆ.

800 ಬೂದುಬಣ್ಣದ ಜವಾರಿ ಹಸುಗಳ ಹಿಂಡು ಇವೆ. ಪ್ರತಿಯೊಂದಕ್ಕೂ ಮುದ್ದಾದ ಹೆಸರುಗಳಿವೆ. ಚಂದ್ರಿ, ಕಾಳಿ, ರುದ್ರಿ, ರತ್ನಿ, ಚಿಮ್ಮಿ, ನೀಲಿ, ನಾಗಿ, ಬೆಳ್ಳಿ, ದರಿಮಿ ಎನ್ನುವ ಹೆದರುಗಳಿವೆ. ಈ ಹಿಂಡಲ್ಲಿ ವಕ್ರ ಮುಖದ ಎತ್ತೊಂದಿದೆ. ಅದನ್ನು ಗಣಪ ಎಂದು ಕರೆಯುವರು. ಇವುಗಳ ಸಾಂಗತ್ಯ ನೋಡಬೇಕು.

ಹಿಂಡಿನ ತುದಿಯಲ್ಲಿರುವ ಹಸು ತನ್ನ ಕೂಸನ್ನು ಕರೆಯುತ್ತದೆ. ಮಧ್ಯದಲ್ಲಿರುವ ಕರು ಅಂಬೇ ಎನ್ನುತ್ತದೆ. ನೂರಾರು ಅಂಬಾ ದನಿಗಳ ನಡುವೆಯೂ ಆ ಕರು ತನ್ನ ಅಮ್ಮನ ಅಂಬೆಯನ್ನು ಗುರುತಿಸಿ ಓಡಿ ಬಂದು ಕೆಚ್ಚಲೊಳಗೆ ಮೂತಿ ಹುದುಗಿಸುತ್ತದೆ. ಭರಮಣ್ಣ ಅವುಗಳ ಜೊತೆ ಮಾತಿಗಿಳಿಯುತ್ತಾನೆ. ತುಂಬ ಬೇಸರವಾದಾಗ ಮರದಡಿ ಕುಳಿತು ಕೊಳಲು ನುಡಿಸುತ್ತಾನೆ. ಆ ದನಿಗೆ ದನಗಳೆಲ್ಲ ಓಡಿ ಬಂದು ಸುತ್ತ ಮಂಡಿಯೂರುತ್ತವೆ, ಕತೆ ಹೇಳುತ್ತವೆ, ಭರಮಣ್ಣ ಸುಮ್ಮನೆ ಆಲಿಸುತ್ತಾನೆ.

ಎರಡು ಕಿವಿಯೋಲೆ ನೇತಾಡುವ, ಬಗಲಲ್ಲಿ ಕಂಬಳಿ ಹೊದ್ದ ಶ್ಯಾಮ ಸುಂದರ ಭರಮಣ್ಣ. ದನಗಳ ಹಿಂಡು ಮಲಗಿರುವಲ್ಲಿ, ಭರಮಣ್ಣ ಎರಡೂ ಕೈ ಬೆರಳುಗಳನ್ನು ಬಾಯೊಳಗೆ ಹಾಕಿ ಸೀಟಿ ಊದಿದರೆ, ಮಲಗಿದ್ದ ಅಷ್ಟೂ ದನಗಳು ಒಮ್ಮೆಗೆ ಇತ್ತ ನೋಡಿ ಏಳುವ ದೃಶ್ಯವನ್ನು ನೋಡುವುದೇ ಒಂಥರಾ ಮಜಾ.

ಹಾಲುಮತ ಸಮುದಾಯಕ್ಕೆ ಸೇರಿದ ಭರಮಣ್ಣನ ಸ್ವಂತ ಊರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೆರೆಹಳ್ಳಿ. ತಂದೆ ಈರಪ್ಪ, ತಾಯಿ ಶಾಂತಮ್ಮ. ಊರಲ್ಲಿ ಸ್ವಲ್ಪ ಕೃಷಿ ಇದೆ, ಅಣ್ಣಂದಿರು ಇದನ್ನು ನೋಡಿಕೊಳ್ಳುವರು. ಅಲ್ಲಿ ನೂರು ಕುರಿಗಳನ್ನೂ ಸಾಕುತ್ತಿದ್ದಾರೆ. ತಾತನ ತಲೆಮಾರಿನಿಂದಲೂ ಹಸುಗಳನ್ನು ಸಾಕುತ್ತಾ ಅವುಗಳೊಂದಿಗೆ ಊರೂರು ಅಲೆಯುತ್ತಾ ರೈತರ ವ್ಯವಸಾಯಕ್ಕೆ ನೆರವಾಗುವುದು ಇವರ ಕುಲಕಸುವಾಗಿದೆ.

ಭರಮಣ್ಣನ ತಂದೆಯ ಬಳಿ ಒಂದು ಸಾವಿರ ಹಸುಗಳಿದ್ದವಂತೆ. ಅವು ಕಾಯಿಲೆಗೆ ತುತ್ತಾಗಿ ಸತ್ತು ಉಳಿದ 40 ಹಸುಗಳೊಂದಿಗೆ 13 ವರ್ಷದ ಹುಡುಗನಾಗಿದ್ದ ಭರಮಣ್ಣ ಈ ಕಾಯಕಕ್ಕೆ ಇಳಿದಿದ್ದ. ಈತ ಶಾಲೆ ಮೆಟ್ಟಿಲು ತುಳಿದವನಲ್ಲ. ಆದರೆ ಕಾಮಧೇನು, ಪುಣ್ಯಕೋಟಿ ಎಂದು ಆರಾಧಿಸುವ ರೈತ ಸ್ನೇಹಿ ದೇಸೀ ದನಗಳ ಸಂತತಿ ಮರೆಯಾಗುತ್ತಿರುವ, ರಾಸಾಯನಿಕ ಗೊಬ್ಬರಗಳು ನಮ್ಮ ಮಣ್ಣು ಮತ್ತು ಆಹಾರವನ್ನು ಕಲುಷಿತಗೊಳಿಸುವ ಈ ಹೊತ್ತಲ್ಲಿ, ನಿರಕ್ಷರಿ ಭರಮಣ್ಣನ ಕಾಯಕ ಈ ನೆಲದ ಚರಿತ್ರೆಯಲ್ಲಿ ಮರೆಯಲಾಗದ್ದು.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ದನಗಳನ್ನು ಮೇಯಿಸುತ್ತಾ, ಊರೂರು ತಿರುಗುವ ಗೋಪಾಲಕ ಇಡೀ ರಾಜ್ಯದಲ್ಲೇ ಬೇರಾರೂ ಇರಲಿಕ್ಕಿಲ್ಲ. ಈತನ ಬಳಿಯಿರುವುದೆಲ್ಲವೂ ಜವಾರಿ ಹಸುಗಳು. ಮೂರು ಎತ್ತುಗಳನ್ನು ಬಿಟ್ಟು ಮತ್ತೆಲ್ಲವೂ ಹಸುಗಳೇ. ಹೋರಿಗಳನ್ನು ಕರುವಿದ್ದಾಗಲೇ ರೈತರಿಗೆ ಮಾರುವನು. ಹೋಗಿ ತಂಗಿದ ಬಯಲೇ ಆಲಯ. ದಿನವೊಂದಕ್ಕೆ 50ರಿಂದ 60 ಕಿ.ಮೀ. ದೂರ ನಡೆಯಬಲ್ಲವಂತೆ.

ಹಾಗೆ ಊರಿಂದೂರಿಗೆ ಸಾಗುವಾಗ ಅಂಬೆಗಾಲಿಕ್ಕುವ ಪುಟ್ಟ ಕರುಗಳಿಗೆ ಮಾತ್ರ ವಾಹನ ಮಾಡುತ್ತಾರೆ. ರಾತ್ರಿ ಮರದಡಿ ನಿದ್ದೆ, ಅಲ್ಲೇ ಊಟ ತಯಾರಿ. ಬೆಳಗ್ಗೆ 6ಕ್ಕೆ ಎದ್ದು ಎಲ್ಲ ದನಗಳನ್ನು ವಿಚಾರಿಸುತ್ತಾರೆ. ಇವರ ಬಳಿಯೇ ಔಷಧವಿದೆ. ಅಗತ್ಯ ಬಿದ್ದಲ್ಲಿ ಇಂಜೆಕ್ಷನ್ ಚುಚ್ಚುವುದು ಗೊತ್ತು. ಬೆಳಗ್ಗೆ ಸೂರ್ಯ ಮೂಡುತ್ತಿದ್ದಂತೆ ಹಗ್ಗ ಬಿಚ್ಚಿ ಮೇಯಲು ಬಿಡುತ್ತಾರೆ. ಸೂರ್ಯ ಕಂತುತ್ತಿದ್ದಂತೆ ಉದ್ದನೆಯ ಮೂರ್ನಾಲ್ಕು ಸಾಲು ಹಗ್ಗಗಳಿಗೆ ಒಂದೊಂದನ್ನೇ ಕಟ್ಟುವರು.

ಇವರು ಹಾಲು ಮಾರುವುದಿಲ್ಲ. ತಮ್ಮ ಖರ್ಚಿಗೆ ಬೇಕಾದಷ್ಟನ್ನು ಹಿಂಡಿ ಮಿಕ್ಕಿದ್ದೆಲ್ಲವನ್ನು ಕರುವಿಗೆ ಉಳಿಸುವರು. ಊರವರು ಯಾರಾದರೂ ಕೇಳಿದರೆ ದುಡ್ಡೂ ಪಡೆಯದೆ ಕೊಡುವರು. ಹಸು ಇವರ ಪಾಲಿಗೆ ನಿಜದ ದೇವರು. ಇವರಿಗೆ ನಿತ್ಯ ಹಾಲು, ಅನ್ನ, ಜೋಳದ ಮುದ್ದೆ ಇದ್ದರೆ ಸಾಕು. ಬೆಳಗ್ಗೆ ಉಂಡರೆ ಮತ್ತೆ ರಾತ್ರಿಯೇ ಊಟ ಇವರದ್ದು.

ಹೊಲದ ಯಜಮಾನ ದಿನವೊಂದಕ್ಕೆ ಕೊಡುವ ದುಡ್ಡೇ ಇವರ ಮೂಲ ಸಂಪಾದನೆ. ಆತನ ಹೊಲಕ್ಕೆ ಗೊಬ್ಬರವಾಯಿತು, ಮತ್ತೆ ರಾಸಾಯನಿಕಗಳನ್ನು ಹಾಕಬೇಕೆಂದಿಲ್ಲ. ರೋಣ ತಾಲೂಕಿನ ನರೇಗಲ್ ರಾಮಪ್ಪ ಸಕ್ರೋಜಿಯವರು ಕಳೆದ 5 ವರ್ಷಗಳಿಂದ ಹೀಗೆ ಯಾವ ರಾಸಾಯನಿಕಗಳನ್ನೂ ಬಳಸದೆ ಕೇವಲ ಇದೇ ಹಸುಗಳ ಸಗಣಿ, ಮೂತ್ರದಿಂದ ಕೃಷಿ ಮಾಡಿದ್ದಾರೆ.

ಸುತ್ತಲಿನ ರಾಸಾಯನಿಕ ಬಳಸಿ ಕೃಷಿ ಮಾಡಿದವರಿಗಿಂತ ಹೆಚ್ಚಿನ ಇಳುವರಿ ರಾಮಪ್ಪರಿಗೆ ಸಿಕ್ಕಿದೆ. ಜವಾರಿ ಹಸುವಿನ ಮೂತ್ರದಿಂದ ಜೀವಾಮೃತ ಎಂಬ ಕಷಾಯ ಮಾಡುವರಂತೆ. ಕೆಲವೆಡೆ ಭರಮಣ್ಣನ ಬಳಿ ಈ ಗೋಮೂತ್ರ ಪಡೆಯಲೆಂದೇ ಪ್ರತಿ ದಿನ ಬ್ಯಾರಲ್‌ಗಳನ್ನು ತಂದಿರಿಸುವವರೂ ಇದ್ದಾರೆ.

ಕಳೆದ ವರ್ಷ ಇದೇ ಹೊಲದಲ್ಲಿ ಕಾಲುಬಾಯಿ ರೋಗ ಬಂದು 40 ಹಸುಗಳು ಸತ್ತಿದ್ದವಂತೆ. ಕಳೆದ ಶ್ರಾವಣದಲ್ಲಿ ಸೊಂಡೂರಿನ ಕಾಡು ಬದಿ ಮೇಯಿಸುತ್ತಿದ್ದಾಗ ಚಿರತೆಗಳು ಬಂದು ದಿನಕ್ಕೊಂದರಂತೆ 20 ಹಸುಗಳನ್ನು ತಿಂದಿದ್ದವಂತೆ. ಆ ದಿನ ರಾತ್ರಿ ಅವುಗಳ ತಾಯಿ, ತಂಗಿ, ತಮ್ಮ, ಅಣ್ಣಂದಿರ ಕಣ್ಣಲ್ಲಿ ನೀರು ಜಿನುಗುತ್ತಿತ್ತಂತೆ.

ಇಷ್ಟರವರೆಗೆ ಗೋವಳ ಭರಮಣ್ಣನ ಈ ಸಂಸಾರ ಗದಗ, ಕೊಪ್ಪಳ, ಗಂಗಾವತಿ, ಬಳ್ಳಾರಿ, ನವಲಗುಂದ ಮೊದಲಾದೆಡೆ ಪ್ರತಿವರ್ಷ ಅಲೆದಾಡಿದೆ. ಮಳೆಗಾಲಕ್ಕೆ ಗದ್ದೆಗಳಲ್ಲೆಲ್ಲ ಪೈರು ತುಂಬಿರುವುದರಿಂದ ಕಾಡಿಗೆ ತೆರಳುವರು. ರೈತರು ಬಯಸಿದರೆ ಹಳೆಮೈಸೂರು ಕಡೆಯೂ ಬರುವ ಆಸೆಯಿದೆಯಂತೆ.

ನಮ್ಮ ಸರ್ಕಾರಗಳು ಗೋ ಸಂತತಿ ರಕ್ಷಣೆಯ ಮಾತಾಡುತ್ತವೆ. ಅದೇ ಬದುಕಾಗಿರುವ ಭರಮಣ್ಣನಿಗೆ ಸರ್ಕಾರದಿಂದ ಏನು ಸಿಕ್ಕಿದೆ ಎಂದು ಕೇಳಿದರೆ, 'ನಮ್ಮನ್ನು ಅವರು ಮನುಷ್ಯರಂತೆ ಕಂಡರೆ ಸಾಕು' ಎನ್ನುತ್ತಾರೆ. ಎಲ್ಲ ರೈತರಿಗೂ ಜವಾರಿ ಹಸುಗಳ ಸಗಣಿ, ಮೂತ್ರದಲ್ಲಿರುವ ಪೌಷ್ಟಿಕಾಂಶದ ಅರಿವಿಲ್ಲ. ತಮ್ಮ ಹೊಲಕ್ಕೆ ಇವು ಬಂದು ಮೇದದ್ದಕ್ಕೆ ಸಾವಿರಾರು ರೂಪಾಯಿ ದಂಡ ವಿಧಿಸಿದವರೂ ಇದ್ದಾರೆ. ಕೆಲವೊಮ್ಮೆ ಸ್ಥಳೀಯರು ಭರಮಣ್ಣನನ್ನು ಥಳಿಸಿದ್ದೂ ಇದೆ. ಆ ಬಿಸಿಲು ನಾಡಲ್ಲಿ ಎಲ್ಲಾದರೂ ಒಂದೆಡೆ ನೀರು ಕಾಣಿಸಿ ದನಗಳು ಧಾವಿಸಿದರೆ ಜನ ಕಲ್ಲು ಕಟ್ಟಿಗೆಯಿಂದ ಬಡಿದದ್ದೂ ಇದೆ. ಆದರೆ ಎಷ್ಟೇ ಕಷ್ಟ ಬಂದರೂ ಸಾಕಿದ ದನಗಳನ್ನು ಕಟುಕರಿಗೆ ಕೊಟ್ಟವನಲ್ಲ ಭರಮಣ್ಣ.

ಬೇಸಿಗೆಯಲ್ಲಿ ಇಷ್ಟು ದನಗಳಿಗೆ ನೀರು ಎಲ್ಲಿಂದ ತರಲಿ?, ಮಳೆಗಾಲದಲ್ಲಿ ರಕ್ಷಣೆ ಹೇಗೆ? ಜೊತೆಗೆ ಔಷಧದ ಖರ್ಚು. ಸರ್ಕಾರಿ ವೈದ್ಯರು ಬಂದರೂ ಅವರಿಗೂ ದುಡ್ಡು ಕೊಡಬೇಕು. ಇವೆಲ್ಲ ದನಗಳಿಗೆ ವಿಮಾ ಸೌಲಭ್ಯವನ್ನಾದರೂ ಮಾಡಿಸಿಕೊಟ್ಟರೆ, ಊರಿಗೆ, ನಾಡಿಗೆ, ಸಂಸ್ಕೃತಿಗೆ ಉಪಕಾರಿಯಾದ ಈ ಕುಟುಂಬ ಕೃತಜ್ಞ ಎಂದೀತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+