ಹಳೆಬೇರು, ಹೊಸ ಚಿಗುರು: ಮಕ್ಕಳಿಗೆ ಹಿರಿಯರ ಜೀವನಾನುಭವ ಯಾಕೆ ಮುಖ್ಯ?
ಶಿಕ್ಷಣ ವ್ಯವಸ್ಥೆ ಖಾಸಗೀಕರಣಗೊಂಡಿದೆ. ನರ್ಸರಿ ಶಾಲೆಗೆ ಸೇರಿಸಬೇಕೆಂದರೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಹಾಗಾದರೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾ? ಶಿಕ್ಷಣ ಎಂದರೆ ಬರಿ ಜ್ಞಾನ ಸಂಪಾದನೆ ಮಾತ್ರವಲ್ಲ, ಮೌಲ್ಯಗಳು, ಸಾಮಾಜಿಕ ಜವಾಬ್ದಾರಿಗಳನ್ನು ಕೂಡ ಅರಿಯುವುದಾಗಿದೆ.
ಶಾಲೆಗಳು ಕೂಡ ಕಲಿಸಲಾಗದ ಎಷ್ಟೋ ವಿಚಾರಗಳನ್ನು ನಾವು ಹಿರಿಯರಿಂದ ಕಲಿಯಬಹುದು. ಹಿರಿಯರ ಜೀವನಾನುಭವದ ಬಗ್ಗೆ ತಿಳಿದಿದ್ದೇ ಆದರೆ ನಾವು ಎಷ್ಟೋ ಹೊಸ ವಿಚಾರಗಳನ್ನು ಅರಿಯಬಹುದಾಗಿದೆ.

ಜೀವನಾನುಭವವೇ ಕಲಿಕೆಯ ಮೊದಲ ಮೆಟ್ಟಿಲು
ಮನೆಯೇ ಮೊದಲ ಪಾಠ ಶಾಲೆ ಎಂಬುದು ವಾಸ್ತವ. ಹಿಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಅಜ್ಜಿ-ತಾತ, ದೊಡ್ಡಪ್ಪ-ದೊಡ್ಡಮ್ಮ, ಅಪ್ಪ-ಅಮ್ಮ ಅಣ್ಣಂದಿರು, ಅಕ್ಕಂದಿರು ಹೀಗೆ ಎಲ್ಲ ವಯೋಮಾನದವರು ಒಂದೇ ಸೂರಿನಲ್ಲಿ ವಾಸವಾಗಿದ್ದರು. ಇಂತಹ ಮನೆಯಲ್ಲಿ ಹುಟ್ಟಿದ ಮಗುವೊಂದು ಭಾಷೆಯನ್ನು ಬಹಳ ಬೇಗ ಕಲಿಯುತ್ತಿತ್ತು. ಆಟ-ಪಾಠಗಳು ಜೊತೆ-ಜೊತೆಯಾಗಿಯೇ ಸಾಗುತ್ತಿತ್ತು. ಆದರೆ, ಇವತ್ತು ಕುಟುಂಬವೆಂದರೆ ಗಂಡ-ಹೆಂಡತಿ, ಅವರ ಮಕ್ಕಳಿಗೆ ಸೀಮಿತವಾಗಿದೆ.
ಇಂತಹ ಸಂದರ್ಭದಲ್ಲೂ ವಾರಕ್ಕೊಮ್ಮೆ, ರಜಾ ದಿನಗಳಲ್ಲಿ ಅಜ್ಜಿಯ ಊರಿಗೆ, ಸಂಬಂಧಿಕರ ಊರಿಗೆ ಇಲ್ಲವೆ ಅಕ್ಕಪಕ್ಕದ ಮನೆಯಲ್ಲಿರುವ ಹಿರಿಯರ ಜೊತೆಗೆ ಮಕ್ಕಳನ್ನು ಸ್ವಲ್ಪ ಹೊತ್ತು ಬಿಡುವುದು ಉತ್ತಮ. ಅಜ್ಜಿಯಂದಿರ ಕತೆಗಳು, ಹಾಡುಗಳು, ಅವರ ಜೀವನಾನುಭವವನ್ನು ಕೇಳುವಂತಹ ಅವಕಾಶ ಸಿಕ್ಕರೆ ಅದಕ್ಕಿಂತ ಜ್ಞಾನ ಮತ್ತೆಲ್ಲೂ ಸಿಗಲಾರದು.
ಸಾಧಕರ ಕತೆಗಳನ್ನು ತಿಳಿಯುವುದು
ಇವತ್ತಿನ ದಿನಗಳಲ್ಲಿ ಪ್ರತಿಯೊಂದು ವಿದ್ಯಾರ್ಥಿಯು, ತಾನು ಜೀವನದಲ್ಲಿ ಇಂತಹ ಕ್ಷೇತ್ರಗಳಲ್ಲಿ ಏನಾದರು ಮಹತ್ತರವಾದುದ್ದನ್ನು ಸಾಧಿಸಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಮೊದಲು ಕನಿಷ್ಠ ಶಿಕ್ಷಣ ಪಡೆಯುವುದು ಮುಖ್ಯವಾಗುತ್ತದೆ.
ಓದುವುತ್ತಿರುವಾಗಲೇ ತಾವು ಸಾಧಿಸಬೇಕು ಎಂದು ಕನಸು ಕಂಡ ಕ್ಷೇತ್ರಗಳಲ್ಲಿ ಈಗಾಗಲೇ ಸಾಧನೆ ಮಾಡಿರುವವರ ಬಗ್ಗೆ ತಿಳಿದುಕೊಂಡರೆ ನಮ್ಮ ಸಾಧನೆಗೂ ಉತ್ಸಾಹ ಹೆಚ್ಚುತ್ತದೆ. ವಿದ್ಯಾರ್ಥಿಗಳು ಅಂತಹ ಅವಕಾಶವನ್ನು ಕಳೆದುಕೊಳ್ಳಬಾರದು. ಇದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಧಕರ ವ್ಯಕ್ತಿತ್ವಗಳನ್ನು ಹಂತ, ಹಂತವಾಗಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹಿರಿಯ ಸಾಧಕರ ಜೊತೆ ಕೆಲಸ ಮಾಡುವ ಅವಕಾಶ
ಹಿರಿಯರ ಜೀವನವನ್ನು ಅವರಿಂದ ಕೇಳಿ ತಿಳಿಯವುವುದು, ಇಲ್ಲವೆ ಅವರ ಜೀವನ ಕತೆಗಳನ್ನು ಓದುವುದು, ಹಿರಿಯ ಸಾಧಕರ ಜೀವನಾಧಾರಿತ ಸಿನೆಮಾಗಳನ್ನು ನೋಡುವುದು ಕಲಿಕೆಯ ಒಂದು ಭಾಗವಾದರೆ, ಅವರ ಜೊತೆಗೆ ಒಂದಷ್ಟು ದಿನ, ಒಂದಷ್ಟು ತಿಂಗಳು, ವರ್ಷ ಕೆಲಸ ಮಾಡಿದರೆ ನಿಜವಾದ ಕಲಿಕೆಯ, ಜ್ಞಾನದ ಹೆಬ್ಬಾಗಿಲು ತೆರೆದಂತೆಯೇ. ಅಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸತತವಾದ ಪ್ರಯತ್ನ, ಶ್ರದ್ಧ, ಹಂಬಲದಿಂದ ಮಾತ್ರ ಸಾಧಕರ ಜೊತೆ, ಹಿರಿಯರ ಜೊತೆ ಕೆಲಸ ಮಾಡುವಂತಹ ಅವಕಾಶ ದೊರಕುತ್ತದೆ. ಅಂತಹ ಅವಕಾಶ ಸಿಕ್ಕರೆ ಸಾಧನೆಯ ಹಾದಿ ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತದೆ.












Click it and Unblock the Notifications