ವಿಶೇಷ ವರದಿ: ಮಂಡ್ಯದಲ್ಲಿ ನಡೆಯುವ ಗಿಡದ ಜಾತ್ರೆಯ ವಿಶೇಷವೇನು?
ಮಂಡ್ಯ, ಡಿಸೆಂಬರ್ 20: ಹಿಂದಿನಿಂದಲೂ ನಿಸರ್ಗವನ್ನು ಪೂಜಿಸುತ್ತಾ ಬಂದಿರುವ ಪೂರ್ವಜರು, ಅದರಲ್ಲಿಯೇ ತಮ್ಮ ಒಳಿತನ್ನು ಕಂಡುಕೊಂಡಿದ್ದಾರೆ. ಅದಕ್ಕಾಗಿಯೇ ಸಂಪ್ರದಾಯಗಳನ್ನು ಹುಟ್ಟು ಹಾಕಿ, ಅವುಗಳನ್ನು ಪಾಲಿಸುತ್ತಾ ಬಂದಿರುವುದನ್ನು ನಾವು ಕಾಣಬಹುದಾಗಿದೆ.
ಇದಕ್ಕೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ನಾಗನಕೆರೆಯಲ್ಲಿ ನಡೆಯುವ ಗಿಡದ ಜಾತ್ರೆ ನಿದರ್ಶನವಾಗಿದೆ. ಗಿಡದ ಬಳಿ ಎಡೆಯಿಟ್ಟು ತಮ್ಮ ಮತ್ತು ಜನಜಾನುವಾರುಗಳ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದೆ. ಜತೆಗೆ ಇಲ್ಲಿಗೆ ಬಂದು ವೆಂಕಟೇಶ್ವರನ ಸ್ಮರಿಸಿ ಎಡೆಯಿಟ್ಟರೆ ತಿರುಪತಿಗೆ ಹೋದಷ್ಟೆ ಪುಣ್ಯ ಲಭಿಸುತ್ತದೆ ಎಂಬ ಮಾತು ಜನಮಾನಸದಲ್ಲಿದೆ.

ಪ್ರಕೃತಿಯನ್ನು ಪೂಜಿಸುವುದೇ ಜಾತ್ರೆಯ ವಿಶೇಷ
ಇನ್ನು ಇಲ್ಲಿ ನಡೆಯುವ ಗಿಡದ ಜಾತ್ರೆ ಬಗ್ಗೆ ನೋಡುತ್ತಾ ಹೋದರೆ ಇತರೆ ಜಾತ್ರೆಗಳಂತೆ ಇಲ್ಲಿ ಯಾವುದೇ ಸಂಭ್ರಮ ಕಾಣಿಸುವುದಿಲ್ಲ. ರಥವೂ ಇರುವುದಿಲ್ಲ. ಬದಲಿಗೆ ಪ್ರಕೃತಿಯನ್ನು ಪೂಜಿಸುವುದೇ ಜಾತ್ರೆಯಾಗಿದ್ದು, ಆ ಮೂಲಕ ಪ್ರಕೃತಿ ಸಮತೋಲನ ಕಾಪಾಡಿಕೊಳ್ಳುವಂತೆ ಬೇಡಿಕೊಳ್ಳುವುದು ಎದ್ದು ಕಾಣುತ್ತದೆ.
ಗಿಡಜಾತ್ರೆ ನಡೆಯುವ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ನಾಗನಕೆರೆಯನ್ನು ಚಿಕ್ಕ ತಿರುಪತಿ ಎಂದು ಕೂಡ ಕರೆಯಲಾಗುತ್ತದೆ. ಗೋವಿಂದ ನಾಮಸ್ಮರಣೆಯೊಂದಿಗೆ ನಡೆಯುವ ಜಾತ್ರೆಯಲ್ಲಿ ಗೋವಿಂದನ ನಾಮಸ್ಮರಣೆಯೊಂದಿಗೆ ಜಾಗಟೆಯ ನಿನಾದ ಕಿವಿಯನ್ನು ಅಪ್ಪಳಿಸಿದರೆ ಇನ್ನೊಂದೆಡೆ ಮಾಂಸ ಮತ್ತು ಮದ್ಯದ ಎಡೆ ಇಟ್ಟು ದೇವರನ್ನು ಪೂಜಿಸುವುದು ಅಚ್ಚರಿಯನ್ನುಂಟು ಮಾಡುತ್ತದೆ.

ತಿರುಪತಿಗೆ ಹೋಗಲಾಗದವರು ಬರುತ್ತಾರೆ
ಹಿರಿಯರು ಹೇಳುವ ಪ್ರಕಾರ ತಿರುಪತಿಗೆ ಹೋಗಲು ಸಾಧ್ಯವಾಗದವರು ಈ ಕ್ಷೇತ್ರಕ್ಕೆ ಬಂದು ತಿಮ್ಮಪ್ಪನ ದರ್ಶನ ಪಡೆಯುವುದರಿಂದ ಇದಕ್ಕೆ ಚಿಕ್ಕ ತಿರುಪತಿ ಎಂಬ ಹೆಸರು ಬಂದಿದ್ದು, ಕೆರೆ ದಂಡೆಯ ಗಿಡದ ಕೆಳಗೆ ದೇವರಿಗೆ ಎಡೆಯಿಟ್ಟು ಪೂಜಿಸುವುದರಿಂದ ಗಿಡದ ಜಾತ್ರೆಯಾಗಿ ಜನವಲಯದಲ್ಲಿ ಉಳಿದು ಬಂದಿದೆ.
ಜಾತ್ರೆ ಸಮಯದಲ್ಲಿ ಇಲ್ಲಿ ಹರಕೆ ತೀರಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಹೀಗೆ ಬರುವ ದಾಸಪ್ಪಂದಿರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ನಾಗನಕೆರೆ ದಂಡೆಯ ಗಿಡದ ಪ್ರದೇಶಗಳಲ್ಲಿಟ್ಟು ಪೂಜಿಸುತ್ತಾರೆ. ಈ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಜಾತ್ರೆ ದಿನವನ್ನು ಪ್ರಚಾರ ಮಾಡುವ ದಾಸಪ್ಪಂದಿರು
ಜಾತ್ರೆ ಪ್ರಾರಂಭವಾಗುವ ಹದಿನೈದು ದಿನಗಳ ಮೊದಲೇ ತಿರುಪತಿ ತಿಮ್ಮಪ್ಪನ ಒಕ್ಕಲು, ಅಂದರೆ ದಾಸಪ್ಪ ಅಥವಾ ಹರಿಭಕ್ತರು ಪ್ರಚಾರ ಮಾಡುತ್ತಾರೆ. ಜಾತ್ರೆಗೆ ವಾರವಿದ್ದಂತೆ ಆಂಜನೇಯ ಜಾಗಟೆ, ಶಂಖ, ಬಾನಸಿಯೊಂದಿಗೆ ಹೊರಡುವ ದಾಸಪ್ಪನವರು ಪ್ರತಿ ಹಳ್ಳಿಗಳಿಗೆ ತೆರಳಿ ಭಕ್ತರಿಂದ ಪೂಜೆ, ಪುರಸ್ಕಾರ ಸ್ವೀಕರಿಸಿ ಜಾತ್ರೆ ದಿನವನ್ನು ಪ್ರಚಾರ ಮಾಡುತ್ತಾರೆ. ಬಳಿಕ ನಿಗದಿತ ಸಮಯದಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ.
ಈ ಜಾತ್ರೆಯಲ್ಲಿ ಪ್ರತಿಯೊಂದು ಮನೆ ಬಳಕೆಯ ವಸ್ತುಗಳು ಹಾಗೂ ಮಕ್ಕಳ ಆಟಿಕೆಗಳು ದೊರೆಯುತ್ತವೆ. ಇಲ್ಲಿಗೆ ಬರುವ ಭಕ್ತರು ದಾಸಯ್ಯನಿಗೆ ಹರಕೆ ಕಾಣಿಕೆ, ಮುಡಿ ನೀಡಿ ದೇವರಲ್ಲಿ ತಾವು ಬೇಡಿಕೊಂಡಿದ್ದು ಈಡೇರಲಿ ಎಂದು ಪ್ರಾರ್ಥಿಸುತ್ತಾರೆ.
ಜಾತ್ರೆ ನಡೆಯುವ ನಾಗನಕೆರೆಯ ದಡದ ಕಾಡಿನ ಮಧ್ಯೆ ಕೆರೆಯ ಆವರಣದಲ್ಲಿ ಮಂಟಪಗಳಿದ್ದು, ಮಂಟಪಗಳಲ್ಲಿ ದಾಸಪ್ಪನ ಪೂಜಾ ಕಾರ್ಯಗಳು ನಡೆಯುತ್ತವೆ. ಈ ವೇಳೆ ಇಲ್ಲಿ ಗೋವಿಂದನ ನಾಮಸ್ಮರಣೆ, ಗಂಟೆ ಜಾಗಟೆಗಳ ಶಬ್ದ ಮೇಳೈಸುತ್ತದೆ.

ಡಿ.24ರಂದು ಸರಳ ಗಿಡದ ಜಾತ್ರೆ
ಜಾತ್ರೆ ನಡೆಯುವ ಸ್ಥಳದಲ್ಲಿ ಯಾವುದೇ ದೇವಸ್ಥಾನವಿರಲಿಲ್ಲ. ಆದರೆ ಇಂದು ಈ ದೇವರ ಮೂಲ ದೇವಾಲಯದ ಸ್ಥಳದಲ್ಲಿ ಗುಡ್ಡದ ಮೇಲೆ ಸುಂದರವಾಗಿ ವೆಂಕಟೇಶ್ವರ ದೇವಾಲಯ ನಿರ್ಮಿಸಿದ್ದು, ಇಲ್ಲಿ ಪೂಜಾ ಕಾರ್ಯಗಳು ನಡೆಯುತ್ತವೆ.
ಭಕ್ತರು ದಾಸಯ್ಯನಿಗೆ ತಮ್ಮ ಹರಕೆಯಾಗಿ ಮದ್ಯಪಾನವನ್ನು ನೀಡುತ್ತಿದ್ದು, ಇದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ತಿರುಪತಿಗೆ ಹೋಗಲಾಗದವರು ಇದನ್ನೇ ಚಿಕ್ಕ ತಿರುಪತಿ ಎಂದು ಭಾವಿಸಿ ತಮ್ಮ ಆರಾಧ್ಯ ದೇವರಾದ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ಈ ಬಾರಿ ಗಿಡದ ಜಾತ್ರೆ ಡಿಸೆಂಬರ್ 24ರಂದು ನಡೆಯಲಿದೆ. ಆದರೆ ಕೊರೊನಾ ಸೋಂಕು ಕಾರಣದಿಂದ ಈ ಬಾರಿ ಸರಳವಾಗಿ ನಡೆಸಲಾಗುತ್ತಿದೆ.












Click it and Unblock the Notifications