ಐಟಿ ದಿಗ್ಗಜರಿಗಿಂತ ಹೆಚ್ಚು ಗಳಿಕೆ ಹೊಂದಿದ್ದ ಲಾಟರಿ ಕಿಂಗ್ ಮೇಲೆ ಇಡಿ ದಾಳಿ
ಒಂದು ಕಾಲದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ನಾರಾಯಣ ಮೂರ್ತಿ, ರಿಲಯನ್ಸ್ ಧೀರೂಭಾಯಿ ಅಂಬಾನಿ ಒಂದು ದಿನಕ್ಕೆ ಗಳಿಸುತ್ತಿದ್ದ ಆದಾಯಕ್ಕಿಂತ ಹೆಚ್ಚು ಗಳಿಸುತ್ತಿದ್ದ ಲಾಟರಿ ಜಗತ್ತಿನ ಕಿಂಗ್ ಮಾರ್ಟಿನ್ ಸ್ಯಾಂಟಿಯಾಗೋ ಮೇಲೆ ಮತ್ತೆ ಜಾರಿ ನಿರ್ದೇಶನಾಲಯದಿಂದ ದಾಳಿ ನಡೆದಿದೆ. ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ 409.92 ಕೊಟಿ ರು ಜಪ್ತಿ ಮಾಡಲಾಗಿದೆ.
"M/s. Future Gaming & Hotel Services Pvt. Ltd. ಮತ್ತು ಅದರ ವಿವಿಧ ಉಪ-ವಿತರಕರು/ಪ್ರದೇಶ-ವಿತರಕರ ವಿರುದ್ಧದ ಲಾಟರಿ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ, ಪಿಎಂಎಲ್ಎ, 2002 ರ ಅಡಿಯಲ್ಲಿ Rs 409.92 ಕೋಟಿ ಮೌಲ್ಯದ ಚರ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ," ಜಾರಿ ನಿರ್ದೇಶನಾಲಯ ಟ್ವೀಟ್ ಮಾಡಿದೆ.
ಫ್ಯೂಚರ್ ಗೇಮಿಂಗ್ & ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಯಾಂಟಿಯಾಗೊ ಮಾರ್ಟಿನ್ ಅವರು ಲಾಟರಿ ಟಿಕೆಟ್‌ಗಳನ್ನು ಮುದ್ರಿಸುವ ಮತ್ತು ಮಾರಾಟ ಮಾಡುವ ಮೂಲಕ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದರು.

ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ಕಾರ್ಮಿಕರಾಗಿ ವೃತ್ತಿ ಪ್ರಾರಂಭಿಸಿ, ನಂತರ ಭಾರತಕ್ಕೆ ಮರಳಿದ. ಕೊಯಮತ್ತೂರಿನ ಗಾಂಧಿನಗರಂನ ನಿವಾಸಿ ಮಾರ್ಟಿನ್ ಒಬ್ಬ ಸಾಧಾರಣ ಲಾಟರಿ ಏಜೆಂಟ್ ಆಗಿದ್ದ. 1988ರಲ್ಲಿ ತಮಿಳುನಾಡಿನಲ್ಲಿ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿ, ಬಡವರು, ಮಧ್ಯಮ ವರ್ಗದವರ ಪಾಲಿಗೆ ಕನಸು ಹಂಚುವ ವ್ಯಾಪಾರಿ ಎನಿಸಿಕೊಂಡ. ದಿನನಿತ್ಯ ಲಾಟರಿ ಮಾರಿ ಜೀವನ ಸಾಗಿಸುತ್ತಿದ್ದ ಮಾರ್ಟಿನ್ ಮುಂದೊಂದು ದಿನ 7,000 ಕೋಟಿ ರು ಮೌಲ್ಯದ ಲಾಟರಿ ಹಗರಣದ ಕಿಂಗ್ ಪಿನ್ ಎನಿಸಿದ. 2000 ಕೋಟಿ ರು ಒಡೆಯನಾದ, ದಂಧೆ ನಡೆದಷ್ಟು ದಿನ ರಾಜನಂತೆ ಮೆರೆದ, ನಿಧಾನವಾಗಿ ಕರ್ನಾಟಕ ಮತ್ತು ಕೇರಳಕ್ಕೆ ವಿಸ್ತರಿಸಿದ. ಆದರೆ 2003 ರಲ್ಲಿ, ರಾಜ್ಯ ಸರ್ಕಾರವು ಲಾಟರಿಗಳನ್ನು ನಿಷೇಧಿಸಿದ ನಂತರ, ಮಾರ್ಟಿನ್ ತನ್ನ ವ್ಯವಹಾರವನ್ನು ತಮಿಳುನಾಡಿನ ಹೊರಗೆ ತೆಗೆದುಕೊಂಡು ಹೋಗಬೇಕಾಯಿತು.
ದಿನವೊಂದಕ್ಕೆ 60 ರಿಂದ 80 ಮಿಲಿಯನ್ ಗಳಿಕೆ: ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ದೊಡ್ಡ ಕಚೇರಿ ತೆರೆದ ಸಿಕ್ಕಿಂ ಸರ್ಕಾರಕ್ಕೆ ಲಾಟರಿ ಮಾರಾಟ ಸಲಹೆಗಾರನಾಗಿದ್ದ, ತಮಿಳುನಾಡಿನ 17 ಸ್ಕೀಮ್ ಗಳು, ಸಿಕ್ಕಿಂ ಸರ್ಕಾರದ 28,ಅರುಣಾಚಲ ಪ್ರದೇಶದ 6 ಲಾಟರಿ ಯೋಜನೆಗಳನ್ನು ಸುಲಭವಾಗಿ ನಿಭಾಯಿಸುತ್ತಿದ್ದ ಮಾರ್ಟಿನ್ ದೊಡ್ಡ ಬಿಸಿನೆಸ್ ಮನ್, ಜೊತೆಗೆ ಭೂತನ್ ಸರಕಾರದ ಲಾಟರಿ ವಿತರಣೆ ಪಡೆದುಕೊಂಡ ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಪಶ್ಚಿಮ ಬಂಗಾಲ ಕೂಡಾ ಮಾರ್ಟಿನ್ ಕೈವಶವಾಯಿತು. ಎಲ್ಲೆಡೆ ವ್ಯಾಪಾರ ದಿನದಿಂದ ದಿನಕ್ಕೆ ಬೆಳೆಯತೊಡಗಿತು.
ರಿಯಲ್ ಎಸ್ಟೇಟ್, ಮಾಧ್ಯಮ, ಜವಳಿ, ನರ್ಸಿಂಗ್ ಕಾಲೇಜು ಹೀಗೆ ಎಲ್ಲೆಡೆ ಹೂಡಿಕೆ ಮಾಡತೊಡಗಿದ. ಡಿಎಂಕೆ ಪಕ್ಷದ ಗೆಳೆತನ ಈತನ ಎಲ್ಲಾ ಆಟಾಟೋಪಗಳಿಗೆ ಇಂಬು ನೀಡಿತ್ತು. 2003ರಲ್ಲಿ ಎಡಿಎಐಎಂಕೆ ಸರ್ಕಾರ ಲಾಟರಿ ನಿಷೇಧ ಹೇರಿತು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದ 15,000 ಕೋಟಿ ರು ಮೊತ್ತವನ್ನು ಉಳಿಸಿದ್ದಾಗಿ ಜಯಲಲಿತಾ ಘೋಷಿಸಿಕೊಂಡಿದ್ದರು.
ಇತ್ತ ಕರ್ನಾಟಕದಲ್ಲಿ 100 ಕೋಟಿ ರು ತೆರಿಗೆ ಕಟ್ಟುತ್ತಿದ್ದ ಮಾರ್ಟಿನ್ ಲಾಟರಿ ದಂಧೆ ಮೇಲೆ ಅಂದಿನ ಜೆಡಿಎಸ್- ಬಿಜೆಪಿ ಸಮ್ಮಿಶ್ರದ ಸರ್ಕಾರ ಕಣ್ಣು ಬಿದ್ದಿತ್ತು. ಕರ್ನಾಟಕ ಸರ್ಕಾರ ಅಧಿಕೃತವಾಗಿ ಲಾಟರಿ ಮೇಲೆ ನಿಷೇಧ ಹೇರಿತ್ತು. ನಂತರ ಸಿಕ್ಕಿಂ ಲಾಟರಿ ದಂಧೆ ಕಮಿಷನ್ ಪಾಲಿನಲ್ಲಿ ಕಿರಿಕಿರಿ, ಲಾಟರಿ ಏಜೆನ್ಸಿ ಗುತ್ತಿಗೆ ಪಡೆಯುವಲ್ಲಿ ಸಂಸದ ವಿಜಯ್ ಗೋಯಲ್ ಜೊತೆಗೆ ಕಿರಿಕ್ ಎಲ್ಲವೂ ಮುಂದೆ ಸಿಬಿಐ ತನಿಖೆಗೆ ನಾಂದಿ ಹಾಡಿತು. ಜೊತೆಗೆ ಲಾಟರಿ ಕಿಂಗ್ ಸಾಮ್ರಾಜ್ಯ ಅವನತಿಯೂ ಆರಂಭವಾಯಿತು.











Click it and Unblock the Notifications