ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಆನೆ-ಕುದುರೆಗಳಿಗೆ ಸಿಡಿಮದ್ದಿನ ತಾಲೀಮು!

By ಬಿಎಂ ಲವಕುಮಾರ್
|
Google Oneindia Kannada News

ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಗಜಪಡೆಗಳ ತಾಲೀಮು ಭರದಿಂದ ನಡೆಯುತ್ತಿರುವ ಬೆನ್ನಲ್ಲೇ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವರೋಹಿ ದಳದ ಕುದುರೆಗಳು ಭಾರೀ ಶಬ್ದಗಳಿಗೆ ಬೆಚ್ಚದಂತೆ ಸಿಡಿಮದ್ದಿನ ತಾಲೀಮು ನಡೆಸುವ ಕಾರ್ಯಕ್ಕೆ ಸಿದ್ಧತೆ ಆರಂಭವಾಗಿದ್ದು, ಇದಕ್ಕಾಗಿ ಹನ್ನೊಂದು ಫಿರಂಗಿಗಾಡಿಗಳನ್ನು ಸಿದ್ಧಗೊಳಿಸಿಡಲಾಗಿದೆ.

ಅರಮನೆಯಲ್ಲಿದ್ದ ಫಿರಂಗಿಗಾಡಿಗಳನ್ನು ಹೊರತೆಗೆದು ಅವುಗಳನ್ನು ಸ್ವಚ್ಛಗೊಳಿಸಿದ ಬಳಿಕ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕುಶಾಲತೋಪು ಸಿಡಿಸುವ ಮೂಲಕ ಆನೆ ಮತ್ತು ಕುದುರೆಗಳಿಗೆ ಸಿಡಿಮದ್ದಿನ ತಾಲೀಮನ್ನು ನಡೆಸಲಾಗುತ್ತದೆ. ವಿವಿಧ ಹಂತಗಳಲ್ಲಿ ಸಿಡಿಮದ್ದಿನ ತಾಲೀಮು ನಡೆಸಿ ಗಜಪಡೆ ಮತ್ತು ಅಶ್ವರೋಹಿದಳಕ್ಕೆ ಅಭ್ಯಾಸ ಮಾಡಿಸಲಾಗುತ್ತದೆ.

ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!

ಸಿಡಿಮದ್ದಿನ ತಾಲೀಮಿನ ವೇಳೆ ಮೊದಲ ಹಂತದಲ್ಲಿ ಕೆಲವು ಆನೆ ಮತ್ತು ಕುದುರೆಗಳು ಬೆದರಿದರೂ ನಂತರ ಅವು ಶಬ್ದಕ್ಕೆ ಹೊಂದಿಕೊಂಡು ಬೆದರದೆ ಜಗ್ಗದೆ ತಮ್ಮ ಪಾಡಿಗೆ ನಿಲ್ಲಲು ತಯಾರಾಗುತ್ತವೆ. ಈಗಾಗಲೇ ದಸರಾದಲ್ಲಿ ಪಾಲ್ಗೊಂಡಿರುವ ಆನೆಗಳು ಶಬ್ದಕ್ಕೆ ಬೆದರದೆ ನಿಂತರೂ ಮೊದಲ ಬಾರಿಗೆ ಅಥವಾ ಕೆಲ ವರ್ಷಗಳ ಬಳಿಕ ಬಂದ ಆನೆಗಳು ಬೆದರಿದರೂ ಕ್ರಮೇಣ ಅವುಗಳನ್ನು ಭಾರೀ ಶಬ್ದಕ್ಕೆ ಬೆದರದಂತೆ ಸಿಡಿಮದ್ದಿನ ತಾಲೀಮಿನಿಂದಲೇ ತಯಾರುಗೊಳಿಸಲಾಗುತ್ತದೆ.

ಪ್ರತಿಬಾರಿಯೂ ದಸರಾ ಕಾರ್ಯಚಟುವಟಿಕೆಗಳು ನಿಯಮ ಮತ್ತು ಸಂಪ್ರದಾಯಬದ್ಧವಾಗಿಯೇ ಆರಂಭವಾಗಲಿದೆ. ಅದರಂತೆ ಸಿಡಿಮದ್ದಿನ ತಾಲೀಮು ಕೂಡ ನಡೆಯಲಿದೆ. ಹೀಗಾಗಿ ಅರಮನೆಯಲ್ಲಿದ್ದ ಫಿರಂಗಿಗಾಡಿಗಳನ್ನು ಅವುಗಳಿದ್ದ ಸ್ಥಳದಿಂದ ಹೊರತಂದು ಅವುಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ಅರಮನೆಯ ಆನೆಬಾಗಿಲಿಗೆ ತಂದಿರಿಸಿ ಅಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಯಾವುದೇ ವಿಘ್ನಗಳಿಲ್ಲದೆ, ಯಾವುದೇ ರೀತಿಯ ತೊಂದರೆಗಳಾಗದೆ ಯಶಸ್ವಿಯಾಗಿ ದಸರಾ ಸಂಬಂಧಿತ ಕಾರ್ಯಗಳು ನೆರವೇರುವಂತೆ ಪ್ರಾರ್ಥಿಸಲಾಗುತ್ತದೆ. ಇದನ್ನು ವಿಜಯ ಗಣಪತಿ ಪೂಜೆ ಎಂದು ಕರೆಯಲಾಗುತ್ತದೆ.

ಸಿಬ್ಬಂದಿಗೆ ಸನ್ಮಾನಿಸಿದ ಸೋಮಶೇಖರ್

ಸಿಬ್ಬಂದಿಗೆ ಸನ್ಮಾನಿಸಿದ ಸೋಮಶೇಖರ್

ಈಗಾಗಲೇ ಅಂಬಾವಿಲಾಸ ಅರಮನೆ ಆವರಣದ ಆನೆಬಾಗಿಲು ಬಳಿ 11 ಫಿರಂಗಿ ಗಾಡಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದ್ದಲ್ಲದೆ, ಕುಶಾಲತೋಪು ಸಿಡಿಸುವ ಸಿಬ್ಬಂದಿಯನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗಿದೆ.

ಫಿರಂಗಿಗಾಡಿಗಳ ಮೂಲಕ ಕುಶಾಲತೋಪು ಸಿಡಿಸುವುದು ಪ್ರಾಣದ ಹಂಗು ತೊರೆದು ಮಾಡುವ ಕೆಲಸವಾಗಿರುವುದರಿಂದ ಯಾವುದೇ ತೊಂದರೆಗಳಾಗದಂತೆ ಪೂಜೆ ಸಲ್ಲಿಸಿ ಮುಂದಿನ ಕಾರ್ಯಗಳನ್ನು ಮಾಡಲಾಗುತ್ತದೆ. ಏಕೆಂದರೆ ಕುಶಾಲ ತೋಪು ಸಿಡಿಸುವಾಗ ಅವಘಡಗಳು ಸಂಭವಿಸಿ ಅದನ್ನು ಸಿಡಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆಗಳೂ ಹಲವಷ್ಟು ನಡೆದಿವೆ. ದಶಕಗಳ ಹಿಂದೆ ಸಿಎಆರ್ ಪೊಲೀಸ್ ಸಿಬ್ಬಂದಿ ಪರಶುರಾಮ್ ಎಂಬುವರು ಕುಶಾಲ ತೋಪು ಸಿಡಿಸುವ ಸಂದರ್ಭ ಅವರ ಇಡೀ ಮೈಸುಟ್ಟಿತ್ತು ಎನ್ನಲಾಗಿದೆ.

ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!

ಸಿಎಆರ್ ಪೊಲೀಸರಿಂದ ಕುಶಾಲ ತೋಪು

ಸಿಎಆರ್ ಪೊಲೀಸರಿಂದ ಕುಶಾಲ ತೋಪು

2014ರಲ್ಲಿ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ಸಂದರ್ಭ ಕುಶಾಲ ತೋಪು ಸಿಡಿಸಿದಾಗ ಸಿಎಆರ್ ಪೊಲೀಸ್ ರಾಜು ಎಂಬುವರಿಗೆ ಗಾಯವಾಗಿತ್ತು. ಇದನ್ನು ತಪ್ಪಿಸುವ ಸಲುವಾಗಿ ಸಿಬ್ಬಂದಿಗಳಿಗೆ ಅಗ್ನಿ ನಿರೋಧಕ ಜಾಕೆಟ್‌ಗಳನ್ನು ನೀಡಲಾಗುತ್ತದೆ. ಏನೇ ಆದರೂ ಫಿರಂಗಿ ಸಿಡಿಸುವಾಗ ಸಿಬ್ಬಂದಿ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಇದರ ಜತೆಗೆ ದೇವರ ಅನುಗ್ರಹವೂ ಬೇಕಾಗುತ್ತದೆ.

ಇನ್ನು ಸಿಡಿಮದ್ದಿನ ತಾಲೀಮಿಗೆ ಫಿರಂಗಿ ಗಾಡಿಗಳನ್ನು ಸಜ್ಜುಗೊಳಿಸಲಾಗಿದ್ದು, ಶೀಘ್ರವೇ ಕುಶಾಲತೋಪು ಸಿಡಿಸುವ ತಾಲೀಮು ಆರಂಭವಾಗಲಿದೆ. ಸಿಎಆರ್ ಪೊಲೀಸರು ಕುಶಾಲ ತೋಪು ಸಿಡಿಸಲಿದ್ದು, ದಸರಾ ವೇಳೆ 21 ಕುಶಾಲತೋಪು ಸಿಡಿಸಬೇಕಾಗಿರುವುದರಿಂದ ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇದರ ನಡುವೆ ವಿವಿಧ ಹಂತಗಳಲ್ಲಿ ಸಿಡಿಮದ್ದಿನ ತಾಲೀಮು ಕೂಡ ನಡೆಯಲಿದೆ.

ಮಹಾಸಂಸ್ಥಾನದ ಗೌರವದ ಪ್ರತೀಕ

ಮಹಾಸಂಸ್ಥಾನದ ಗೌರವದ ಪ್ರತೀಕ

ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಕುಶಾಲ ತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ. 21 ಕುಶಾಲತೋಪು ಮೈಸೂರು ಮಹಾಸಂಸ್ಥಾನದ ಗೌರವದ ಪ್ರತೀಕವಾಗಿದೆ.

ಫಿರಂಗಿಯಲ್ಲಿ ಕುಶಾಲತೋಪು ಸಿಡಿಸುವುದು ಹೇಗೆ ಎಂಬುದರ ಬಗ್ಗೆ ನೋಡುವುದಾರೆ ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಸುಮಾರು ಮೂರು ಕಿಲೋ ಗ್ರಾಂನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯುತಕಾರದ ಪೊಟ್ಟಣದಂತೆ ಮಾಡಲಾಗುತ್ತದೆ. ಅದನ್ನು ಕೊಳವೆಗೆ ಹಾಕಿ ನಂತರ ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ.

ಭೂಮಿಯೇ ಅದುರಿದ ಅನುಭವ

ಭೂಮಿಯೇ ಅದುರಿದ ಅನುಭವ

ಆ ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ದದೊಂದಿಗೆ ಸ್ಫೋಟಗೊಳ್ಳುತ್ತದೆ. ತಕ್ಷಣವೇ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ. ಇದುವೇ ಕುಶಾಲತೋಪಾಗಿದೆ. ಇದರ ಶಬ್ದಕ್ಕೆ ಭೂಮಿಯೇ ಅದುರಿದ ಅನುಭವವಾಗುತ್ತದೆ. ಈ ವೇಳೆ ಆನೆ ಮತ್ತು ಕುದುರೆಗಳು ಬೆದರುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಿ ಅವು ಭಾರೀ ಶಬ್ದಕ್ಕೆ ಹೊಂದಿಕೊಳ್ಳುವಂತೆ ಮಾಡುವುದೇ ಸಿಡಿಮದ್ದು ತಾಲೀಮಿನ ಮುಖ್ಯ ಉದ್ದೇಶವಾಗಿದೆ.

English summary
Mysore Dasara 2022; With only a month left for the Dasara celebrations, the police force will soon start cannon drill for Jamboosawari team led by Abhimanyu, which carrying Ambari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X