ಕಳೆದ ಮೂರು ವರ್ಷದಲ್ಲಿ ರಾಜೀನಾಮೆ ನೀಡಿದ ವಿವಿಧ ದೇಶಗಳ ಮುಖ್ಯಸ್ಥರು
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸಿಗದೇ ಜನರು ದಂಗೆ ಏಳುವುದು ಮುಂದುವರಿದಿದೆ. ಪ್ರಧಾನಿ, ಸಚಿವರು ರಾಜೀನಾಮೆ ನೀಡಿದರೂ ಜನರ ಕೋಪ ತಣ್ಣಗಾಗಿಲ್ಲ. ಅಧ್ಯಕ್ಷ ಗೋಟಬಾಯ ರಾಜಪಕ್ಸ ಕೂಡ ಪದತ್ಯಾಗ ಮಾಡುವ ಸಾಧ್ಯತೆ ಇದೆ.
ಶ್ರೀಲಂಕಾದಲ್ಲಿ ಸಾಲದ ಹೊರೆ ವಿಪರೀತವಾಗಿದೆ. ಸರಕಾರ ತಂದ ಹಲವು ಸುಧಾರಣಾ ಕ್ರಮಗಳು ಮತ್ತು ಹೊಸ ಪ್ರಯೋಗಗಳು ತದ್ವಿರುದ್ಧದ ಪರಿಣಾಮ ಬೀರಿವೆ. ಇದರಿಂದ ಆರ್ಥಿಕತೆ ಚೇತರಿಕೆಗೆ ಕಷ್ಟ ಎನ್ನುವಷ್ಟರ ಮಟ್ಟಕ್ಕೆ ಕುಸಿದಿದೆ. ಜನರು ದಂಗೆ ಎದ್ದು ಹಿಂಸಾರೂಪದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಿದರು. ರಾನಿಲ್ ವಿಕ್ರಮಸಿಂಘೆ ಹೊಸ ಪ್ರಧಾನಿಯಾದರು.
ಅದಾದ ಬಳಿಕ ನಾಲ್ವರು ಸಚಿವರು ಕೂಡ ರಾಜೀನಾಮೆ ನೀಡಿದ್ದಾರೆ. ಜನರ ಆಕ್ರೋಶ ತಣ್ಣಗಾಗಿಲ್ಲ. ರಾನಿಲ್ ಕೂಡ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆದರೂ ಜನರು ವಿಕ್ರಮಸಿಂಘೆ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಧ್ಯಕ್ಷ ಗೋಟಾಬಾಯ ರಾಜಪಕ್ಸೆ ಪದತ್ಯಾಗ ಮಾಡುವವರೆಗೂ ಜನರ ಪ್ರತಿಭಟನೆ ನಿಲ್ಲುವಂತೆ ಕಾಣುತ್ತಿಲ್ಲ.
ಗೋಟಬಾಯ ರಾಜಪಕ್ಸೆ ತಾನು ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಸ್ಪೀಕರ್ ಮಹಿಂದಾ ಯಾಪ ಅಬೇವರ್ದನಾ ಅವರಿಗೆ ತಿಳಿಸಿದ್ದಾರೆ. ಇದೇ ವೇಳೆ, ಅಧ್ಯಕ್ಷರ ಮನೆಗೂ ಪ್ರತಿಭಟನಾಕಾರರು ನುಗ್ಗಿದ್ದಾರೆ. ಇತ್ತ ಗೋಟಾಬಯ ರಾಜಪಕ್ಸೆ ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ.
ಈಗ ರಾಜಪಕ್ಸೆ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಬಳಿಕ ಸ್ಪೀಕರ್ ಅಬೇವರ್ದನಾ ಅವರೇ ಹಂಗಾಮಿ ಅಧ್ಯಕ್ಷರಾಗಲಿದ್ದಾರೆ. ಶ್ರೀಲಂಕಾದ ಎಲ್ಲಾ ಸಂಸದರೂ ಸೇರಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.
ಇದೇ ವೇಳೆ, ಶ್ರೀಲಂಕಾದಲ್ಲಿ ಮಾತ್ರ ಅಲ್ಲ ವಿಶ್ವದೆಲ್ಲೆಡೆ ಅನೇಕ ದೇಶಗಳ ಮುಖ್ಯಸ್ಥರು ವಿವಿಧ ಕಾರಣಗಳಿಗೆ ರಾಜೀನಾಮೆ ನೀಡಿದ ನಿದರ್ಶನಗಳಿವೆ. ಕಳೆದ ಮೂರು ವರ್ಷಗಳಲ್ಲೇ 15ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಧಾನಿ ಅಥವಾ ಅಧ್ಯಕ್ಷರು ಅಧಿಕಾರಾವಧಿಗೆ ಮುನ್ನವೇ ಅಧಿಕಾರದಿಂದ ಕೆಳಗಿಳಿಯುವ ಪರಿಸ್ಥಿತಿ ಬಂದಿದೆ.

2019ರಲ್ಲಿ ಕೊಡಲಾದ ರಾಜೀನಾಮೆಗಳು
ಪಪುವಾ ನ್ಯೂಗಿನಿಯಾ: ಎರಡು ಪೌರತ್ವ ಹೊಂದಿರುವ ವಿವಾದಕ್ಕೆ ಸಿಲುಕಿ ಪ್ರಧಾನಿ ಪೀಟರ್ ಓ ನೀಲ್ ರಾಜೀನಾಮೆ ನೀಡಬೇಕಾಯಿತು. ಅವರ ನೇತೃತ್ವದಲ್ಲಿ ಚಾಲನೆಯಲ್ಲಿದ್ದ ಮೈತ್ರಿ ಸರಕಾರದಿಂದ ಸಾಕಷ್ಟು ಸಂಸದರು ಪಕ್ಷಾಂತರ ಮಾಡಿದ್ದರಿಂದಲೂ ಅವರು ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು.
ಬ್ರಿಟನ್: ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ತೆರೆಸಾ ಮೇ ರಾಜೀನಾಮೆ ನೀಡಬೇಕಾಯಿತು. ಅವರ ಸ್ಥಾನಕ್ಕೆ ಬೋರಿಸ್ ಜಾನ್ಸನ್ ಬಂದರು. ಈಗ ಎರಡು ವರ್ಷಗಳ ಬಳಿಕ ಅವರೂ ರಾಜೀನಾಮೆ ಘೋಷಿಸಿದ್ದಾರೆ.
ಪ್ಯೂರ್ಟೋ ರಿಕೋ: ಕೆರಿಬಿಯನ್ ನಾಡಿನಲ್ಲಿರುವ ಈ ದೇಶದ ಮುಖ್ಯಸ್ಥ ಹಾಗು ಗವರ್ನರ್ ರಿಕಾರ್ಡೋ ಆಂಟೋನಿಯೋ ರೋಸೆಲೊ ನೆವಾರೆಸ್ ರಾಜೀನಾಮೆ ನೀಡಿದರು. ಟೆಲಿಗ್ರಾಂಗೇಟ್ ಹಗರಣದಿಂದ ಅವರು ರಾಜೀನಾಮೆ ನೀಡಬೇಕಾಯಿತು. ಟೆಲಿಗ್ರಾಂ ಆ್ಯಪ್‌ನಲ್ಲಿ ಗವರ್ನರ್ ಹಾಗೂ ಅವರ ಸಂಪುಟ ಸಚಿವರ ಮಧ್ಯೆ ನಡೆದ ಚಾಟಿಂಗ್ ವಿವರ ಬಹಿರಂಗವಾಗಿತ್ತು.
ಬಹಳ ಅಸಭ್ಯ ಸಂದೇಶಗಳು ಅದರಲ್ಲಿದ್ದವು. ಜನಾಂಗೀಯ ದ್ವೇಷ, ಸಲಿಂಗಿದ್ವೇಷಭರಿತ ಸಂದೇಶಗಳಿದ್ದವು. ಈ ಹಗರಣದ ಜೊತೆಗೆ ಅವರ ಸರಕಾರದ ಪ್ರಮುಖ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದವು. ಹೀಗಾಗಿ ಗವರ್ನರ್ ರಾಜೀನಾಮೆ ನೀಡಿದರು. ಪ್ಯೂರ್ಟೋ ರಿಕೋ ದೇಶದ ಇತಿಹಾಸದಲ್ಲಿ ಅಲ್ಲಿನ ಗವರ್ನರ್ ರಾಜೀನಾಮೆ ನೀಡಿದ್ದು ಅದೇ ಮೊದಲು.
ಕೊಸೋವೋ: ಯೂರೋಪ್‌ನ ಈ ಪುಟ್ಟ ದೇಶದ ಪ್ರಧಾನಿ ರಮುಶ್ ಹರದಿನಾಜ್ ಯಾವುದೋ ಪ್ರಕರಣದ ಆರೋಪ ಹೊತ್ತು ರಾಜೀನಾಮೆ ಕೊಟ್ಟರು.
ಬೊಲಿವಿಯಾ: ಚುನಾವಣೆಯಲ್ಲಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷ ಇವೋ ಮೊರೇಲ್ಸ್ ರಾಜೀನಾಮೆ ನೀಡಿದರು.
ಇರಾಕ್: ದೇಶಾಧ್ಯಂತ ಪ್ರತಿಭಟನೆಗಳು ಭುಗಿಲೆದ್ದದ್ದರಿಂದ ಪ್ರಧಾನಿ ಅದಿಲ್ ಅಬ್ದುಲ್ ಮಹದಿ ರಾಜೀನಾಮೆ ನೀಡಿದರು.
ಫಿನ್‌ಲೆಂಡ್: ಮೈತ್ರಿಸರಕಾರದ ಭಾಗವಾಗಿದ್ದ ಒಂದು ಪಕ್ಷ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಆಂಟ್ಟಿ ರಿನ್ನೆ ರಾಜೀನಾಮೆ ನೀಡಿದರು.

2020ರಲ್ಲಿ ಕೊಡಲಾದ ರಾಜೀನಾಮೆಗಳು
ಮಲೇಷ್ಯಾ: ಪ್ರಧಾನಿ ಮಹತಿರ್ ಮೊಹಮದ್ ರಾಜೀನಾಮೆ
ಮಾರಿಷಸ್: ವ್ಯಾಪಕ ಭ್ರಷಾಚಾರ ಹಗರಣಗಳ ಹಿನ್ನೆಲೆಯಲ್ಲಿ ಉಪಪ್ರಧಾನಿ ಹಾಗೂ ಅಲ್ಲಿನ ಇಂಧನ ಸಚಿವರಾಗಿದ್ದ ಇವಾನ್ ಕಾಲನ್‌ಡಾವೆಲೋ ರಾಜೀನಾಮೆ ನೀಡಿದರು.
ಲೆಬನಾನ್: ಬೇರುಟ್ ನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆ ಇಡೀ ದೇಶದ ಜನರನ್ನು ರೊಚ್ಚಿಗೆಬ್ಬಿಸಿತ್ತು. ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ಹಸನ್ ಡಯಾಬ್ ರಾಜೀನಾಮೆ ನೀಡಬೇಕಾಯಿತು.
ಕೊಸೊವೋ: ಕೋರ್ಟ್‌ನ ವಿಚಾರಣೆ ಎದುರಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಶಿಮ್ ತಾಚಿ ರಾಜೀನಾಮೆ ನೀಡಿದರು. ವರ್ಷದ ಹಿಂದೆ ಪ್ರಧಾನಿಯೂ ಪದತ್ಯಾಗ ಮಾಡಿದ್ದರು.
ಜಪಾನ್: ಅನಾರೋಗ್ಯದ ಕಾರಣದಿಂದ ಶಿಂಜೊ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರು ಪದತ್ಯಾಗ ಮಾಡಬೇಕಾಯಿತು ಎಂಬ ಕಾರಣವೂ ಶಂಕೆಯಲ್ಲಿದೆ. ಅಬೆ ಅವರನ್ನು 2022ರಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

2021ರಲ್ಲಿ ಕೊಡಲಾದ ರಾಜೀನಾಮೆಗಳು
ಎಸ್ಟೋನಿಯಾ: ಆಡಳಿತಾರೂಢ ಪಕ್ಷದಿಂದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ಜೂರಿ ರಾಟಾಸ್ ರಾಜೀನಾಮೆ ನೀಡಿದರು.
ನೆದರ್‌ಲೆಂಡ್ಸ್: ಮಕ್ಕಳ ಆರೋಗ್ಯ ಯೋಜನೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಪ್ರಧಾನಿ ಮಾರ್ಕ್ ರುಟ್ಟೆ ಹಾಗೂ ಇಡೀ ಸಂಪುಟ ರಾಜೀನಾಮೆ ಕೊಟ್ಟಿತು.
ಇಟಲಿ: ರಾಜಕೀಯ ಬಿಕ್ಕಟ್ಟಿಗೆ ಗಿಸೆಪ್ಪೆ ಕಾಂಟೆ ಪ್ರಧಾನಿ ಪಟ್ಟ ಕಳೆದುಕೊಳ್ಳಬೇಕಾಯಿತು.
ಜಪಾನ್: ಯೋಶಿಹಿಡೆ ಸುಗಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ

2022ರಲ್ಲಿ ಕೊಡಲಾದ ರಾಜೀನಾಮೆಗಳು
ಕಜಕಿಸ್ತಾನ್: ಇಂಧನ ಬೆಲೆ ಏರಿಕೆ ವಿರುದ್ಧ ಜನರ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಧಾನಿ ಅಸ್ಕರ್ ಮಾಮಿನ್ ಮತ್ತವರ ಇಡೀ ಸಂಪುಟವೇ ಪದತ್ಯಾಗ ಮಾಡಿತು.
ಪಾಕಿಸ್ತಾನ: ಅವಿಶ್ವಾಸ ನಿರ್ಣಯದಲ್ಲಿ ಸೋತು ಇಮ್ರಾನ್ ಖಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಶ್ರೀಲಂಕಾ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ದಂಗೆ ಎದ್ದ ಪರಿಣಾಮ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಬೇಕಾಯಿತು. ಈಗ ಅಧ್ಯಕ್ಷ ಗೋಟಾಬಾಯ ರಾಜಪಕ್ಸ ಕೂಡ ರಾಜೀನಾಮೆ ನೀಡುವುದು ಸನ್ನಿಹಿತವಾಗಿದೆ.
ಬ್ರಿಟನ್: ವಿವಿಧ ಹಗರಣಗಳ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ
ಬ್ರಿಟನ್ ದೇಶದಲ್ಲಿ ಸರಕಾರದ ಬಹುತೇಕ ಸಚಿವರು ರಾಜೀನಾಮೆ ನೀಡಿದ್ದಾರೆ. ಪಾರ್ಟಿಗೇಟ್ ಹಗರಣದಿಂದ ಹಿಡಿದು ಲೈಂಗಿಕ ಕಿರುಕುಳ, ಹಲ್ಲೆ ಇತ್ಯಾದಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಧಾನಿ ಮೇಲೆ ಅವಿಶ್ವಾಸ ತೋರಿಸಿಯೇ ೪೦ಕ್ಕೂ ಹೆಚ್ಚು ಸಚಿವರು, ಕಿರಿಯ ಸಚಿವರು ಸರಕಾರ ತೊರೆದಿದ್ದಾರೆ. ಅಂತಿಮವಾಗಿ ಈಗ ಬೋರಿಸ್ ಜಾನ್ಸನ್ ಕೂಡ ಪ್ರಧಾನಿ ಪಟ್ಟ ಬಿಟ್ಟುಕೊಟ್ಟಿದ್ದಾರೆ.
ಮೇಲೆ ಇರುವ ರಾಜೀನಾಮೆಗಳು ಕೇವಲ ಆ ದೇಶಗಳ ಮುಖ್ಯಸ್ಥರು ರಾಜೀನಾಮೆ ನೀಡಿರುವ ವಿವರ ಇದೆ. ಸಚಿವರುಗಳೂ ರಾಜೀನಾಮೆ ಕೊಟ್ಟಿರುವುದುಂಟು. ಬ್ರಿಟನ್‌ನಂತೆ ಮಾರಿಷಸ್‌ನಲ್ಲೂ ಅನೇಕ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications