ಪಾರ್ಕಲಾಮ್ ಟೆಕ್ನಿಕ್ಕಿಗೆ ಬೇಸತ್ತು ಹೋಗಿರುವ ಕಾಂಗ್ರೆಸ್ ಹಿರಿಯರು!
ವಿಧಾನಮಂಡಲ ಅಧಿವೇಶನ ಮುಗಿದ ನಂತರ ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡುವ ಸಮನ್ವಯ ಸಮಿತಿಯ ನಿರ್ಧಾರ ಪಾರ್ಕಲಾಮ್ ಟೆಕ್ನಿಕ್ಕಾ? ಎಂಬ ಅನುಮಾನ ಕಾಂಗ್ರೆಸ್ ಪಾಳೆಯದಲ್ಲಿ ಕಾಣಿಸಿಕೊಂಡಿದೆ.
ಮಂತ್ರಿಗಿರಿಗಾಗಿ ಕಸರತ್ತು ನಡೆಸುತ್ತಿರುವವರ ಪೈಕಿ ಕೆಲವರಿಗೆ ಈ ಪಾರ್ಕಲಾಮ್ ಟೆಕ್ನಿಕ್ಕಿನ ಬಗ್ಗೆ ಅಷ್ಟು ಗೊತ್ತಿಲ್ಲದಿದ್ದರೂ ಹಲ ನಾಯಕರಿಗೆ ಈ ಟೆಕ್ನಿಕ್ಕು ಏನೆಂದು ಗೊತ್ತು. ಮತ್ತು ಈ ಟೆಕ್ನಿಕ್ಕು ಎಷ್ಟು ಯಶಸ್ವಿಯಾಗಿ ತಮ್ಮನ್ನು ಭ್ರಮೆಯಲ್ಲಿಡುತ್ತದೆ ಎಂಬುದೂ ಗೊತ್ತು.
ಅಂದ ಹಾಗೆ ಈ ಪಾರ್ಕಲಾಮ್ ಟೆಕ್ನಿಕ್ಕಿನ ಪಿತಾಮಹ ತಮಿಳ್ನಾಡಿನ ಹಿರಿಯ ನಾಯಕ ಕಾಮರಾಜ ನಾಡಾರ್. ತಮಿಳ್ನಾಡಿನ ರಾಜಕಾರಣದಲ್ಲಿ ಮಾತ್ರವಲ್ಲ, ಭಾರತೀಯ ರಾಜಕಾರಣದ ಉತ್ತುಂಗಕ್ಕೂ ತಲುಪಿದ್ದ ಕಾಮರಾಜ್ ನಾಡಾರ್ ಈ ದೇಶದ ಪ್ರಧಾನಿಯಾಗುವ ಅವಕಾಶ ತಾನೇ ತಾನಾಗಿ ದಕ್ಕಿತ್ತು.
ಆದರೆ ಕಾಮರಾಜ ನಾಡಾರ್ ಪ್ರಧಾನಿ ಹುದ್ದೆಯ ಮೇಲೆ ಕೂರಲು ಬಯಸಲಿಲ್ಲ. ಬೇಸಿಕಲಿ, ತಮಗೆ ಬಹುಭಾಷಾ ಪ್ರಾವಿಣ್ಯತೆ ಇಲ್ಲದಿರುವುದರಿಂದ ಬಹುತ್ವದ ಭಾರತವನ್ನು ಮುನ್ನಡೆಸುವ ಸಾಹಸಕ್ಕೆ ಕೈ ಹಾಕಬಾರದು ಎಂಬುದು ಅವರ ನಿಲುವಾಗಿತ್ತು.
ಆದರೆ ಭಾಷೆಯನ್ನೂ ಮೀರಿ ಕಾಮರಾಜ್ ನಾಡಾರ್ ಅಪಾರ ಜ್ಞಾನವಿದ್ದ ನಾಯಕ. ಅವರಿಗೆ ಬಡವರ ಕಷ್ಟ ಗೊತ್ತಿತ್ತು. ಹಾಗೆಯೇ ಅದರ ನಿವಾರಣೆಗೆ ಯಾವ್ಯಾವ ಪ್ರಯತ್ನಗಳನ್ನು ಮಾಡಬೇಕು ಎಂಬುದು ಗೊತ್ತಿತ್ತು. ಆ ಮೂಲಕ ಬಡ ಸಮುದಾಯವೇ ಹೆಚ್ಚಿದ್ದ ಭಾರತವನ್ನು ಮುನ್ನಡೆಸುವ ಸಾಮರ್ಥ್ಯವಿತ್ತು.
ಆದರೆ ಒಂದು ಹಂತದಲ್ಲಿ ಪ್ರಧಾನಿ ಪಟ್ಟ ತಮ್ಮ ಸನಿಹ ಸುಳಿದು ಹೋದಾಗ ಕಾಮರಾಜ ನಾಡಾರ್ ಹಿಂದೆ ಸರಿದು ಬಿಟ್ಟರು. ಹೀಗಾಗಿ ಬಹುತ್ವದ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ದಕ್ಷಿಣ ಭಾರತದ ನಾಯಕರೊಬ್ಬರು ತಾವೇ ತಾವಾಗಿ ಫೀಲ್ಡಿನಿಂದ ಔಟ್ ಆದಂತಾಯಿತು.

ಪಾರ್ಕಲಾಮ್ ಟೆಕ್ನಿಕ್ಕಿನ ಪಿತಾಮಹ (ಚಿತ್ರಕೃಪೆ: wikipedia.org)
ಸದರಿ ಕಾಮರಾಜ ನಾಡಾರ್ (15 ಜುಲೈ 1903 - 2 ಅಕ್ಟೋಬರ್ 1975) ಅವರೇ ಪಾರ್ಕಲಾಮ್ ಟೆಕ್ನಿಕ್ಕಿನ ಪಿತಾಮಹ. ಪಾರ್ಕಲಾಮ್ ಎಂದರೆ ನೋಡೋಣ ಎಂದರ್ಥ. ಅದೆಷ್ಟೇ ಗಂಭೀರ ವಿಷಯಗಳಿರಲಿ, ತಮ್ಮೆದುರು ಬಂದಾಗ ಕಾಮರಾಜ ನಾಡಾರ್ ಉಚ್ಚರಿಸುತ್ತಿದ್ದ ಮೊದಲ ಪದವೇ ಪಾರ್ಕಲಾಮ್.
ಸಮಯಕ್ಕೆ ಎಲ್ಲವನ್ನೂ ಬಗೆಹರಿಸುವ ಶಕ್ತಿ ಇದೆ. ಹೀಗಾಗಿ ಯಾವುದಕ್ಕೂ ತರಾತುರಿ ಮಾಡುವುದು ಬೇಡ. ಹಾಗೆ ಮಾಡಿದರೆ ಕ್ರಿಯೆಗೆ ಪ್ರತಿಕ್ರಿಯೆ ಕೊಟ್ಟಂತಾಗುತ್ತದೆ. ಮತ್ತು ಹಲವು ಆತಂಕದ ತರಂಗಗಳನ್ನು ಎಬ್ಬಿಸುತ್ತದೆ. ಹಾಗಾಗಲು ಅವಕಾಶ ನೀಡಬಾರದು ಎಂಬುದು ಪಾರ್ಕಲಾಮ್ ಟೆಕ್ನಿಕ್ಕಿನ ಸಾರಾಂಶ.
ಕಾಮರಾಜ ನಾಡಾರ್ ಅವರ ಈ ಪಾರ್ಕಲಾಮ್ ಟೆಕ್ನಿಕ್ಕನ್ನು ಮುಂದೆ ಅತ್ಯಂತ ಸಮರ್ಥವಾಗಿ ಬಳಸಿಕೊಂಡವರು 1991ರಲ್ಲಿ ದೇಶದ ಪ್ರಧಾನಿಯಾಗಿದ್ದ ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅರ್ಥಾತ್ ಪಿವಿ ನರಸಿಂಹರಾವ್ (28 ಜೂನ್ 1921 - 23 ಡಿಸೆಂಬರ್ 2004).

ಈ ಟೆಕ್ನಿಕ್ಕನ್ನು ಸಮರ್ಥವಾಗಿ ಬಳಸಿದವರು ಪಿವಿ
ಕೇಂದ್ರ ಸರ್ಕಾರವನ್ನು ನಡೆಸಲು ಒಂದು ಶಕ್ತಿಗೆ ಬೇಕಾದ ಸಂಸದರ ಸಂಖ್ಯೆ 273. ಆದರೆ ನರಸಿಂಹರಾಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತದ ಸರ್ಕಾರ. ಅರ್ಥಾತ್, ಅದಕ್ಕೆ 273 ರಷ್ಟು ಸಂಖ್ಯಾ ಬಲವಿರಲಿಲ್ಲ. ಹಾಗಂತ ಯಾರೇ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರೂ ಅದು ಯಶಸ್ವಿಯಾಗಲಿಲ್ಲ. ಹೀಗೆ ಅಲ್ಪಮತದ ಸರ್ಕಾರವೊಂದನ್ನು ಯಶಸ್ವಿಯಾಗಿ ನಡೆಸಬಹುದು ಎಂದು ತೋರಿಸಿಕೊಟ್ಟ ಮೊದಲ ಪ್ರಧಾನಿ ಪಿ.ವಿ.ನರಸಿಂಹರಾವ್.
ಅವರಿಗೂ ಪಾರ್ಕಲಾಮ್ ಟೆಕ್ನಿಕ್ಕು ಕರಗತವಾಗಿತ್ತು. ತಮ್ಮೆದುರು ಯಾರೇನೇ ಸಮಸ್ಯೆಗಳನ್ನು ಹೊತ್ತುಕೊಂಡು ಬರಲಿ, ಅವರು ಈ ಪಾರ್ಕಲಾಮ್ ಟೆಕ್ನಿಕ್ಕನ್ನು ಬಳಸುತ್ತಿದ್ದರು. ಸಾರ್, ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಬಂಗಾರಪ್ಪ ಬಹಳ ರಫ್ ಅಂಡ್ ಟಫ್ ಸಾರ್, ನಾವೇನೇ ಹೇಳಿದರೂ ಕೇರ್ ಮಾಡುವುದಿಲ್ಲ. ಅವರನ್ನು ಹೇಗಾದರೂ ಮಾಡಿ ಕಂಟ್ರೋಲಿಗೆ ತೆಗೆದುಕೊಳ್ಳಬೇಕು ಎಂದು ಹಲ ನಾಯಕರು ಹೇಳಿದರೆ ನರಸಿಂಹರಾವ್ ನೋಡೋಣ ಎಂದು ಬಿಡುತ್ತಿದ್ದರು.

ಪಿವಿ ನರಸಿಂಹರಾಯರ ಪಾರ್ಕಲಾಮ್ ಟೆಕ್ನಿಕ್ಕು
ಹೀಗೆ ಎಷ್ಟೇ ಹೇಳಿದರೂ ಪಿವಿ ನರಸಿಂಹರಾಯರು ಪಾರ್ಕಲಾಮ್ ಟೆಕ್ನಿಕ್ಕನ್ನು ಬಳಸುತ್ತಿದ್ದುದರಿಂದ ಬಂಗಾರಪ್ಪ ಅವರಿಗೂ, ಮುಂದಿನ ಬೆಳವಣಿಗೆಗಳು ಯಾವ ದಿಕ್ಕಿನಲ್ಲಿ ಸಾಗಲಿವೆ? ಎಂಬ ಮಾಹಿತಿ ಸಿಗುತ್ತಿರಲಿಲ್ಲ.
ಹೀಗಾಗಿ ಅವರು ಕೂಡಾ, ತಮ್ಮನ್ನು ಪದಚ್ಯುತಗೊಳಿಸಲು ನರಸಿಂಹರಾವ್ ತಪ್ಪಿಯೂ ಮುಂದಾಗುವುದಿಲ್ಲ ಎಂದುಕೊಂಡಿದ್ದರು. ಆದರೆ ಬಂಗಾರಪ್ಪ ಅವರ ವಿರೋಧಿಗಳು ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಅವರನ್ನು ಸಿಲುಕಿಸಿದರಲ್ಲ? ಆಗ ಇದರ ಮಾಹಿತಿ ನೀಡಿದ ಕೂಡಲೇ ಪಾರ್ಕಲಾಮ್ ಟೆಕ್ನಿಕ್ಕಿನ ಆಧಾರದ ಮೇಲೆ ನಡೆಯುತ್ತಿದ್ದ ನರಸಿಂಹರಾವ್ ರಪ್ಪಂತ ಹೆಜ್ಜೆ ಬದಲಿಸಿದರು.

ಪಿವಿ ಮಾತಿಗೆ ರೋಷಾವಿಷ್ಟರಾದ ಬಂಗಾರಪ್ಪ
ತಕ್ಷಣವೇ ಬಂಗಾರಪ್ಪ ಅವರನ್ನು ದಿಲ್ಲಿಗೆ ಕರೆಸಿ, ತಕ್ಷಣವೇ ಬೆಂಗಳೂರಿಗೆ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಿ. ಒಂದು ವೇಳೆ ನೀವು ರಾಜೀನಾಮೆ ಕೊಡದಿದ್ದರೆ ನಿಮ್ಮನ್ನು ಕೆಳಗಿಳಿಸುವುದು ಹೇಗೆ? ಅಂತ ನನಗೆ ಗೊತ್ತು ಎಂದರು.
ನರಸಿಂಹರಾವ್ ಅವರ ಮಾತು ಕೇಳಿ ಬಂಗಾರಪ್ಪ ರೋಷಾವಿಷ್ಟರಾದರು. ಅಷ್ಟೇ ಅಲ್ಲ, ಮಿಸ್ಟರ್ ಪ್ರೈಮ್ ಮಿನಿಸ್ಟರ್, ಇದರ ಪರಿಣಾಮವೇನಾಗುತ್ತದೆ? ಎಂಬುದು ನಿಮಗೆ ಗೊತ್ತಿದೆಯಾ? ಕಾಂಗ್ರೆಸ್ ನಾಶವಾಗುತ್ತದೆ ಎಂದರು.
ಬಂಗಾರಪ್ಪ ಅವರ ಮಾತಿಗೆ ಅಚ್ಚರಿಯ ಮುಖಭಾವ ತೋರಿಸಿದ ನರಸಿಂಹರಾವ್, ಈಸ್ ಇಟ್? ಮುಂದಿನ ಟರ್ಮಿನಲ್ಲಿ ಕಾಂಗ್ರೆಸ್ ಸೋಲಬಹುದು? ಅದರ ನೆಕ್ಸ್ಟ್ ಟರ್ಮ್? ಅಂತ ಪ್ರಶ್ನಿಸಿದರು. ಬಂಗಾರಪ್ಪ ಮರು ಮಾತನಾಡಲಿಲ್ಲ.

ಎರಡು ಟರ್ಮು ಕಳೆದುಕೊಂಡರೂ ಸರಿ, ತೊಲಗಿ
ಆಗ ಪಿ.ವಿ. ನರಸಿಂಹರಾಯರು ಹೇಳಿದ್ದು ಒಂದೇ ಮಾತು. ನಿಮ್ಮಿಂದಾಗಿ ಒಂದಲ್ಲ, ಎರಡು ಟರ್ಮು ಪಕ್ಷ ಅಧಿಕಾರ ಕಳೆದುಕೊಂಡರೂ ಸರಿ, ನೀವು ಕೆಳಗಿಳಿಯಲೇಬೇಕು ಎಂದು ನಾನು ಬಯಸಿದ್ದೇನೆ. ಆ ಬಯಕೆ ಈಡೇರಬೇಕು ಎಂದವರೇ ತಾವಿದ್ದ ಜಾಗದಿಂದ ಹೊರಟು ಬಿಟ್ಟರು. ಸಂದರ್ಭ ಬಂದರೆ ಪಾರ್ಕಲಾಮ್ ಟೆಕ್ನಿಕ್ಕು ಎಷ್ಟು ಭೀಕರವಾಗಿ ಬಳಕೆಯಾಗಬಹುದು ಎಂಬುದು ಕರ್ನಾಟಕದ ರಾಜಕಾರಣಕ್ಕೆ ಗೊತ್ತಾಗಿದ್ದೇ ಅವತ್ತು.
ಮುಂದೆ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿತು. ಬಂಗಾರಪ್ಪ ಅವರು ಕೈ ಪಾಳೆಯಕ್ಕೆ ನಿರ್ಣಾಯಕ ಹೊಡೆತ ಕೊಟ್ಟಿದ್ದರು. ಆಗಲೂ ತಮ್ಮ ಬಳಿ ಈ ವಿಷಯವನ್ನು ಹೇಳಿಕೊಂಡವರ ಬಳಿ ನರಸಿಂಹರಾಯರು ಹೇಳಿದ್ದು ಒಂದೇ ಮಾತು : ನೋಡೋಣ.
ಮುಂದೆ 1999ರಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬಂತು, ಆ ಮಾತು ಬೇರೆ. ಇದನ್ನೆಲ್ಲ ಯಾಕೆ ನೆನಪಿಸಿಕೊಳ್ಳಬೇಕು ಎಂದರೆ ಪಾರ್ಕಲಾಮ್ ಟೆಕ್ನಿಕ್ಕು ಎಂಬುದರ ಅರ್ಥ, ಸನ್ನಿವೇಶವನ್ನು ತಪ್ಪಿಸಿಕೊಳ್ಳವುದು ಎಂದಷ್ಟೇ ಅಲ್ಲ, ಸೂಕ್ತ ಕಾಲ ಬರುವವರೆಗೆ ಕಾಯುವುದು ಎಂದರ್ಥ.

ಭಿನ್ನಮತದ ಜ್ವಾಲೆಯಲ್ಲಿ ಬೇಯುತ್ತಿರುವ ಕಾಂಗ್ರೆಸ್
ಈಗ ಕರ್ನಾಟಕದ ರಾಜಕೀಯಕ್ಕೇ ಬರೋಣ. ಮೊನ್ನೆ ಮೊನ್ನೆಯವರೆಗೂ ಭಿನ್ನಮತದ ಜ್ವಾಲೆ ಕಾಂಗ್ರೆಸ್ ಪಕ್ಷವನ್ನು ಸುಡುತ್ತಿತ್ತು. ಜಾರಕಿಹೊಳಿ ಗ್ಯಾಂಗಿನಿಂದ ಹಿಡಿದು ಹಲವು ಗ್ಯಾಂಗುಗಳು ತಮ್ಮದೇ ಲೆವೆಲ್ಲಿನಲ್ಲಿ ವಾರ್ ಮಾಡುತ್ತಾ ಕೈ ಪಾಳೆಯದ ನಾಯಕರನ್ನು ಹೆದರಿಸುತ್ತಿದ್ದವು.
ಪರಿಣಾಮವಾಗಿ, ವಿಧಾನಮಂಡಲ ಅಧಿವೇಶನ ಅರಂಭವಾಗುವುದರ ಒಳಗಾಗಿ ಸರ್ಕಾರ ಬಿದ್ದು ಹೋದರೂ ಅಚ್ಚರಿಯಿಲ್ಲ ಎಂಬ ಬಾವನೆ ಮೂಡತೊಡಗಿತ್ತು. ಆದರೆ ಇದ್ದಕ್ಕಿದ್ದಂತೆ ಸಮನ್ವಯ ಸಮಿತಿ ಸಭೆ ಸೇರಿ ಡಿಸೆಂಬರ್ 22ರಂದು ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎನ್ನುವ ಮೂಲಕ ಭಿನ್ನಮತದ ಜ್ವಾಲೆಯನ್ನು ತಕ್ಷಣಕ್ಕೆ ಶಮನಗೊಳಿಸಿದೆ.
ಆದರೆ ಇದು ಕೂಡಾ ಪಾರ್ಕಲಾಮ್ ಟೆಕ್ನಿಕ್ಕಿನ ಭಾಗವಾ? ಅನ್ನುವುದು ಕಾಂಗ್ರೆಸ್ ಪಕ್ಷದ ಹಲ ನಾಯಕರ ಅನುಮಾನ. ಅದರಲ್ಲೂ ಈ ಪಾರ್ಕಲಾಮ್ ಟೆಕ್ನಿಕ್ಕನ್ನು ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ, ರೋಷನ್ ಬೇಗ್, ಎಂಬಿ ಪಾಟೀಲ ತರದ ನಾಯಕರು ನೋಡುತ್ತಲೇ ಬಂದಿದ್ದಾರೆ.

ಇರುವುದು ಆರು, ಬಯಸುತ್ತಿರುವವರು ಇಪ್ಪತ್ತಾರು
ಈಗ ಲೆಕ್ಕ ಹಾಕಲು ಹೋದರೂ ಕೈ ಪಾಳೆಯದಲ್ಲಿ ಮಂತ್ರಿಗಿರಿ ಪಡೆಯಬೇಕು ಎಂದು ಬಯಸುತ್ತಿರುವವರ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚಿದೆ. ಆದರೆ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಮಂತ್ರಿಗಳಾಗುವ ಅವಕಾಶ ಇರುವುದು ಆರು ಜನರಿಗೆ ಮಾತ್ರ.
ಹೀಗಾಗಿ ಅದೇನೇ ಕಸರತ್ತು ಮಾಡಿದರೂ ಮಂತ್ರಿ ಮಂಡಲ ವಿಸ್ತರಣೆಗೆ ಕೈ ಹಾಕಿದರೆ ತಕ್ಷಣವೇ ಕೈ ಪಾಳೆಯ ಮುಟ್ಟಿ ನೋಡಿಕೊಳ್ಳುವಂತಹ ಹೊಡೆತ ಬೀಳಲು ಶುರುವಾಗುತ್ತದೆ.
ಹೀಗಾಗಿ ಹಲವರಿಗೆ ಮಂತ್ರಿ ಮಂಡಲ ವಿಸ್ತರಣೆಯಾಗುತ್ತದೆ ಎಂಬ ನಿರೀಕ್ಷೆ ಇದೆಯಾದರೂ ಪಾರ್ಕಲಾಮ್ ಟೆಕ್ನಿಕ್ಕಿನ ಬಗ್ಗೆ ಗೊತ್ತಿರುವವರಿಗೆ ಅನುಮಾನ ಉಳಿದೇ ಇದೆ. ಮತ್ತದು ಸಹಜ ಕೂಡಾ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications