ಲೋಕಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್- ಕಾಂಗ್ರೆಸ್ ಮತಕ್ಕೆ ಬಿಜೆಪಿ ಗುನ್ನ!
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆಯೇ ಪೈಪೋಟಿ ಕಾಣುತ್ತಿತ್ತು. ಅಂಥ ಕಡೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೊಡ್ಡ ಮಟ್ಟದ ಸಾಧನೆ ಮಾಡಿದೆ. ಜೆಡಿಎಸ್- ಕಾಂಗ್ರೆಸ್ ಎರಡೂ ಸೇರಿ ಪಡೆದ ಮತಗಳಿಗಿಂತ 8.5 ಲಕ್ಷ ಹೆಚ್ಚು ಮತಗಳನ್ನು ಪಡೆದಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯು 45,52,133 ಮತಗಳನ್ನು ಪಡೆದಿದ್ದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಮತ ಬುಟ್ಟಿಗೆ 78,72,000 ಮತಗಳು ಬಂದಿದ್ದವು. ಅದೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ (ಸುಮಲತಾ ಅವರನ್ನು ಬೆಂಬಲಿಸಿದ್ದರಿಂದ ಅದನ್ನೂ ಸೇರಿಸಿಕೊಂಡು) 73,85,627 ಮತಗಳು ಬಂದಿದ್ದರೆ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟಕ್ಕೆ 65,12,333 ಮತಗಳು ಬಂದಿವೆ.
ಒಟ್ಟಾರೆಯಾಗಿ ಮತ ಪ್ರಮಾಣ ಹೆಚ್ಚಿಸಿಕೊಂಡಿರುವ ಲೆಕ್ಕಾಚಾರದ ಬಗ್ಗೆ ಹೇಳುವುದಾದರೆ ಕರ್ನಾಟಕದಲ್ಲಿ ಹದಿನಾರು ಪರ್ಸೆಂಟ್ ಗೂ ಹೆಚ್ಚಿದೆ. ಪಶ್ಚಿಮ ಬಂಗಾಲದ ನಂತರ (ಶೇ ಅರವತ್ತೆರಡರಷ್ಟು) ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ತನ್ನ ಮತ ಗಳಿಕೆಯನ್ನು ಏರಿಕೆ ಮಾಡಿಕೊಂಡಿದೆ.

ತಳ ಮಟ್ಟದಿಂದ ಬಿಜೆಪಿ ಸಂಘಟನೆ ಬಲಗೊಂಡಿದೆ
2014ರಲ್ಲಿ ನಡೆದ ಚುನಾವಣೆಯಲ್ಲಿ 45.5 ಲಕ್ಷ ಮತಗಳು ಬಿಜೆಪಿಗೆ ಬಿದ್ದಿದ್ದವು. ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಕ್ರಮವಾಗಿ 52 ಲಕ್ಷ, 26.6 ಲಕ್ಷ ಸೇರಿ ಒಟ್ಟು 78.6 ಲಕ್ಷ ಮತಗಳನ್ನು ಪಡೆದಿದ್ದವು. ಮೋದಿ ಅವರ ಸಾಧನೆಯನ್ನು ಮನೆ ಮನೆಗೆ ತಲುಪಿಸಿದ್ದೇವೆ. ಜತೆಗೆ ನಮ್ಮ ಸಂಘಟನೆ ಬಲಗೊಳಿಸಿ, ಉತ್ತಮ ಕೆಲಸ ಮಾಡಿದ್ದೇವೆ ಎಂದು ಬಿಜೆಪಿಯ ನಾಯಕರೊಬ್ಬರು ಅಭಿಪ್ರಾಯ ಪಡುತ್ತಾರೆ.

ದೇವೇಗೌಡರ ಕುಟುಂಬಕ್ಕೆ ದೊಡ್ಡ ಹೊಡೆತ
ಆದರೆ, ಇದೇ ಫಲಿತಾಂಶವೇ ಭವಿಷ್ಯದಲ್ಲೂ ಮುಂದುವರಿಯುತ್ತದೆ ಎಂದೇನಿಲ್ಲ. ಏಕೆಂದರೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಧ್ಯೆ ಈ ಬಾರಿ ಪರಸ್ಪರ ನಂಬಿಕೆ ಕೊರತೆ ಇತ್ತು. ಅದೇ ಅಂಶ ಈಗ ಆಯಾ ಪಕ್ಷದ ಭವಿಷ್ಯದ ಬಗ್ಗೆಯೂ ಚಿಂತೆ ತಂದಿಟ್ಟಿದೆ. ಮುಖ್ಯವಾಗಿ ಯಾವ ಜಿಲ್ಲೆಯು ತಮ್ಮ ಭದ್ರಕೋಟೆ ಎಂದು ದೇವೇಗೌಡರ ಕುಟುಂಬ ಭಾವಿಸಿತ್ತೋ ಅಲ್ಲೇ ದೊಡ್ಡ ಹೊಡೆತ ಬಿದ್ದಿದೆ. ಇನ್ನು ದೇವೇಗೌಡರು ಸೋತಿದ್ದಾರೆ.

ದಕ್ಷಿಣ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್
ಬಿಜೆಪಿಯ ಈ ಪ್ರಚಂಡ ಗೆಲುವು ಹೆಚ್ಚು ಚಿಂತೆ ತಂದಿರುವುದು ಕಾಂಗ್ರೆಸ್ ಗೆ. ಈಗಾಗಲೇ ಉತ್ತರ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಬಿಜೆಪಿಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಗೆ ದಕ್ಷಿಣ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುತ್ತಿರುವುದು ಚಿಂತೆಗೆ ಈಡಾಗುವಂತೆ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡರಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳಬಹುದು ಅಂದರೆ, ಒಕ್ಕಲಿಗ ಸಮುದಾಯದವರು ಜೆಡಿಎಸ್ ಅನ್ನೇ ಆರಿಸಿಕೊಳ್ಳುತ್ತಾರೆ. ತುಂಬ ಗಂಭೀರವಾದ ಪ್ರಯತ್ನ ಮಾಡದಿದ್ದರೆ, ಕೆಲಸ ಶುರು ಮಾಡದಿದ್ದರೆ ಕಾಂಗ್ರೆಸ್ ಗೆ ಕಷ್ಟವಿದೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಡುತ್ತಾರೆ.

ಇಪ್ಪತ್ತೈದು ಸ್ಥಾನದಲ್ಲಿ ಜಯ ಗಳಿಸಿರುವ ಬಿಜೆಪಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿದ್ದ ಕಾಂಗ್ರೆಸ್- ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಮಾತ್ರ ಜಯ ಗಳಿಸಿದೆ. ಉಳಿದ ಇಪ್ಪತ್ತೈದರಲ್ಲಿ ಬಿಜೆಪಿ ಹಾಗೂ ಮತ್ತೊಂದರಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಆ ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಸಮಾಧಾನಗೊಂಡಿರುವ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ದಟ್ಟವಾಗಿದ್ದು, ಆ ಅಸಮಾಧಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರದಿಂದ ನಾಯಕರು ಬಂದು, ಸಭೆಗಳನ್ನು ನಡೆಸಿದ್ದಾರೆ.












Click it and Unblock the Notifications