• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ 2019: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪರಿಚಯ

|
   Lok Sabha Election 2019 : ಚಿತ್ರದುರ್ಗ ಕ್ಷೇತ್ರದ ಪರಿಚಯ | Oneindia kannada

   ಇಲ್ಲಿ ರಣಬಿಸಿಲು. ಬರಿಗಾಲಿಟ್ಟರಂತೂ ನಿಮಿಷದಲ್ಲಿ ಸುಟ್ಟೇ ಹೋಗುತ್ತದೆಯೇನೋ ಎಂಬಂತೆ ಸುಡುವ ನೆಲ. ಧಗೆಯಲ್ಲಿ ಬೇಯಿಸಿದರೂ ಇಲ್ಲಿನ ಸೌಂದರ್ಯಕ್ಕೇನೂ ಕೊರತೆಯಿಲ್ಲ. ಹಾಗೆಯೇ ರಾಜಕೀಯದ ಕಾವು ಕೂಡ ಆಗಾಗ ಜೋರಾಗಿರುತ್ತದೆ.

   'ಕೋಟೆ ನಾಡು' ಎಂದೇ ಪ್ರಸಿದ್ಧವಾದ ಚಿತ್ರದುರ್ಗದಲ್ಲಿ ರಾಜಕೀಯ ಚಟುವಟಿಕೆಗಳಿಗೂ 'ಕೋಟೆ'ಯಿದೆ. ಇಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಕಾಣದಿದ್ದರೂ, ರಾಜ್ಯ ರಾಜಕೀಯದಲ್ಲಿ ತನ್ನದೇ ಪ್ರಾಮುಖ್ಯ ಹೊಂದಿದೆ.

   ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ

   ವೇದಾವತಿ ನದಿ ತಟದಲ್ಲಿ ಚಾಚಿಕೊಂಡಿರುವ ಚಿತ್ರದುರ್ಗ, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಜಿಲ್ಲೆ. ರಾಮಾಯಣ ಮತ್ತು ಮಹಾಭಾರತದ ಪೌರಾಣಿಕ ಹಿನ್ನೆಲೆ ಕೂಡ ಇದೆ.

   ಒಂದು ಕಾಲದಲ್ಲಿ ದಾವಣಗೆರೆ ಕೂಡ ಚಿತ್ರದುರ್ಗ ಜಿಲ್ಲೆಯ ಭಾಗವಾಗಿತ್ತು. ನೆರೆಯ ತುಮಕೂರು ಜಿಲ್ಲೆಯ ಒಂದು ಭಾಗವೂ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ಶಿರಾ ಮತ್ತು ಪಾವಗಡ ಜಿಲ್ಲೆಗಳ ಜನರು ಚಿತ್ರದುರ್ಗದ ಲೋಕಸಭೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಾರೆ.

   ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ನಾಯಕರು ದುರ್ಗವನ್ನು 10ನೇ ಶತಮಾನದಿಂದ 18ನೇ ಶತಮಾನದವರೆಗೆ ಆಳಿದ್ದರು.

   ಚಿತ್ರದುರ್ಗದ ಕೋಟೆ ಮತ್ತು ಒನಕೆ ಓಬವ್ವನ ಸಾಹಸ ಇಡೀ ರಾಜ್ಯದೆಲ್ಲೆಡೆ ಜನಜನಿತ. ಸಿನಿಮಾಗಳಲ್ಲಿ, ಕಥೆ-ಕಾದಂಬರಿಗಳಲ್ಲಿ ಕೋಟೆ ಮತ್ತು ಅರಸರ ಆಡಳಿತ ಕಥಾವಸ್ತುಗಳಾಗಿವೆ. ಖ್ಯಾತ ಸಾಹಿತಿ ತ.ರಾ.ಸುಬ್ಬರಾವ್ ಅವರ ಕಾದಂಬರಿಗಳು ಚಿತ್ರದುರ್ಗದ ಇತಿಹಾಸದಲ್ಲಿ ಒಡಮೂಡಿದಂತಹವು.

   ದಾವಣಗೆರೆ ಲೋಕಸಭಾ ಕ್ಷೇತ್ರದ ಪರಿಚಯ

   ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಚಿತ್ರದುರ್ಗದಲ್ಲಿ 2011ರ ಜನಗಣತಿ ಪ್ರಕಾರ 16,60,378 ಜನಸಂಖ್ಯೆ ಇದೆ. ಒಂದು ಕಾಲದಲ್ಲಿ ಕೋಟೆನಾಡು ಕಾಂಗ್ರೆಸ್‌ನ ಭದ್ರ ಕೋಟೆಯೂ ಆಗಿತ್ತು. ಮೂರು ಬಾರಿ ಕ್ಷೇತ್ರವನ್ನು ಕಳೆದುಕೊಂಡರೂ, ಈಗ ಕೈ ಬಿಗಿ ಹಿಡಿತದಲ್ಲಿಯೇ ಇದೆ. ಆದರೆ, ಅಲ್ಲಿ ಪೈಪೋಟಿ ತೀವ್ರವಾಗಿದೆ. 11 ಚುನಾವಣೆಗಳಲ್ಲಿ ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

   ಜನತಾದಳದ ಅಭ್ಯರ್ಥಿಗಳು ಎರಡು ಬಾರಿ ಜಯಗಳಿಸಿದ್ದರೆ, 2009ರಲ್ಲಿ ಮೊದಲ ಬಾರಿಗೆ ಬಿಜೆಪಿ ಕೂಡ ಇಲ್ಲಿ ಗೆಲುವಿನ ನಗೆ ಬೀರಿತ್ತು. ಜನಾರ್ದನ ಸ್ವಾಮಿ ಕಾಂಗ್ರೆಸ್ ಪಾರುಪತ್ಯಕ್ಕೆ ಅಂಕುಶ ಹಾಕಿದ್ದರು. ಆದರೆ, ಕಾಂಗ್ರೆಸ್‌ನ ಎನ್. ಚಂದ್ರಪ್ಪ 2014ರ ಚುನಾವಣೆಯಲ್ಲಿ ಮತ್ತೆ ಅದನ್ನು 'ಕೈ' ತೆಕ್ಕೆಗೆ ಕ್ಷೇತ್ರವನ್ನು ಮರಳಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

   ಸಂಸತ್ ಕಲಾಪಗಳಲ್ಲಿ ಚಂದ್ರಪ್ಪ 335 ಪ್ರಶ್ನೆಗಳನ್ನು ಕೇಳಿದ್ದರು. ಸಂಸತ್ ಕಲಾಪಗಳ ಹಾಜರಾತಿಯಲ್ಲಿಯೂ ಅವರು ಮುಂದಿದ್ದಾರೆ. ಶೇ 86ರಷ್ಟು ಕಲಾಪಗಳಲ್ಲಿ ಅವರು ಭಾಗವಹಿಸಿದ್ದಾರೆ.

   ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

   ಚಿತ್ರದುರ್ಗ ಕ್ಷೇತ್ರದ ಸಂಸದರ ನಿಧಿಯಲ್ಲಿ ಇರುವ 25 ಕೋಟಿ ರೂ. ಮೊತ್ತದಲ್ಲಿ 17.5 ಕೋಟಿ ಬಿಡುಗಡೆಯಾಗಿದೆ. 20.79 ಕೋಟಿ ರೂ. ವೆಚ್ಚದ ಕಾರ್ಯಗಳಿಗೆ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳಿಂದ 15.28 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ 13.61 ಕೋಟಿ ರೂ. ವೆಚ್ಚವಾಗಿದೆ.

   ಚಿತ್ರದುರ್ಗ ಕ್ಷೇತ್ರ ಒಟ್ಟು ಆರು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಇದರಲ್ಲಿ ಮೂರು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, 2 ಪರಿಶಿಷ್ಟ ಪಂಗಡ ಮತ್ತು 1 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿವೆ.

   ಏಳು ಸುತ್ತಿನ ಕೋಟೆ, ಚಂದ್ರವಳ್ಳಿ ಗುಹೆ, ಮುರುಘಾಮಠ, ಜೋಗಿಮಟ್ಟಿ, ಉಪ್ಪಾರಹಟ್ಟಿ, ವಾಣಿ ವಿಲಾಸಸಾಗರ, ನಾಯಕನಹಟ್ಟಿಯಂತಹ ಪ್ರವಾಸಿ ತಾಣಗಳು ಚಿತ್ರದುರ್ಗ ಎಂಬ ಬಿಸಿಲ ನಾಡಿನಲ್ಲಿಯೂ ಉಲ್ಲಾಸ ನೀಡುತ್ತವೆ.

   ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ಮತ್ತು ಹೊಳಲ್ಕೆರೆ ಜಿಲ್ಲೆಯ ಆರು ತಾಲ್ಲೂಕುಗಳಾಗಿವೆ.

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ

   ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ನಡೆದ ಮೊಟ್ಟ ಮೊದಲ ಲೋಕಸಭೆ ಚುನಾವಣೆಯಲ್ಲಿ (1951) ಸಂಸತ್‌ಗೆ ಆಯ್ಕೆಯಾಗಿದ್ದರು.

   ಪ್ರವಾಸೋದ್ಯಮ ಇಲ್ಲಿನ ಜನರ ಕೈಹಿಡಿದಿದೆ. ಅದರ ಹೊರತಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅನೇಕ ಕೊರತೆಗಳಿಂದ ಕ್ಷೇತ್ರ ಮುಕ್ತವಾಗಿಲ್ಲ. ಕೃಷಿ ಆಧಾರಿತ ಬದುಕನ್ನೇ ಹೆಚ್ಚಾಗಿ ಅವಲಂಬಿಸಿರುವ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ಇನ್ನೂ ನೀಗಿಸಲು ಸಾಧ್ಯವಾಗಿಲ್ಲ.

   ಬುಡಕಟ್ಟು ಜನರಾದ ಬೇಡರು ಮತ್ತು ಗೊಲ್ಲರು ಬಹುಕಾಲದಿಂದಲೂ ಇಲ್ಲಿ ನೆಲೆಸಿದ್ದಾರೆ. ಲಿಂಗಾಯತ, ಒಕ್ಕಲಿಗ, ಕುರುಬ ಮುಂತಾದ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

   ಮತದಾರರು:

   2014ರ ಚುನಾವಣೆ ವೇಳೆ ಕ್ಷೇತ್ರದಲ್ಲಿ ಒಟ್ಟು 1,661,272 ಮತದಾರರಿದ್ದರು. ಅದರಲ್ಲಿ 8,44,864 ಪುರುಷರು ಮತ್ತು 8,16,408 ಮಹಿಳೆಯರಿದ್ದರು.

   1,096,499 ಮಂದಿ ಮತಚಲಾವಣೆ ಮಾಡಿದ್ದರು. ಮತಚಲಾಯಿಸಿದವರಲ್ಲಿ 5,73,250 ಪುರುಷರು ಹಾಗೂ 5,23,249 ಮಹಿಳಾ ಮತದಾರರು ಸೇರಿದ್ದಾರೆ. ಒಟ್ಟಾರೆ ಶೇ 66ರಷ್ಟು ಮತದಾನ ನಡೆದಿತ್ತು.

   ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್. ಚಂದ್ರಪ್ಪ 1,01,291 ಮತಗಳ ಅಂತರದಿಂದ ಬಿಜೆಪಿಯ ಜನಾರ್ದನ ಸ್ವಾಮಿ ಅವರನ್ನು ಸೋಲಿಸಿದ್ದರು.

   ಕ್ಷೇತ್ರದ ಸಮಸ್ಯೆಗಳು:

   2006ರಲ್ಲಿ ಪಂಚಾಯತ್ ರಾಜ್ ಸಚಿವಾಲಯವು ದೇಶದ 250 ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಚಿತ್ರದುರ್ಗವೂ ಒಂದು ಎಂದು ಘೋಷಿಸಿತ್ತು. ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿ ಇಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ನೀಡಲಾಗುತ್ತಿದೆ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ ಇಂದಿಗೂ ಹಿಂದುಳಿದಿದೆ.

   ಕಸದ ವಿಲೇವಾರಿ ಕೊರತೆ, ಎಲ್ಲೆಂದರಲ್ಲಿ ಕಿತ್ತು ಹೋಗಿರುವ ರಸ್ತೆಗಳು ದುರ್ಗದ ಸಾಮಾನ್ಯ ಸಮಸ್ಯೆಗಳು. ಹೂಳು ತುಂಬಿದ ಚರಂಡಿಗಳಿಂದ ಮಳೆ ನೀರು ರಸ್ತೆ ಮೇಲೆ ಹರಿಯುವ ಪರಿಸ್ಥಿತಿಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ.

   ಸಾಮಾಜಿಕ ಅಸಮಾನತೆಯ ಸಮಸ್ಯೆಯು ಶೈಕ್ಷಣಿಕವಾಗಿಯೂ ಜಿಲ್ಲೆ ಹಿನ್ನಡೆ ಅನುಭವಿಸಲು ಕಾರಣ. ವಿಪರೀತ ಬಿಸಿಲು, ಬರ ಇಲ್ಲಿನ ಜನರನ್ನು ಹೈರಾಣಾಗಿಸಿದೆ.

   English summary
   Lok Sabha elections 2019: Chitradurga is famous for its history. Durga's stone fortress is one among the most visited tourist places in Karnataka. It has a good politicla history also. Here is profile of the Chitradurga Lok Sabha constituency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X