ಬೆಂಗಳೂರಿಗೆ ಇಂಥ ದುರ್ಗತಿ ಬರುತ್ತೆ ಅಂತ ಭವಿಷ್ಯ ನುಡಿದಿತ್ತು ಸಿಎಜಿ ವರದಿ
ಈ ವರ್ಷ ಬೆಂಗಳೂರು ಮಹಾಮಳೆ ಜೊತೆಗೆ ಯಾವತ್ತೂ ಕಾಣದಷ್ಟು ರೀತಿಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕೆಲ ಪ್ರದೇಶಗಳಲ್ಲಿ ಕಂಡಿತು. ಸಿಲಿಕಾನ್ ಸಿಟಿಯಾದ ಕಾರಣಕ್ಕೆ ಈ ಮಳೆ ಮತ್ತು ಪ್ರವಾಹ ವಿಶ್ವಾದ್ಯಂತ ಸುದ್ದಿಯಾಗಿದೆ. ಅದರಲ್ಲೂ ಐಟಿ ಕಂಪನಿಗಳೇ ಹೆಚ್ಚು ಇರುವ ಪ್ರದೇಶ ಬಹುತೇಕ ನೀರಿನಿಂದ ಮುಳುಗಡೆಯಾಗಿತ್ತು. ಟ್ರಾಫಿಕ್ ರಗಳೆಯಿಂದ ಹೆಸರು ಕೆಡಿಸಿಕೊಂಡಿರುವ ಬೆಂಗಳೂರಿಗೆ ಈಗ ಪ್ರವಾಹದ ಮಸಿಯೂ ಮೆತ್ತಿಕೊಂಡಿದೆ.
ಬೆಂಗಳೂರಿನ ಬಹುತೇಕ ಭಾಗಗಳು ಪ್ರವಾಹ ಪರಿಸ್ಥಿತಿ ಎದುರಿಸಿಲ್ಲ ಎಂದು ಸರಕಾರ ವಾದಿಸಿದರೂ ನಗರದ ಜೀವನಾಡಿ ಎನಿಸಿದ ಐಟಿ ಕಂಪನಿಗಳ ಪ್ರದೇಶಗಳಲ್ಲಿ ಆಗಿರುವ ಅವಘಡಗಳು ಯಾಕೆ ಮುಖ್ಯ ಅನಿಸಲಿಲ್ಲ ಎಂಬುದು ಪ್ರಶ್ನೆ. ಇಂಥದ್ದೊಂದು ಅನಾಹುತ ಆಗುತ್ತದೆ ಎಂದು ಮೊದಲೇ ಗೊತ್ತಿದ್ದರೂ ಸರಕಾರ ಮತ್ತು ಬಿಬಿಎಂಪಿ ನಿರುಮ್ಮಳರಾಗಿ ಕೂತಿದ್ದು ಹೌದು.
ಕಳೆದ ವರ್ಷ ಸಿಎಜಿ ನಡೆಸಿದ ಆಡಿಟಿಂಗ್‌ನಲ್ಲಿ ಬೆಂಗಳೂರು ಎದುರಿಸುವ ಗಂಡಾಂತರದ ಬಗ್ಗೆ ಎಚ್ಚರಿಸಲಾಗಿತ್ತು. ವಿಚಿತ್ರ ಎಂದರೆ, ಬಿಬಿಎಂಪಿಯ ಮಳೆ ನೀರು ಕಾಲುವೆ (ಎಸ್‌ಡಬ್ಲ್ಯೂಡಿ- Storm Water Drain) ಇಲಾಖೆಯ ಹಲವು ಲೋಪದೋಷಗಳ ಬಗ್ಗೆ ಸಿಎಜಿ ವರದಿಯಲ್ಲಿ ಗಮನ ಸೆಳೆಯಲಾಗಿತ್ತಾದರೂ, ವರದಿ ಮಾತ್ರ ಒಂದು ವರ್ಷದಿಂದ ಧೂಳಿಡಿದು ಕೂತಿತ್ತು.
ಬೆಂಗಳೂರಿಗೆ ಅಷ್ಟು ದೊಡ್ಡ ಮಟ್ಟದಲ್ಲಿ ಮಳೆ ಬರುವುದಿಲ್ಲ ಎಂದು ಬಿಬಿಎಂಪಿ ನಂಬಿಕೊಂಡು ಕೂತಿದಂತಿತ್ತು. ಈ ಮಹಾಮಳೆಯಿಂದಾಗಿ ಎಲ್ಲಾ ಅವ್ಯವಸ್ಥೆಗಳು ಬಟಾಬಯಲಾಗಿ ನಿಂತಿದೆ. ಬಿಬಿಎಂಪಿಯ ಬೇಜವಾಬ್ದಾರಿತನದ ಫಲ ಇಂದು ಐಟಿ ಕಂಪನಿಗಳಿಗೆ ಇರಿಸುಮುರುಸಿನ ಪರಿಸ್ಥಿತಿಗೆ ದೂಡಿದೆ.

ಏನಿದೆ ಸಿಎಜಿ ವರದಿಯಲ್ಲಿ?
ಮಹಾಲೇಖಪಾಲ ಅಥವಾ ಸಿಎಜಿ 2021ರಲ್ಲಿ ಈ ವರದಿ ಸಲ್ಲಿಸಿದ್ದು. ಬಿಬಿಎಂಪಿಯ ಹಣಕಾಸು ಅಶಿಸ್ತು, ಪ್ರಮುಖ ರಾಜಕಾಲುವೆಗಳ ನಕ್ಷೆ ಸರಿಯಾಗಿ ಮಾಡಿಲ್ಲದಿರುವುದು, ಒತ್ತುವರಿ ತೆರವುಗೊಳಿಸಲು ವಿಫಲರಾಗಿರುವುದು, ಅನಗತ್ಯವಾಗಿ ಒಳಚರಂಡಿ ದಿಕ್ಕು ತಿರುಗಿಸಲು ವೆಚ್ಚ ಮಾಡಿರುವುದ ಇವೇ ಅಂಶಗಳನ್ನು ಸಿಎಜಿ ತನ್ನ ವರದಿಯಲ್ಲಿ ಎತ್ತಿ ತೋರಿಸಿದೆ.
ಬಿಬಿಎಂಪಿ ಬಳಿ ಮಳೆ ನೀರು ನಿರ್ವಹಣೆಗೆ ಸರಿಯಾದ ನೀತಿ ಇಲ್ಲ. ನಗರದಲ್ಲಿ ಮಳೆ ನೀರು ಕಾಲುವೆಯ ಸೌಕರ್ಯ ನಿರ್ಮಿಸಲು ಬೇಕಾದ ವಿನ್ಯಾಸ, ಅದನ್ನು ನಿರ್ವಹಿಸುವ ವ್ಯವಸ್ಥೆ ಇವ್ಯಾವುದನ್ನೂ ಬಿಬಿಎಂಪಿ ಸಿದ್ಧಪಡಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ರಾಜಕಾಲುವೆಗಳಿಗೂ ಕೆರೆಗಳಿಗೂ ಸಂಪರ್ಕ ಇಲ್ಲ. ವಿವಿಧ ಕಾಲುವೆಗಳ ನಡುವೆಯೂ ಸಂಪರ್ಕ ಇಲ್ಲ ಎಂದು ಹೇಳಿರುವ ಸಿಎಜಿ, ಕಾಲುವೆಗಳ ಒತ್ತುವರಿಯನ್ನು ಬಿಬಿಎಂಪಿ ತೆರವುಗೊಳಿಸಿಲ್ಲ ಎಂಬುದನ್ನು ತಿಳಿಸಿದೆ.

ತಪ್ಪು ಸರಿಪಡಿಸಲು ಸಕಾಲ
ಬೆಂಗಳೂರು ಈ ವರ್ಷ ಮಹಾ ಮಳೆಯನ್ನು ಕಂಡು ಅದರ ಸೌಕರ್ಯ ವ್ಯವಸ್ಥೆಯಲ್ಲಿನ ಪ್ರಮುಖ ಲೋಪದೋಷಗಳು ನಿಚ್ಚಳವಾಗಿ ಅನಾವರಣಗೊಂಡಿವೆ. ಈ ತಪ್ಪುಗಳನ್ನು ಸರಿಪಡಿಸಲು ಇದು ಸಕಾಲ. ಮುಂದಿನ ವರ್ಷಗಳಲ್ಲಿ ಇದಕ್ಕಿಂತಲೂ ಭೀಕರ ಮಳೆಯ ನಿರೀಕ್ಷೆ ಇದೆ. ಅದಕ್ಕಾಗಿ ಈಗಿನಿಂದಲೇ ಅಣಿಗೊಳ್ಳಬೇಕಿದೆ ಎಂದು ತಜ್ಞರು ಹೇಳುತ್ತಾರೆ.
ಈ ಬಾರಿ ಮಳೆ ಮತ್ತು ಪ್ರವಾಹದಿಂದ ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ನಷ್ಟ ಆಗಿರುವುದು ಹೌದು. ಹೊರ ವರ್ತುಲ ರಸ್ತೆ ಸೇರಿದಂತೆ ಹಲವು ಕಡೆ ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿದ್ದವು. ಇಲ್ಲಿಯೇ ಹೆಚ್ಚು ಐಟಿ ಕಂಪನಿಗಳು ಹಾಗೂ ಐಷಾರಾಮಿ ಲೇಔಟ್‌ಗಳು ಇದ್ದದ್ದು. ಇಲ್ಲಿಯ ಐಟಿ ಕಂಪನಿಗಳಿಗೆ ಸಾವಿರಾರು ಕೋಟಿ ರೂ ನಷ್ಟವಾಗಿರುವ ಅಂದಾಜು ಇದೆ. ಕೇವಲ ಮೇಲ್ವರ್ಗದವರು ಮತ್ತು ಐಟಿ ಕಂಪನಿಗಳು ಮಾತ್ರವಲ್ಲ, ಒಂದು ಅಂದಾಜು ಪ್ರಕಾರ 30 ಸಾವಿರ ಬಡಜನರೂ ಮಳೆ ಮತ್ತು ಪ್ರವಾಹದಿಂದ ಕಷ್ಟಕ್ಕೊಳಗಾಗಿದ್ದಾರೆ.

ಹೊಸ ಕಾಲುವೆಗಳ ನಿರ್ಮಾಣಕ್ಕೆ ಸಲಹೆ
ಮುಂಬರುವ ವರ್ಷಗಳಲ್ಲಿ ಇದೇ ರೀತಿಯ ಮಳೆ ಅಥವಾ ಇನ್ನೂ ಹೆಚ್ಚಿನ ಮಳೆ ಬರುವ ನಿರೀಕ್ಷೆ ಇರುವುದರಿಂದ ಸೌಕರ್ಯ ವ್ಯವಸ್ಥೆಯನ್ನು ಬಿಬಿಎಂಪಿ ಬಲಪಡಿಸಬೇಕು. ನೀರಿನ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಮಾಡಬೇಕು. ತಗ್ಗಿನ ಪ್ರದೇಶಗಳಲ್ಲಿ ಹೊಸ ಕಾಲುವೆಗಳನ್ನು ನಿರ್ಮಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
"ನಗರಕ್ಕಾಗಿ ಮಳೆ ನೀರು ಚರಂಡಿಯ ಮಾಸ್ಟರ್ ಪ್ಲಾನ್ ಅನ್ನು ಬಿಬಿಎಂಪಿ ರೂಪಿಸಬೇಕು. ಈ ಯೋಜನೆ ಪ್ರಕಾರ ಕೆರೆ ಪ್ರದೇಶಗಳಲ್ಲಿ ರಚಿಸಲಾದ ಬಡಾವಣೆಗಳಲ್ಲಿ ಹೊಸ ಕಾಲುವೆ ಮತ್ತು ಚರಂಡಿಯನ್ನು ನಿರ್ಮಿಸಬೇಕು" ಎಂದು ಡಬ್ಲ್ಯೂಆರ್‌ಐ ಇಂಡಿಯಾ ಕಂಪನಿಯ ಅಧಿಕಾರಿ ರಾಜ್ ಭಗತ್ ಹೇಳುತ್ತಾರೆ.

ಕೆರೆ ಮತ್ತು ಕಾಲುವೆ ಸಂಪರ್ಕ
ಕೆರೆ ಮತ್ತು ಕಾಲುವೆಗಳ ಸಂಪರ್ಕ ಮಾಡಬೇಕು ಎಂದು ಶಾಸಕ ಅರವಿಂದ್ ಲಿಂಬಾವಳಿ ನೇತೃತ್ವದ ಮಹದೇವಪುರ ಕಾರ್ಯಪಡೆಯ ಸದಸ್ಯ ಕ್ಲೆಮೆಂಟ್ ಜಯಕುಮಾರ್ ಅಭಿಪ್ರಾಯಪಡುತ್ತಾರೆ. ಹೊಸ ಕಾಲುವೆಗಳನ್ನು ನಿರ್ಮಿಸಲು ಬಿಬಿಎಂಪಿ ಬಳಿ ಹಣ ಇಲ್ಲವಾದರೆ ಕನಿಷ್ಠ ಈಗಿರುವ ಕಾಲುವೆಯನ್ನಾದರೂ ಬಲಪಡಿಸುವ ಕೆಲಸವನ್ನು ತುರ್ತಾಗಿ ಮಾಡಲಿ ಎಂದವರು ಸಲಹೆ ನೀಡಿದ್ದಾರೆ.
ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೊಸ ಕಾಲುವೆಗಳ ನಿರ್ಮಾಣದ ಯೋಚನೆಯಲ್ಲಿದ್ದಾರೆ. ಈಗ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ವಿವಿಧ ಕಾಲುವೆಗಳ ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಮಾಡಲಾಗುತ್ತದೆ. ಅಗತ್ಯ ಬಿದ್ದ ಕಡೆ ಹೊಸ ಕಾಲುವೆಗಳನ್ನು ನಿರ್ಮಿಸುತ್ತೇವೆ. ಅದಕ್ಕಾಗಿ ಜಮೀನುಗಳನ್ನು ಬಿಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ಹೇಳಿದ್ದಾರೆ.
ನಗರ ತಜ್ಞ ಅಶ್ವಿನ್ ಮಹೇಶ್ ಪ್ರಕಾರ, "ಈಗಿನಿಂದಲಾದರೂ ನೀರು ಹರಿವ ಕಾಲುವೆಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಕಾಲುವೆಗಳನ್ನು ಕಾಲುವೆಗಳಾಗಿಯೇ ಇಡಬೇಕು. ಯಾವ ಪ್ರಭಾವಿಗಳ ಒತ್ತಡಕ್ಕೂ ಮಣಿಯಬಾರದು" ಎನ್ನುತ್ತಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications