ಸಿಂಧಗಿಯಲ್ಲಿ ಗೌಡ್ರ ಪ್ರಚಾರದ ಹಿಂದೆ ಮುಂದಾಲೋಚನೆಯ ಪರಮಾವಧಿ
ಎಚ್.ಡಿ.ದೇವೇಗೌಡ್ರು ಮತ್ತು ಕುಮಾರಸ್ವಾಮಿ ಸಾರಥ್ಯದ ಜಾತ್ಯತೀತ ಜನತಾದಳ, ರಾಜ್ಯ ರಾಜಕಾರಣದಲ್ಲಿ ಆರಕ್ಕೇರದಿರಬಹುದು, ಮೂರಕ್ಕೆ ಇಳಿಯದಿರಬಹುದು, ಆದರೆ, ಕರ್ನಾಟಕದಲ್ಲಂತೂ ತಮ್ಮ ಉಪಸ್ಥಿತಿಯನ್ನು ಎರಡು ರಾಷ್ಟ್ರೀಯ ಪಕ್ಷಗಳಿಗೆ ತೋರಿಸುತ್ತಲೇ ಬಂದಿವೆ.
ದೇವೇಗೌಡ್ರು ಯಾವುದಾದರೂ ಒಂದು ಹೆಜ್ಜೆಯನ್ನಿಟ್ಟರೆ ಅದರ ಹಿಂದೆ ಪಕ್ಷದ ಭವಿಷ್ಯದ ನಿರ್ಧಾರ ಅಡಗಿರುತ್ತದೆ ಎನ್ನುವುದು ನಿರ್ವಿವಾದ. 88 ವರ್ಷ ವಯಸ್ಸಿನ ದೇವೇಗೌಡ್ರು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಸಿಂಧಗಿಯಲ್ಲೇ ಠಿಕಾಣಿ ಹೂಡಿದ್ದರು ಎಂದರೆ, ಇದರ ಹಿಂದೆ ಬಲವಾದ ಕಾರಣ ಇಲ್ಲದೇ ಇರುತ್ತದೆಯೇ?
ಹಾನಗಲ್: ಬಹಿರಂಗ ಪ್ರಚಾರದ ಕೊನೆಯ ದಿನ ಬಿಜೆಪಿಗೆ ಭಾರೀ ಹಿನ್ನಡೆ
ಸಿಂಧಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ತನ್ನ ಶಕ್ತಿಯನ್ನು ಪ್ರದರ್ಶಿಸದೇ ಇರದು, ಇನ್ನು ಹಾನಗಲ್ ನಲ್ಲಿ ಠೇವಣಿ ಸಿಗುವುದು ಕಷ್ಟವಾದರೂ, ಜೆಡಿಎಸ್ಸಿಗೆ ಬೀಳುವ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ನಿರ್ಣಾಯಕವಾಗಲಿದೆ. ಒಂದು ಲೆಕ್ಕದಲ್ಲಿ, ಉಪ ಚುನಾವಣೆಯಲ್ಲಿ ಜೆಡಿಎಸ್ ಕಣದಲ್ಲಿರುವುದು ಕಾಂಗ್ರೆಸ್ಸಿಗೆ ಹಿನ್ನಡೆ ತರಲೂ ಬಹುದು ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಹಾಗಾದರೆ, ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರು ಸುಮಾರು ಹತ್ತು ದಿನದಿಂದ ಸಿಂಧಗಿಯಲ್ಲೇ ವ್ಯವಸ್ಥಿತ ಪ್ರಚಾರ ಮಾಡಿದ ಹಿಂದಿನ ರಾಜಕೀಯ ಒಳಗುಟ್ಟು ಏನಿರಬಹುದು? ಇದು, 2023ರಲ್ಲಿ ನಡೆಯಬೇಕಾಗಿರುವ ಅಸೆಂಬ್ಲಿ ಚುನಾವಣೆಗೆ ಮುನ್ನ ಒಂದು ರಿಹರ್ಸಲ್ ಎಂದು ವ್ಯಾಖ್ಯಾನಿಸಬಹುದು. ಅದು ಹೇಗೆ? ಒಂದು ಲೆಕ್ಕಾಚಾರ ಹೀಗಿದೆ:
ಸಿಂಧಗಿ ಉಪಚುನಾವಣೆ: ಗ್ರೇಟ್ ಲಯರ್ ಎಂದ ಸಿದ್ದರಾಮಯ್ಯಗೆ ಎಚ್.ಡಿ.ಕೆ ತಿರುಗೇಟು

ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ರಾಹುಲ್ ಗಾಂಧಿ ಲೇವಡಿ
2018ರ ಚುನಾವಣೆಯ ವೇಳೆ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದರು. ಈ ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿರುವುದೇ ಬಿಜೆಪಿಗೆ ಅನುಕೂಲ ಮಾಡಿ ಕೊಡಲು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳುತ್ತಲೇ ಬರುತ್ತಿದ್ದಾರೆ. ಈ ಎಲ್ಲಾ ಅಪವಾದ ಇದ್ದರೂ, ದಳಪತಿಗಳು ಅತ್ಯಂತ ಶಿಸ್ತಿನಿಂದ ಸಿಂಧಗಿಯಲ್ಲಿ ಪ್ರಚಾರ ನಡೆಸಿದ್ದಾರೆ. ಹಾನಗಲ್ ನಲ್ಲಿ ಸ್ಟ್ರಾಂಗ್ ಇಲ್ಲ ಎಂದು ಖುದ್ದು ಕುಮಾರಸ್ವಾಮಿಯವರೇ ಒಪ್ಪಿಕೊಂಡಿದ್ದಾರೆ.

ರಾಷ್ಟ್ರೀಯ ಪಕ್ಷಗಳಿಗೆ ಬಲವಾದ ಸಂದೇಶ ರವಾನಿಸುವುದೇ ಗೌಡ್ರ ಲೆಕ್ಕಾಚಾರ
ಈ ಇಳಿ ವಯಸ್ಸಿನಲ್ಲಿ ಗೌಡ್ರು, ಸಿಂಧಗಿಯಲ್ಲಿ ಕೂತು ರಾಜಕೀಯ ಮಾಡುತ್ತಿದ್ದಾರೆ ಎಂದರೆ ಅದರ ಹಿಂದೆ ಗೂಡಾರ್ಥ ಇರದೇ ಇರದು. ಜೆಡಿಎಸ್ ಅಸ್ತಿತ್ವ ಅಲ್ಲಿ ಇದೆ ಎನ್ನುವುದನ್ನು ಅರಿತಿರುವ ಗೌಡ್ರು-ಎಚ್‌ಡಿಕೆ ಭರ್ಜರಿ ರಣತಂತ್ರವನ್ನೇ ಹೂಡಿದ್ದಾರೆ. ಜೆಡಿಎಸ್ ಸ್ಪರ್ಧೆ ಮೇಲ್ನೋಟಕ್ಕೆ ಕಾಂಗ್ರೆಸ್ಸಿಗೆ ಹೊಡೆತ ಎನ್ನುವುದು ಒಪ್ಪಿಕೊಳ್ಳುವ ವಿಚಾರವಾದರೂ, ಗೌಡ್ರ ನಡೆಯನ್ನು ಸೂಕ್ಷ್ಮವಾಗಿ ನೋಡಲು ಹೋದರೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಲವಾದ ಸಂದೇಶವನ್ನು ರವಾನಿಸುವುದೇ ಗೌಡ್ರ ಲೆಕ್ಕಾಚಾರ.

ಮಿಷನ್ 123 ಎಂದು ಜೆಡಿಎಸ್ ಈಗಲೇ ಸಜ್ಜಾಗುತ್ತಿದೆ
2023ರ ಮೇ ತಿಂಗಳ ಒಳಗೆ ನಡೆಯಬೇಕಾಗಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯನ್ನು ನಾವೇ ಗೆಲ್ಲುತ್ತೇವೆ ಎನ್ನುವ ಯಾವ ಖಚಿತ ವಿಶ್ವಾಸವೂ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಇಲ್ಲ. ಮಿಷನ್ 123 ಎಂದು ಜೆಡಿಎಸ್ ಈಗಲೇ ಸಜ್ಜಾಗುತ್ತಿದ್ದರೂ, ಮ್ಯಾಜಿಕ್ ನಂಬರ್ ಹತ್ತಿರ ಬರಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನೂ ದಳಪತಿಗಳು ಅರಿಯದೇ ಇರಲಾರರು. ಹಾಗಾಗಿ, ಎರಡು ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ಅಸ್ತಿತ್ವವನ್ನು ತೋರಿಸುವ ಲೆಕ್ಕಾಚಾರವನ್ನು ಜೆಡಿಎಸ್ ಹೊಂದಿದೆ.

ಖುದ್ದು ತಾತನೇ ಕುಳಿತು ಪಟ್ಟುಗಳನ್ನು ಕಲಿಸುತ್ತಿರುವುದು
ಇನ್ನೊಂದು ಆಯಾಮದ ಪ್ರಕಾರ, ಜೆಡಿಎಸ್‌ಗೆ ಕಾವೇರಿ ಜಲಾಯನ ಪ್ರದೇಶದ ಜಿಲ್ಲೆಗಳನ್ನು ಹೊರತು ಪಡಿಸಿ, ಉತ್ತರ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿನ ನೆಲೆ ಇದೆ. ಹೀಗಾಗಿ ದೇವೇಗೌಡರೇ ಅಲ್ಲಿ ಕುಳಿತರೆ ಉತ್ತರ ಕರ್ನಾಟಕದಲ್ಲಿ ಪಕ್ಷ ಮತ್ತಷ್ಟು ಬಲ ಆಗಬಹುದು. ಜೊತೆಗೆ, ಮೊಮ್ಮಕ್ಕಳಿಗೆ ಚುನಾವಣೆಯ ಉಸ್ತುವಾರಿ ವಹಿಸಿರುವುದರಿಂದ ಖುದ್ದು ತಾತನೇ ಕುಳಿತು ಪಟ್ಟುಗಳನ್ನು ಕಲಿಸುತ್ತಿರುವುದು. ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ (ಅಲ್ಪಸಂಖ್ಯಾತರಿಗೆ) ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಓಟ್ ಬ್ಯಾಂಕ್‌ನ ಮೂಡ್ ಛಿದ್ರ ಮಾಡುವ ತಂತ್ರ. ಜೆಡಿಎಸ್ ಕಡೆಗಣಿಸಿದರೆ ಮುಸ್ಲಿಮರು ಕೈ ತಪ್ಪುತ್ತಾರೆ ಎನ್ನುವ ಸಂದೇಶ ಕಾಂಗ್ರೆಸ್‌ಗೆ ನೀಡುವ ಉದ್ದೇಶವನ್ನು ಗೌಡ್ರು ಹೊಂದಿರಬಹುದು.

ಸಿಂಧಗಿಯಲ್ಲಿ ಗೌಡ್ರ ಪ್ರಚಾರದ ಹಿಂದೆ ಮುಂದಾಲೋಚನೆಯ ಪರಮಾವಧಿ
ಜೆಡಿಎಸ್ ವರಿಷ್ಠ ದೇವೇಗೌಡ್ರು ಬಹಿರಂಗ ಪ್ರಚಾರದ ಕೊನೆಯ ದಿನ ರೋಡ್ ಶೋನಲ್ಲಿ ಭಾಗವಹಿಸಿದ್ದರು. ತಮ್ಮ ವಯಸ್ಸಿನ ಶಕ್ತಿಯನ್ನು ಮೀರಿ ಗೌಡ್ರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಗೌಡ್ರ ಈ ಶ್ರಮಕ್ಕೆ ಮತದಾರ ಒಲಿಯಲಿದ್ದಾನಾ? ಈ ಇಳಿವಯಸ್ಸಿನಲ್ಲೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎನ್ನುವ ಜನರ ಅನುಕಂಪ ವರ್ಕೌಟ್ ಆಗುತ್ತಾ? ಇಂತಹ ಪ್ರಶ್ನೆಗಳಿಗೆ ನವೆಂಬರ್ ಎರಡರಂದು ಉತ್ತರವೇನೋ ಸಿಗಲಿದೆ. ಆದರೆ, ಇದಕ್ಕಿಂತ ದೊಡ್ಡ ಸಂದೇಶ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ರವಾನೆಯಾಗದೇ ಇರದು. ಅದು, ನಮ್ಮನ್ನು ಕಡೆಗಣಿಸಬೇಡಿ, ನಾವಿಲ್ಲದೇ ನೀವ್ಯಾರೂ ಇಲ್ಲ ಎನ್ನುವುದು.