Valentine's Day 2025: ಕಡಿಮೆ ಖರ್ಚಿನಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಫೆಬ್ರವರಿ 14 ಅಂದರೆ ಪ್ರೇಮಿಗಳಿಗೆ ತುಂಬಾ ವಿಶೇಷವಾದ ದಿನ. ಈ ದಿನ ಜಾಗತಿಕವಾಗಿ ವ್ಯಾಲೆಂಟೈನ್ಸ್ ಡೇ ಎಂದು ಗುರುತಿಸಲ್ಪಟ್ಟರೆ, ಕನ್ನಡಿಗರು ಪ್ರೇಮಿಗಳ ದಿನ ಎಂದು ಕರೆದಿದ್ದಾರೆ. ಹೆಸರೇ ಸೂಚಿಸುವಂತೆ ಇದು ಪ್ರೇಮಿಗಳಿಗಾಗಿ ಇರುವ ದಿನ. ಪ್ರೇಮಾಂಕುರ ಆದವರಿಗಂತೂ ಇದೊಂದು ದೊಡ್ಡ ಹಬ್ಬ. ಹಾಗಾಗಿ ಪ್ರೇಮಿಗಳಿಗಾಗಿಯೇ ಈ ದಿನ ಮೀಸಲಿಟ್ಟಿರುವುದರಿಂದ ಇದರ ಆಚರಣೆ ಕೂಡ ದೊಡ್ಡಮಟ್ಟದಲ್ಲೇ ನಡೆಯುತ್ತಿದೆ. ಆದರೆ, ಪ್ರೇಯಸಿಗಾಗಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುವ ಬದಲು ಕಡಿಮೆ ಖರ್ಚಿನಲ್ಲೂ ಈ ದಿನ ಆಚರಿಸಬಹುದು. ಅದಕ್ಕಾಗಿ ಇಲ್ಲಿದೆ ಕೆಲವು ಟಿಪ್ಸ್.
ಮೊದಲೆಲ್ಲ ವಿದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ವ್ಯಾಲೆಂಟೈನ್ಸ್ ಡೇ ಇದೀಗ ಭಾರತದಲ್ಲೂ ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಪ್ರೇಮಿಗಳ ದಿನದ ಹೆಸರಲ್ಲಿ ವ್ಯಾಪಾರ ವಹಿವಾಟು ಕೂಡ ಕಡಿಮೆಯೇನಿಲ್ಲ. ಒಟ್ಟಾರೆ ಈ ದಿನ ತುಂಬಾ ಸ್ಪೆಷಲ್ ಆಗಿರಲಿ ಎಂದು ಪ್ರೇಮಿಗಳು ಏನೇ ಅಂದುಕೊಂಡ್ರೂ ಕೊನೆಗೆ ದಿನ ಕಳೆಯುವಷ್ಟರಲ್ಲಿ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ. ಅನುಕೂಲಸ್ಥರಾದರೆ, ದೊಡ್ಡ ದೊಡ್ಡ ಪಾರ್ಟಿಗಳಿಗೆ ಪ್ರೇಯಸಿ ಹಾಗೂ ಪ್ರಿಯಕರನನ್ನು ಕರೆದೊಯ್ದು, ದುಬಾರಿ ಗಿಫ್ಟ್ ಮೂಲಕ ಸರ್‌ಪ್ರೈಸ್ ಕೊಡ್ತಾರೆ. ಆದರೆ, ಮಿಡಲ್ ಕ್ಲಾಸ್‌ನ ಪ್ರೇಮಿಗಳು ಕೂಡ ಹೆಚ್ಚು ಖರ್ಚಿಲ್ಲದೆ ಪ್ರೇಮಿಗಳ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಅದು ಹೇಗೆ ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು!

* ಗುಲಾಬಿ ತಪ್ಪದೇ ಕೊಡಿ: ಪ್ರೇಮಿಗಳ ದಿನಕ್ಕೆ ಕೆಂಗುಲಾಬಿ ಸಖತ್ ಟ್ರೆಂಡಿ ಗಿಫ್ಟ್ ಅಂತಾನೇ ಹೇಳಲಾಗುತ್ತೆ. ಕೈಲಿ ರೋಸ್ ಹಿಡಿದು ಎಷ್ಟೋ ಮಂದಿ ಇಂದು ಪ್ರೇಮ ನಿವೇದನೆ ಮಾಡಿ, ತಮ್ಮ ಪ್ರೀತಿಯ ಅಗ್ನಿಪರೀಕ್ಷೆಯಲ್ಲಿ ಗೆಲುವು ಅಥವಾ ಸೋಲು ಕಾಣುತ್ತಾರೆ. ಇದಕ್ಕಾಗಿ ದೊಡ್ಡ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಪಾರ್ಟಿಗಳು ಕೂಡ ಆಯೋಜಿಸಿ ರೆಡ್ ರೋಸ್‌ಗಳನ್ನು ಆಕರ್ಷಣೀಯವಾಗಿಡುತ್ತಾರೆ. ಆದರೆ ಅಲ್ಲಿಗೆ ಹೋದರೆ ಅನಾವಶ್ಯಕ ಖರ್ಚು ಗುರೂ ಅನ್ನೋರು, ಸಿಂಪಲ್ಲಾಗಿ ಬೆಂಗಳೂರಿನ ಹಲವು ಏರಿಯಾಗಳಲ್ಲಿರೋ ಮಾರ್ಕೆಟ್‌ನಲ್ಲಿ ಸಿಗೋ ಕೆಂಪು ಗುಲಾಬಿ ತಗೊಳ್ಳಿ. ಅಬ್ಬಾಬ್ಬ ಅಂದ್ರೆ ಒಂದು ಗುಲಾಬಿಗೆ 10 ರೂಪಾಯಿಯಿಂದ 30 ರೂಪಾಯಿ ಇರುತ್ತೆ. ಪುಷ್ಪಗುಚ್ಛಕ್ಕೆ (ಬೊಕ್ಕೆ) ಸಾವಿರಾರು ರೂಪಾಯಿ ಕೊಡೋದು ತಪ್ಪುತ್ತೆ. ಅದನ್ನ ಕೊಟ್ಟು ಪ್ರಮೋಸ್ ಮಾಡಿ..
* ದುಬಾರಿ ಗಿಫ್ಟ್ ಬದಲು ಇದನ್ನ ಕೊಡಿ: ಪ್ರೇಮಿಗಳ ದಿನದಂದು ಬಹುತೇಕರು ಗಿಫ್ಟ್ ಎಕ್ಸ್‌ಚೇಂಜ್ ಮಾಡಿಕೊಳ್ತಾರೆ. ಪ್ರೀತಿಯಲ್ಲಿ ಮುಳುಗೆದ್ದವರು ತನ್ನ ಪ್ರೇಯಸಿ ಅಥವಾ ಪ್ರಿಯಕರನಿಗೆ ಏನಾದ್ರೂ ಸ್ಪೆಷಲ್ ಗಿಫ್ಟ್ ಕೊಡಬೇಕು ಅನ್ಕೋತೀರ. ಆದರೆ ಗಿಫ್ಟ್ ಖರೀದಿ ಅಂತಾ ಹೋದ್ರೆ ಸಾವಿರಾರು ರೂಪಾಯಿ ಬೇಕೇ ಬೇಕು. ಬಜೆಟ್ ಫ್ರೆಂಡ್ಲಿ ಗಿಫ್ಟ್ ಏನು ಕೊಡಬಹುದು ಅಂದ್ರೆ, ನಿಮ್ಮ ನೆಚ್ಚಿನ ವ್ಯಕ್ತಿಗೆ ಇಷ್ಟವಾಗುವ ಬಣ್ಣದ ಡ್ರೆಸ್, ಕೈಗಡಿಯಾರ, ಗ್ಯಾಡ್ಜೆಟ್ಸ್, ಎಲೆಕ್ಟ್ರಾನಿಕ್ ಉಪಕರಣಗಳು, ಟೋಪಿ, ಶೂ, ಫುಟ್‌ವೇರ್, ಟ್ರೆಂಡಿ ಬ್ಯಾಗು, ಟೀ ಶರ್ಟ್ ಅಥವಾ ಅವರಿಗೆ ತೀರಾ ಅಗತ್ಯ ಹಾಗೂ ಪ್ರತಿನಿತ್ಯ ಬಳಸುವ ವಸ್ತುಗಳನ್ನು ಸರ್‌ಪ್ರೈಸ್ ಆಗಿ ಕೊಡಬಹುದು. ಇದಕ್ಕೆ ಖರ್ಚು ಅಬ್ಬಬ್ಬಾ ಅಂದ್ರು ಒಂದೆರಡು ಸಾವಿರ ರೂಪಾಯಲ್ಲೇ ಮುಗಿಯುತ್ತೆ. ನೆನಪಿರಲಿ, ನಿಜವಾದ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ..

* ಒಂದೊಳ್ಳೆ ಜಾಗದಲ್ಲಿ ಮೀಟ್ ಆಗಿ: ಪ್ರೇಮಿಗಳ ದಿನಕ್ಕೆ ದೂರದ ಪ್ರವಾಸಿ ತಾಣಗಳಿಗೆ ಹೋಗಿ ಸೆಲೆಬ್ರೇಷನ್ ಮಾಡೋದು ಕೂಡ ಸ್ವಲ್ಪ ದುಬಾರಿನೇ. ಇದರ ಬದಲು ನಿಮ್ಮ ಹತ್ತಿರದ ಒಂದು ಜಾಗಕ್ಕೆ ಇಬ್ಬರೂ ಬೈಕ್ ರೈಡ್ ಹೋಗಿ. ಬೆಂಗಳೂರಿನ ಪ್ರೇಮಿಗಳಿಗೆ ಊರಿನ ಸುತ್ತಲೂ ಹಲವು ಹಾಟ್‌ಸ್ಟಾಟ್‌ಗಳು ಇದ್ದೇ ಇವೆ. ಗಾಡಿ ಹತ್ತಿ ಜಾಲಿಯಾಗಿ ಹೊಸ ಜಾಗಗಳನ್ನು ವೀಕ್ಷಿಸಿ, ಮನಸ್ಸಿನಲ್ಲಿರುವ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಿ. ಮನದ ಮಾತುಗಳಿಗೆ ಇಂದು ವಿಶೇಷ ದಿನ ಎನ್ನುವುದನ್ನ ಮರೆಯದಿರಿ. ನಿಮ್ಮ ಪ್ರೀತಿ ಎಷ್ಟು ಸ್ಟ್ರಾಂಗ್ ಅನ್ನೋದನ್ನು ಇಂದೇ ಕನ್ಫರ್ಮ್ ಮಾಡ್ಕೊಳ್ಳಿ. ದಿನ ಕಳೆದು ಸೇಫಾಗಿ ಬಂದು ಮನೆ ಸೇರಿಕೊಳ್ಳಿ.
* ಸ್ಟ್ರೀಟ್ ಫುಡ್ ತಿನ್ನಿಸಿ: ಪ್ರೇಮಿಗಳ ದಿನದಂದು ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಹೋದರೆ ಊಟದ ಖರ್ಚೇ ಸಾವಿರಾರು ರೂಪಾಯಿ ದಾಟುತ್ತೆ. ಈಗ ಹಲವೆಡೆ ರುಚಿಯಾದ ಆಹಾರ ಸಿಗುತ್ತೆ. ಇನ್ನು ಯುವತಿಯರಿಗಂತೂ ಸ್ಟ್ರೀಟ್ ಫುಡ್ ಅಂದ್ರೆ ಪಂಚಪ್ರಾಣ ಅನ್ನೋದು ಮರೀಬೇಡಿ. ಯಾವಾಗಲೂ ಹೋಗುವ ರೆಗ್ಯುಲರ್ ಜಾಗಕ್ಕೆ ಹೋಗಬೇಡಿ. ಇವತ್ತು ಹೊಸ ಜಾಗಕ್ಕೆ ಕರೆದೊಯ್ದು ಸ್ಟ್ರೀಟ್ ಫುಡ್ ಕೊಡಿಸಿ. ಸಾಧ್ಯವಾದ್ರೆ ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ಹೋಗಿ ಬನ್ನಿ, ಇಲ್ಲದಿದ್ರೆ ಪ್ರತಿ ಏರಿಯಾದಲ್ಲೂ ತಿಂಡಿಪೋತರ ಬೀದಿಗಳು ಸಾಕಷ್ಟಿವೆ. ನಿಮ್ಮ ಪ್ರೇಯಸಿ ಅಥವಾ ಪ್ರಿಯಕರಿನಿಗೆ ಇಷ್ಟವಾದ ತಿಂಡಿಯನ್ನು ಕೊಡಿಸಿ, ಯಾರೂ ನೋಡದಿದ್ರೆ ತಿನ್ನಿಸಿ..

* ಸಿನಿಮಾ ನೋಡಿ: ಈ ದಿನವನ್ನು ಖುಷಿಯಾಗಿ ಕಳೀಬೇಕು ಅಂತಿದ್ರೆ ಪ್ರೇಮಿಗಳು ಯಾವುದಾದರೂ ಒಳ್ಳೆಯ ಸಿನಿಮಾ ವೀಕ್ಷಿಸಿ. ಬೆಂಗಳೂರಲ್ಲಿ ಮಾಲ್‌ಗಳು ಕಡಿಮೆಯೇನಿಲ್ಲ. ಸಿನಿಮಾ ನೋಡಿದ ಮೇಲೆ ಸ್ವಲ್ವ ಹೊತ್ತು ಮಾಲ್ ಸುತ್ತಾಡಿ. ನಿಮ್ಮ ಬಜೆಟ್‌ನಲ್ಲಿ ಸಿಗುವ ಗಿಫ್ಟ್ ಸಿಕ್ಕರೆ ಖರೀದಿಸಿ. ಅಲ್ಲಿರುವ ಒಳ್ಳೆಯ ಬ್ಯಾಕ್‌ಗ್ರೌಂಡ್‌ನಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಿ. ಸಾಧ್ಯವಾದರೆ ಸ್ವಲ್ಪ ಹೊತ್ತು ಮಾತನಾಡುತ್ತಾ ಬೆಂಗಳೂರಿನ ಬೀದಿಗಳಲ್ಲಿ ನಡೆದಾಡಿ.












Click it and Unblock the Notifications