ಫ್ರೀಯಾಗಿ ಕೆಲಸ ಮಾಡ್ತೀನಿ ಜಾಬ್ ಕೊಡಿ: ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್ ಪೋಸ್ಟ್ ವೈರಲ್
ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ನಿಮ್ಮಲ್ಲಿ ಏನೆಲ್ಲ ಅರ್ಹತೆ ಇದ್ದರೂ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಳ್ಳುವುದು ಈ ದಿನಗಳಲ್ಲೂ ಕಷ್ಟದ ಮಾತು. ಒಳ್ಳೆಯ ಕಡೆ ಶಿಕ್ಷಣ ಪಡೆದು ಬಂದರೂ ಒಳ್ಳೆ ಉದ್ಯೋಗ ಸಿಗಲ್ಲ. ಇದೇ ಪರಿಸ್ಥಿತಿಯನ್ನು ಎದುರಿಸಿರುವ ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್‌ವೊಬ್ಬ ಕೊನೆಗೆ ಉಚಿತವಾಗಿ ಕೆಲಸ ಮಾಡುತ್ತೀನಿ, ಉದ್ಯೋಗ ಕೊಡಿ ಎಂದು ಬೇಡಿಕೊಂಡಿದ್ದಾನೆ. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯೂ ಜೋರಾಗಿದೆ.
ಉದ್ಯೋಗ ಪಡೆಯಲು ಹತಾಶನಾಗಿರುವ ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ರೆಡ್ಡಿಟ್‌ನಲ್ಲಿ ಈ ರೀತಿಯ ಪೋಸ್ಟ್ ಮಾಡಿ ನಿರುದ್ಯೋಗದ ಸಮಸ್ಯೆ ಬಗ್ಗೆ ಚರ್ಚೆ ಹುಟ್ಟುಹಾಕಿದ್ದಾರೆ. ಸುಮಾರು ಎರಡು ವರ್ಷಗಳಿಂದ ಕೆಲಸಕ್ಕಾಗಿ ಅಲೆದಾಡುತ್ತಿದ್ದು, ಎಲ್ಲಿಯೂ ಪೂರ್ಣಪ್ರಮಾಣದ ಉದ್ಯೋಗ ಪಡೆಯಲು ಸಾಧ್ಯವಾಗಲಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ.

"ನನ್ನ ರೆಸ್ಯೂಮ್ ಅನ್ನು ಬರ್ನ್ ಮಾಡಿ, ಆದರೆ ದಯವಿಟ್ಟು ಸಹಾಯ ಮಾಡಿ" ಎಂದು ಬರೆದುಕೊಂಡು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನುಭವವಿಲ್ಲದ ಕಾರಣ ಎಲ್ಲಿಯೂ ಕೆಲಸ ಸಿಗದೆ, ಕೊನೆಗೆ ಅನುಭವಕ್ಕಾಗಿ (ಎಕ್ಸ್‌ಪೀರಿಯೆನ್ಸ್) ಉಚಿತವಾಗಿ ಕೆಲಸ ಮಾಡಲು ರೆಡಿ ಎಂದು ಹೇಳಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?: "ಎಲ್ಲರಿಗೂ ನಮಸ್ಕಾರ, ನಾನು ಇನ್ಫರ್ಮೇಷನ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಹೊಂದಿದ್ದೇನೆ. 2023ರ ಬ್ಯಾಚ್‌ನ ಪದವೀಧರನಾದ ನಾನು ಪ್ರಸ್ತುತ ಉದ್ಯೋಗವನ್ನು ಪಡೆಯಲು ಹೆಣಗಾಡುತ್ತಿದ್ದೇನೆ" ಎಂದು ಅವರು ಬರೆದಿದ್ದಾರೆ. ಇದರ ಜೊತೆಗೆ ಅವರ ರೆಸ್ಯೂಮ್ (ಸ್ವವಿವರ) ಕೂಡ ಶೇರ್ ಮಾಡಿಕೊಂಡಿದ್ದಾರೆ. ನಾನು ಪೈಥಾನ್, ಜಾವಾ, ಡೆವೊಪ್ಸ್, ಕ್ಲೌಡ್ ಕಂಪ್ಯೂಟಿಂಗ್, ಮತ್ತು ಮಷಿನ್ ಲರ್ನಿಂಗ್‌ನಲ್ಲಿ ಸಹ ಪರಿಣಿತಿ ಹೊಂದಿದ್ದೇನೆ ಎಂದಿದ್ದಾರೆ.

ನಾನು ಪ್ರಾಡಕ್ಟ್ ಇಂಜಿನಿಯರ್ ಇಂಟರ್ನ್ ಹಾಗೂ ಟೆಕ್ನಿಕಲ್ ಇಂಟರ್ನ್ ಆಗಿ ಇಂಟರ್ನ್‌ಶಿಪ್ ಸಹ ಮಾಡಿದ್ದೇನೆ. ಅಲ್ಲಿ ನಾನು ವೆಬ್ ಕ್ರಾಲರ್‌ಗಳು, ಎಪಿಐ ಟೆಸ್ಟ್ ಮತ್ತು ಎಂಎಲ್ ಸಿಸ್ಟಮ್‌ಗಳಲ್ಲಿ ಕೂಡ ಕೆಲಸ ಮಾಡಿದ್ದೇನೆ. ನಾನು ಐಇಇಇಯಲ್ಲೂ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದೇನೆ. ಡೀಪ್ ಲರ್ನಿಂಗ್ ಮತ್ತು ಆಂಡ್ರಾಯ್ಡ್ ಡೆವಲಪ್‌ಮೆಂಟ್‌ನಲ್ಲೂ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿದ್ದೇನೆ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ.
ನಾನು ಈ ಹಂತದಲ್ಲಿ ಅನುಭವವನ್ನು ಪಡೆಯಲು ಮತ್ತು ನನ್ನ ಕೌಶಲ್ಯಗಳನ್ನು ಸಾಬೀತುಪಡಿಸಲು ನಾನು ರಿಮೋಟ್ ಆಗಿ ಉಚಿತವಾಗಿಯೇ ಕೆಲಸ ಮಾಡಲು ಸಿದ್ಧನಿದ್ದೇನೆ. ಇಂಟರ್ನ್‌ಶಿಪ್‌ಗಳು, ಫ್ರೀಲ್ಯಾನ್ಸ್ ಗಿಗ್‌ಗಳು ಅಥವಾ ಓಪನ್ ಸೋರ್ಸ್ ಪ್ರಾಜೆಕ್ಟ್‌ಗಳ ಬಗ್ಗೆ ಯಾರಿಗಾದರೂ ತಿಳಿದಿದ್ದರೆ, ದಯವಿಟ್ಟು ಸಂಪರ್ಕಿಸಿ. ನಾನು ಹತಾಶನಾಗಿದ್ದೇನೆ, ಆದರೆ ಕೊಡುಗೆ ನೀಡಲು ಮತ್ತು ಕಲಿಯಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಕೇಳಿಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆಗಿದ್ದು, ನಿರುದ್ಯೋಗ ಭೀಕರತೆಗೆ ಇದೊಂದು ಉತ್ತಮ ಉದಾಹರಣೆ ಎಂದು ನೆಟ್ಟಿಗರು ಮರುಗಿದ್ದಾರೆ. ಈತನ ಪೋಸ್ಟ್ ನೋಡಿ ಹಲವರು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ಸಿಕ್ಕೇ ಸಿಗುತ್ತೆ, ತಾಳ್ಮೆಯಿಂದಿರಿ ಎಂದು ಸಮಾಧಾನವೂ ಮಾಡಿದ್ದಾರೆ. ಅನುಭವ ಇಲ್ಲದವರಿಗೆ ಕೆಲಸ ಇಲ್ಲ ಎನ್ನುವ ಕಂಪನಿಗಳು ಅಭ್ಯರ್ಥಿಗಳ ಅರ್ಹತೆಯನ್ನಾದರೂ ನೋಡಿ ಕೆಲಸ ಕೊಟ್ಟರೆ ಅನುಭವ ತಾನಾಗಿಯೇ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications