Basangouda Patil Yatnal Profile: ಹಿಂದೂ ರಾಷ್ಟ್ರೀಯವಾದಿ ನಾಯಕನ ವ್ಯಕ್ತಿ ಪರಿಚಯ
ಬೆಂಗಳೂರು, ಮಾರ್ಚ್ 03: ಕರ್ನಾಟಕದ ಪ್ರಭಾವಿ ರಾಜಕಾರಣಿಗಳಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸಹ ಒಬ್ಬರು. ಅವರು ತಮ್ಮ ವಿವಾದಿತ ಹೇಳಿಕೆಗಳಿಂದಲೇ ಮನೆಮಾತಾದವರು. ಚಿಕ್ಕ ವಯಸ್ಸಿನಲ್ಲೇ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಕೀರ್ತಿ ಅವರದ್ದು. ಹಿಂದೂ ರಾಷ್ಟ್ರೀಯವಾದಿ ಎಂದೇ ಹೆಸರು ಮಾಡಿರುವ ಅವರು ಪ್ರಸ್ತುತ ಬಿಜೆಪಿ ಶಾಸಕರಾಗಿದ್ದಾರೆ. ಅವರ ವ್ಯಕ್ತಿ ಪರಿಚಯ ಇಲ್ಲಿದೆ ಓದಿ.

ವಿಜಯಪುರ ಜಿಲ್ಲೆಯಲ್ಲಿ ಜನನ
ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರ ತಾಲ್ಲೂಕಿನ ಐನಾಪುರದಲ್ಲಿ ಜನಸಿದರು. 13-12-1963 ಅವರ ಜನ್ಮ ದಿನಾಂಕ. ಅವರ ತಂದೆ ರಾಮನಗೌಡ ಬಾ. ಪಾಟೀಲ್ ಅವರು ಮೂಲತಃ ಕೃಷಿಕರಾಗಿದ್ದರು. ಯತ್ನಾಳ್ ಅವರು ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ್ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಬಿಕಾಂ ಪದವಿ ಪಡೆದಿರುವ ಯತ್ನಾಳ್ ಅವರ ಮೂಲ ಉದ್ಯೋಗ ವ್ಯವಸಾಯ. ಅವರು ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು.

94 ರಲ್ಲೇ ರಾಜಕೀಯ ಬದುಕು ಆರಂಭ
ಯತ್ನಾಳ್ ಅವರು 1994 ರಲ್ಲೇ ರಾಜಕೀಯ ಬದುಕನ್ನು ಆರಂಭಿಸಿದರು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಆಯ್ಕೆಯಾದರು. 1999 ರ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಅವರು 2004 ರಲ್ಲಿ ಲೋಕಸಭೆಗೆ ಮರು ಆಯ್ಕೆಯಾದರು. ಅವರು 8 ಸೆಪ್ಟೆಂಬರ್ 2003 ರಿಂದ 16 ಮೇ 2004 ರ ವರೆಗೆ ಕೇಂದ್ರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

2010 ರಲ್ಲಿ ಜೆಡಿಎಸ್ ಸೇರ್ಪಡೆ
2010 ರಲ್ಲಿ ಅವರು ಜನತಾದಳಕ್ಕೆ (ಜೆಡಿಎಸ್) ಸೇರ್ಪಡೆಗೊಂಡರು. 2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಅದೇ ವರ್ಷದಲ್ಲಿ ಜೆಡಿಎಸ್ ತೊರೆದು ಮತ್ತೆ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿಯಿಂದ ಅಮಾನತು
2015 ರಲ್ಲಿ, ಕರ್ನಾಟಕ ವಿಧಾನ ಪರಿಷತ್ತಿನ ಬಿಜಾಪುರ ಸ್ಥಳೀಯ ಪ್ರಾಧಿಕಾರಗಳ ಅವಳಿ ಕ್ಷೇತ್ರಗಳಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಅವರನ್ನು 6 ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದಿಂದ ಹೊರಹಾಕಲಾಯಿತು.

2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ
ಯತ್ನಾಳ್ ಅವರು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರು. ವಿಜಯಪುರ ಕ್ಷೇತ್ರದಿಂದ ಎರಡನೇ ಭಾರಿ ಶಾಸಕರಾಗಿ ಆಯ್ಕೆಯಾದರು. ಪ್ರಸ್ತುತ ವಿಜಯಪುರ ಕ್ಷೇತ್ರದ ಶಾಸಕರಾಗಿರುವ ಅವರು ಪಂಚಮಸಾಲಿ ಮುಖಂಡರೆಂದೇ ಪರಿಗಣಿಸಲ್ಪಟ್ಟಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಅವರು ಮುಂಚೂನಿಯಲ್ಲಿದ್ದಾರೆ.

ಹಲವು ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ
ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಲವು ಸಂಸ್ಥೆಗಳನ್ನು ಸ್ಥಾಪಿಸಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆ, ಶ್ರೀ ಸಿದ್ದೇಶ್ವರ ಸುಪರ್ ಬರ್ಮೂರ್ ಸಂಸ್ಥೆ, ಸಿದ್ದಸಿರಿ, ಸೌಹಾರ್ದ ಸಹಕಾರಿ ಸಂಘ, ಸಂಗನಬಸವ ಅಂತರಾಷ್ಟ್ರೀಯ ವಸತಿ ಶಾಲೆ, ಗೋ ರಕ್ಷಾ ಕೇಂದ್ರ ಹಾಗೂ ಶಿವಕುಮಾರ ಸ್ವಾಮೀಜಿ ಶುಗರ್ಸ್‌ನ ಸಂಸ್ಥಾಪಕ ಅಧ್ಯಕ್ಷರು.

ಬಿಜೆಪಿ ನಾಯಕರನ್ನೇ ಟೀಕಿಸುವ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ವಿವಾದಿತ ವ್ಯಕ್ತಿತ್ವವೆಂದೇ ಹೇಳಬಹುದು. ರಾಜ್ಯ ಬಿಜೆಪಿ ನಾಯರಾದ ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರ ಕಟುಟೀಕಾಕಾರರಾಗಿ ಯತ್ನಾಳ್ ಮನೆಮಾತಾಗಿದ್ದಾರೆ. ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಬದ್ಧವೈರಿಯೆಂದೇ ಯತ್ನಾಳ್ ಗುರುತಿಸಿಕೊಂಡಿದ್ದಾರೆ. ಕೋಮುಗಳಿಗೆ ಸಂಬಂಧಿಸಿದಂತೆ ವಿವಾದತ ಹೇಳಿಕೆಗಳನ್ನು ನೀಡುವ ಯತ್ನಾಳ್ ಹಿಂದೂ ಸಂಘಟನೆಗಳಿಗೆ ಪ್ರೀತಿಪಾತ್ರರು.












Click it and Unblock the Notifications