ಬಾಗಲಕೋಟೆಯ ಭೀಮವ್ವ ಈಗ ಉಡುಪಿ ಜಿಲ್ಲೆಯಲ್ಲಿ ಗ್ರಾ.ಪಂ ಅಧ್ಯಕ್ಷೆ; ಇಂಟ್ರಸ್ಟಿಂಗ್ ಕಥೆ ಇಲ್ಲಿದೆ
ಉಡುಪಿ, ಜನವರಿ 28: ಆಕೆ ಕೂಲಿ ಕೆಲಸ ಅರಸಿ ಊರಿಂದೂರಿಗೆ ಅಲೆಯುವ ಬಡ ಮಹಿಳೆ. ಹೀಗೆ ಅಲೆಯುತ್ತಾ ಬಂದು ನೆಲೆಸಿದ್ದು ಕೃಷ್ಣನಗರಿ ಉಡುಪಿಯಲ್ಲಿ. ಇಲ್ಲೇ ಎರಡು ದಶಕಗಳ ಕಾಲ ಜಿಲ್ಲೆಯ ಹಲವೆಡೆ ಕೂಲಿ ಕೆಲಸ ಮಾಡಿದ್ದ ಮಹಿಳೆ, ಈಗ ಪಂಚಾಯತ್ ಅಧ್ಯಕ್ಷೆಯಾಗಿ ಒಂದು ಗ್ರಾಮದ ಚುಕ್ಕಾಣಿಯನ್ನೇ ಹಿಡಿದಿದ್ದಾರೆ. ಕೂಲಿ ಕೆಲಸ ಮಾಡುತ್ತಲೇ ಗ್ರಾಮದ ಅಭಿವೃದ್ಧಿಯ ಪಣತೊಟ್ಟಿದ್ದಾರೆ.
ನಿಜವಾದ ಮಹಿಳಾ ಸಬಲೀಕರಣ ಅಂದ್ರೆ ಇದೇ ಇರಬೇಕು ಅನ್ನಿಸುತ್ತದೆ. ಬಾಗಲಕೋಟೆ ಮೂಲದ ಭೀಮವ್ವ ಕಳೆದ 27 ವರ್ಷಗಳ ಹಿಂದೆ ಉದ್ಯೋಗವನ್ನರಿಸಿ ದೂರದ ಉಡುಪಿಗೆ ಬಂದಿದ್ದರು. ರಸ್ತೆ ನಿರ್ಮಾಣ ಕಾಮಗಾರಿಗೆ ಉಡುಪಿಗೆ ಬಂದು ಆನಂತರ ಉಡುಪಿಯಲ್ಲೇ ನೆಲೆಸಿ ವಿವಿಧ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಸದ್ಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದಲ್ಲಿ ಜನರ ಮನಸ್ಸನ್ನು ಗೆದ್ದು ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ.
ಭೀಮವ್ವ ಉಡುಪಿಯಲ್ಲೇ ತನ್ನ ನಾಲ್ಕು ಮಕ್ಕಳನ್ನು ಓದಿಸಿ ಓರ್ವ ಮಗನನ್ನು ದೇಶ ಕಾಯುವ ಯೋಧನನ್ನಾಗಿ ಮಾಡಿದ್ದಾಳೆ. ಹೀಗೆ ಉಡುಪಿಯಲ್ಲೇ ಅರ್ಧ ಜೀವನ ಕಳೆದ ಭೀಮವ್ವ, ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದರೂ ಕೂಡ ಮೂಲ ಕಸುಬು ಕೂಲಿ ಕೆಲಸ ಇನ್ನೂ ಬಿಟ್ಟಿಲ್ಲ ಅನ್ನುವುದೇ ವಿಶೇಷ.

ಕೂಲಿ ಕೆಲಸಕ್ಕೆ ಅರಸಿ ಬಂದಿದ್ದ ಭೀಮವ್ವ
ಭೀಮವ್ವ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದೇ ಸ್ವಾರಸ್ಯ. ಕಳೆದ ಕೆಲ ವರ್ಷಗಳ ಹಿಂದೆ ಕಾಪು ತಾಲೂಕಿನಿಂದ ಕುಂದಾಪುರ ತಾಲೂಕಿಗೆ ಕೂಲಿ ಕೆಲಸಕ್ಕೆ ಅರಸಿ ಬಂದಿದ್ದ ಭೀಮವ್ವ ಅವರನ್ನು ತಲ್ಲೂರು ಪಂಚಾಯತ್ ಮಾಜಿ ಸದಸ್ಯ ಕರಣ್ ಕುಮಾರ್ ಎಂಬುವರು ಪಂಚಾಯತ್‌ನ ಕೂಲಿ ಕೆಲಸಕ್ಕೆ ನಿಯೋಜಿಸಿದ್ದರು. ಹೀಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದರ ಜೊತೆಗೆ ಮಗನನ್ನು ದೇಶ ಕಾಯುವ ಯೋಧನಾಗಿ ಮಾಡಿರುವ ಈಕೆ ತನ್ನ ಗ್ರಾಮದ ಸೇವೆ ಪ್ರಾಮಾಣಿಕವಾಗಿ ಮಾಡುತ್ತಾರೆ ಅನ್ನುವುದನ್ನು ಅರಿತ ಕರಣ್, ಭೀಮವ್ವನ ಮನವೊಲಿಸಿ ಚುನಾವಣೆಯಲ್ಲಿ ಎಸ್‌ಟಿ ಮೀಸಲಾತಿ ಇದ್ದ ಸ್ಥಾನಕ್ಕೆ ಅಭ್ಯರ್ಥಿಯಾಗಿಸುತ್ತಾರೆ.

ಆಧಾರ್, ರೇಷನ್ ಕಾರ್ಡ್‌ನಂತಹ ಸೇವೆಗಳಿಗೆ ಅಲೆದಾಟ
ಹೀಗೆ ಚುನಾವಣೆಗೆ ನಿಂತ ಭೀಮವ್ವ ಇಡೀ ಗ್ರಾಮದ ಮತದಾರರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿ, ಗೆದ್ದ ಬಳಿಕವೂ ಮತದಾರರ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ನಿಜವಾದ ಬಡತನದ ಕಷ್ಟ, ಆಧಾರ್, ರೇಷನ್ ಕಾರ್ಡ್‌ನಂತಹ ಸೇವೆಗಳಿಗೆ ಅಲೆದಾಟದ ಕಷ್ಟವನ್ನು ಅನುಭವಿಸಿರುವ ಭೀಮವ್ವ, ಇದೀಗ ಅಧ್ಯಕ್ಷೆಯಾಗಿ ಗ್ರಾಮದ ಜನರನ್ನು ಪಂಚಾಯತ್ ಕಚೇರಿಯಲ್ಲಿ ಕಾಯುವ ಕಷ್ಟವನ್ನು ಈವರೆಗೂ ಕೊಟ್ಟಿಲ್ಲವಂತೆ. ಜನರ ಸೇವೆಗೆ ತಕ್ಷಣ ಸ್ಪಂದಿಸಿ ಗ್ರಾಮದ ಜನರ ನಂಬಿಕೆ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಅಲ್ಲದೇ ಹಿಂದಿನಿಂದಲೂ ಈಕೆ ಗ್ರಾಮದಲ್ಲಿ ಏನೇ ಸಮಸ್ಯೆ ಬಂದರೂ, ಎದುರು ನಿಂತು ತನ್ನಿಂದಾದ ಸಹಾಯ ಮಾಡುತ್ತಿದ್ದರು. ಹೀಗಾಗಿ ಗ್ರಾಮದ ಜನರಿಗೆ ಭೀಮವ್ವ ಅಂದರೆ ಒಳ್ಳೆಯ ವಿಶ್ವಾಸ ಇದೆ.

ದುಡಿಮೆ ನಂಬಿ ಉಡುಪಿ ಜಿಲ್ಲೆಗೆ ಕುಟುಂಬ ಸಮೇತ ಬಂದೆ
ಭೀಮವ್ವ ಇಂದು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದರೂ ತಾನು ನಡೆದು ಬಂದ ಹಾದಿಯನ್ನು ಮಾತ್ರ ಇಂದೂ ಮರೆತಿಲ್ಲ. ತನ್ನ ಬದುಕಿನ ಅದ್ಭುತ ಜರ್ನಿಯ ಬಗ್ಗೆ ಭೀಮವ್ವ ಹೇಳಿದ್ದು ಇಷ್ಟು, "ಕಳೆದ 27 ವರ್ಷಗಳ ಹಿಂದೆ ದುಡಿಮೆಯೊಂದನ್ನೇ ನಂಬಿ ಉಡುಪಿ ಜಿಲ್ಲೆಗೆ ಕುಟುಂಬ ಸಮೇತ ಬಂದೆ. ಮೊದಲು ರಸ್ತೆ ನಿರ್ಮಾಣ ಕಾಮಗಾರಿ ಕೆಲಸ ಮಾಡಿದೆ. ಆ ಬಳಿಕ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಗುತ್ತಿಗೆದಾರ ತೋರಿದ ಕೆಲಸವನ್ನು ಮಾಡಿಕೊಂಡು ಬಂದೆ. ನಮಗಾದ ಕಷ್ಟ ನಮ್ಮ ಮಕ್ಕಳಿಗೆ ಆಗಬಾರದೆಂದು ನಾಲ್ಕೂ ಮಕ್ಕಳನ್ನು ಶಾಲೆಗೆ ಕಳುಹಿಸಿದೆ. ಅದರಲ್ಲಿ ಓರ್ವ ಮಗ ಸೈನಿಕನಾಗಿದ್ದಾನೆ''.
"ಕುಂದಾಪುರದ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ತನಗೆ ತಮ್ಮನ ಸ್ಥಾನದಲ್ಲಿ ನಿಂತು ಕರಣ್ ಎಂಬುವವರು ಮೊದಲು ಚುನಾವಣೆಗೆ ನಿಲ್ಲಲು ಸೂಚಿಸಿದರು. ಬಡವರಿಗೆ ಈ ಚುನಾವಣೆ ಒಗ್ಗಲ್ಲ ಅಂತಾ ಹೇಳಿದರೂ ಅವರೇ ಮುಂದೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿದರು. ಆ ಬಳಿಕ ಪಂಚಾಯತ್ ಅಧ್ಯಕ್ಷೆಯೂ ಆಗಿದ್ದೇನೆ. ಅಧ್ಯಕ್ಷೆ ಆಗಿದ್ದೇನೆ ಎನ್ನುವ ಅಹಂಕಾರ ತಲೆಗೆ ಬಂದಿಲ್ಲ. ಈಗಲೂ ಕೂಲಿ ಕೆಲಸಕ್ಕೆ ಹೋಗುತ್ತೇನೆ. ಮಧ್ಯಾಹ್ನದ ವೇಳೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಗ್ರಾಮ ಪಂಚಾಯತ್‌ಗೆ ಬಂದು ಕೆಲಸ ಮಾಡುತ್ತೇನೆ,'' ಅಂತಾ ಹೆಮ್ಮೆಯಿಂದ ಹೇಳುತ್ತಾರೆ.

ಜನರ ಎಲ್ಲಾ ಕಷ್ಟ-ಸುಖಗಳಿಗೆ ಭೀಮವ್ವ ನೆರವು
ಇನ್ನು ಭೀಮವ್ವನ ಈ ಸಾಧನೆಯ ಹಿಂದಿರುವ, ತಲ್ಲೂರು ಗ್ರಾಮಪಂಚಾಯತ್ ಮಾಜಿ ಸದಸ್ಯ ಕರಣ್ ಕುಮಾರ್ ಕೂಡಾ ಭೀಮವ್ವನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ದೂರದ ಊರಿನಿಂದ ಬಂದರೂ ತಲ್ಲೂರಿನ ಜನರ ಎಲ್ಲಾ ಕಷ್ಟ-ಸುಖಗಳಿಗೆ ಭೀಮವ್ವ ನೆರವಾಗಿದ್ದಾರೆ. ಗ್ರಾಮದ ಜನರೂ ಭೀಮವ್ವರನ್ನು ಎಂದೂ ಹೊರಗಿನವರು ಎಂದು ಅಂದುಕೊಂಡಿಲ್ಲ. ಗ್ರಾಮಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಭೀಮವ್ವ ಮಾಡುತ್ತಾರೆ,'' ಅಂತಾ ಖುಷಿ ವ್ಯಕ್ತಪಡಿಸಿದ್ದಾರೆ..
ಒಟ್ಟಿನಲ್ಲಿ ಸಂಕಷ್ಟದ ಸಮಯದಲ್ಲೂ ಪ್ರಾಮಾಣಿಕತೆ ಗಟ್ಟಿಯಾಗಿದ್ದರೆ ದೇವರು ಕೈಬಿಡುವುದಿಲ್ಲ ಅನ್ನುವುದು ಭೀಮವ್ವ ಜೀವನದಲ್ಲಿ ಸಾಬೀತಾಗಿದೆ. ಪ್ರಾಮಾಣಿಕ ಜನಪರ ಕೆಲಸ ಮತದಾರರ ಮನಸ್ಸನ್ನು ಗೆಲ್ಲಬಹುದು ಅನ್ನುವುದನ್ನು ಭೀಮವ್ವ ತೋರಿಸಿಕೊಟ್ಟಿದ್ದಾರೆ. ಭೀಮವ್ವ ಅವರ ಸರಳ ಪ್ರಾಮಾಣಿಕ ಜೀವನ ಸೀಟಿಗಾಗಿ ತಿಕ್ಕಾಟ ನಡೆಸುವ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕಿದೆ.












Click it and Unblock the Notifications