ಹಾಡು ಹಾಡಿ ನಾಯಿಗೆ ಸೀಮಂತ: 50ಕ್ಕೂ ಹೆಚ್ಚು ಮಂದಿ ಭಾಗಿ- ವಿಡಿಯೋ ವೈರಲ್
ನಾಯಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಪ್ರಾಣಿ ಪ್ರಿಯರು ಅವುಗಳನ್ನು ಮನೆ ಮಗುವಿನಂತೆ ನೋಡಿಕೊಳ್ಳುತ್ತಾರೆ. ನಾಯಿ ಕೂಡ ತನ್ನನ್ನು ಸಾಕಿದವರಿಗೆ ನಿಯತ್ತಾಗಿರುತ್ತದೆ. ತನ್ನನ್ನು ಮಾಲೀಕರು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಕಾಳಜಿಯನ್ನು ಹೊಂದಿರುತ್ತದೆ. ಅಷ್ಟೇ ಪ್ರೀತಿ ಕೂಡ ತೋರುತ್ತದೆ. ಇಂತಹ ನಾಯಿಗೆ ಸೀಮಂತ ಮಾಡಿದ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಸೂರು (ಬೆಂಗಳೂರಿನ ಹೊರಗೆ) ಸಮೀಪದ ಕುಕ್ಕನಹಳ್ಳಿಯಲ್ಲಿ ಕುಟುಂಬವೊಂದು ತನ್ನ ಸಾಕುನಾಯಿಗೆ ಸೀಮಂತ ಮಾಡುವ ಮೂಲಕ ಗಮನಸೆಳೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಮಾರಂಭದಲ್ಲಿ 50ಕ್ಕೂ ಹೆಚ್ಚು ಮಂದಿ ನಾಯಿ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಾಮಾನ್ಯವಾಗಿ ನಾಯಿ ಹುಟ್ಟುಹಬ್ಬ ಮಾಡುವುದು, ವಿಶೇಷ ದಿನಗಳಲ್ಲಿ ಪೂಜೆಯನ್ನು ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೆಲ ಮಾಲೀಕರು ತಮ್ಮ ಪ್ರೀತಿಯ ನಾಯಿ ತೀರಿಕೊಂಡರೆ ಅದರ ಮೃತದೇಹವನ್ನು ಮೆರವಣಿಗೆ ಮೂಲಕ ಕರೆದೊಯ್ದು ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಿರುವುದು ಇದೆ. ಇದರೊಂದಿಗೆ ನಾಯಿ ಸೀಮಂತ ಕಾರ್ಯಕ್ರಮ ಮಾಡುವುದು ಕೂಡ ವಿಡಿಯೋಗಳನ್ನು ನಾವು ನೋಡಿದ್ದೇವೆ.
ಇದೀಗ ಇದೇ ಸಾಲಿನಲ್ಲಿ ಕುಕ್ಕನಹಳ್ಳಿಯಲ್ಲಿ ಕುಟುಂಬವೊಂದು ನಾಯಿ ಸೀಮಂತ ಕಾರ್ಯಕ್ರಮ ಮಾಡಿದೆ. ನಾಯಿಗೆ ಕೆಂಪು ಅಂಗಿ ತೊಡಿಸಲಾಗಿದೆ. ಹೂವಿನ ಹಾರ ಹಾಕಿ ಅದಕ್ಕೆ ಕುಂಕುಮ ಇಡಲಾಗಿದೆ. ಅದರ ಮುಂದೆ ಆರತಿ ತಟ್ಟೆ, ಹಣ್ಣು, ಸ್ವೀಟ್, ಬಿಸ್ಕೇಟ್ ಇಡಲಾಗಿದೆ. ನಾಯಿ ಕೂಡ ಗಾಬರಿಗೊಳ್ಳದೆ ಶಾಂತವಾಗಿ ಕುಳಿತುಕೊಂಡಿದೆ. ಅದರ ಸುತ್ತಲು ಮಕ್ಕಳು ಮಹಿಳೆಯರು ಕುಳಿತುಕೊಂಡಿದ್ದರೂ ನಾಯಿ ಸ್ಥಳದಿಂದ ಮೇಲೇಳುವುದಾಯಿತು ಅಥವಾ ಗಾಬರಿಗೊಳ್ಳುವುದಾಯಿತು ಕಾಣಿಸುವುದಿಲ್ಲ. ಅದರಲ್ಲೂ ಮಹಿಳೆಯರು ಹಾಡು ಹಾಡುತ್ತಾ ನಾಯಿಗೆ ಆರತಿ ಮಾಡಿದ್ದಾರೆ. ಮಹಿಳೆಯರು ಹಾಡು ಹಾಡುತ್ತಿದ್ದರೂ ನಾಯಿ ಸ್ಥಳದಿಂದ ಕದಲದೆ ಕುಳಿತುಕೊಂಡಿದೆ.
ಚಿತ್ರದುರ್ಗದಲ್ಲೂ ನಾಯಿಗೆ ಸೀಮಂತ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ವ್ಯಕ್ತಿಯೊಬ್ಬರು ಕಳೆದ ವರ್ಷ ಜನವರಿಯಲ್ಲಿ ಪ್ರೀತಿಯಿಂದ ಸಾಕಿದ ನಾಯಿಗೆ ಅದ್ದೂರಿ ಸೀಮಂತ ಕಾರ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಅಜಯ್ ಹಾಗೂ ಸಹೋದರಿ ಜ್ಯೋತಿ ಮುದ್ದಿನ ನಾಯಿಗೆ ಸೀಮಂತ ಕಾರ್ಯಕ್ರಮ ಮಾಡಿದ್ದರು. ಗ್ರಾಮದ ಅರಣ್ಯ ಇಲಾಖೆಯಲ್ಲಿ ವಾಚ್‌ಮನ್ ಆಗಿರುವ ಅಜಯ್. ಮನೆಯಲ್ಲೊಂದು ಮುದ್ದಿನ ನಾಯಿ ಬೇಕು ಎಂಬ ಆಸೆಯಿಂದ ಕಳೆದ ಹನ್ನೊಂದು ತಿಂಗಳ ಹಿಂದೆ ಬೆಂಗಳೂರಿನಿಂದ ಲ್ಯಾಬ್ರಡಾರ್ ಜಾತಿಯ ನಾಯಿಯನ್ನು ತಂದಿದ್ದ ಕುಟುಂಬ ಅದಕ್ಕೆ ರೂಬಿ ಎಂದು ನಾಮಕರಣ ಮಾಡಿದ್ದರು. ಅಂದಿನಿಂದ ಮನೆಯ ಮಗುವಂತೆ ಬೆಳೆದು ಕುಟುಂಬದ ಸದಸ್ಯಳಾಗಿದ್ದ ರೂಬಿ.
ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಿದ್ದ ಕುಟುಂಬ. ತಮ್ಮ ಮುದ್ದಿನ ಶ್ವಾನ ಗರ್ಭಿಣಿಯೆಂಬುದು ತಿಳಿದ ಬಳಿಕ ಸಂತೋಷಗೊಂಡು ಅಕ್ಕಪಕ್ಕದ ಮನೆಯವರನ್ನು ಕರೆದು ಸೀಮಂತ ಕಾರ್ಯ ಮಾಡಿತ್ತು. ಇಲ್ಲೂ ಕೂಡ ಮಹಿಳೆಯರು ಹೂ, ಹಣ್ಣು, ಅರಿಶಿಣ, ಕುಂಕುಮ ಇಟ್ಟು ಆರತಿ ಬೆಳಗಿದ್ದರು. ಬಳಿಕ ಕೇಕ್ ಕಟ್ ಮಾಡಿ ಸಿಹಿ ಹಂಚಿದ ಸಂಭ್ರಮಿಸಿದ್ದರು. ಘಟನೆ ವಿಡಿಯೋ ವೈರಲ್ ಆಗಿತ್ತು. ಶ್ವಾನ ಪ್ರೀತಿ ಕಂಡು ಮಾಲೀಕರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.












Click it and Unblock the Notifications