
ಯಾವ ಎಣ್ಣೆ ಡೇಂಜರ್, ಯಾವುದು ಬೆಟರ್? ತುಪ್ಪ ತಿನ್ನೋದು ತಪ್ಪಾ?
ಚೆನ್ನಾಗಿ ತಿನ್ನಿ, ಕುಡಿ, ಆಡಿ, ಕೆಲಸ ಮಾಡಿ- ಇದು ನಮ್ಮ ಪೂರ್ವಿಕರ ಜೀವನಶೈಲಿಯ ಸ್ಯಾಂಪಲ್. ಆದರೆ ಈ ಸೂತ್ರದಲ್ಲಿ ನಮಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳುತ್ತೇವೆ. ಹೀಗಾಗಿ, ಸೂತ್ರ ಇಲ್ಲದ ಗಾಳಿಪಟದಂತೆ ಆಗಿಹೋಗುತ್ತೇವೆ. ಉದಾಹರಣೆಗೆ, ನಮ್ಮ ಪೂರ್ವಜರು ಚೆನ್ನಾಗಿ ತಿಂತಾ ಇದ್ರು ಅಂತ ನಾವೂ ಚೆನ್ನಾಗಿ ತಿಂತೇವೆ, ಆದ್ರೆ ಮೈಬಗ್ಗಿಸಿ ದುಡಿಯೋದಿಲ್ಲ. ಹಿಂದಿನ ಕಾಲದಲ್ಲಿ ಚೆನ್ನಾಗಿ ತಿನ್ನುತ್ತಿದ್ದ ಜೊತೆಗೆ ಬೆವರು ಹರಿಸಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ತಿಂದಿದ್ದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇತ್ತು. ಇದನ್ನು ಅರ್ಥ ಮಾಡಿಕೊಳ್ಳಲು ನಮಗೆ ವ್ಯವದಾನ ಇಲ್ಲವಾಗಿರುವುದು ಹೌದು.
ಆಹಾರ ವಿಚಾರದಲ್ಲಿ ನಮಗೆ ಅನೇಕ ಗೊಂದಲಗಳಿವೆ. ದಿನವೂ ಯಾವುದಾದರು ಒಂದು ಅಧ್ಯಯನ ಮತ್ತು ಸಮೀಕ್ಷೆಗಳು ಬಂದು ಈ ಗೊಂದಲವನ್ನು ಹೆಚ್ಚಿಸುತ್ತವೆ. ಕೆಲ ಅಧ್ಯಯನಗಳು ಆಲಿವ್ ಎಣ್ಣೆ ಒಳ್ಳೆಯದು ಎಂದರೆ, ಅದಕ್ಕೆ ಪ್ರತಿಯಾಗಿ, ಆಲಿವ್ ಆಯಿಲ್‌ನಲ್ಲಿ ಮಾರಕವಾದ ಅಂಶಗಳಿವೆ ಎನ್ನುವ ಇನ್ನೊಂದು ಸಮೀಕ್ಷೆ ಬಂದಿರುತ್ತದೆ. ತುಪ್ಪ ತಿನ್ನೋದು ತಪ್ಪು ಎಂದು ಕೆಲ ತಜ್ಞರು ಹೇಳಿದರೆ, ತುಪ್ಪ ತಿಂದು ನಮ್ಮಪ್ಪ, ಅವರಪ್ಪ ಎಲ್ಲಾ ಬದುಕಿರಲಿಲ್ಲವಾ ಎಂದು ಇನ್ನೂ ಕೆಲವರ ವಾದ.
ಬೆಂಗಳೂರು: ಮಕ್ಕಳಲ್ಲಿ ಹೆಚ್ಚಾದ ಉಸಿರಾಟ ತೊಂದರೆ, ಇದಕ್ಕೆ ಕಾರಣವೇನು?
ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಯಾಕೆ ತಿನ್ನಬೇಕು, ಯಾಕೆ ತಿನ್ನಬಾರದು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದೆ ನಮಗೆ 'ತೋಚಿದ' ಸೂತ್ರಕ್ಕೆ ಕಟ್ಟುಬೀಳುತ್ತೇವೆ. ಒಂದು ವಿಷಯ ನೆನಪಿರಲಿ, ಭಾರತೀಯರಲ್ಲಿ ಕೊಲೆಸ್ಟ್ರಾಲ್ (ಕೊಬ್ಬು), ಡಯಾಬಿಟಿಸ್, ಬಿಪಿ ಹೆಚ್ಚು. ಇವು ಜೀವನಶೈಲಿ ಮತ್ತು ಆಹಾರಶೈಲಿಗೆ ಸಂಬಂಧಿಸಿದ ಕಾಯಿಲೆಗಳು.
ಭಾರತೀಯರಲ್ಲಿ ಯಾಕೆ ಈ ಕಾಯಿಲೆ ಹೆಚ್ಚು ಕಾಡುತ್ತವೆ ಎಂಬ ಕುತೂಹಲದ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಲೇಬೇಕು. ಇದು ನಮ್ಮ ಜೀವ ಮತ್ತು ಜೀವನದ ಪ್ರಶ್ನೆ. ಪದ್ಮಶ್ರೀ ಪುರಸ್ಕೃತ ವೈದ್ಯ ಡಾ. ಅನೂಪ್ ಮಿಶ್ರಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದ ಲೇಖನವೊಂದರಲ್ಲಿ ಕೆಲ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರ ಪ್ರಮುಖ ಅಂಶಗಳನ್ನು ನಾವು ಇಲ್ಲಿ ಹಂಚಿಕೊಂಡಿದ್ದೇವೆ.
ಕೆಟ್ಟ ಹವಾಮಾನದಿಂದ 200 ಸಾಂಕ್ರಾಮಿಕ ರೋಗಗಳು ಜಿವಂತ; ಯಾಕೆ ? ಇಲ್ಲಿದೆ ಮಾಹಿತಿ

ಕೊಬ್ಬಿನಲ್ಲಿ ಒಳ್ಳೆಯದು, ಕೆಟ್ಟದ್ದು...!
ನಮ್ಮ ದೇಹಕ್ಕೆ ಸೇರುವ ಕೊಬ್ಬನ್ನು ಒಳ್ಳೆಯ ಕೊಬ್ಬು ಮತ್ತು ಕೆಟ್ಟ ಕೊಬ್ಬು ಎಂದು ವರ್ಗೀಕರಿಸಬಹುದು. ಒಳ್ಳೆಯ ಕೊಬ್ಬು ನಮ್ಮ ದೇಹಕ್ಕೆ ಒಳ್ಳೆಯದು. ಕೆಟ್ಟ ಕೊಬ್ಬು ಕೆಟ್ಟದ್ದು. ಸ್ಯಾಚುರೇಟೆಡ್ ಫ್ಯಾಟ್ ಅಥವಾ ಪರ್ಯಾಪ್ತ ಕೊಬ್ಬು ಕೆಟ್ಟದ್ದು. ಇದು ನಮ್ಮ ಅನೇಕ ಅನಾರೋಗ್ಯಗಳಿಗೆ ಮೂಲ ಎಂದು ಹೇಳಲಾಗುತ್ತದೆ.
ಇನ್ನು, ಅಪರ್ಯಾಪ್ತ ಕೊಬ್ಬು ಅಥವಾ ಅನ್‌ಸ್ಯಾಚುರೇಟೆಡ್ ಫ್ಯಾಟ್‌ನಿಂದ ನಮ್ಮ ದೇಹಕ್ಕೆ ಕೆಟ್ಟದಾಗುವುದಿಲ್ಲ. ನಮ್ಮ ದೇಹದ ಬೆಳವಣಿಗೆಗೆ ಇದು ಅಗತ್ಯವೂ ಇರುತ್ತದೆ. ಪಾಲಿ ಅನ್‌ಸ್ಯಾಚುರೇಟೆಡ್, ಮಾನೊ ಅನ್‌ಸ್ಯಾಚುರೇಟೆಡ್ ಫ್ಯಾಟ್ ಇತ್ಯಾದಿ ವಿಧಗಳಿವೆ.
ಮಾನೊ ಅನ್‌ಸ್ಯಾಚುರೇಟೆಡ್ ಕೊಬ್ಬು ನಮ್ಮ ರಕ್ತದಲ್ಲಿನ ಕೊಬ್ಬನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಡಯಾಬಿಟಿಸ್ ನಿಯಂತ್ರಣಕ್ಕೂ ಇದು ಪುಷ್ಟಿ ಕೊಡುತ್ತದೆ. ಇನ್ನು ಪಾಲಿ ಅನ್‌ಸ್ಯಾಚುರೇಟೆಡ್ ಕೊಬ್ಬಿಗೆ ಒಮೇಗಾ-3 ಫ್ಯಾಟಿ ಆ್ಯಸಿಡ್ ಒಂದು ಒಳ್ಳೆಯ ಉದಾಹರಣೆ.
ಸ್ಯಾಚುರೇಟೆಡ್ ಫ್ಯಾಟ್ ಎಂದರೆ?: ರಾಸಾಯನಿಕ ಶಾಸ್ತ್ರದ ಪ್ರಕಾರ, ಸ್ಯಾಚುರೇಟೆಡ್ ಫ್ಯಾಟ್‌ನಲ್ಲಿ ದ್ವಿಬಂಧ (ಡಬಲ್ ಬಾಂಡ್) ಇಲ್ಲದ ಫ್ಯಾಟಿ ಆ್ಯಸಿಡ್ ಮಾಲಿಕ್ಯೂಲ್ ಅಥವಾ ಕೊಬ್ಬಿನ ಆಮ್ಲದ ಕಣಗಳು ಹೆಚ್ಚಿನ ಅನುಪಾತದಲ್ಲಿ ಇರುತ್ತವೆ. ಅನ್‌ಸ್ಯಾಚುರೇಟೆಡ್ ಫ್ಯಾಟ್‌ನಲ್ಲಿ ಇಂಥ ಮಾಲಿಕ್ಯೂಲ್‌ಗಳು ಕಡಿಮೆ ಸಂಖ್ಯೆಯಲ್ಲಿ ಇರುತ್ತವೆ.

ಮೆಡಿಟರೇನಿಯನ್ ಆಹಾರಕ್ರಮ
ಅಧ್ಯಯನಗಳ ಪ್ರಕಾರ ಮೆಡಿಟರೇನಿಯನ್ ಆಹಾರಕ್ರಮ ಇರುವ ದೇಶಗಳು ಅಥವಾ ಜನರಲ್ಲಿ ಸರ್ವತೋಮುಖ ಆರೋಗ್ಯ ಇರುತ್ತದೆ. ಡಯಾಬಿಟಿಸ್, ಬಿಪಿ, ಹೃದ್ರೋಗ ಇತ್ಯಾದಿ ಆರೋಗ್ಯ ಸಮಸ್ಯೆಗಳು ಇಲ್ಲಿ ಕಡಿಮೆ. ಇಲ್ಲಿನ ಜನರ ಆಯಸ್ಸೂ ಕೂಡ ಹೆಚ್ಚಿರುತ್ತದೆ.
ಇದಕ್ಕೆ ಕಾರಣ ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ ಆಹಾರ ವಸ್ತುಗಳು ಎಂದು ಹೇಳಲಾಗುತ್ತದೆ. ಇಲ್ಲಿನ ಜನರು ತರಕಾರಿಗಳನ್ನು ಹೆಚ್ಚು ಸೇವಿಸುತ್ತಾರೆ. ಮಾನೊ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚು ಇರುವ ಬೀಜ, ಧಾನ್ಯಗಳನ್ನು ತಿನ್ನುತ್ತಾರೆ. ಆಲಿವ್ ಎಣ್ಣೆಯನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದು ಅವರ ಆರೋಗ್ಯ ಪಾಲನೆಗೆ ಸಹಕಾರಿಯಾಗಿರಬಹುದು ಎಂಬುದು ತಜ್ಞರ ಅನಿಸಿಕೆ.
ಮೆಡಿಟರೇನಿಯನ್ ಆಹಾರಪದ್ಧತಿ ಎಂದರೆ ಮೆಡಿಟರೇನಿಯನ್ ಸಾಗರ ವ್ಯಾಪ್ತಿಯ ಪ್ರದೇಶಗಳಲ್ಲಿರುವ ಆಹಾರಕ್ರಮ. ಆಫ್ರಿಕಾದ ಉತ್ತರ ಭಾಗ, ಯೂರೋಪ್‌ನ ದಕ್ಷಿಣ ಭಾಗ ಮತ್ತು ಏಷ್ಯಾದ ಪಶ್ಚಿಮ ಭಾಗದ ಪ್ರದೇಶಗಳು ಮೆಡಿಟರೇನಿಯನ್ ಸಾಗರ ವ್ಯಾಪ್ತಿಗೆ ಬರುತ್ತವೆ. ಆಲ್ಬೇನಿಯಾ, ಈಜಿಪ್ಟ್, ಗ್ರೀಸ್, ಫ್ರಾನ್ಸ್, ಇಟಲಿ, ಸ್ಪೇನ್, ಸಿರಿಯಾ, ಟರ್ಕಿ, ಮಾಲ್ಟಾ, ಮೊನಾಕೊ, ಮೊರಾಕೊ, ಇಸ್ರೇಲ್ ಇತ್ಯಾದಿ ದೇಶಗಳಲ್ಲಿನ ಆಹಾರ ಕ್ರಮ ಇದು.

ಕೊಬ್ಬರಿ ಎಣ್ಣೆ, ತುಪ್ಪ ಡೇಂಜರ್?
ಭಾರತದ ಸಾಂಪ್ರದಾಯಿಕ ಆಹಾರ ಪದ್ಧತಿ ಬಗ್ಗೆ ನಾವು ಹೆಮ್ಮೆ ಪಡುವುದು ಸಹಜ. ಆದರೆ, ವಸ್ತುನಿಷ್ಠವಾಗಿ ಅವಲೋಕಿಸಿದಾಗ ಭಾರತೀಯರ ಆಹಾರಕ್ರಮದಲ್ಲಿ ಸಮಸ್ಯೆ ಇರುವುದು ಕಾಣುತ್ತದೆ. ಭಾರತೀಯರು ಸ್ಯಾಚುರೇಟೆಡ್ ಕೊಬ್ಬು ಇರುವ ಆಹಾರವನ್ನು ಹೆಚ್ಚು ಬಳಸುತ್ತಾರೆ. ಸ್ಯಾಚುರೇಟೆಡ್ ಅಲ್ಲದ ಕೊಬ್ಬು ಇರುವ ಆಹಾರವನ್ನು ಸೇವಿಸುವುದು ಕಡಿಮೆ. ಹೀಗಾಗಿ, ಭಾರತೀಯರು ಡಯಾಬಿಟಿಸ್, ಬಿಪಿ, ಹೃದ್ರೋಗ ಇತ್ಯಾದಿ ಸಮಸ್ಯೆಗಳಿಗೆ ಬೇಗ ತುತ್ತಾಗುತ್ತಾರೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿರುವ ಸಂಗತಿ.
ಸ್ಯಾಚುರೇಟೆಡ್ ಕೊಬ್ಬುಯುಕ್ತ ಆಹಾರದಲ್ಲಿ ಪ್ರಮುಖವಾದುದು ತುಪ್ಪ, ಕೊಬ್ಬರಿ ಎಣ್ಣೆ, ಪಾಮ್ ಎಣ್ಣೆಯೂ ಇಂಥ ಕೆಟ್ಟ ಕೊಬ್ಬನ್ನು ಹೊಂದಿರುತ್ತವೆ. ಆಡು, ಕೋಳಿ ಇತ್ಯಾದಿ ಮಾಂಸವೂ ಸ್ಯಾಚುರೇಟೆಡ್ ಫ್ಯಾಟ್ ಹೊಂದಿರುತ್ತವೆ. ಇವನ್ನು ಸೇವಿಸುವುದರಿಂದ ನಮ್ಮ ಹೃದಯದ ರಕ್ತನಾಳಗಳಿಗೆ ತಡೆಯಾಗಿ ಹೃದಯಾಘಾತ ಇತ್ಯಾದಿ ಅಪಾಯಕ್ಕೆ ಹೆಚ್ಚು ಆಸ್ಪದವಾಗುತ್ತದೆ.
ದಿನಕ್ಕೆ ಒಂದೆರಡು ಸ್ಪೂನು ತುಪ್ಪ ತಿನ್ನುತ್ತಾ ಬಂದರೆ ಹೃದಯಾಘಾತದ ಅವಕಾಶ ಹತ್ತು ಪಟ್ಟು ಹೆಚ್ಚುತ್ತದೆ. ತುಪ್ಪದಿಂದ ಕಿಡ್ನಿಗೆ ಅಪಾಯವಾಗಬಹುದು, ಶ್ವಾಸಕೋಶ ಕ್ಯಾನ್ಸರ್ ರೋಗ ಬರಬಹುದು ಎಂದು ಕೆಲ ಅಧ್ಯಯನಗಳು ಹೇಳುತ್ತವೆ.
ಇನ್ನು, ಕೊಬ್ಬರಿ ಎಣ್ಣೆಯಲ್ಲೂ ಸ್ಯಾಚುರೇಟೆಡ್ ಫ್ಯಾಟ್ ಬಹಳ ಇರುತ್ತದೆ. ಈ ಕೊಬ್ಬರಿ ಎಣ್ಣೆಯಿಂದ ನಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತೆ. ಇದರಿಂದಲೂ ರಕ್ತನಾಳ ಹೆಪ್ಪುಗಟ್ಟುವುದು ಇತ್ಯಾದಿ ಅಪಾಯ ಇರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಒಳ್ಳೆಯ ಕೊಬ್ಬಿರುವ ಆಹಾರಗಳು ನಮ್ಮಲ್ಲಿ ಕಡಿಮೆ. ಒಳ್ಳೆಯ ಕೊಬ್ಬಿಗೆ ಒಮೇಗಾ-3 ಆಮ್ಲಗಳು ಒಳ್ಳೆಯ ಉದಾಹರಣೆ. ಮೀನಿನಲ್ಲಿ ಇದು ಯಥೇಚ್ಛವಾಗಿ ಸಿಗುತ್ತದೆ. ಆದರೆ, ಭಾರತದಲ್ಲಿ ಮೀನು ತಿನ್ನುವವರು ಕಡಿಮೆ. ಕರಾವಳಿ ಭಾಗಗಳಲ್ಲಿ ಮಾತ್ರ ಮೀನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಒಳ್ಳೆಯ ಕೊಬ್ಬಿಗೆ ಮೀನು ಬಿಟ್ಟರೆ ಒಳ್ಳೆಯ ಪರ್ಯಾಯ ಆಯ್ಕೆಗಳಿಲ್ಲ. ವಾಲ್ನಟ್, ಸೋಯಾಬೀನ್, ಎಳ್ಳೆಣ್ಣೆ, ಕಡಲೆಬೀಜ, ಚಿಯಾ ಬೀಜ, ಸಾಸಿವೆ ಎಣ್ಣೆ ಇತ್ಯಾದಿಯಲ್ಲಿ ಒಮೇಗಾ-3 ಫ್ಯಾಟಿ ಆ್ಯಸಿಡ್ ಇರುತ್ತದಾದರೂ ಪ್ರಮಾಣ ಅತ್ಯಲ್ಪ.

ಟ್ರಾನ್ಸ್ ಫ್ಯಾಟ್ ಸಹವಾಸ ಬೇಡ
ಕೆಟ್ಟ ಕೊಬ್ಬಿನಲ್ಲಿ ಸ್ಯಾಚುರೇಟೆಡ್ ಫ್ಯಾಟ್‌ಗಿಂತಲೂ ಡೇಂಜರ್ ಎಂದರೆ ಟ್ರಾನ್ಸ್ ಫ್ಯಾಟ್‌ಗಳಾಗಿವೆ. ಡಾಲ್ಡಾ ಇತ್ಯಾದಿ ವನಸ್ಪತಿ ಹಾಗು ಇತರ ತರಕಾರಿ ಆಧರಿತ ಎಣ್ಣೆಗಳಲ್ಲಿ ಇದು ಹೆಚ್ಚಿರುತ್ತದೆ. ಇದು ನಮ್ಮ ಹೃದಯ, ಯಕೃತ್ತು, ಪ್ಯಾಂಕ್ರಿಯಾಸ್ ಮತ್ತು ರಕ್ತನಾಳಗಳಿಗೆ ಅಪಾಯ ತರುತ್ತದೆ.
ನಾವು ಎಣ್ಣೆಯನ್ನು ಹಲವು ಬಾರಿ ಮರುಬಳಕೆ ಮಾಡಿದಾಗೆಲ್ಲಾ ಟ್ರಾನ್ಸ್ ಫ್ಯಾಟ್ ಅಂಶ ಹೆಚ್ಚುತ್ತಲೇ ಹೋಗುತ್ತೆ. ಬೀದಿಬದಿ ಹೋಟೆಲುಗಳಲ್ಲಿ ಯೂಸ್ಡ್ ಆಯಿಲ್ ಬಳಸುವುದು ಸಾಮಾನ್ಯ. ನಮ್ಮ ಅನೇಕ ಮನೆಗಳಲ್ಲೂ ಕೂಡ ಒಮ್ಮೆ ಕುದಿಸಿದ ಎಣ್ಣೆಯನ್ನು ಹಲವು ದಿನಗಳವರೆಗೆ ಮರುಬಳಕೆ ಮಾಡುವ ಪ್ರವೃತ್ತಿ ಇದೆ. ಇಂಥ ಮರುಬಳಕೆ ಎಣ್ಣೆಯಲ್ಲಿ ಕರಿದ ಬಜ್ಜಿ, ಪೂರಿ ಇತ್ಯಾದಿ ಆರೋಗ್ಯಕ್ಕೆ ಮಾರಕ ಎಂದು ಹಲವು ಅಧ್ಯಯನಗಳು ದೃಢಪಡಿಸಿವೆ.

ಎಂಥ ಆಹಾರ ಪದ್ಧತಿ ಇರಬೇಕು?
* ಸ್ಯಾಚುರೇಟೆಡ್ ಫ್ಯಾಟ್ ಇರುವ ಎಣ್ಣೆಗಳನ್ನು ಬಳಸಬೇಡಿ
* ಅನ್‌ಸ್ಯಾಚುರೇಟೆಡ್ ಫ್ಯಾಟ್ ಇರುವ ಎಣ್ಣೆಯನ್ನು ಮಿತವಾಗಿ ಬಳಸಿ
* ಕರಿದ ಆಹಾರವನ್ನು ಆದಷ್ಟೂ ಕಡಿಮೆ ಮಾಡಿ
* ಒಮ್ಮೆ ಕರಿದ ಎಣ್ಣೆಯನ್ನು ಮರುಬಳಸಬೇಡಿ. ಹೀಗಾಗಿ, ಅಲ್ಪ ಎಣ್ಣೆಯನ್ನು ಮಾತ್ರ ಬಾಣಲೆಗೆ ಹಾಕಿ ಕರಿಯುವ ಅಭ್ಯಾಸ ರೂಢಿಸಿಕೊಳ್ಳಿ.
* ಆದಷ್ಟೂ ಹೆಚ್ಚು ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ
* ಬೀಜ, ಕಾಳು ಇತ್ಯಾದಿಯನ್ನೂ ಯಥೇಚ್ಛವಾಗಿ ಬಳಸಿ
* ಮಾಂಸಾಹಾರಿಗಳಾದರೆ ಮೀನಿನ ಸೇವನೆಗೆ ಹೆಚ್ಚು ಆದ್ಯತೆ ಕೊಡಿ.
ಇದರ ಜೊತೆಗೆ ದೈಹಿಕ ಚಟುವಟಿಕೆಗೆ ಆದಷ್ಟೂ ಪ್ರಯತ್ನ ಮಾಡಿ. ವಾಹನ ಬಳಕೆ ಕಡಿಮೆ ಮಾಡಿ ನಡಿಗೆ ಹೆಚ್ಚಲಿ. ಬಸ್ಸುಗಳಲ್ಲಿ ಅಡ್ಡಾಡುತ್ತಿದ್ದರೆ ಒಂದೆರಡು ಸ್ಟಾಪ್ ಹಿಂದೆಯೇ ಇಳಿದುಕೊಂಡು ನಿಮ್ಮ ಸ್ಥಳಕ್ಕೆ ನಡೆದು ಹೋಗಿ. ಒಟ್ಟಿನಲ್ಲಿ ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆ ಸರಿಯಾಗಿ ಇದ್ದರೆ ಯಾವ ರೋಗವೂ ಮೈಗತ್ತುವುದಿಲ್ಲ.
(ಒನ್ಇಂಡಿಯಾ ಸುದ್ದಿ)