ವಿಶೇಷ ಲೇಖನ; ಹಸಿದವರ ಪಾಲಿನ ಅನ್ನರಾಮಯ್ಯ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನಗಳು ಕಳೆದಿವೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರ ಮುನ್ನಡೆಸುತ್ತಿದ್ದಾರೆ. ಸರ್ಕಾರ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಮಂಜೇಶ್. ಜಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರು ಬರೆದ ವಿಶೇಷ ಲೇಖನ.
ಹೌದು, ನೂರು ಜನ ನೂರು ಹೇಳಲಿ, ರಾಜ್ಯದ ಹಸಿದವರ ಪಾಲಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತುತ್ತಿನ ಚೀಲ ತುಂಬುವ ಅನ್ನರಾಮಯ್ಯ. ಆತ ನೂರಾರು ವರ್ಷ ಸುಖವಾಗಿ ಬಾಳಲಿ ಇದು ಕೋಲಾರ ಜಿಲ್ಲೆಯ ಅನ್ನಭಾಗ್ಯ ಯೋಜನೆಯ ಫಲಾನುಭವಿಯೊಬ್ಬರ ಮನದಾಳದ ಹಾರೈಕೆ.
ಈ ಹಾರೈಕೆಯೊಂದೇ ಸಾಕು ಸರ್ಕಾರದ ಅನ್ನಭಾಗ್ಯ ಯೋಜನೆಯ ಸಾರ್ಥಕತೆ ಸಾರಲು. ಸರ್ಕಾರವು ಯಾವುದೇ ಯೋಜನೆ ಜಾರಿ ಮಾಡುವ ಮೊದಲು ಅದರ ರೂಪುರೇಷೆ, ಖರ್ಚು ವೆಚ್ಚ, ಸಾಧಕ ಭಾದಕಗಳ ಕುರಿತು ಸಾಕಷ್ಟು ಚರ್ಚೆ, ಚಿಂತನ ಮಂಥನಗಳು ನಡೆದ ನಂತರ ಯೋಜನೆಗಳನ್ನು ಘೋಷಿಸುವ ಸಂಪ್ರದಾಯ ಮುರಿದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿತ್ತು.

ಅಂದರೆ ಈ ಸರ್ಕಾರದ ಆಶಯ ಹಸಿದವರಿಗೆ ಅನ್ನವಿಡುವ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ, ಯುವಕರ ಆಶಾಕಿರಣವಾಗುವ ಯೋಜನೆಗಳನ್ನು ಜಾರಿ ಮಾಡಲು ಎಂತಹ ಅಗ್ನಿ ಪರೀಕ್ಷೆಗಳನ್ನೂ ಎದುರಿಸಲು ಸಿದ್ದ. ಈಗ ಚುನಾವಣೆಯಲ್ಲಿ ಗೆದ್ದು ಗದ್ದುಗೆಯನ್ನು ಪಡೆದ ಬಳಿಕ ಈ ಐದೂ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದಲ್ಲೇ ಹೊಸ ಆದರ್ಶದ ಮಾದರಿಯನ್ನು ಕರ್ನಾಟಕ ಸರ್ಕಾರ ಹುಟ್ಟು ಹಾಕಿದೆ. ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಯುವ ನಿಧಿ ಎಂಬ ಐದು ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಪ್ರಮುಖವಾಗಿ ಮಹಿಳೆಯರಿಗೆ ಹಣಕಾಸು ಸಹಾಯ ಮಾಡುವ ಯೋಜನೆಗಳಾಗಿದೆ.
ಯುವ ನಿಧಿ ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುವ ಯೋಜನೆಯಾಗಿದ್ದರೆ, ಗೃಹಲಕ್ಷ್ಮಿ ಮನೆಯ ಒಡತಿಗೆ 2000 ರೂಪಾಯಿ ನೀಡುವ ಯೋಜನೆಯಾಗಿದೆ. ಇನ್ನು ಶಕ್ತಿ ಯೋಜನೆಯ ಪ್ರಯೋಜನವನ್ನು ಈಗಾಗಲೇ ಪಡೆಯುತ್ತಿರುವ ಮಹಿಳೆಯರು ಉಚಿತವಾಗಿ ಬಸ್ ಸಂಚಾರ ಮಾಡಿ ಹಣವನ್ನು ಇತರೆ ಖರ್ಚಿಗೆ ಜೋಪಾನ ಮಾಡುತ್ತಿದ್ದಾರೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಲೇಖನದಲ್ಲಿ ನಾವು ಅನ್ನ ಭಾಗ್ಯ ಯೋಜನೆಯಿಂದ ಮಹಿಳೆಗೆ ಮಾತ್ರವಲ್ಲ ಒಂದು ಕುಟುಂಬಕ್ಕೆ ಹೇಗೆ ಸಹಾಯವಾಗುತ್ತದೆ, ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಚೆಕ್ ಮಾಡುವುದು ಹೇಗೆ, ಎಂಬ ಮೊದಲಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ಅನ್ನಭಾಗ್ಯ ಯೋಜನೆ ಆರಂಭ; ಐದು ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ ಹೊಸ ಯೋಜನೆ ಏನಲ್ಲ. ಇದು ಸುಮಾರು ಹತ್ತು ವರ್ಷಗಳ ಹಿಂದೆ ಆರಂಭ ಮಾಡಲಾಗಿರುವ ಯೋಜನೆಯಾಗಿದೆ. ಹಸಿವು ಮುಕ್ತ ಕರ್ನಾಟಕವನ್ನು ಮಾಡುವ ಸ್ಪಷ್ಟ ಗುರಿ ಇಟ್ಟುಕೊಂಡು ರಾಜ್ಯದಲ್ಲಿ ಜುಲೈ 2013ರಿಂದ 'ಅನ್ನಭಾಗ್ಯ' ಯೋಜನೆಯನ್ನು ಅಂದಿನ ಸಿಎಂ ಸಿದ್ಧರಾಮಯ್ಯ ಜಾರಿಗೆ ತಂದಿದ್ದಾರೆ. ಬಡತನದ ಬೇಗೆಯಿಂದ ನರಳುವವರಿಗೆ ಎರಡು ಹೊತ್ತು ನೆಮ್ಮದಿಯಾಗಿ ಊಟ ಸಿಗುವಂತಾಗಬೇಕು ಎಂಬುದು ಅವರ ಕನಸಿನ ಆದರ್ಶ.
ಈ ಯೋಜನೆ ಜಾರಿಯಾದ ಬಳಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಕನಿಷ್ಟ 4 ಕಿಲೋ ಅಕ್ಕಿ, ಒಂದು ಕಿಲೋ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಟ 20 ಕೆಜಿ ಅಕ್ಕಿ ಮತ್ತು 3 ಕೆಜಿ ಗೋಧಿಯನ್ನು ವಿತರಣೆ ಮಾಡಲಾಗುತ್ತಿತ್ತು. ನಂತರ ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 2015ರಿಂದ ಅರ್ಹ ಬಿಪಿಎಲ್ ಏಕ ಸದಸ್ಯ ಕುಟುಂಬಗಳಿಗೆ 10 ಕೆಜಿ, ದ್ವಿ-ಸದಸ್ಯ ಕುಟುಂಬಗಳಿಗೆ 20 ಕೆಜಿ, 3ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆಜಿ ಆಹಾರ ಧಾನ್ಯವನ್ನು ಪ್ರತಿ ಕೆಜಿಗೆ ಒಂದು ರೂಪಾಯಿಯಂತೆ ಹಂಚಿಕೆಯನ್ನು ಮಾಡಲಾಗುತ್ತಿತ್ತು. ಆದರೆ ಅದಾದ ಬಳಿಕ ಸರ್ಕಾರ ಬದಲಾದಂತೆ, ಅಕ್ಕಿ ವಿತರಣೆಯನ್ನು ಪ್ರತಿ ವ್ಯಕ್ತಿಗೆ 5 ಕೆಜಿಗೆ ಇಳಿಕೆ ಮಾಡಲಾಗಿದೆ.
ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ಒದಗಿಸುವ ಭರವಸೆಯನ್ನು ನೀಡಿತ್ತು. ಆದರೆ ರಾಜ್ಯದಲ್ಲಿ ಅಷ್ಟೊಂದು ಅಕ್ಕಿ ದಾಸ್ತಾನು ಇಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಲು ಯೋಜಿಸಲಾಯಿತು. ಸ್ವತಃ ಮುಖ್ಯಮಂತ್ರಿಗಳೇ ದೆಹಲಿಗೆ ಹೋಗಿ ಕೇಂದ್ರದ ಮಂತ್ರಿಗಳನ್ನು ಭೇಟಿಮಾಡಿ 1.35ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಬೇಡಿಕೆ ಸಲ್ಲಿಸಿ ಬಂದರು.
ವಿವಿಧ ಯೋಜನೆಗಳಿಗೆ ಅಕ್ಕಿಯನ್ನು ಮೀಸಲಿರಿಸಿರುವುದರಿಂದ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲವೆಂಬ ಉತ್ತರ ಬಂದಿತು . ಅಕ್ಕಿಯನ್ನು ನೀಡಲಾಗದಿದ್ದರೆ ಅಕ್ಕಿಗೆ ತಗಲುವ ವೆಚ್ಚವನ್ನು ಫಲಾನುಭವಿಗಳಿಗೆ ನೀಡಬಹುದಲ್ಲವೇ? ಎಂಬ ವಿಪಕ್ಷಗಳ ಟೀಕೆಯನ್ನೇ ಸಲಹೆಯಾಗಿ ಸರ್ಕಾರ ಸ್ವೀಕರಿಸಿತು. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿ ಅಕ್ಕಿಗೆ 34 ರೂ. ಗಳಂತೆ 5 ಕೆಜಿ ಅಕ್ಕಿಗೆ ಒಟ್ಟು 170 ರೂಪಾಯಿಗಳನ್ನು ಖಾತೆಗೆ ವರ್ಗಾಯಿಸಲಾಗುತ್ತಿದೆ.
ಈ ಯೋಜನೆಯಿಂದ ಏನು ಪ್ರಯೋಜನ?; ಮೊದಲ ಹಂತವಾಗಿ ಅಂದು ಮೈಸೂರು ಮತ್ತು ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ ಮೊದಲು ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಯಿತು. ಅಕ್ಕಿಯ ಬದಲಿಗೆ ಹಣ ನೀಡಲಾಗುತ್ತಿರುವುದರಿಂದ ಬಡವರ ಬಳಿಯಲ್ಲಿ ಹಣದ ಒಳಹರಿವನ್ನು ಹೆಚ್ಚಿಸಿ ಖರೀದಿ ಸಾಮರ್ಥ್ಯ ಹಿಗ್ಗಿಸುವ ಮೂಲಕ ಆರ್ಥಿಕತೆಯ ವೃದ್ಧಿಗೆ ಸರ್ಕಾರ ಮುಂದಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಒಟ್ಟಾರೆ 341751 ಅಂತ್ಯೋದಯ ಹಾಗೂ ಆದ್ಯತಾ ರೇಷನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ 29813 ಅಂತ್ಯೋದಯ ಕಾರ್ಡ್‌ಗಳಾಗಿದ್ದು, 80648 ವ್ಯಕ್ತಿಗಳು ಈ ಕಾರ್ಡ್ ಫಲಾನುಭವಿಗಳಾಗಿದ್ದಾರೆ.
ಅಂತಯೇ 311938 ಆದ್ಯತಾ ಕುಟುಂಬಗಳ 886688 ವ್ಯಕ್ತಿಗಳು ಫಲಾನುಭವಿಗಳಾಗಿದ್ದಾರೆ. ಒಟ್ಟಾರೆ 967336 ಫಲಾನುಭವಿಗಳು ಪ್ರತಿಮಾಹೆ 5 ಕೆಜಿ ಅಕ್ಕಿಯೊಂದಿಗೆ ಉಳಿದ 5 ಕೆಜಿಗಳ ಅಕ್ಕಿ ಬದಲಿಗೆ ತಲಾ 170 ರಂತೆ ನೇರನಗದು ವರ್ಗಾವಣೆ ಮೂಲಕ ಅನ್ನಭಾಗ್ಯ ಯೋಜನೆಯ ಫಲಾನುವಭವಿಗಳಾಗಿದ್ದಾರೆ. ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಬಡ, ಮಧ್ಯಮ ವರ್ಗದ ಕುಟುಂಬಕ್ಕೆ ಈ ಯೋಜನೆಯ ಪ್ರಯೋಜನ ಲಭ್ಯವಾಗುತ್ತಲಿದೆ. ಪ್ರತಿ ಕಾರ್ಡ್‌ಗಳನ್ನು ಆಧಾರ್ ಸಂಖ್ಯೆ ಜೊತೆ ಬೆಸೆಯುವ ಮೂಲಕ ಈ ಯೋಜನೆಗೆ ಉತ್ತರದಾಯಿತ್ವ ರೂಪಿಸಲಾಗಿದೆ.
ಪ್ರಸ್ತುತ ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಕರ್ನಾಟಕ ರಾಜ್ಯ ಹೊರತಾಗಿಲ್ಲ. ಹಣದುಬ್ಬರದ ನಡುವೆ ಬಹುತೇಕ ಎಲ್ಲ ಆಹಾರ ಪದಾರ್ಥಗಳ, ಅಗತ್ಯ ವಸ್ತುಗಳ ದರವು ಏರಿಕೆಯಾಗಿದೆ. ನಾವು ಅಗತ್ಯವಾಗಿ ಬಳಕೆ ಮಾಡುವ ಅಕ್ಕಿ, ಗೋಧಿ, ತೊಗರಿಬೇಳೆ, ಸಕ್ಕರೆ, ಹಾಲು, ಚಹಾ ಪುಡಿ , ಉಪ್ಪು, ಆಲೂಗಡ್ಡೆ, ಈರುಳ್ಳಿ, ಟೊಮೆಟೊದ ದರವನ್ನು ನೋಡಿದಾಗ ಈ ಹತ್ತು ಅಗತ್ಯ ವಸ್ತುಗಳ ಪೈಕಿ 9ರ ಬೆಲೆಯು ಗಗನಕ್ಕೆ ಏರಿದೆ.
ಈ ನಡುವೆ ಸರ್ಕಾರ ನೀಡುವ ಈ ಅಕ್ಕಿಯು ನಮ್ಮ ದಿನನಿತ್ಯದ ಬಳಕೆಗೆ ಸಹಾಯವಾಗಲಿದೆ. ಈ ಅಕ್ಕಿಯಿಂದ ತಿಂಡಿ, ಅನ್ನ ಮಾಡಿಕೊಂಡು ಅಕ್ಕಿಯ ಹಣ ಉಳಿಸಿ ಮಕ್ಕಳ ಶಿಕ್ಷಣ, ಇತರೆ ಆಹಾರ ಪದಾರ್ಥಗಳನ್ನು ಖರೀದಿ ಮಾಡುವವರು ಇದ್ದಾರೆ. ಇನ್ನು ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 34 ರೂ. ಗಳಂತೆ ಐದು ಕೆಜಿ ಅಕ್ಕಿಗೆ ಒಟ್ಟು 170 ರೂಪಾಯಿಗಳನ್ನು ನೀಡುವುದರಿಂದ ಈ ಬೆಲೆ ಏರಿಕೆಯ ನಡುವೆ ಅಗತ್ಯ ಆಹಾರ ಖರೀದಿ ಮಾಡಲು ಬಡ ಕುಟುಂಬಕ್ಕೆ ಸಹಾಯವಾಗಲಿದೆ.
ದುಡ್ಡು ಅಕೌಂಟ್‌ಗೆ ಬಂದಿದೆಯಾ ಚೆಕ್ ಮಾಡಿ; ಒಂದು ಕುಟುಂಬದಲ್ಲಿ ಎಷ್ಟು ಜನ ಫಲಾನುಭವಿಗಳಿದ್ದಾರೋ ಅಷ್ಟು ಜನರಿಗೆತಲಾ ರೂ. 170ರಂತೆ ಮನೆಯ ಯಜಮಾನರ ಖಾತೆಗೆ ನೇರವಾಗಿ ನಗದು ರೂಪದಲ್ಲಿ ಪಾವತಿಸಲಾಗುತ್ತಿದೆ. ಬ್ಯಾಂಕ್ ಖಾತೆ ಇಲ್ಲದಿದ್ದರೆ 'ಅನ್ನಭಾಗ್ಯ' ಫಲಾನುಭವಿಗಳಿಗೆ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶವಿದೆ. ಫೋಸ್ಟ್‌ಮ್ಯಾನ್‌ಗೆ ಅಗತ್ಯ ದಾಖಲೆ ಒದಗಿಸಿ ಮನೆ ಬಾಗಿಲಿನಲ್ಲೇ ಸೇವೆ ಪಡೆಯಬಹುದಾಗಿದೆ.
ಈ ಸೇವೆಗಾಗಿ ಅಂಚೆ ಇಲಾಖೆ 'ಡಿ ಕ್ಯೂಬ್ ' ಆ್ಯಪ್ ಪರಿಚಯಿಸಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ 500 ರೂ. ಪಾವತಿಸಿ ಕೂಡಲೇ ಖಾತೆ ಮಾಡಿಸಿಕೊಳ್ಳಬಹುದಾಗಿದೆ. ಸರ್ಕಾರದ ಯೋಜನೆಗಳ ನೇರನಗದು ವರ್ಗವಣೆಗಾಗಿ ಅಂಚೆ ಎಸ್.ಬಿ. ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗುವುದು.
ಹಂತ 1 ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ಹಂತ 2 ಇ- ಸರ್ವಿಸ್ ಪೋರ್ಟಲ್‌ನಲ್ಲಿ ಡಿಬಿಟಿ ಎಂದು ಕಾಣಲಿದೆ. ಅದರ ಮೇಲೆ ಕ್ಲಿಕ್ ಮಾಡಿ ಹಂತ 3 ಸ್ಟೇಟಸ್ ಆಫ್ ಡಿಬಿಟಿ ಅನ್ನು ಆಯ್ಕೆ ಮಾಡಿ, ಹಂತ 4 ನಂತರದ ಪುಟದಲ್ಲಿ ರೇಷನ್ ಕಾರ್ಡ್ ಸಂಖ್ಯೆ (ಆರ್ಸಿ ನಂಬರ್) ಭರ್ತಿ ಮಾಡಿ. ಹಂತ 5 ಮುಂದುವರೆಯಿರಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಹಂತ 6 ಮುಂದಿನ ಪುಟದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆಯೇ, ಕ್ರೆಡಿಟ್ ಆಗಿಲ್ಲವೇ ಎಂಬ ಮಾಹಿತಿ ಲಭ್ಯವಾಗಲಿದೆ.












Click it and Unblock the Notifications