ಬೆಂಗಳೂರು ನಗರದಲ್ಲಿಯೂ ಯಶಸ್ವಿಯಾಗಿ 'ಅನ್ನಭಾಗ್ಯ' ಯೋಜನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ 100 ದಿನಗಳನ್ನು ಪೂರೈಸಿದೆ. ಸರ್ಕಾರ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಪೈಕಿ 4 ಜಾರಿಗೆ ಬಂದಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಯಶಸ್ವಿಯಾಗಿ ಅನುಷ್ಠಾನಗೊಂಡಿವೆ.
ರಾಜ್ಯದ ಜನರ ಅಭಿವೃದ್ಧಿಗಾಗಿ ಚುನಾವಣೆ ಮುನ್ನ ಘೋಷಿಸಿದ್ದ 'ಅನ್ನಭಾಗ್ಯ' ಯೋಜನೆಗೆ ಚಾಲನೆ ಸಿಕ್ಕಿದೆ. ಅಕ್ಕಿ ಬದಲು ಫಲಾನುಭವಿಗಳಿಗೆ ಹಣವನ್ನು ನೀಡಲಾಗುತ್ತಿದೆ. ಇದು ನುಡಿದಂತೆ ನಡೆಯುವ ಸರ್ಕಾರ ಎಂಬುದು ಇದೀಗ ಮನೆ ಮಾತಾಗಿದೆ.

ರಾಜಧಾನಿಯಾದ ಬೆಂಗಳೂರು ನಗರ ಜಿಲ್ಲೆಯಲ್ಲಿ 4 ಗ್ಯಾರಂಟಿ ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿವೆ. 'ಅನ್ನಭಾಗ್ಯ' ಯೋಜನೆ ಹೇಗೆ ಯಶಸ್ವಿಯಾಗಿದೆ? ಎಂಬ ಕುರಿತು ಬೆಂಗಳೂರು ನಗರ ವಾರ್ತಾ ಇಲಾಖೆಯ ವಿಶೇಷ ಲೇಖನ ಇಲ್ಲಿದೆ.
ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು, ಯಾರೊಬ್ಬರೂ ಹಸಿದು ಮಲಗಬಾರದು, ಜನಸಾಮಾನ್ಯರ ಬದುಕು ಹಸನಾಗಬೇಕು ಎಂಬ ಮುಖ್ಯಮಂತ್ರಿಗಳ ಆಶಯವನ್ನು ಸಾಕಾರಗೊಳಿಸಲು 'ಅನ್ನಭಾಗ್ಯ' ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆಜಿ ಆಹಾರ ಧ್ಯಾನದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧ್ಯಾನವನ್ನು ಸೇರಿಸಿ ಪ್ರತಿ ತಿಂಗಳೂ ತಲಾ 10 ಕೆಜಿ ಆಹಾರ ಧ್ಯಾನವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ.
ಅಕ್ಕಿ ಖರೀದಿ ಪ್ರಕ್ರಿಯೆ; ಈ ಉದ್ದೇಶಕ್ಕಾಗಿ ಅಗತ್ಯವಿರುವ ಆಹಾರಧ್ಯಾನವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಟೆಂಡರ್ ಕರೆದು ಖರೀದಿ ಪ್ರಕ್ರಿಯೆ ಪೂರ್ಣಗೊಂಡು ಆಹಾರಧ್ಯಾನ ಸರಬರಾಜು ಆಗುವವರೆಗೆ ರಾಜ್ಯದಲ್ಲಿರುವ ಅಂತ್ಯೋದಯ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಹೆಚ್ ಹೆಚ್) ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಆಹಾರಧ್ಯಾನದ ಬದಲಾಗಿ ಪ್ರತಿ ಕೆಜಿಗೆ ರೂ. 34ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ.
ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದ ವಲಯಗಳ ವ್ಯಾಪ್ತಿಯಲ್ಲಿ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಸಂಖ್ಯೆ 19,352 ಹೊಂದಿದ್ದು ಹಾಗೂ ಆದ್ಯತಾ ಪಡಿತರ ಚೀಟಿ ಸಂಖ್ಯೆ 9,36,091 ಕಾರ್ಡ್‌ದಾರರಿಗೆ ಒಟ್ಟು ರೂ. 45,43,37,750 ಗಳನ್ನು ಪಾವತಿಸಲಾಗಿದೆ.
ಈ ಯೋಜನೆಯ ಫಲಾನುಭವಿ ಶಿವಾಜಿನಗರದ ನಾಗರತ್ನಮ್ಮ ಮಾತನಾಡಿ, "ಅನ್ನಭಾಗ್ಯ ಯೋಜನೆಯಿಂದ ಬಡವರು, ಎರಡು ಹೊತ್ತು ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗಿದೆ" ಎಂದರು.
ಕೆ. ಆರ್. ಪುರದ ರವಿ ಮತ್ತು ಅವರ ಕುಟುಂಬ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ. "ನಮ್ಮ ಕುಟುಂಬದಲ್ಲಿ ಒಟ್ಟು 6 ಜನ ವಾಸಿಸುತ್ತಿದ್ದು, ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಾತ್ರ ದುಡಿಮೆ ಮಾಡುತ್ತಿದ್ದೇವೆ. ನಮ್ಮ ದುಡಿಮೆ ಮಕ್ಕಳ ಶಾಲೆ, ಕಾಲೇಜು ಹಾಗೂ ತಾಯಿಯ ಔಷಧಿಗಳಿಗೆ ಸಾಲುವುದಿಲ್ಲ. ಆದರೆ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದಾಗಿ ವರ್ಷಕ್ಕೆ ಸುಮಾರು 40 ಸಾವಿರ ರೂ. ಗಳ ಉಳಿತಾಯವಾಗಲಿದೆ" ಎಂದು ಹೇಳಿದರು.
ಹೊಸಕೆರೆಹಳ್ಳಿಯ ನಿವಾಸಿ ರೂಪ ಮಾತನಾಡಿ, "ಅನ್ನಭಾಗ್ಯ ಯೋಜನೆಯಡಿ ನಮ್ಮ ಖಾತೆಗೆ ನೇರವಾಗಿ ಪ್ರತಿ ತಿಂಗಳು 850 ರೂ. ಗಳು ಬರಲಿದೆ ಹಾಗೂ ಗೃಹಜೋತಿ ಯೋಜನೆಯಡಿ ನಮಗೆ ಪ್ರತಿ ತಿಂಗಳು 1,200 ರೂ.ಗಳು ಉಳಿತಯಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಈ ಗ್ಯಾರಂಟಿ ಯೋಜನೆಗಳಿಂದ ನಮಗೆ ವರ್ಷಕ್ಕೆ ಸುಮಾರು 55,000 ರೂ. ಉಳಿತಾಯವಾಗಲಿದ್ದು, ಇದು ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ" ಎಂದರು.
ಲೇಖನ ಕೃಪೆ; ವಾರ್ತಾ ಇಲಾಖೆ ಬೆಂಗಳೂರು ನಗರ












Click it and Unblock the Notifications