ವಿಶೇಷ ಲೇಖನ; ಕೊಟ್ಟ ಮಾತಿನಂತೆ ಜಾರಿಗೆ ಬಂತು 'ಅನ್ನಭಾಗ್ಯ' ಯೋಜನೆ
ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಅನ್ನಭಾಗ್ಯ' ಯೋಜನೆಯು ಬಡವರ ಪರವಾದ ಯೋಜನೆಯಾಗಿದೆ. ಯಾರೊಬ್ಬರೂ ಹಸಿವಿನಿಂದ ಬಳಲಬಾರದು, ಪ್ರತಿಯೊಂದು ಬಡ ಕುಟುಂಬಗಳೂ ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.
ಚುನಾವಣೆಗೂ ಮುನ್ನ ಜನರಿಗೆ ಕೊಟ್ಟ ಮಾತಿನಂತೆ, ಸರ್ಕಾರ ' ಅನ್ನಭಾಗ್ಯ' ಯೋಜನೆಯಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ.ಗಳಂತೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಹೆಚ್ಚುವರಿ ಅಕ್ಕಿ ಲಭ್ಯವಾಗುವವರೆಗೆ ಮಾತ್ರ ಈ ರೀತಿ ಹಣ ಜಮಾ ಮಾಡಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಡವರ ಪರ. ತಮ್ಮ ಹಿಂದಿನ ಅವಧಿಯಲ್ಲಿನ ಯೋಜನೆಗಳನ್ನು ಮರು ಜಾರಿಗೆ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್‍ಗಳನ್ನು ಮರು ಪ್ರಾರಂಭ ಮಾಡಿದೆ. ಆ ಮೂಲಕ ನಮ್ಮ ಸರ್ಕಾರ ಬಡವರ ಪರ ಎಂಬ ಸಂದೇಶ ರವಾನಿಸಿದೆ.
ಹಣ ಪಾವತಿ ವ್ಯವಸ್ಥೆ; 'ಅನ್ನಭಾಗ್ಯ' ಯೋಜನೆಯಡಿ ನೀಡುವ 5 ಕೆಜಿ ಅಕ್ಕಿ ಜೊತೆ, ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಕೇಂದ್ರದ 5 ಕೆಜಿ ಅಕ್ಕಿ ವಿತರಣೆ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಸದ್ಯಕ್ಕೆ ಕುಟುಂಬದ ಪ್ರತಿ ವ್ಯಕ್ತಿಗೆ 170 ರೂ.ಗಳಂತೆ ನೀಡಲು ತೀರ್ಮಾನಿಸಿತು ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದ್ದು, ಅದರಂತೆಯೇ ಜುಲೈ ತಿಂಗಳಿನಿಂದಲೇ ಹಣ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಜಿಲ್ಲೆಯ ಒಟ್ಟು 2,43,088 ಫಲಾನುಭವಿಗಳಿಗೆ ರೂ.170ರಂತೆ ಡಿಬಿಟಿ ಮೂಲಕ ಒಟ್ಟು 15,43,43,850 ರೂ. ಖಜಾನೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. 19,589 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಅಥವಾ ಇ- ಕೆವೈಸಿ ಆಗಿರುವುದಿಲ್ಲ ಎಂದು ಆಹಾರ ಇಲಾಖೆಯು ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು 357 ನ್ಯಾಯಬೆಲೆ ಅಂಗಡಿಗಳಿದ್ದು, ಒಟ್ಟು 3,44,756 ಪಡಿತರ ಚೀಟಿಗಳಿವೆ. ಅದರಲ್ಲಿ 26,150 ಎಎವೈ ಕಾರ್ಡ್, 2,74,878 ಬಿಪಿಎಲ್ ಕಾರ್ಡ್, 43,728 ಎಪಿಎಲ್ ಕಾರ್ಡ್‍ಗಳಿವೆ.
'ಅನ್ನಭಾಗ್ಯ' ಯೋಜನೆಯ ಫಲಾನುಭವಿ ಹೊನ್ನಳ್ಳಿ ಗ್ರಾಮದ ಈಶ್ವರಪ್ಪ ಮಾತನಾಡಿ, "ನಮ್ಮದು ದೊಡ್ಡ ಕುಟುಂಬ, ಮುಖ್ಯಮಂತ್ರಿಯವರ ಅನ್ಯಭಾಗ್ಯ ಯೋಜನೆ ಜಾರಿಯಾಗಿರೋದು ಒಳ್ಳೆಯದೇ. ಅಕ್ಕಿ ಸಿಕ್ಕಿಲ್ಲವಾದ್ದರಿಂದ ಹಣ ನೀಡಲಾಗುತ್ತಿದೆ. ಸರ್ಕಾರ ನುಡಿದಂತೆ ನಡೆದಿದೆ, ಅಕ್ಕಿಯ ಬದಲಿಗೆ ಹಣ ನೀಡುತ್ತಿರುವುದರಿಂದ ನಮಗೆ ತೊಂದರೆ ಏನೂ ಆಗಿಲ್ಲ. ಹಣದ ಬದಲಾಗಿ ಅಕ್ಕಿ ನೀಡಿದರೆ ಇನ್ನೂ ಒಳ್ಳೇದು" ಎಂದು ಹೇಳಿದ್ದಾರೆ.
ಲೇಖನ ಕೃಪೆ; ಬಳ್ಳಾರಿ ವಾರ್ತಾ ಇಲಾಖೆ












Click it and Unblock the Notifications