ಫ್ರಾನ್ಸ್ ಚುನಾವಣೆಯಲ್ಲಿ ಎಡ ಬಲಗಳ ಬಲವೃದ್ಧಿ; ಅಧ್ಯಕ್ಷ ಮ್ಯಾಕ್ರಾನ್‌ಗೆ ಕೈತಪ್ಪಿದ ಬಹುಮತ
ಪ್ಯಾರಿಸ್, ಜೂನ್ 20: ಸತತ ಎರಡನೇ ಬಾರಿ ಫ್ರಾನ್ಸ್ ದೇಶದ ಅಧ್ಯಕ್ಷೀಯ ಹುದ್ದೆ ಗೆದ್ದಿದ್ದ ಇಮ್ಯಾನುಯಲ್ ಮ್ಯಾಕ್ರಾನ್ ಇದೀಗ ಸಾರ್ವತ್ರಿಕ ಚುನಾವಣೆಯಲ್ಲಿ ಜನಾದೇಶ ಕಳೆದುಕೊಂಡಿದ್ದಾರೆ. ಫ್ರಾನ್ಸ್ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಮ್ಯಾಕ್ರಾನ್ ಅವರ 'ಟುಗೆದರ್' ಮೈತ್ರಿಕೂಟ ಬಹುಮತ ಪಡೆಯಲು ವಿಫಲವಾಗಿರುವುದು ತಿಳಿದುಬಂದಿದೆ.
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಈವರೆಗೆ ಶೇ. 97ರಷ್ಟು ಮತಗಳ ಎಣಿಕೆಯಾಗಿದೆ. 577 ಸದಸ್ಯ ಬಲದ ಫ್ರಾನ್ಸ್ ರಾಷ್ಟ್ರೀಯ ಸಭೆಯಲ್ಲಿ (ಲೋಕಸಭೆ) ಬಹುಮತಕ್ಕೆ 289 ಸೀಟುಗಳನ್ನು ಗೆಲ್ಲುವ ಅಗತ್ಯ ಇದೆ. ಆದರೆ, ಮ್ಯಾಕ್ರೋನ್ ನೇತೃತ್ವದ ಮೈತ್ರಿಕೂಟ 200-260 ಸ್ಥಾನಗಳನ್ನು ಗೆಲ್ಲಬಹುದು ಎಂದು ವಿಶ್ಲೇಷಕರು ಅಂದಾಜು ಮಾಡಿದ್ದಾರೆ. ಹೀಗಾಗಿ, ಅಧ್ಯಕ್ಷ ಮ್ಯಾಕ್ರಾನ್‌ಗೆ ಸರಿಸುಮಾರು 30-80 ಸ್ಥಾನಗಳ ಕೊರತೆ ಬೀಳುವ ಸಾಧ್ಯತೆ ಇದೆ.
ಇದೇ ಏಪ್ರಿಲ್ ತಿಂಗಳಲ್ಲಿ ಇಮ್ಯಾನುಯಲ್ ಮ್ಯಾಕ್ರಾನ್ ಅವರು ಸತತ ಎರಡನೇ ಬಾರಿ ಅಧ್ಯಕ್ಷೀಯ ಚುನಾವಣೆ ಗೆದ್ದು ಇತಿಹಾಸ ನಿರ್ಮಿಸಿದ್ದರು. ಸತತ ಎರಡು ಬಾರಿ ಫ್ರಾನ್ಸ್ ಅಧ್ಯಕ್ಷರಾದ ಮೊದಲ ವ್ಯಕ್ತಿ ಎನಿಸಿದ್ದರು. ಪಕ್ಕಾ ಬಲಪಂಥೀಯ ಪಕ್ಷದ ನಾಯಕ ಮರೈನ್ ಲೇ ಪೆನ್ ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿಸಿದ್ದರು.
ಮ್ಯಾಕ್ರಾನ್ 2017ರಲ್ಲಿ ಮೊದಲ ಬಾರಿಗೆ ಫ್ರಾನ್ಸ್ ಅಧ್ಯಕ್ಷರಾಗಿದ್ದರು. ಏಪ್ರಿಲ್‌ನಲ್ಲಿ ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ಹಲವು ಸುಧಾರಣಾ ಕ್ರಮಗಳನ್ನು ಮತ್ತು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದರು. ಆದರೂ ಸಾರ್ವತ್ರಿಕ ಚುನಾವಣೆಯಲ್ಲಿ ಅವರ 'ಟುಗೆದರ್' ಮೈತ್ರಿಕೂಟ ಬಹುಮತ ಪಡೆಯಲು ವಿಫಲವಾಗಿದೆ.

ಬಲವೃದ್ಧಿಸಿಕೊಂಡ ಎಡ ಪಂಥೀಯರು
ಎಡಪಂಥೀಯ ಪಕ್ಷಗಳ ಮೈತ್ರಿಕೂಟ ಎನ್‌ಯುಪಿಇಎಸ್ 149-200 ಸ್ಥಾನಗಳನ್ನು ಗೆಲ್ಲುವ ಅಂದಾಜು ಇದೆ. ಈ ಎಡ ಮೈತ್ರಿಕೂಟ ಏಪ್ರಿಲ್‌ನ ಅಧ್ಯಕ್ಷೀಯ ಚುನಾವಣೆ ಬಳಿಕ ರಚಿಸಲಾಗಿತ್ತೆಂಬುದು ಕುತೂಹಲ. ಫ್ರಾನ್ಸ್ ದೇಶದ ಕಟ್ಟರ್ ಎಡಪಂಥೀಯರು, ಕಮ್ಯೂನಿಸ್ಟರು, ಸಮಾಜವಾದಿಗಳು ಮತ್ತು ಗ್ರೀನ್ಸ್ ಪಕ್ಷದವರು ಸೇರಿ ಮೈತ್ರಿ ಮಾಡಿಕೊಂಡಿದ್ದರು. ಇಲ್ಲಿ ಗ್ರೀನ್ಸ್ ಎಂದರೆ ಎಡಪಂಥೀಯ ತತ್ವದ ಪರಿಸರವಾದಿಗಳ ಪಕ್ಷದವರು.

ಕಟ್ಟರ್ ಬಲಪಂಥೀಯರ ಬಲವೂ ಹೆಚ್ಚಾಯ್ತು
ಭಾರತದಲ್ಲಿ ಬಲಪಂಥೀಯ ಪಕ್ಷ ಎಂದರೆ ಬಿಜೆಪಿ. ಫ್ರಾನ್ಸ್ ದೇಶದಲ್ಲಿ ಬಲಪಂಥೀಯ ಪಕ್ಷವಾಗಿ ಬಿಂಬಿತವಾಗಿರುವುದು ರಿಪಬ್ಲಿಕನ್ಸ್. ಅದಕ್ಕೂ ಕಟ್ಟರ್ ಬಲಪಂಥೀಯ ಪಕ್ಷ ಎನಿಸಿರುವುದು ನ್ಯಾಷನಲ್ ರ‍್ಯಾಲಿ ಪಾರ್ಟಿ. ಎರಡು ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಕೈಸುಟ್ಟುಕೊಂಡಿರುವ ಲೇ ಪೆನ್ ಅವರು ಈ ಪಕ್ಷದ ನಾಯಕ. ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 8 ಸ್ಥಾನಗಳನ್ನು ಹೊಂದಿದ್ದ ನ್ಯಾಷನಲ್ ರ‍್ಯಾ ಪಕ್ಷ ಈ ಬಾರಿ ಬರೋಬ್ಬರಿ 89 ಸಂಸದರನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದು ಫ್ರಾನ್ಸ್ ಇತಿಹಾಸದಲ್ಲಿ ಲೇ ಪೆನ್ ಅವರ ಪಕ್ಷ ಗಳಿಸಿದ ಅತಿ ಹೆಚ್ಚು ಸ್ಥಾನಗಳಾಗಿದೆ.

ಮ್ಯಾಕ್ರಾನ್‌ಗೆ ನಿರಾಸೆ
ಇಮ್ಯಾನುಯಲ್ ಮ್ಯಾಕ್ರಾನ್ ಅವರ 'ಟುಗೆದರ್' ಮೈತ್ರಿಕೂಟವು ಉದಾರವಾದಿಗಳ ಸಮಾಗಮವಾಗಿದೆ. ಅಂದರೆ ಲಿಬರಲ್ ಮತ್ತು ಸೆಂಟ್ರಿಸ್ಟ್‌ಗಳ ವಿಚಾರಧಾರೆಯುಳ್ಳ ಪಕ್ಷಗಳ ಮೈತ್ರಿಕೂಟ ಇದಾಗಿದೆ. ಸತತ ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ಇಮ್ಯಾನುಯಲ್ ಮ್ಯಾಕ್ರಾನ್ ಬಹಳಷ್ಟು ಉತ್ಸಾಹದಿಂದ ಕೆಲ ಘೋಷಣೆಗಳನ್ನು ಮಾಡಿದ್ದರು. ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಏರಿಸಿದ್ದು ಬಹಳ ಸದ್ದು ಮಾಡಿತು. ಹಾಗೆಯೇ, ತೆರಿಗೆ ಕಡಿತ ಕ್ರಮವೂ ಜನಪ್ರಿಯವಾಯಿತೆಂದು ಭಾವಿಸಲಾಗಿದೆ. ಇನ್ನೂ ಕೆಲ ಸುಧಾರಣಾ ಕ್ರಮಗಳು ಮ್ಯಾಕ್ರಾನ್‌ಗೆ ಚುನಾವಣೆಯಲ್ಲಿ ಸುಲಭ ಗೆಲುವು ತಂದುಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರೆ, ಅದು ಹುಸಿಯಾಗುತ್ತಿದೆ.

ಮುಂದೇನಾಗುತ್ತದೆ?
ಇಮ್ಯಾನುಯಲ್ ಮ್ಯಾಕ್ರಾನ್ ಅಧ್ಯಕ್ಷ ಪದವಿಯಲ್ಲಿ ಮುಂದುವರಿಯಬೇಕಾದರೆ ಬಹುಮತ ಸಾಬೀತು ಮಾಡಬೇಕಾಗುತ್ತದೆ. ಈಗ ಅವರು ಬೇರೆ ಯಾವುದಾದರೂ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. ಆದರೆ, ಯಾವ ಗುಂಪಿನೊಂದಿಗೆ ಅವರು ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದೇ ಕುತೂಹಲ.
ಎಡಪಂಥೀಯ ಮೈತ್ರಿಕೂಟವು ಮ್ಯಾಕ್ರಾನ್ ಜೊತೆ ಸೇರಲು ಸುತಾರಾಂ ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ, ಮ್ಯಾಕ್ರಾನ್‌ರ ಕಟ್ಟರ್ ಎದುರಾಳಿ ಲೇ ಪೆನ್ ಅವರ ಪಕ್ಷವೂ ಮೈತ್ರಿಗೆ ಬರುವ ಸಾಧ್ಯತೆ ಕಡಿಮೆ. ಇನ್ನುಳಿದಿರುವುದು ಸಾಂಪ್ರದಾಯಿಕ ಬಲಪಂಥೀಯ ಪಕ್ಷವೆನಿಸಿದ ರಿಪಬ್ಲಿಕನ್ಸ್ (LR) ಪಕ್ಷ. ಇದು 40-50 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ರಿಪಬ್ಲಿಕನ್ಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮ್ಯಾಕ್ರಾನ್‌ಗೆ ಚಕಾರ ಏನಿರುವುದಿಲ್ಲ.
ಆದರೆ, ರಿಪಬ್ಲಿಕನ್ಸ್ ಪಕ್ಷದ ಅಧ್ಯಕ್ಷ ಕ್ರಿಸ್ಟಿಯನ್ ಜೇಕಬ್ ಅವರಂತೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡುತ್ತಿದ್ದಾರೆ. ಯಾವ ಮೈತ್ರಿಕೂಟಕ್ಕೆ ಬೆಂಬಲ ಕೊಡುತ್ತೇವೆಂದು ಅವರು ಸ್ಪಷ್ಟವಾಗಿ ಹೇಳುತ್ತಿಲ್ಲ. ತಾವು ವಿಪಕ್ಷ ಸ್ಥಾನದಲ್ಲಿ ಉಳಿಯುತ್ತೇವೆ ಎಂದು ಮೆದುವಾಗಿ ಹೇಳಿದ್ದಾರೆ. ಈಗ ಲೇ ಪೆನ್ ಅವರ ನ್ಯಾಷನಲ್ ರ‍್ಯಾಲಿ ಪಕ್ಷ ಎಡಪಂಥೀಯ ಮೈತ್ರಿಕೂಟದ ಜೊತೆ ಹೋಗುವ ಸಾಧ್ಯತೆ ಶೂನ್ಯ. ಹೀಗಾಗಿ, ಲೇ ಪೆನ್ ಅವರ ಪಕ್ಷ ಮತ್ತು ರಿಪಬ್ಲಿಕನ್ಸ್ ಪಕ್ಷಗಳಲ್ಲಿ ಯಾರಾದರೊಬ್ಬರು ಮ್ಯಾಕ್ರಾನ್‌ಗೆ ಬೆಂಬಲ ಕೊಟ್ಟರೆ ಅಚ್ಚರಿ ಏನಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications