
ಈ 5 ಘಟನೆ ನಡೆಯುತ್ತೆ, ನೆನಪಿಡಿ: 'ಟೈಮ್ ಟ್ರಾವೆಲರ್' ನುಡಿದ ಭವಿಷ್ಯ
ಟೈಮ್ ಟ್ರಾವಲ್ ಬಗ್ಗೆ ನೀವು ಕೇಳಿರಬಹುದು. ಟೈಮ್ ಟ್ರಾವೆಲಿಂಗ್ ಬಗ್ಗೆ ಹಲವು ಹಾಲಿವುಡ್ ಸಿನಿಮಾಗಳು ಬಂದಿವೆ. ಭವಿಷ್ಯ ಕಾಲದಿಂದ ಜನರು ಬರುವುದು, ಭೂತಕಾಲಕ್ಕೆ ಹೋಗುವುದು ಹೀಗೆ ವಿವಿಧ ಕಾಲಘಟ್ಟಗಳಿಗೆ ಸಂಚರಿಸುವುದಕ್ಕೆ ಟೈಮ್ ಟ್ರಾವೆಲಿಂಗ್ ಎನ್ನುತ್ತಾರೆ. ಈಗ ಟಿಕ್ ಟಾಕ್‌ನಲ್ಲಿ ಟೈಮ್ ಟ್ರಾವೆಲರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಹಲವು ಭವಿಷ್ಯಗಳನ್ನು ನುಡಿದು ಬಹಳ ಜನರ ಆಸಕ್ತಿ ಕೆರಳಿಸುತ್ತಿದ್ದಾನೆ.
ಟಿಕ್ ಟಾಕ್‌ನಲ್ಲಿ ಇನೋ ಅಲೇರಿಕ್ ಹೆಸರಿನ ಅಕೌಂಟ್‌ನಲ್ಲಿ ಈತ ವಿಡಿಯೋ ಮಾಡಿ ಸದ್ದು ಮಾಡುತ್ತಿದ್ದಾನೆ. ದೈತ್ಯ ಜೇಡ, ದೈತ್ಯ ಇರುವೆ ಇತ್ಯಾದಿ ಜೀವಿಗಳು ಮುಂದಿನ ವರ್ಷ ಮನುಷ್ಯರ ಕಣ್ಣಿಗೆ ಬೀಳುತ್ತವೆ ಎಂದು ಈ ಹಿಂದೆ ಈತ ಹೇಳಿದ್ದ.
ಈಗ ಟಿಕ್ ಟಾಕ್‌ನಲ್ಲಿ ಮತ್ತೊಂದು ವಿಡಿಯೋ ಹಾಕಿದ್ದು ಅದರಲ್ಲಿ ಆತ ಭೂಮಿಯಲ್ಲಿ ಐದು ಘಟನೆಗಳು ಇನ್ನಾರು ತಿಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾನೆ. ಇನ್ನೆರಡು ತಿಂಗಳಲ್ಲಿ ಏಲಿಯನ್‌ಗಳು ಭೂಮಿಗೆ ಬರಲಿವೆ ಎಂದು ಆತ ಭವಿಷ್ಯ ಹೇಳಿದ್ದಾನೆ. ಇದೂ ಸೇರಿದಂತೆ ಆ ಐದು ಪ್ರಮುಖ ಘಟನೆಗಳು ಈ ಕೆಳಕಾಣಿಸಿದಂತಿವೆ.
'ಟೈಮ್ ಟ್ರಾವಲರ್' ಇನೋ ಅಲೇರಿಕ್ ಹೇಳಿದ ಭವಿಷ್ಯಗಳು
2022, ನವೆಂಬರ್ 30: ಭೂಮಿಯನ್ನೇ ಪ್ರತಿಬಿಂಬಿಸುವ ರೀತಿಯ ಗ್ರಹವೊಂದು ಜೇಮ್ಸ್ ವೆಬ್ ಟೆಲಿಸ್ಕೋಪ್‌ಗೆ ಕಾಣಸಿಗುತ್ತದೆ.
2022, ಡಿಸೆಂಬರ್ 8: ಹೊಸ ರೀತಿಯ ಲೋಹಗಳನ್ನು ಮತ್ತು ಏಲಿಯನ್ ಜೀವಿಗಳನ್ನು ಹೊಂದಿರುವ ದೊಡ್ಡ ಉಲ್ಖೆಯೊಂದು ಭೂಮಿಗೆ ಅಪ್ಪಳಿಸುತ್ತದೆ.
2023, ಫೆಬ್ರುವರಿ 6: ನಾಲ್ವರು ಹದಿಹರೆಯದ ಮಕ್ಕಳ ಕಣ್ಣಿಗೆ ಪುರಾತನ ಪಳೆಯುಳಿಕೆಗಳು ಬೀಳುತ್ತವೆ. ಹಾಗೆಯೇ, ಇತರ ಗೆಲಾಕ್ಸಿಗಳಿಗೆ (ನಕ್ಷತ್ರಪುಂಜ) ದಾರಿ ಕೊಡುವ ವರ್ಮ್‌ಹೋಲ್ ಅನ್ನು ತೆರೆಯಬಲ್ಲ ಸಾಧನವೂ ಸಿಗುತ್ತದೆ.
2023 ಮಾರ್ಚ್ 23: ಹಿಂದೂ ಮಹಾಸಾಗರದ ಮಾರಿಯಾನಾ ಟ್ರೆಂಚ್ ಬಳಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳ ತಂಡದವರು ಪುರಾತನ ಜೀವಿಯೊಂದನ್ನು ಕಂಡುಹಿಡಿಯುತ್ತಾರೆ.
2023: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 750 ಅಡಿ ಎತ್ತರದ ಭಾರೀ ಸುನಾಮಿ ಅಲೆ ರಾಚಲಿದೆ.
ಇಲ್ಲಿ ಮಾರಿಯಾನಾ ಟ್ರಂಚ್ ಎಂಬುದು ಹಿಂದೂ ಮಹಾಸಾಗರದಲ್ಲಿರುವ ದೈತ್ಯ ಕುಳಿ. 69 ಕಿಮೀ ಅಗಲ ಹಾಗೂ 2550 ಕಿಮೀ ಉದ್ದ ಮತ್ತು 10 ಸಾವಿರ ಅಡಿ ಆಳದ ಮಹಾ ಸಾಗರ ರಂಧ್ರ ಇದು. ಒಂದು ಅಂದಾಜು ಪ್ರಕಾರ, ಎವರೆಸ್ಟ್ ಶಿಖರವನ್ನು ಈ ಕುಳಿಯಲ್ಲಿ ಇರಿಸಿದರೆ ಶಿಖರದ ತುದಿ ಎರಡು ಕಿಮೀ ಕೆಳಗಿರುತ್ತದಂತೆ. ಇಂಥ ಪ್ರದೇಶದಲ್ಲಿ ಪುರಾತನ ಜೀವಿ ಕಾಣಸಿಗುತ್ತದೆ ಎಂಬುದು ಈ ವ್ಯಕ್ತಿಯ ಭವಿಷ್ಯವಾಣಿ.
2671ನೇ ಇಸವಿಯಿಂದ ಬಂದವನೇ?
ಇನೋ ಅಲಾರಿಕ್ ಹೆಸರಿನ ಈ ಟಿಕ್ ಟಾಕ್ ಬಳಕೆದಾರ ತನ್ನನ್ನು ತಾನು ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುತ್ತಾನೆ. 2671ನೇ ವರ್ಷದಿಂದ, ಅಂದರೆ ಭವಿಷ್ಯ ಕಾಲದಿಂದ ತಾನು ಈಗ ಬಂದಿರುವುದಾಗಿ ಹೇಳಿರುವ ಈತ ಮುಂಬರುವ ದಿನಗಳಲ್ಲಿ ಈ ವಿಶ್ವವು ಈಗಿನಂತೆ ಇರುವುದಿಲ್ಲ ಎಂದು ಹೇಳಿದ್ದಾನೆ.
ಈ ಹಿಂದೆಯೂ ಈತ ಕೆಲ ಘಟನೆಗಳು ನಡೆಯಲಿವೆ ಎಂದು ಎಚ್ಚರಿಸಿದ್ದಿದೆ. 3 ಅಡಿ ಎತ್ತರದ ದೈತ್ಯ ಜೇಡ, 18 ಅಡಿಯ ದೈತ್ಯ ಬೀಟಲ್ (ಜೀರುಂಡೆ), ಮತ್ತು 1 ಅಡಿಯ ದೈತ್ಯ ಇರುವೆ ಈ ಭೂಮಿಯಲ್ಲಿ ಮನುಷ್ಯರ ಕಣ್ಣಿಗೆ ಬೀಳುತ್ತವೆ ಎಂದು ಈತ ಹೇಳಿದ್ದ. ಆದರೆ, ಯಾವಾಗ ಎಂಬುದು ಗೊತ್ತಾಗಿಲ್ಲ. ಈತ ಹೇಳಿದ ಯಾವ ಘಟನೆಗಳು ಇದೂವರೆಗೆ ನಿಜವಾದ ಬಗ್ಗೆ ಮಾಹಿತಿ ಇಲ್ಲ. ಈತ ತನ್ನ ಟಿಕ್ ಟಾಕ್ ಅಕೌಂಟ್‌ಗೆ ಜನರನ್ನು ಆಕರ್ಷಿಸಲು ಮಾಡುತ್ತಿರುವ ನಾಟಕ ಇದಾಗಿರುವ ಸಾಧ್ಯತೆಯೇ ಹೆಚ್ಚು.
(ಒನ್ಇಂಡಿಯಾ ಸುದ್ದಿ)