ಪ್ರವಾಸಿಗನ ಖುಷಿ ಹೆಚ್ಚಿಸುವ ಪಯಣದ ಹಾದಿ! ಪ್ರವಾಸ ಮಾಡುವಾಗ ಈ ಸಂಗತಿ ಗಮನಿಸಿ
ಇತ್ತೀಚಿನ ದಿನಗಳಲ್ಲಿ ಪ್ರವಾಸದ ಪರಿಕಲ್ಪನೆಯೇ ಬದಲಾಗತ್ತಿದೆ. ಹಿಂದಿನ ದಿನಗಳಲ್ಲಿ ದೇವಸ್ಥಾನಗಳಿಗೆ ಹೂಗುವುದಷ್ಟೇ ಪ್ರವಾಸಕ್ಕೆ ಸೀಮಿತವಾಗಿತ್ತು. ಆ ನಂತರ ದೇವಸ್ಥಾನಗಳ ಸಮೀಪವೇ ಇರುವ ಫಾಲ್ಸ್ ಗಳು, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು ಹೆಚ್ಚಾಯಿತು.
ಈಗ ಪ್ರತಿ ವೀಕೆಂಡ್‌ಗಳಲ್ಲಿ ಮನೆಯಿಂದ ಕಾಲಿಡುತ್ತಿದ್ದಂತೆ ಒಂದು ಸೆಲ್ಪಿ ತೆಗೆದುಕೊಳ್ಳುವ ಮೂಲಕ ಪ್ರವಾಸಕ್ಕೆ ಚಾಲನೆ ಸಿಗುತ್ತದೆ. ಪ್ರತಿ ನಿಮಿಷವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಯಾವ ಪ್ರದೇಶಕ್ಕೆ ಯಾವ ಮಾರ್ಗದಲ್ಲಿ, ಯಾವುದರಲ್ಲಿ ಹೋದರೆ ಎಂಜಾಯ್ ಮಾಡಬಹುದು. ಆ ಮಾರ್ಗದಲ್ಲಿ ಸಾಗುವಾಗ ನಮ್ಮ ಕಣ್ಣಿಗೆ ಏನೆಲ್ಲ ಕಾಣ ಸಿಗುತ್ತದೆ ಎಂಬ ಲೆಕ್ಕಾಚಾರದಿಂದಲೆ ಪ್ರವಾಸವನ್ನು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತದೆ. ಹೋಗುವ ಜಾಗವಷ್ಟೇ ಅಲ್ಲ, ಸಾಗುವ ದಾರಿ ಕೂಡ ಪ್ರಯಾಣದ ಖುಷಿಯನ್ನು ಹೆಚ್ಚಿಸುತ್ತದೆ.

ಎಲ್ಲವನ್ನೂ ಪ್ಲಾನ್ ಮಾಡಲೇಬೇಕಿಲ್ಲ!
ಇತ್ತೀಚಿನ ದಿನಗಳಲ್ಲಿ, ಸಾಕಷ್ಟು ಯುವ ಜನತೆ ಪ್ರವಾಸಕ್ಕೆ ಹೋಗಬೇಕಾದರೆ ಇಂತಹ ಕಡೆಗೆ ಹೋಗಬೇಕೆಂಬ ನಿರ್ಧಿಷ್ಟ ಪ್ಲ್ಯಾನ್ ಮಾಡಿಕೊಳ್ಳುವುದಿಲ್ಲ. ಎಲ್ಲಾದರು ಹೋಗಬೇಕಷ್ಟೆ ಅನ್ನುವ ಮನಃ ಸ್ಥಿತಿಯಲ್ಲಿಯೇ ಹೊರಡುತ್ತಾರೆ. ಎಲ್ಲವೂ ಪ್ಲಾನ್ ಆಗುವುದು ಪ್ರಯಾಣದಲ್ಲೇ. ಸಾಗುವ ದಾರಿ ಮೋಹಕವಾಗಿದ್ದರೆ ಅದನ್ನು ಸವಿಯುತ್ತಲೆ ಸಾಗುತ್ತಿರುವುದು. ಅಲ್ಲೆ ಎಲ್ಲಾದರು ನೋಡಲೇಬೇಕಾದ, ಕಣ್ತುಂಬಿಸಿಕೊಳ್ಳಲೇಬೇಕಾದ ವಿಶೇಷತೆ ಏನಾದ್ರು ಇದ್ದರೆ ಅಲ್ಲಿಯೇ ಇಳಿದು ಬಿಡುವುದು. ಮನಸಿಗೆ ಇಷ್ಟವಾಗುವವರೆಗೆ ಅಲ್ಲಿಯೇ ಉಳಿದು ಪುನಃ ಹೊರಡುತ್ತಾರೆ. ಇದು ಕೂಡ ಒಂಥಾರ ಖುಷಿ ನೀಡುವ ಅನುಭವವೇ.
ಸ್ಥಳೀಯ ಊಟ, ತಿಂಡಿ ಸವಿಯುವುದು
ಇತ್ತೀಚಿನ ದಿನಗಳಲ್ಲಿ ಪ್ರವಾಸವೆಂದರೆ ಎಲ್ಲವನ್ನು ಪ್ರಾಯೋಗಿಕವಾಗಿ ಅನುಭವಕ್ಕೆ ತಂದುಕೊಳ್ಳುವುದೇ ಆಗಿದೆ. ದೂರ ನಿಂತು ನೋಡಿ ಬರುವುದಲ್ಲ. ಅದರ ಅನುಭವ ಪಡುವುದು ಕೂಡ ಇತ್ತೀಚಿನ ದಿನಗಳಲ್ಲಿ ಪ್ರವಾಸೋಧ್ಯಮ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಪ್ರಯಾಣದ ದಾರಿ ಮಧ್ಯೆ ಸಿಗುವ ಆಯಾ ಪ್ರದೇಶದ ವಿಶೇಷ ತಿಂಡಿಗಳನ್ನು ಸವಿಯುತ್ತಾ ಅದರ ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳುವುದು ಕೂಡ ಪ್ರವಾಸದ ಪ್ರಮುಖ ಭಾಗವಾಗಿದೆ.
ಸ್ಥಳೀಯರ ಜೊತೆ ಒಡನಾಟ
ರಾಷ್ಟ್ರಕವಿ ಕುವೆಂಪು ಹೇಳಿದಂತೆ ಇಲ್ಲಿ ಯಾವುದೇ ಮುಖ್ಯವೂ ಅಮುಖ್ಯವೂ ಅಲ್ಲ. ಎಲ್ಲವೂ ಅವರವರು ಭಾವಿಸಿದಂತೆ. ಹೀಗಾಗಿ ಇವತ್ತು ನಗರಗಳಲ್ಲಿ ವಾಸಿಸುತ್ತಿರುವ ಯುವಜನತೆಗೆ ನಮ್ಮ ಹಿಂದಿನ ತಲೆಮಾರುಗಳ ಅದರಲ್ಲೂ ಗ್ರಾಮೀಣ ಬದುಕನ್ನು ಅರಿಯಬೇಕು, ಸಾಧ್ಯವಾದರೆ ಅದನ್ನು ಪ್ರಾಯೋಗಿಕವಾಗಿ ಅನುಭವಿಸಬೇಕೆಂಬ ಆಸೆ ಹೆಚ್ಚಾಗುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮವೂ ಸಹ ಪ್ರವಾಸೋದ್ಯಮದ ಭಾಗವಾಗುತ್ತಿದೆ. ಒಂದಷ್ಟು ದಿನ ಗ್ರಾಮಗಳಲ್ಲಿಯೇ ಉಳಿದು, ಅವರು ಕೊಟ್ಟ ಊಟ ತಿಂಡಿ ತಿಂದು ಅವರೊಂದಿಗೆ ತೋಟ, ಹೊಲದ ಕೆಲಸ ಮಾಡುತ್ತಾ ಒಂದೆರಡು ದಿನ ಕಳೆಯುವಂತಹ ಪರಿಕಲ್ಪನೆ ಹೆಚ್ಚಾಗುತ್ತಿದೆ.
ಬದಲಾಗುತ್ತಿದೆ ಪ್ರವಾಸದ ಕಲ್ಪನೆ
ಹಿಂದಿನ ದಿನಗಳಲ್ಲಿ ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಮಾಡಿ ಬಂದರೆ ಪುಣ್ಯ ಬರುತ್ತದೆ. ಜನ್ಮ ಸಾರ್ಥಕವಾಗುತ್ತದೆ ಎಂಬ ಭಾವನೆಯಿಂದ ದೂರ ದೂರದ ಕ್ಷೇತ್ರಗಳಿಗೆ ನಡಿಗೆಯ ಮೂಲಕವೇ ಸಾಗುತ್ತಿದ್ದರು. ಈ ನಡಿಗೆಯಲ್ಲಿ ಎದುರಾಗುವ ಊರುಗಳಲ್ಲಿ ಕೊಟ್ಟಿದನ್ನು ತಿನ್ನುತ್ತಾ, ರಾತ್ರಿಯಾದರೆ ಅಲ್ಲಿಯೇ ತಂಗುತ್ತಾ ಮುಂದೆ ಮುಂದೆ ಸಾಗುತ್ತಿದ್ದರು. ಅದೇ ಬದಲಾದ ಘಟ್ಟದಲ್ಲಿ ಹೊಸ ಸ್ವರೂಪವನ್ನು ಪಡೆದುಕೊಂಡು ಪ್ರವಾಸೋದ್ಯಮದ ರೂಪರೇಷೆ ಪಡೆದಿದೆ.
ನಾವು ಎಷ್ಟೆ ಆಧುನಿಕತೆಯತ್ತ ಸಾಗುತ್ತಿದ್ದರೂ ಹಳೆ ಬೇರು ಹೊಸ ಚಿಗುರು ಎಂಬಂತೆ ನಮ್ಮ ಮೂಲಭೂತ ಪರಿಕಲ್ಪನೆಯ ಸಾರದಲ್ಲೇ ಹೊಸದನ್ನು ಕಟ್ಟುವುದಷ್ಟೆ ಆಗಿದೆ. ಈ ಆಧುನಿಕತೆಯ ವಸ್ತು-ವಿನ್ಯಾಸಗಳು ನಮ್ಮ ಮೂಲಭೂತವಾದಂತಹ ಪ್ರಕೃತಿಯ ಸೊಬಗನ್ನು ಹಾಳು ಮಾಡದಿದ್ದರೆ ಸಾಕು ಎನ್ನುತ್ತಾರೆ ಪರಿಸರ ಪ್ರೇಮಿಗಳು












Click it and Unblock the Notifications