ರಾಮನಗರ: ವಿದೇಶದವರೆಗೂ ಪ್ರಸಿದ್ಧಿ ಪಡೆದ 100 ವರ್ಷ ಹಳೆಯ ಮೈಸೂರು ಪಾಕ್ ಹೋಟೆಲ್ ಇದು, ವಿಶೇಷತೆ, ಇತಿಹಾಸ ತಿಳಿಯಿರಿ
ರಾಮನಗರ, ಅಕ್ಟೋಬರ್, 18: ರೇಷ್ಮೆನಾಡು ಖ್ಯಾತಿಯ ರಾಮನಗರ ಶ್ರೀ ಜನಾರ್ದನ ಹೋಟೆಲ್‌ನಲ್ಲಿ ತಯಾರಾಗುವ ಸ್ವಾದಿಷ್ಟಭರಿತ ತುಪ್ಪದ ಮೈಸೂರು ಪಾಕು ತನ್ನ ಖ್ಯಾತಿಯನ್ನು ದೇಶ, ಹೊರದೇಶಗಳಿಗೂ ಪಸರಿಸಿದೆ. ನಾಡಿನ ಖ್ಯಾತ ನಾಮರ ಮನಸೂರೆಗೊಂಡ ಶ್ರೀ ಜನಾರ್ಧನ ಹೋಟೆಲ್‌ನ ಮೈಸೂರು ಪಾಕ್‌ಗೆ 97 ವರ್ಷದ ಸಂಭ್ರಮ.
ರೆಬಲ್ ಸ್ಟಾರ್ ಅಂಬರೀಶ್ ಸೇರಿದಂತೆ ಹಲವು ಸಿನಿ ದಿಗ್ಗಜರ ಪ್ರಸಂಶೆ ಪಡೆದಿರುವ ಶ್ರೀಜನಾರ್ಧನ ಹೋಟೆಲ್ ತುಪ್ಪದ ಮೈಸೂರು ಪಾಕ್, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾದಿಯಾಗಿ ಹಲವು ರಾಜಕಾರಣಿಗಳಿಗೂ ಅಚ್ಚುಮೆಚ್ಚು. ಅಲ್ಲದೇ ಇಲ್ಲಿ ಮೈಸೂರು ಪಾಕ್ ಪ್ರಿಯರಿಂದ ಜಗತ್ತಿನ ನಾನಾ ದೇಶಗಳಲ್ಲಿ ನೆಲಸಿರುವ ತಮ್ಮ ಬಂಧುಗಳಿಗೂ ಮೈಸೂರು ಪಾಕ್ ರವಾನಿಸುತ್ತಾರೆ. ಅಲ್ಲದೇ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಹೋಟೆಲ್‌ಗೆ ಭೇಟಿ ನೀಡಿ ಸವಿದು ತಮ್ಮವರಿಗಾಗಿ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ.

ಸೌತ್ ಕೆನರಾ ಭಾಗದಿಂದ ಹಳೆ ಮೈಸೂರು ಭಾಗಕ್ಕೆ ವಲಸೆ ಬಂದ ಜನಾರ್ಧನಯ್ಯ ಎಂಬುವರು 1926ರಲ್ಲಿ ರಾಮನಗರದಲ್ಲಿ ಮೈಸೂರು ಪಾಕ್ ಮಾರಟ ಪ್ರಾರಂಭಿಸಿದರು. ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾದ ಮೈಸೂರು ಪಾಕ್ ಹೋಟೆಲ್ ಅನ್ನು ಪ್ರಸ್ತುತ ಮೂರನೇ ತಲೆಮಾರಿನ ಪ್ರಶಾಂತ್ ಮುನ್ನೇಡೆಸುತ್ತಿದ್ದಾರೆ. ಮೂರು ತಲೆಮಾರು ಸವೆಸಿದರೂ ತನ್ನು ರುಜಿ ಹಾಗೂ ಸ್ವಾದದಲ್ಲಿ ವ್ಯತ್ಯಾಸವಾಗದಂತೆ ಜಾಗ್ರತೆ ವಹಿಸಿದ್ದಾರೆ. ಹಾಗಾಗಿಇಲ್ಲಿನ ಮೈಸೂರು ಪಾಕ್ ಈಗಲೂ ಬಹುಬೇಡಿಕೆ ಹೆಚ್ಚಿದೆ.
1926ರಲ್ಲಿ ಒಂದು ಆಣೆ ರೂಪಾಯಿಗೆ ಒಂದು ಸೇರ್ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ತುಪ್ಪದ ಮೈಸೂರು ಪಾಕು ಹಂತ ಹಂತವಾಗಿ ಪರಿಷ್ಕರಣೆಯಾಗಿ ಪ್ರಸ್ತುತ k.g.920. ಬೆಲೆಯಿದ್ದು , ಹೋಟೆಲ್ 105 ಗ್ರಾಂ ಮೈಸೂರು ಪಾಕ್ 100 ರೂಪಾಯಿಗೆ ನೀಡುತ್ತಿದ್ದಾರೆ. ಇನ್ನೂ ಸಕ್ಕರೆ, ಕಡ್ಲೆಹಿಟ್ಟು ಬೆಲೆ ಏರಿಕೆಯಾದಗಲೂ ಮೈಸೂರು ಪಾಕ್ ಬೆಲೆ ಸ್ಥಿರವಾಗಿರುತ್ತದೆ. ಅದರೆ ತುಪ್ಪದ ಬೆಲೆ ಏರಿಕೆಯಾದಗ ಮಾತ್ರ ಮೈಸೂರು ಪಾಕ್ ಬೆಲೆ ಹೆಚ್ಚು ಮಾಡುತ್ತೇವೆ ಎನ್ನುತ್ತಾರೆ ಮಾಲೀಕ ಪ್ರಶಾಂತ್.
ದಶಕದ ಹೊಸ್ತಿಲಿನಲ್ಲಿ ಶ್ರೀಜನಾರ್ಧನ ಮೈಸೂರು ಪಾಕ್
ಜಿ.ಎಲ್.ಜನಾರ್ದನಯ್ಯ ಎಂಬುವರು 1926ರಲ್ಲಿ ಇದನ್ನು ಸ್ಥಾಪಿಸಿದರು. ಹಾಗಾಗಿ ಇದಕ್ಕೆ ಜನಾರ್ಧನ್ ಹೋಟೆಲ್ ಎಂದೇ ಹೆಸರಿದೆ. ಆಗಿನಿಂದಲೇ ಇದು ಮೈಸೂರು ಪಾಕಿಗೆ 'ಫೇಮಸ್' ಆಗಿತ್ತು. ಜನಾರ್ದನಯ್ಯ ಅವರು ಸಿದ್ಧಪಡಿಸುತ್ತಿದ್ದ ಮೈಸೂರು ಪಾಕ್ ಮೈಸೂರಿನ ಅರಮನೆಯನ್ನೂ ತಲುಪಿದೆ ಎಂದು ಸ್ಮರಿಸುತ್ತಾರೆ ಅವರ ಮೊಮ್ಮಗ ಜಿ.ಪಿ. ಪ್ರಶಾಂತ್.
ಜನಾರ್ದನಯ್ಯ ಅವರು 1962ರವರೆಗೆ ಹೋಟೆಲ್ ನಡೆಸಿಕೊಂಡು ಬಂದಿದ್ದರು. ನಂತರ ಅವರ ಮಗ ಪರಮೇಶ್ವರಯ್ಯ 2000ರವರೆಗೆ ಹೊಟೇಲ್ ಉದ್ಯಮ ಮುಂದುವರೆಸಿದರು. ನಂತರ ಮೂರನೇ ತಲೆಮಾರಿನ ಮೊಮ್ಮಗ ಜಿ.ಪಿ.ಪ್ರಶಾಂತ್ ಮುನ್ನಡೆಸುತ್ತಿದ್ದಾರೆ. ಮೂರು ತಲೆಮಾರು ಕಳೆದರೂ ಮೈಸೂರು ಪಾಕ್ ಅನ್ನು ಸ್ವತಃ ಪ್ರಶಾಂತ್ ಮತ್ತು ಅವರ ಪತ್ನಿ ಗಾಯತ್ರಿ ಅವರು ತಾವೇ ಪಾಕ ತೆಗೆಸಿ, ಮೈಸೂರು ಪಾಕ್‌ಗೆ ಅಂತಿಮ ಸ್ಪರ್ಶ ನೀಡುತ್ತಾರೆ.
ಸೌತ್ ಕೆನರಾ ಮೂಲದವರಾದ ನಮ್ಮ ತಾತ ಜಿ.ಎಲ್.ಜನಾರ್ದನಯ್ಯ ಅವರು ಹಳೆ ಮೈಸೂರು ಭಾಗದ ಮಂಡ್ಯಕ್ಕೆ ವಲಸೆ ಬಂದರು. ಮಂಡ್ಯದಲ್ಲಿ ವಾಸವಿದ್ದಾಗ ಅಲ್ಲಿನ ಶಿಕ್ಷಕರೊಬ್ಬರು ಮೈಸೂರು ಪಾಕ್ ತಯಾರಿಸುವುದನ್ನು ಹೇಳಿಕೊಟ್ಟಿದ್ದರು. ಅದರಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ರುಚಿಕರ ಮೈಸೂರು ಪಾಕ್ ಅನ್ನು ತಾತ ತಯಾರಿಸಿದರು. ಅದು ಬಾಯಲ್ಲಿಡುತ್ತಿದ್ದಂತೆ ಕರಗಿ ಬಿಡುತ್ತಿತ್ತು. ಸುವಾಸನೆಯಿಂದ ಕೂಡಿತ್ತು.
ಇದೇ ವಿದ್ಯೆಯನ್ನು ಅವರು ನನ್ನ ತಂದೆಗೂ ಪರಮೇಶ್ವರಯ್ಯ ಅವರಿಗೆ ಕಲಿಸಿದ್ದರು. ಬಳಿಕ ಅಪ್ಪನಿಂದ ನನಗೆ ಬಳುವಳಿಯಾಗಿ ಬಂತು ಎಂದು ಪ್ರಸ್ತುತ ಹೋಟೆಲ್ ನಡೆಸುತ್ತರುವ ಪ್ರಶಾಂತ್ ವಿವರಿಸಿದ್ದಾರೆ.
"ಕಡ್ಲೆಹಿಟ್ಟು, ತುಪ್ಪ ಮತ್ತು ಸಕ್ಕರೆಯನ್ನು ಸರಿಯಾದ ಮಿಶ್ರಣದೊಂದಿಗೆ ಬೆರೆಸಿ ಮೈಸೂರು ಪಾಕ್ ತಯಾರಿಸಲಾಗುವುದು. ತಾತ ಮತ್ತು ಅಪ್ಪ ಬೆಣ್ಣೆಯನ್ನು ಖರೀದಿಸಿ ತಾವೇ ತುಪ್ಪ ಮಾಡಿ ಮೈಸೂರು ಪಾಕ್ ತಯಾರಿಸುವ ಕಾರಣ 97 ವರ್ಷ ಕಳೆದರೂ ಮೈಸೂರು ಪಾಕ್ ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇತ್ತೀಚಿಗೆ ಕಾರ್ಮಿಕ ಕೊರತೆಯಾದ ಹಿನ್ನೆಲೆಯಲ್ಲಿ ಅಧುನಿಕ ಯಂತ್ರ ಬಳಸಿ ಮೈಸೂರು ಪಾಕ್ ತಯಾರು ಮಾಡತ್ತಿದ್ದೇವೆ," ಎಂದರು.
ಮೈಸೂರು ಪಾಕ್ ತಯಾರಿಕೆಗೆ ಯಂತ್ರ ಬಳಸಿದರೂ ಕಡ್ಲೆ ಹಿಟ್ಟು, ಸಕ್ಕರ ಮತ್ತು ತುಪ್ಪವನ್ನು ನಿಗದಿತ ಪ್ರಮಾಣದಲ್ಲಿ ಬಳಸುವುದು ಮತ್ತು ಮೈಸೂರು ಪಾಕ್‌ಗೆ ಅಂತಿಮ ಸ್ಪರ್ಶ ಬಹಳ ಮುಖ್ಯವಾಗಿರುವುದರಿಂದ ಅವನ್ನು ಸ್ವತಃ ನಾನು ಅಥವಾ ನನ್ನ ಪತ್ನಿ ಗಾಯಿತ್ರಿ ಪ್ರಶಾಂತ್ ಮಾಡುತ್ತೇವೆ. ಉಳಿದ ಕೆಲಸವನ್ನು ಹೋಟೆಲ್‌ನ ಸಿಬ್ಬಂದಿ ಮಾಡುತ್ತಾರೆಬಎಂದರು.
ಹೋಟೆಲ್ ಬೆಳಗ್ಗೆ 7:30ರಿಂದ ರಾತ್ರಿ 9 ಗಂಟೆಯವರೆಗೂ ತೆರೆದಿರುತ್ತದೆ. ಮೈಸೂರು ಪಾಕ್ ತಯಾರಿಕೆಯ ಕೆಲಸಕ್ಕೆ ಬೆಳಗ್ಗೆ 5:30ಕ್ಕೆ ಚಾಲನೆ ಸಿಗುತ್ತದೆ. ದಿನಕ್ಕೆ ಇಂತಿಷ್ಟು ಕೆ.ಜಿ ಎಂದು ನಿಗದಿ ಮಾಡಿಕೊಂಡು ಇದನ್ನು ತಯಾರಿಸುವುದಿಲ್ಲ. ಮುಂಗಡ ಬೇಡಿಕೆಯಿದ್ದರೆ ಅದಕ್ಕೆ ಅನುಗುಣವಾಗಿ ಸಿದ್ಧಪಡಿಸುತ್ತಾರೆ. ಅಲ್ಲದೆ ಹೋಟೆಲ್‌ನಲ್ಲಿ ಯಾವಾಗಲೂ ಕನಿಷ್ಠ 5 ಕೆ.ಜಿ ಮೈಸೂರು ಪಾಕ್ ಇರುವಂತೆ ಎಚ್ಚರವಹಿಸಲಾಗುತ್ತದೆ. ಅದು ಖಾಲಿಯಾಗುವುದಕ್ಕೂ ಮುನ್ನವೇ ಮತ್ತೆ 5 ಕೆ.ಜಿ ಸೇರುವಂತೆ ನೋಡಿಕೊಳ್ಳುತ್ತಾರೆ.
"ಕುಟುಂಬದವರೇ ಮುತುವರ್ಜಿ ವಹಿಸಿ ಮೈಸೂರು ಪಾಕ್ ತಯಾರಿಸುತ್ತಿರುವುದರಿಂದ ಗುಣಮಟ್ಟದಲ್ಲಿ ರಾಜಿ ಆಗಿಲ್ಲ. ನಿತ್ಯ ಸ್ಥಳೀಯ ಗ್ರಾಹಕರ ಜೊತೆಗೆ ಪ್ರವಾಸಿಗರು, ಹೊರ ಜಿಲ್ಲೆಯವರು, ರೈತರು, ಪ್ರಯಾಣಿಕರು ಬಂದು ಇಲ್ಲಿನ ಸಿಹಿಯನ್ನು ಸವಿಯುತ್ತಾರೆ. ಪೂರ್ಣ ತುಪ್ಪದಲ್ಲಿಯೇ ಮಾಡಿರುವುದರಿಂದ ಇಲ್ಲಿನ ಮೈಸೂರು ಪಾಕ್ ತಿಂಗಳುಗಟ್ಟಲೇ ಇಟ್ಟರೂ ಕೆಡುವುದಿಲ್ಲ. ಹಾಗಾಗಿ ಇಲ್ಲಿ ಖರೀದಿಸಿದ ಗ್ರಾಹಕರು ದೂರದ ಊರುಗಳಲ್ಲಿನ ತಮ್ಮ ಬಂಧುಗಳಿಗೂ ರವಾನಿಸುತ್ತಾರೆ.
ಪದವೀಧರರ ಕೈಯಲ್ಲಿ ತಯಾರಗುತ್ತದೆ ಮೈಸೂರು ಪಾಕ್
ಕಳದೆ 20 ವರ್ಷಗಳಿಂದ ಯಶಸ್ವಿಯಾಗಿ ರಾಜ್ಯ ಸೇರಿದಂತೆ ಹೊರ ದೇಶಗಳಿಗೆ ಮೈಸೂರು ಪಾಕ್‌ನ ಸವಿಯುಣಿಸುತ್ತಿರುವ ಪ್ರಶಾಂತ್ ದಂಪತಿ ಪದವೀಧರರು ಎಂಬುದು ವಿಶೇಷ. ಸ್ವತಃ ಮುತುವರ್ಜಿಯಿಂದ ಮೈಸೂರು ಪಾಕ್ ತಯಾರು ಮಾಡುತ್ತಿರುವ ಜಿ.ಪಿ.ಪ್ರಶಾಂತ್ ಅವರ ಪತ್ನಿ ಗಾಯಿತ್ರಿ Bsc ಪದವಿ ಪಡೆದಿದ್ದಾರೆ. ಇನ್ನೂ ಪ್ರಶಾಂತ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಸ್ವತಃ ಸಣ್ಣ ಕಾರ್ಖಾನೆ ಮಾಲೀಕರಾಗಿದ್ದವರು ತಮ್ಮ ತಂದೆಯ ನಂತರ ಮೈಸೂರು ಪಾಕ್ ಹೋಟೆಲ್ ನಡೆಸಲು ಮುಂದಾಗುತ್ತಾರೆ.
ಶತಕದ ಹೊಸ್ತಿಲಿನಲ್ಲಿರು ಶ್ರೀಜನಾರ್ಧನ ಹೋಟೆಲ್ ಮೈಸೂರು ಪಾಕ್ ಬೇಡಿಕೆ ಇತ್ತೀಜಿನ ದಿನಗಳಲ್ಲಿ 50% ಕುಸಿತ ಕಂಡಿದೆ. ನೂತನವಾಗಿ ನಿರ್ಮಾಣದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹೆದ್ದಾರಿ ಪಟ್ಟಣದ ಹೊರ ವಲಯದಲ್ಲಿ ಹಾದು ಹೋಗುವ ಕಾರಣ ಜನರು ಪಟ್ಟಣ ಪ್ರವೇಶ ಮಾಡಲು ಸಾಕಷ್ಟು ತೊಂದರೆ ಆಗುತ್ತಿದೆ. ಅಲ್ಲದೇ ರಾಮನಗರ ಜಿಲ್ಲಾ ಕೇಂದ್ರವಾದ ನಂತರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ ಟ್ರಾಪಿಕ್ ಕಿರಿಕಿರಿಯಿಂದ ಪ್ರವಾಸಿಗರು ಇತ್ತ ಬರುವುದು ತೊಂದರೆಯಾಗಿದೆ. ಇನ್ನೂ ಮೈಸೂರು ಪಾಕ್ ಸ್ವಾದಕ್ಕೆ ಮಾರುಹೊಗಿರುವ ಕೆಲ ಗ್ರಾಹಕರು ನಗರದ ಪರಿಚಯಸ್ಥರ ಮೂಲಕ ಮೈಸೂರು ಪಾಕ್ ತರಿಸಿಕೊಳ್ಳುತ್ತಾರೆ ಎನ್ನುತ್ತಾರೆ ಪ್ರಶಾಂತ್.












Click it and Unblock the Notifications