ಭಾರತದ 10 ರಲ್ಲಿ 7 ಮಂದಿ ಮಾಂಸಾಹಾರ ಪ್ರಿಯರು: ಇಲ್ಲಿದೆ ದೇಶದ ನಾನ್‌ವೆಜ್ ಲೋಕ
ಗುಜರಾತಿನ ವಡೋದರಾದಲ್ಲಿ ಮಾಂಸಾಹಾರಿ ಆಹಾರವನ್ನು ಮುಕ್ತವಾಗಿ ಮಾರಾಟ ಮಾಡುವುದನ್ನು ನಿಷೇಧ ಮಾಡಿದ ಬಳಿಕ ದೇಶದಲ್ಲಿ ಮಾಂಸಹಾರ, ಸಸ್ಯಹಾರದ ವಿಚಾರದಲ್ಲಿ ಹಲವಾರು ಚರ್ಚೆಗಳು ನಡೆಯುತ್ತಿದೆ. ಈ ಬೆನ್ನಲ್ಲೇ ರಾಜಕೋಟ್ ಹಾಗೂ ಭಾವನನಗರ ಸೇರಿ ಕೆಲವೆಡೆ ಮಾಂಸಾಹಾರವನ್ನು ಸಾರ್ವಜನಿಕವಾಗಿ ಮಾರಾಟ ಮಾಡುವುದನ್ನು ನಿಷೇಧ ಮಾಡಲು ಸ್ಥಳೀಯ ಆಡಳಿತ ಮುಂದಾಗಿದೆ. ಇನ್ನು ಗುರುಗ್ರಾಮದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಮಾಂಸಾಹಾರನ್ನು ಬಹಿರಂಗವಾಗಿ ಪ್ರದರ್ಶಿಸಿ ಇರಿಸಬಾರದು ಎಂದು ಹೇಳಿದೆ.
ಆದರೆ ಇವೆಲ್ಲವೂ ಕೂಡಾ ಭಾರತೀಯರ ಆಹಾರ ಪದ್ಧತಿಯನ್ನು ನಿಯಂತ್ರಿಸಲು ಅನೇಕ ಜನರು ಮಾಡುವ ಪ್ರಯತ್ನಗಳಿಗೆ ಒಂದು ನಿದರ್ಶನ ಎಂದು ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸುವವರು ಹೇಳುತ್ತಾರೆ. ಇನ್ನು ಶೇಕಡ 70 ರಷ್ಟು ಭಾರತೀಯರು ಮೀನು, ಮಾಂಸ ಹಾಗೂ ಮೊಟ್ಟೆಯಂತಹ ಆಹಾರವನ್ನು ಸೇವೆನೆ ಮಾಡುತ್ತಾರೆ ಎಂದು ಸಂಶೋಧನಾ ವರದಿಗಳು ಹೇಳುತ್ತದೆ.
ಈ ಎಲ್ಲಾ ವಿಚಾರಗಳ ನಡುವೆ ಸ್ಥಳೀಯವಾಗಿ ಕೆಲವು ಪ್ರದೇಶಗಳಲ್ಲಿ ಮಾಂಸಹಾರ ಮಾರಾಟವನ್ನು ನಿಷೇಧ ಮಾಡುವುದು ಜನರ ಕೆಂಗಣ್ಣಿಗೆ ಗುರಿಯಾಗಿರುವುದು ಕೂಡಾ ಹೌದು. ಮೊಟ್ಟೆಯಲ್ಲಿ ಉತ್ತಮ ಪೌಷ್ಟಿಕಾಂಶ ಇದೆ ಎಂದಾದರೂ ಕೂಡಾ ಸುಮಾರು ಒಂದು ಡಜನ್‌ನಷ್ಟು ರಾಜ್ಯಗಳ ಶಾಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ನೀಡುವುದಕ್ಕೆ ಅನುಮತಿ ಇಲ್ಲ. ಇಂಡಿಯಾ ಟುಡೇ ಡೇಟಾ ಇಂಟೆಲಿಜೆನ್ಸ್ ಯುನಿಟ್ (ಡಿಐಯು) ಕಡಿಮೆ ಮಾಂಸಾಹಾರಿಗಳು ಇರುವ ರಾಜ್ಯದಲ್ಲಿ ಮೊಟ್ಟೆಯನ್ನು ಶಾಲೆಯಲ್ಲಿ ನೀಡಲು ಹಿಂಜರಿಕೆ ಇದೆ ಎಂದು ಕಂಡು ಬಂದಿದೆ. ಇನ್ನು ಮಕ್ಕಳ ಮಧ್ಯಾಹ್ನದ ಬಿಸಿ ಊಟದಲ್ಲಿ ಮೊಟ್ಟೆಯನ್ನು ಸೇರಿಸುವ ವಿಚಾರವು ಇತ್ತೀಚೆಗೆ ಭಾರೀ ಚರ್ಚೆ ಆಗುತ್ತಿದೆ. ಮಧ್ಯಪ್ರದೇಶ ಸರ್ಕಾರವು ಊಟ ಮೆನುವಿನಿಂದ ಮೊಟ್ಟೆಯನ್ನು ತೆಗೆದು ಹಾಕಿದರೆ, ಕರ್ನಾಟಕ ಸರ್ಕಾರ ಮೊಟ್ಟೆಯನ್ನು ಸೇರಿಸಿದೆ. ಆದರೆ ಈ ನಡುವೆ ದೇಶದಲ್ಲಿ ಎಷ್ಟು ಜನರು ಮಾಂಸಹಾರಿಗಳು ಎಂಬುವುದನ್ನು ನಾವು ತಿಳಿಯಬೇಕಾಗಿದೆ. ಈ ಬಗ್ಗೆ ತಿಳಿಯಲು ಮುಂದೆ ಓದಿ.

ಭಾರತದಲ್ಲಿ ಮಾಂಸ ಪ್ರಿಯರೇ ಅಧಿಕ
ಭಾರತದಲ್ಲಿ ಸಸ್ಯಾಹಾರದ ವಿಚಾರವು ಹಳೆಯದೇನಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 4 ರ ಡೇಟಾವು (http://rchiips.org/nfhs/NFHS-4Reports/India.pdf) ದೇಶದಲ್ಲಿ 70 ಪ್ರತಿಶತ ಮಹಿಳೆಯರು ಮತ್ತು 78 ಪ್ರತಿಶತ ಪುರುಷರು ಕೆಲವು ರೀತಿಯ ಮಾಂಸವನ್ನು ಸೇವಿಸುತ್ತಾರೆ ಎಂದು ಉಲ್ಲೇಖ ಮಾಡಿದೆ. ಅಂದರೆ ಇಷ್ಟು ಜನರು ಮಾಂಸಹಾರಿಗಳು ಎಂದು ಸೂಚಿಸುತ್ತದೆ. ತೆಲಂಗಾಣ, ಆಂಧ್ರ ಪ್ರದದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಒಡಿಶಾ ಹಾಗೂ ಜಾರ್ಖಾಂಡ್ ರಾಜ್ಯದಲ್ಲಿ ಶೇಕಡ 97 ರಷ್ಟು ಮಂದಿ ಮಾಂಸಹಾರಿಗಳು ಆಗಿದ್ದಾರೆ. ಇನ್ನು ಪಂಜಾಬ್, ಹರಿಯಾಣ, ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಶೇಕಡ 40 ಕ್ಕಿಂತ ಕಡಿಮೆ ಮಂದಿ ಮಾಂಸಹಾರಿಗಳು ಆಗಿದ್ದಾರೆ ಎಂದು ಸರ್ಕಾರ ಡೇಟಾ ಹೇಳುತ್ತದೆ. ರಾಜಸ್ಥಾನದಲ್ಲಿ ಶೇಕಡ 26.8, ದೆಹಲಿಯಲ್ಲಿ ಶೇಕಡ 63.2, ಉತ್ತರ ಪ್ರದೇಶದಲ್ಲಿ ಶೇಕಡ 55, ಅಸ್ಸಾಂನಲ್ಲಿ ಶೇಕಡ 78.6, ಮಧ್ಯಪ್ರದೇಶದಲ್ಲಿ ಶೇಕಡ 51.1, ಮಹಾರಾಷ್ಟ್ರದಲ್ಲಿ ಶೇಕಡ 59, ಗುಜರಾತ್‌ನಲ್ಲಿ ಶೇಕಡ 39.9, ಪಶ್ಚಿಮ ಬಂಗಾಳದಲ್ಲಿ ಶೇಕಡ 98.7, ಕರ್ನಾಟಕದಲ್ಲಿ ಶೇಕಡ 79.1, ಆಂಧ್ರ ಪ್ರದೇಶದಲ್ಲಿ ಶೇಕಡ 98.4, ಕೇರಳದಲ್ಲಿ ಶೇಕಡ 97.4, ತಮಿಳುನಾಡಿನಲ್ಲಿ ಶೇಕಡ 97.8 ಮಂದಿ ಮಾಂಸಾಹಾರವನ್ನು ಸೇವನೆ ಮಾಡುತ್ತಾರೆ.

ಭಾರತ ಎಂಬ ಮೀಟ್ ಹೌಸ್
ಜಾಗತಿಕ ಮಾಂಸ ಉತ್ಪಾದನೆಯಲ್ಲಿ ಶೇಕಡ 2.18 ರಷ್ಟು ಮಾಂಸವನ್ನು ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಚೀನಾ, ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ರಷ್ಯಾ ಮತ್ತು ಜರ್ಮನಿಯ ನಂತರ ಆರನೇ ಸ್ಥಾನದಲ್ಲಿ ಭಾರತ ಇದೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ತಿಳಿಸಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪ್ರಕಾರ, ಭಾರತದಲ್ಲಿ ಮಾಂಸ ಉತ್ಪಾದನೆಯು 2014-15 ರಿಂದ 2019-20 ರವರೆಗೆ ಶೇಕಡ 5.15 ರಷ್ಟಿದೆ. ಇನ್ನು ಭಾರತದಲ್ಲಿ ಮಾಂಸ ಉತ್ಪಾದನೆಯ ಶೇಕಡ 30 ರಷ್ಟು ಎಮ್ಮೆಯ ಮಾಂಸವಾಗಿದೆ. . ರಾಜ್ಯಗಳ ಪೈಕಿ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ ಶೇಕಡ 15, ಮಹಾರಾಷ್ಟ್ರದಲ್ಲಿ ಶೇಕಡ 13 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇಕಡ 10 ರಷ್ಟು ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಈ ರಾಜ್ಯಗಳು ಭಾರತದ ಮಾಂಸ ಉತ್ಪಾದನೆಗೆ ಅಧಿಕ ಕೊಡುಗೆಯನ್ನು ನೀಡುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಕೋವಿಡ್ ನಂತರ ದೇಶದಲ್ಲಿ ಮಾಂಸ ವ್ಯಾಪಾರ ಹೇಗಿದೆ?
ಕೊರೊನಾ ವೈರಸ್ ಸೋಂಕು ದೇಶದ ಆರ್ಥಿಕತೆಗೆ ಮತ್ತಷ್ಟು ಹೊಡೆತವನ್ನು ನೀಡಿದೆ. ಈ ಕೋವಿಡ್ ಕಾರಣದಿಂದಾಗಿ ದೇಶದಲ್ಲಿ ಮಾಂಸ ಉದ್ಯಮ ಮಾತ್ರ ಯಾವುದೇ ಹಾನಿಗೆ ಒಳಗಾಗಿಲ್ಲ ಎಂದು ವರದಿಗಳು ಹೇಳಿದೆ. ಈ ಬಗ್ಗೆ ಜುಲೈನಲ್ಲಿ ಮಾಹಿತಿ ನೀಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು, "ದೇಶದಲ್ಲಿ ಎಮ್ಮೆಯ ಮಾಂಸದ ವ್ಯಾಪಾರಕ್ಕೆ ಯಾವುದೇ ತೊಂದರೆಯನ್ನು ಕೋವಿಡ್ ಉಂಟು ಮಾಡಿಲ್ಲ. ದೇಶದಲ್ಲಿ ಎಮ್ಮೆ ಮಾಂಸ ವ್ಯಾಪಾರವು ಯಾವುದೇ ಅಡೆತಡೆಗಳು ಇಲ್ಲದೆ ಸರಾಗವಾಗಿ ಸಾಗುತ್ತಿದೆ. ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಇದ್ದರೂ ಕೂಡಾ ಏಪ್ರಿಲ್ 2020-ಮಾರ್ಚ್ 2021 ರಲ್ಲಿ 3.17 ಶತಕೋಟಿ ಯುಎಸ್‌ಡಿಯಷ್ಟು ಮಾಂಸ ರಫ್ತನ್ನು ಮಾಡಲು ಸಾಧ್ಯವಾಗಿದೆ. ಇದು ಈ ಹಿಂದಿನ ವರ್ಷದ ರಫ್ತು ಮಟ್ಟಕ್ಕೆ ಸಮಾನವಾಗಿದೆ," ಎಂದು ಮಾಹಿತಿ ನೀಡಿದೆ.

ಭಾರತ ವಿಶ್ವದ ಅತೀ ದೊಡ್ಡ ಎಮ್ಮೆ ಮಾಂಸ ರಫ್ತುದಾರ ದೇಶ!
ಭಾರತವು ವಿಶ್ವದ ಅತೀ ದೊಡ್ಡ ಎಮ್ಮೆ ಮಾಂಸದ ರಫ್ತುದಾರ ರಾಷ್ಟ್ರವಾಗಿದೆ. ಭಾರತವು ಸರಿ ಸುಮಾರು 70 ಕ್ಕೂ ಹೆಚ್ಚು ದೇಶಗಳಿಗೆ ಎಮ್ಮೆಯ ಮಾಂಸವನ್ನು ರಫ್ತು ಮಾಡುತ್ತದೆ. 2018-19ರಲ್ಲಿ ಭಾರತದ ಅಗ್ರ ಹತ್ತು ಎಮ್ಮೆ ಮಾಂಸ ರಫ್ತುದಾರರಲ್ಲಿ ಏಳು ಮಂದಿ ಉತ್ತರ ಪ್ರದೇಶದವರು ಆಗಿದ್ದಾರೆ. ಇನ್ನು ಇಬ್ಬರು ಮಹಾರಾಷ್ಟ್ರದವರು ಮತ್ತು ಒಬ್ಬರು ದೆಹಲಿಯವರು ಆಗಿದ್ದಾರೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ 2019 ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ಹೇಳಿದ್ದಾರೆ. ಇನ್ನು ಒಇಸಿಡಿ ಮಾಹಿತಿ ಪ್ರಕಾರ, "2010 ರಿಂದ ದೇಶದಲ್ಲಿ ಮಾಂಸ ಸೇವನೆಯು ಕಡಿಮೆ ಆಗುತ್ತಾ ಬಂದಿದೆ. ಆದರೆ ಬಳಿಕ 2014 ಬಳಿಕ ದೇಶದಲ್ಲಿ ಮತ್ತೆ ಮಾಂಸ ಸೇವನೆ ಅಧಿಕವಾಗಿದೆ. ಕೋಳಿ ಹಾಗೂ ಕೋಳಿಯ ಇತರೆ ಉತ್ಪನ್ನಗಳ ಸೇವನೆಯು ನಿರಂತರವಾಗಿ ದೇಶದಲ್ಲಿ ಏರಿಕೆ ಆಗುತ್ತಿದೆ. ಈ ನಡುವೆ 2014 ರ ನಂತರ ಭಾರತದಲ್ಲಿ ಎಮ್ಮೆ ಮಾಂಸ ಸೇವನೆಯು ಕೂಡಾ ಅಧಿಕವಾಗಿದೆ. ಭಾರತದಲ್ಲಿ 2020 ರಲ್ಲಿ ಆರು ಮಿಲಿಯನ್ ಟನ್ ಮಾಂಸವನ್ನು ಸೇವನೆ ಮಾಡಲಾಗಿದೆ.
(ಒನ್‌ಇಂಡಿಯಾ ಸುದ್ದಿ)