ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

47 ವರ್ಷ ಹಿಂದೆ ಇದೇ ದಿನ ತುರ್ತುಸ್ಥಿತಿ; ಆ ಎಮರ್ಜೆನ್ಸಿಗೆ ಕಾರಣ ಏನು?

|
Google Oneindia Kannada News

ಬೆಂಗಳೂರು, ಜೂನ್ 25: ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಪ್ರಮುಖ ವಿದ್ಯಮಾನಗಳು ಯಾವುವು ಎಂದರೆ ಮನಸಿನಲ್ಲಿ ಬರುವ ಒಂದು ಸಂಗತಿ ಎಂದರೆ ತುರ್ತುಪರಿಸ್ಥಿತಿ. 1975, ಜೂನ್ 25 ರಂದು ಕೇಂದ್ರ ಸರಕಾರ ಎಮರ್ಜೆನ್ಸಿ ಜಾರಿಗೆ ತಂದಿತು.

ಆಂತರಿಕ ಬಿಕ್ಕಟ್ಟು ಎಂಬ ಕಾರಣ ಕೊಟ್ಟು ಇಂದಿರಾ ಗಾಂಧಿ ತುರ್ತು ಸ್ಥಿತಿ ಹೇರಿದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನಿಂತು ಹೋಯಿತು. ಮಾಧ್ಯಮ ಸ್ವಾತಂತ್ರ್ಯ ಇಲ್ಲವಾಯಿತು. ಸರಕಾರದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಜೈಲಿನ ಕಂಬಿ ಎಣಿಸುವಂತೆ ಮಾಡಲಾಗುತ್ತಿತ್ತು. ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನದಲ್ಲಿ ನೀಡಲಾಗಿದ್ದ ಪ್ರಮುಖ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು.

ಎರಡು ವರ್ಷಗಳವರೆಗೆ, ಅಂದರೆ 1977ರವರೆಗೆ ಈ ಕರಾಳ ಎಮರ್ಜೆನ್ಸಿ ಅವಧಿ ಇತ್ತು. ಸ್ವತಂತ್ರ ಭಾರತದ ಅತ್ಯಂತ ಕರಾಳ ಅವಧಿ ಇದು ಎಂದು ಬಣ್ಣಿಸಲಾಗುತ್ತದೆ.

ಅಜ್ಜಿ ಇಂದಿರಾ ಗಾಂಧಿ ಹೇರಿದ್ದ 'ತುರ್ತು ಪರಿಸ್ಥಿತಿ' ಖಂಡಿತವಾಗಿಯೂ ತಪ್ಪು ಎಂದ ರಾಹುಲ್ ಗಾಂಧಿಅಜ್ಜಿ ಇಂದಿರಾ ಗಾಂಧಿ ಹೇರಿದ್ದ 'ತುರ್ತು ಪರಿಸ್ಥಿತಿ' ಖಂಡಿತವಾಗಿಯೂ ತಪ್ಪು ಎಂದ ರಾಹುಲ್ ಗಾಂಧಿ

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಮಾಡಿದ ಚಳವಳಿಯನ್ನು ನೆನಪಿಸುವ ರೀತಿಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಗಳು ನಡೆದವು. ಕೋಟ್ಯಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ಪಕ್ಷಗಳ ರಾಜಕೀಯ ನೇತಾರರು, ಕಾರ್ಯಕರ್ತರು ಹೋರಾಟ ನಡೆಸಿದರು. ಪರಸ್ಪರ ತಾತ್ವಿಕ ವೈರುದ್ಧ್ಯಗಳಿದ್ದರೂ ತುರ್ತುಸ್ಥಿತಿ ವಿವಿಧ ಪಕ್ಷಗಳನ್ನು ಒಂದು ಮಾಡಿತು. ದೇವೇಗೌಡರು, ಎಲ್ ಕೆ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಮುಖಂಡರು ಜೈಲಿನಲ್ಲಿ ಸಮಾಗಮಗೊಂಡರು.

ಇದಕ್ಕೂ ಮುನ್ನ ಸ್ವತಂತ್ರ ಭಾರತದಲ್ಲಿ ಎರಡು ಬಾರಿ ತುರ್ತುಪರಿಸ್ಥಿತಿ ಘೋಷಣೆಯಾಗಿತ್ತೆಂಬುದು ಕುತೂಹಲ. 1962ರಲ್ಲಿ ಭಾರತದ ಮೇಲೆ ಚೀನಾ ಯುದ್ಧ ಸಾರಿದಾಗ ರಾಷ್ಟ್ರೀಯ ತುರ್ತುಸ್ಥಿತಿ ಉದ್ಧೀಪಿಸಲಾಯಿತು. ನಂತರ 1971ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವಾಗ ತುರ್ತು ಸ್ಥಿತಿ ಘೋಷಿಸಲಾಯಿತು. ಆದರೆ, ಆಂತರಿಕ ಕ್ಷೋಭೆಯ ಕಾಣವೊಡ್ಡಿ ತುರ್ತು ಪರಿಸ್ಥಿತಿ ಹಾಕಿದ್ದು 1975ರಲ್ಲೇ ಮೊದಲು.

'ಕರಾಳ ದಿನಗಳನ್ನು' ಎಂದಿಗೂ ಮರೆಯಲಾಗದು: ತುರ್ತು ಪರಿಸ್ಥಿತಿಯ 46 ನೇ ವರ್ಷದಂದು ಮೋದಿ ಟ್ವೀಟ್‌'ಕರಾಳ ದಿನಗಳನ್ನು' ಎಂದಿಗೂ ಮರೆಯಲಾಗದು: ತುರ್ತು ಪರಿಸ್ಥಿತಿಯ 46 ನೇ ವರ್ಷದಂದು ಮೋದಿ ಟ್ವೀಟ್‌

 ತುರ್ತು ಪರಿಸ್ಥಿತಿಗೆ ಅವಕಾಶ ಇದೆಯಾ?

ತುರ್ತು ಪರಿಸ್ಥಿತಿಗೆ ಅವಕಾಶ ಇದೆಯಾ?

ಯುದ್ಧ, ಬಾಹ್ಯ ಆಕ್ರಮಣ, ಸಶಸ್ತ್ರ ಬಂಡಾಯ ಇತ್ಯಾದಿ ಮೂಲಕ ಭಾರತದ ಭದ್ರತೆಗೆ ತೀವ್ರ ಅಪಾಯ ಉಂಟು ಮಾಡುವ ಘಟನೆ ಆಗುತ್ತಿದ್ದರೆ ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಗೆ ತರಲು ಭಾರತದ ಸಂವಿಧಾನದ ಆರ್ಟಿಕಲ್ 352ರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಧಾನಿ ನೇತೃತ್ವದ ಸಚಿವ ಸಂಪುಟದ ಲಿಖಿತ ಮನವಿ ಮೇರೆಗೆ ರಾಷ್ಟ್ರಪತಿಗಳು ತುರ್ತುಸ್ಥಿತಿ ಘೋಷಿಸಬಹುದು.

1975, ಜೂನ್ 25ರಂದು ಇಂದಿರಾ ಗಾಂಧಿ ನೇತೃತ್ವದ ಸಚಿವ ಸಂಪುಟದ ಶಿಫಾರಸಿನ ಮೇರೆಗೆ ಆಂತರಿಕ ಬಿಕ್ಕಟ್ಟಿನ ಕಾರಣ ಕೊಟ್ಟು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು.

1977ರ ಮಾರ್ಚ್ 21ರವರೆಗೆ ಈ ತುರ್ತು ಸ್ಥಿತಿ ಜಾರಿಯಲ್ಲಿತ್ತು. ಅಂದರೆ ಹೆಚ್ಚೂಕಡಿಮೆ 21 ತಿಂಗಳ ಕಾಲ ಭಾರತದ ಸ್ವಾತಂತ್ರ್ಯ ಕತ್ತಲಲ್ಲಿ ಮುಳುಗಿಹೋಗಿತ್ತು.

 ಇಂದಿರಾ ಗಾಂಧಿ ತುರ್ತುಸ್ಥಿತಿ ಘೋಷಿಸಲು ಏನು ಕಾರಣ?

ಇಂದಿರಾ ಗಾಂಧಿ ತುರ್ತುಸ್ಥಿತಿ ಘೋಷಿಸಲು ಏನು ಕಾರಣ?

ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕಿಂತಲೂ ಮಿಗಿಲಾದ ಬೃಹತ್ ಹೋರಾಟವನ್ನು ಎಪತ್ತರ ದಶಕದಲ್ಲಿ ಆರಂಭಿಸಿದವರು ಜಯಪ್ರಕಾಶ್ ನಾರಾಯಣ. ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಜಯಪ್ರಕಾಶ್ ನಾರಾಯಣ ಕಟ್ಟಿದ ಆಂದೋಲನ ಬೃಹತ್ ಕ್ರಾಂತಿ ತರುವ ಹಾದಿಯಲ್ಲಿತ್ತು. ಭಾರತದ ಆಡಳಿತ ವ್ಯವಸ್ಥೆ ವಿರುದ್ಧ ಜೆಪಿ ಚಳವಳಿ ರಣಕಹಳೆ ಹೊರಡಿಸಿತು. ಪ್ರಧಾನಿ ಇಂದಿರಾ ಗಾಂದಿ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿ ಚಳವಳಿ ದೊಡ್ಡ ಮಟ್ಟಕ್ಕೆ ಬೆಳೆಯಿತು.

ಅದೇ ವೇಳೆ, 1975, ಜೂನ್ 12ರಂದು ಅಲಾಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿತು. 1971ರ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಲ್ಲಿ ಇಂದಿರಾ ಗೆದ್ದಿದ್ದರು. ಅವರ ಎದುರಾಳಿಯಾಗಿದ್ದ ರಾಜ್ ನಾರಾಯಣ್ ಎಂಬುವರು ಇಂದಿರಾ ಗಾಂಧಿ ವಿರುದ್ಧ ಚುನಾವಣಾ ವಂಚನೆಯ ದೂರು ನೀಡಿದ್ದರು. ಇಂದಿರಾ ಗಾಂಧಿ ಸರಕಾರಿ ಯಂತ್ರದ ದುರ್ಬಳಕೆ ಮಾಡಿ ಚುನಾವಣೆ ಗೆದ್ದರೆಂಬ ಆರೋಪ ಸಾಬೀತಾಯಿತು. ೬ ವರ್ಷ ಅವರು ಚುನಾವಣೆಯಲ್ಲಿ ಸ್ಪರ್ಧಿಸಕೂಡದು, ಅಧಿಕಾರದಲ್ಲಿ ಇರಕೂಡದು ಎಂದು ಹೈಕೋರ್ಟ್ ಆದೇಶ ಹೊರಡಿಸಿತು. ಅವರ ಸಂಸದ ಸ್ಥಾನವನ್ನು ಅಮಾನ್ಯಗೊಳಿಸಲಾಯಿತು.

ಅದರೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಇಂದಿರಾ ಗಾಂಧಿ ಮೇಲ್ಮನವಿ ಸಲ್ಲಿಸಿ ಪ್ರಧಾನಿ ಸ್ಥಾನದಲ್ಲಿ ಮುಂದುವರಿದರು. ಆಗ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರು ಇಂದಿರಾ ಗಾಂಧಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸಿದರು. ಜೂನ್ 25ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಸುವುದಾಗಿ ಅವರು ಘೋಷಿಸಿದರು.

ಇಂದಿರಾ ಗಾಂಧಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿ ಜೂನ್ 25ರಂದು ತುರ್ತುಪರಿಸ್ಥಿತಿ ಘೋಷಿಸಿದರು.

 ಲಕ್ಷಾಂತರ ಮಂದಿ ಬಂಧನ

ಲಕ್ಷಾಂತರ ಮಂದಿ ಬಂಧನ

ತುರ್ತುಪರಿಸ್ಥಿತಿ ಜಾರಿಗೆ ಬಂದ ನಂತರ ದೇಶದೆಲ್ಲೆಡೆ ಜನತಾ ಚಳವಳಿಗಳು ಹೆಚ್ಚಿದವು. ಹಲವೆಡೆ ಜನರು ಬೀದಿಗೆ ಬಂದು ಪ್ರತಿಭಟನೆ ನಡೆಸಿದರು. ಪ್ರತಿಭಟಿಸಿದವರಲ್ಲಿ ಹೆಚ್ಚಿನವರನ್ನು ಜೈಲಿಗೆ ಮುಲಾಜಿಲ್ಲದೇ ಕಳುಹಿಸಲಾಗುತ್ತಿತ್ತು. ವಿಪಕ್ಷಗಳ ಬಹುತೇಕ ನಾಯಕರು ಪ್ರತಿಭಟನೆ ಮಾಡಲು ಹೋಗಿ ಬಂಧಿತರಾದರು. ಇನ್ನೂ ಹಲವು ನಾಯಕರು ಭೂಗತವಾಗಿದ್ದುಕೊಂಡು ಹೋರಾಟ ಮಾಡಿದರು.

ಜಯಪ್ರಕಾಶ್ ನಾರಾಯಣ, ಮೊರಾರ್ಜಿ ದೇಸಾಯಿ, ಚೌಧರಿ ಚರಣ್ ಸಿಂಗ್, ಎಲ್ ಕೆ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಮಧುದಂಡವತೆ, ಜಾರ್ಜ್ ಫರ್ನಾಂಡಿಸ್, ಹೆಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಮುಂತಾದ ವಿವಿಧ ಪಕ್ಷಗಳ ಮುಖಂಡರು ಬಂಧಿತರಾದರು. ಹಲವು ನಾಯಕರು ಒಂದೇ ಜೈಲಿನಲ್ಲಿ ಕೂಡಿಹಾಕಲ್ಪಟ್ಟರು. ಒಂದು ಲಕ್ಷಕ್ಕೂ ಹೆಚ್ಚು ಜನರು ಬಂಧಿತರಾದರೆಂದು ಹೇಳಲಾಗುತ್ತದೆ.

ಮಾಧ್ಯಮಗಳಿಗೆ ನಿರ್ಬಂಧ ಹಾಕಲಾಯಿತು. ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಿದರು. ಆಗಿನ್ನೂ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿ ಮೊದಲಾದವರು ಭೂಗತರಾಗಿದ್ದುಕೊಂಡೋ, ಮಾರುವೇಷದಲ್ಲಿದ್ದುಕೊಂಡೋ ಹೋರಾಟ ನಡೆಸಿದರು.

ತುರ್ತುಪರಿಸ್ಥಿತಿಯ 21 ತಿಂಗಳಲ್ಲಿ ಇಂದಿರಾ ಗಾಂಧಿ ಸರಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿತು. ಜನಸಂಖ್ಯೆ ನಿಯಂತ್ರಿಸಲು ಸಂಜಯ್ ಗಾಂಧಿ ಪುರುಷರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಬಲವಂತವಾಗಿ ಮಾಡಲಾಯಿತು. ಸಂವಿಧಾನದಲ್ಲೂ ಕೆಲ ಮಾರ್ಪಾಟು ಮಾಡಲಾಯಿತು. ಇಂಥ ಹಲವು ತುರ್ತು ಕ್ರಮಗಳನ್ನು ಮತ್ತು ವಿವಾದಾತ್ಮಕ ಕ್ರಮಗಳನ್ನು ಎಮರ್ಜೆನ್ಸಿಯ ಕರಿನೆರಳಿನಲ್ಲಿ ತೆಗೆದುಕೊಳ್ಳಲಾಯಿತು.

 ತುರ್ತುಪರಿಸ್ಥಿತಿ ಅಂತ್ಯ ಮತ್ತು ನಂತರ

ತುರ್ತುಪರಿಸ್ಥಿತಿ ಅಂತ್ಯ ಮತ್ತು ನಂತರ

1975 ಜೂನ್ 25ರಂದು ಆರಂಭವಾದ ತುರ್ತುಸ್ಥಿತಿ 1977 ಮಾರ್ಚ್ 23ರವರೆಗೆ 21 ತಿಂಗಳ ಕಾಲ ಇತ್ತು. ಸಂವಿಧಾನದ ನಿಯಮದ ಪ್ರಕಾರ ತುರ್ತುಪರಿಸ್ಥಿತಿಯನ್ನು ಪ್ರತೀ ಆರು ತಿಂಗಳಿಗೊಮ್ಮೆ ನವೀಕರಿಸುತ್ತಾ ಹೋದ ಇಂದಿರಾ ಗಾಂಧಿ ಅಂತಿಮವಾಗಿ ತುರ್ತುಪರಿಸ್ಥಿತಿ ರದ್ದು ಮಾಡಿ ಚುನಾವಣೆಯನ್ನು ನಡೆಸಿದರು.

ಆಗ ನಡೆದ ಚುನಾವಣೆಯಲ್ಲಿ ವಿಪಕ್ಷಗಳೆಲ್ಲವೂ ಒಂದಾಗಿ ಹೋಗಿದ್ದವು. ಕಾಂಗ್ರೆಸ್ ಪಕ್ಷ ಐತಿಹಾಸಿಕವಾಗಿ ಹೀನಾಯ ಸೋಲನುಭವಿಸಿತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಸೋಲನುಭವಿಸಿತು. ಸ್ವತಃ ಇಂದಿರಾ ಗಾಂಧಿಯೇ ಸೋತರು. ಜನತಾ ಪಕ್ಷ ನೇತೃತ್ವದಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದಿತು. ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾದರು.

(ಒನ್ಇಂಡಿಯಾ ಸುದ್ದಿ)

English summary
Indira Gandhi imposed emergency from 1975 June 25th to 1977 March 21st invoking constitution article giving the reason of internal conflict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X