'ತಾಯಿ-ಮಗನಂತೆ ಇದ್ದೇವು..ಕ್ಯಾನ್ಸರ್ ಅಂದಾಗ ಎಲ್ಲರನ್ನೂ ದೂರ ಇಟ್ರು'
ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಇಹಲೋಕ ತ್ಯಜಿಸಿ ವರ್ಷ ಸಮೀಪಿಸುತ್ತಿದೆ. ಎರಡು ವರ್ಷಗಳ ಕಾಲ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ದುರಾದೃವಶಾತ್ ಚಿಕಿತ್ಸೆ ಫಲಕಾರಿಯಾಗದೇ 2024ರ ಜುಲೈ 11ರಂದು ಕೊನೆಯುಸರೆಳೆದರು. ಕನ್ನಡ ಮನೋರಂಜನಾ ಕ್ಷೇತ್ರದಲ್ಲಿ ಸ್ನೇಹ ಜೀವಿಯಾಗಿದ್ದ ಅಪರ್ಣಾ ಕ್ಯಾನ್ಸರ್ ಎಂದು ತಿಳಿಯುತ್ತಿದ್ದಂತೆ ಎಲ್ಲರನ್ನೂ ದೂರ ಇಟ್ಟಿದ್ದರಂತೆ. ಈ ಬಗ್ಗೆ ಅವರ ಆತ್ಮೀಯ, ಅಪರ್ಣಾ ಮಗನಂತೆ ಕಾಣುತ್ತಿದ್ದ ನಟ ಯಶವಂತ್ ಬೆಟ್ಟಸ್ವಾಮಿ ಮಾತನಾಡಿದ್ದಾರೆ.
ಇಟ್ಸ್ ಮಜಾ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ಇವಳು ಸುಜಾತ ನನ್ನ ಮೊದಲ ಧಾರಾವಾಹಿ. ಈ ಧಾರಾವಾಹಿಯಲ್ಲಿ ನಾನು ಅಪರ್ಣಾ ಅವರ ಮಗನ ಪಾತ್ರ ಮಾಡುತ್ತಿದ್ದೆ. ಮೊದಮೊದಲು ಅವರನ್ನು ನೋಡಿದಾಗ ಹಳೆಯ ಕಲಾವಿದರು, ತುಂಬಾ ವರ್ಷದಿಂದ ಈ ಕ್ಷೇತ್ರದಲ್ಲಿ ಇದ್ದಾರೆ. ನಮ್ಮ ಜೊತೆಗೆ ಹೇಗೆ ಇರುತ್ತಾರೋ, ಹೇಗೆ ಬೆರೆಯುತ್ತಾರೋ ಎನ್ನುವುದು ನನ್ನ ತಲೆಯಲ್ಲಿ ಇತ್ತು. ಮೊದಲು ಹಾಯ್ ಬಾಯ್ ಅಂತಾ ಎಷ್ಟು ಬೇಕೋ ಅಷ್ಟೇ ಎನ್ನುವ ರೀತಿ ಇತ್ತು. ಅದಾದ ಮೇಲೆ ದಿನ ಕಳೆಯುತ್ತಾ ಕೆಲವು ದೃಶ್ಯಗಳು ಪ್ರೇಕ್ಷಕರಿಗೆ ಹೇಗೆ ಹತ್ತಿರವಾಯ್ತೋ, ನಮಗೂ ಹಾಗೇ ಹತ್ತಿರವಾಗಿತ್ತು. ತಾಯಿ-ಮಗನ ದೃಶ್ಯ ತುಂಬಾ ಇತ್ತು. ನೂರು ಸಂಚಿಕೆಗಳನ್ನು ಮಾಡುತ್ತಾ ಮಾಡುತ್ತಾ ನಮ್ಮಿಬ್ಬರ ನಡುವೆ ಅದೇ ಬಾಂಧವ್ಯ ಬೆಳೆಯಿತು' ಎಂದರು.

'ನಾನು ತೆರೆಯ ಹಿಂದೆ ಅಷ್ಟಾಗಿ ಯಾರ ಸ್ನೇಹವನ್ನು ಮಾಡಲ್ಲ. ಆದರೆ ಇವರ ಜೊತೆ ಒಂದು ವಿಭಿನ್ನವಾದ ತಾಯಿ-ಮಗನ ಬಾಂಧವ್ಯ ಬೆಳೆಯಿತು. ಆದರೆ ಒಂದು ಸಮಯದಲ್ಲಿ ಅವರು ದಿಢೀರ್ ಅಂತಾ ಎಲ್ಲರಿಂದಲೂ ಸಂಬಂಧಗಳನ್ನು ಕತ್ತರಿಸಿಕೊಳ್ಳಲು ಶುರು ಮಾಡಿದರು. ನಮಗೆ ಯಾಕೆ ಹೀಗೆ ಮಾಡಿದರು ಅಂತಾ ಆ ಸಮಯದಲ್ಲಿ ಅರ್ಥ ಆಗಲಿಲ್ಲ. ಅವರು ಯಾರ ಹತ್ತಿರನೂ ಈ ಬಗ್ಗೆ ಹೇಳಿಕೊಂಡಿಲ್ಲ. ಅವರು ತೀರಿಕೊಳ್ಳುವ ಒಂದು ವರ್ಷದ ಹಿಂದೆ ಭೇಟಿಯಾಗಿದ್ದೇವು. ಆಗ ಕೇಳಿದಾಗ ನನಗೆ ಆರೋಗ್ಯ ಸರಿ ಇರಲಿಲ್ಲ. ಆದರೆ ಈಗ ಹುಷಾರಾಗಿದ್ದೇನೆ ಎಂದಿದ್ದರು'.
'ನಮಗೆ ಅವರಿಗೆ ಕ್ಯಾನ್ಸರ್ ಫೈನಲ್ ಸ್ಟೇಜ್‌ಗೆ ಬಂದ ಮೇಲೆನೇ ಗೊತ್ತಾಗಿದ್ದು. ಎಲ್ಲರೂ ಕರುಣೆಯಿಂದ ಮುಂಚೆ ಇದ್ದ ರೀತಿ ಇರಲ್ಲ ಎಂದು ಯೋಚನೆ ಮಾಡಿ ಅವರು ಯಾರ ಬಳಿಯೂ ಈ ವಿಚಾರವನ್ನು ಹೇಳಿಕೊಂಡಿರಲಿಲ್ಲ. ನಮಗೆ ಆ ವಿಷಯ ಗೊತ್ತಾಗುವುದರಲ್ಲಿ ತುಂಬಾ ತಡವಾಗಿತ್ತು. ವಿಷಯ ಕೇಳಿ ತುಂಬಾ ಸಂಕಟವಾಯ್ತು. ಯಾಕೆಂದರೆ ಜೊತೆಯಲ್ಲಿ ಕೆಲಸ ಮಾಡಿರುವುದಕ್ಕಿಂತ ಅವರು ನನ್ನ ಜೊತೆಯಲ್ಲಿ ನಮ್ಮ ಕುಟುಂಬದವರ ರೀತಿ ಇದ್ದರು. ಹೀಗಾಗಿ ಅವರಿಗೆ ಇಂತಹ ಪರಿಸ್ಥಿತಿ ಎಂದು ತಿಳಿದಾಗ ಅರಗಿಸಿಕೊಳ್ಳಲು ತುಂಬಾ ಕಷ್ಟವಾಯ್ತು' ಎಂದರು.
' ಅಪರ್ಣಾ ಅವರು ಧಾರಾವಾಹಿ ಸೆಟ್‌ನಲ್ಲಿ ತುಂಬಾ ನಯ-ವಿನಯದಿಂದ ಇರುತ್ತಿದ್ದರು. ಅವರನ್ನು ನೋಡಿ ನಾನು ತುಂಬಾ ಕಲಿತಿದ್ದೇನೆ. ನಟನೆ ಮಾತ್ರವಲ್ಲ ನನ್ನ ಕನ್ನಡ ಕೂಡ ಅವರಿಂದ ಬದಲಾಗಿದೆ. ಸೆಟ್‌ನಲ್ಲಿ ಎಲ್ಲರಿಗೂ ಕುರುಕುಲು ತಿಂಡಿ ಅವರೇ ಕೊಡುತ್ತಿದ್ದದ್ದು, ಅಲ್ಲದೇ ಎಲ್ಲರಿಗೂ ತಮಾಷೆ ಮಾಡುತ್ತಿದ್ದರು. ಎಲ್ಲರ ಜೊತೆಗೂ ಮಾತನಾಡುತ್ತಿದ್ದರು. ಅಷ್ಟೇ ವಿನಯದಿಂದ ಇರುತ್ತಿದ್ದರು' ಎಂದು ಯಶವಂತ್ ಬೆಟ್ಟಸ್ವಾಮಿ ಹೇಳಿದರು.












Click it and Unblock the Notifications