ಯಶ್ 'ರಾಮಾಯಣ' ಹಳೇಯ 'ಕಿರಾತಕ' ಸಿನಿಮಾಗೂ ನಂಟು: ಆ ವಿಡಿಯೋ ವೈರಲ್ ಆಗ್ತಿರೋದೇಕೆ?: Yash Video
Yash Ramayana: ಭಾರತೀಯ ನಟ ಕನ್ನಡದ ಯಶ್ ಅವರ ನಟನೆಯ 'ರಾಮಾಯಣ' (Ramayana) ಸಿನಿಮಾದ ಗ್ಲಿಮ್ಸ್ ಇತ್ತೀಚೆಗೆ ಬಿಡುಗಡೆಯಾಗಿದೆ. ಅದನ್ನು ನೋಡಿದ ಬಹುತೇಕ ಎಲ್ಲ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಡಿದರೆ ಇಂಥಹ ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದಾರೆ. ಸಿನಿಮಾ ಅದ್ಧೂರಿಯಾಗಿ ಮೂಡಿ ಬರುತ್ತಿರುವುದುಕ್ಕೆ ಈ ಗ್ಲಿಮ್ಸ್ ಸಾಕ್ಷಿಯಾಗಿದೆ. ಯಶ್ ಅವರು ಮುಖ ಮುಚ್ಚಿಕೊಂಡ ಒಂದು ಸೀನ್‌ನಲ್ಲಿ ಮಾತ್ರವೇ ಕಾಣಿಸುತ್ತಾರೆ. ತಮ್ಮಿಷ್ಟದ 'ರಾವಣ'ನ ಪಾತ್ರದಲ್ಲಿ ನಟ ಯಶ್ ಕಾಣಿಸಲಿದ್ದಾರೆ. ಇದರ ಮಧ್ಯೆ ರಾಮಾಯಣ ಸಿನಿಮಾದ ದೃಶ್ಯ ಇದೇ ನೋಡಿ ಎಂಬ ಕೆಲವು ವಿಡಿಯೋಗಳು ವೈರಲ್ ಆಗುತ್ತಿವೆ..
ಯಶ್ ಅವರು ಮೊದಲಿನಿಂದಲೂ ದೊಡ್ಡದಾಗಿ ಯೋಚಿಸುವ ನಟ. ಮೊದಲೇ ಹೇಳಿ ನಂತರ ಹೇಳಿದ್ದನ್ನು ಸಾಧಿಸಿ ತೋರಿಸಬಲ್ಲ ಚತುರ. ಅದೆಲ್ಲವು ಈಗಾಗಲೇ ಸಾಬೀತಾಗಿದೆ. ಯಶ್ ಅವರು ರಾವಣನ ಪಾತ್ರ ಮಾಡಬೇಕು ಎಂದುಕೊಂಡಿದ್ದರು. ಅದನ್ನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದರು ಕೂಡ. ಅದರಂತೆ 'ರಾಮಾಯಣ' ರಾವಣ ಪಾತ್ರಕ್ಕೆ ಬಣ್ಣ ಹಚ್ಚಿಸಿದ್ದಾರೆ. ಅವರ ಪಾತ್ರ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದಂತೂ ಸುಳ್ಳಲ್ಲ. ಇದೇ ಮೊದಲ ಬಾರಿಗೆ ಸಿನಿಮಾ ವಿಚಾರದಲ್ಲಿ ಶ್ರೀರಾಮನ ಪಾತ್ರಕ್ಕಿಂತಲೂ ರಾವಣನ ಪಾತ್ರದ ಮೇಲೆ ಇಡೀ ಭಾರತದಲ್ಲಿ ಇಷ್ಟೊಂದು ಕ್ರೇಜ್ ಸೃಷ್ಟಿಯಾಗಿದೆ ಎನ್ನಬಹುದು.

ಯಶ್ ಹಳೇಯ ವಿಡಿಯೋಗಳು ವೈರಲ್..
ಅಭಿಮಾನಿಗಳು ಈ ಯಶ ಅವರ 'ರಾಮಾಯಣ' ಸಿನಿಮಾಗೂ ಅವರ ಹಳೇಯ ಸಿನಿಮಾಗಳಿಗೂ ನಂಟಿದೆ ಎಂದು ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಗಳಲ್ಲಿ ಗ್ಲಿಮ್ಸ್ ಬಿಡುಗಡೆ ಆದಾಗಿನಿಂದಲೂ ಹಳೇಯ ವಿಡಿಯೋಗಳು ವೈರಲ್ ಆಗುತ್ತಿವೆ.
ಹೌದು, ಯಶ್ ನಟನೆಯ 'ಕಿರಾತಕ' ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಯಶ್ ಅವರಿಗೆ ಚಿತ್ರರಂಗದಲ್ಲಿ ಸ್ಟಾರ್ ಗಿರಿ ಕೊಂಡೊಯ್ದ, ಭರವಸೆಯ ನಟನೆಂದು ಗುರುತಿಸುವಂತೆ ಮಾಡಿದ ಸಿನಿಮಾ ಅದು. ಮಂಡ್ಯ ಭಾಗದ ಕಥೆ ಎಲ್ಲರಿಗೂ ಇಷ್ಟವಾಗಿತ್ತು. ಆ ಸಿನಿಮಾದಲ್ಲಿ ತಮ್ಮ ಸ್ನೇಹಿತನಿಗಾಗಿ ಬೇರೊಂದು ಊರಿಗೆ ತೆರಳಿ ಪಾನಮತ್ತ ನಟ ಯಶ್ ಯುವತಿ ಮನೆಗೆ ನುಗ್ಗಿ ಆಕೆಯನ್ನು ಅಪಹರಿಸುವ ದೃಶ್ಯ ಇತ್ತು. ಇದೀಗ ಆ ದೃಶ್ಯವನ್ನು ರಾಮಾಯಣಕ್ಕೆ ಹೋಲಿಕೆ ಮಾಡುತ್ತಿದ್ದಾರೆ.
ರಾಮಾಯಣದಲ್ಲಿ ಶ್ರೀರಾಮನ ಮಡದಿ ಸೀತೆಯನ್ನು ಅಪಹರಿಸುವ ರಾವಣ ಕಥೆ ಎಲ್ಲರಿಗೂ ಗೊತ್ತೆ ಇದೆ. ಇದೇ ಪಾತ್ರವನ್ನು ಮಾಡುತ್ತಿರುವ ಯಶ್ ಅವರು ಸಹ ಸೀತೆಯನ್ನು ಇದೇ ರೀತಿ 'ರಾಮಾಯಣ'ದಲ್ಲಿ ಅಪಹರಿಸಿದ್ದಾರೆ ಎಂಬಂತೆ ಹಳೇಯ ವಿಡಿಯೋಗಳನ್ನು ಗ್ಲಿಮ್ಸ್‌ಗೆ ಎಡಿಟ್ ಮಾಡಿ ಶೇರ್ ಮಾಡುತ್ತಿದ್ದಾರೆ. ಇವು ಸಾಕಷ್ಟು ವೈರಲ್ ಆಗುತ್ತಿವೆ. ಜನ ಮೇಲಿಂದ ಮೇಲೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಅಷ್ಟೇ ಅಲ್ಲದೇ 'ಮಾಸ್ಟರ್ ಪೀಸ್' ಸಿನಿಮಾದಲ್ಲಿ ಯಶ್ ತಮ್ಮ ಮನೆಯ ಪುಟ್ಟ ಬಾಲಕನಿಗೆ 'ಶ್ರೀಕೃಷ್ಣನ ವೇಷ ಧರಿಸುವ ಬದಲು, ರಾವಣನ ಪಾತ್ರದ ವೇಷ ಹಾಕಿ ಕೈಲಿ ಗದೆ ಕೊಟ್ಟು ಖಡಕ್ ಆಗಿ ನಿಲ್ಲಿಸಿ' ಎಂದು ಸೂಚಿಸುವ ದೃಶ್ಯವಿದೆ. ಆ ವಿಡಿಯೋ ಸಹ ಇದೀಗ ವೈರಲ್ ಆಗುತ್ತಿದೆ. 'ಇವನತ್ರ ಕಿರಿಕ್ ಇಟ್ಗೊಬೇಡಿ, ಏಕೆಂದ್ರೆ ರಾಮಾಯಣದಲ್ಲಿ ಇವನದು ರಾವಣ ಪಾತ್ರ' ಎಂಬ ಯಶ್ ಚಿತ್ರ ಹಾಡಿನ ವಿಡಿಯೋ, ಸಾಲು ಸಹ ವೈರಲ್ ಆಗುತ್ತಿದೆ. ಯಶ್ ಅವರು ಈ ಹಿಂದೆ ಹೇಳಿದ್ದು, ಇಂದು ಆಗುತ್ತಿರುವುದನ್ನು ಅವರ ಅಭಿಮಾನಿಗಳು ಮರೆತಿಲ್ಲ. ಹೇಳಿದ್ದನ್ನು ನಮ್ ಬಾಸ್ ಮಾಡುತ್ತಾರೆ ಎಂದು ಹಳೇಯ ಹೊಸ ವಿಡಿಯೋ ಹಂಚಿಕೊಂಡು ಖಷಿ ಪಡುತ್ತಿದ್ದಾರೆ. ಯಶ್ ಏನೇ ಮಾಡಿದರೂ ದೊಡ್ಡ ಸುದ್ದಿಯಾಗುತ್ತದೆ ಎಂಬುದಕ್ಕೆ ಅವರು ಮುಂಬರುವ ಸಿನಿಮಾಗಳು ಅವರು ಕೈಗೊಳ್ಳವ ನಿರ್ಧಾರಗಳೇ ಸಾಕ್ಷಿಯಾಗಿದೆ.
'ರಾಮಾಯಣ' ಸಿನಿಮಾ ತಾರಾಗಣ
ಯಶ್ ನಟನೆಯ 'ರಾಮಾಯಣ'ವನ್ನು ನಿತೀಶ್ ತಿವಾರಿ ಅವರು ನಿರ್ದೇಶಿಸುತ್ತಿದ್ದಾರೆ. ಸುಮಾರು 800 ಕೋಟಿಗೂ ಅಧಿಕ ಬಜೆಟ್ ಸಿನಿಮಾ ಇದು ಎನ್ನಲಾಗಿದೆ. ಚಿತ್ರದ ಮುಖ್ಯ ತಾರಾಗಣದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಸನ್ನಿ ಡಿಯೋಲ್, ಲಾರಾ ದತ್ತಾ, ಅರ್ಜುನ್ ಗೋವಿಲ್, ರವಿ ದುಬೆ, ರಾಕುಲ್ ಪ್ರೀತ್ ಸಿಂಗ್, ಶೀಬಾ ಚಡ್ಡಾ, ಮತ್ತು ರಮ್ಯಾ ಕೃಷ್ಣನ್ ನಟಿಸುತ್ತಿದ್ದಾರೆ.












Click it and Unblock the Notifications