Toxic; ಬೆಂಗಳೂರಿನಲ್ಲೇ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಶೂಟಿಂಗ್; ಬೃಹತ್ ಸೆಟ್ ನಿರ್ಮಾಣ
ರಾಕಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್; ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಚಿತ್ರೀಕರಣ ಕರ್ನಾಟದಲ್ಲೇ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಚಿತ್ರಕ್ಕಾಗಿ ಭಾರಿ ವೆಚ್ಚದಲ್ಲಿ ಸೆಟ್ ಹಾಕಲಾಗಿದ್ದು, ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಕಲ್ಪಿಸಲು ಯಶ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಕೆಜಿಎಫ್ ಸರಣಿ ಸಿನಿಮಾಗಳ ಭಾರಿ ಯಶಸ್ಸಿನ ಬಳಿಕ ಅಳೆದು ತೂಗಿ ಮುಂದಿನ ಸಿನಿಮಾ ಮಾಡಲು ಯಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ದೊಡ್ಡ ದೊಡ್ಡ ನಿರ್ದೇಶಕರ ಆಫರ್ ಗಳನ್ನು ತಿರಸ್ಕರಿಸಿದ ಯಶ್, ಗೀತು ಮೋಹನ್ ದಾಸ್ ಅವರ ಜೊತೆ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದಾರೆ.

ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಯಾಗಿ ಈ ಅದ್ಧೂರಿ ಸಿನಿಮಾಗೆ ಬಂಡವಾಳ ಹೂಡಲಿದೆ. ಯಶ್ ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.
ಖಚಿತಪಡಿಸಿದ ನಿರ್ಮಾಪಕರು
ಟಾಕ್ಸಿಕ್ ಸಿನಿಮಾದ ಶೂಟಿಂಗ್ ಕರ್ನಾಟಕದಲ್ಲೇ ನಡೆಯುವ ಬಗ್ಗೆ ನಿರ್ಮಾಪಕರು ಖಚಿತಪಡಿಸಿದ್ದಾರೆ. "ಸೂಕ್ತ ಸೌಲಭ್ಯಗಳ ಕೊರತೆಯಿಂದ ಕನ್ನಡದ ದೊಡ್ಡ ಬಜೆಟ್ ಸಿನಿಮಾಗಳು ಬಹುತೇಕ ಹೊರ ರಾಜ್ಯಗಳಲ್ಲಿ ಚಿತ್ರೀಕರಣವಾಗುತ್ತವೆ. ಯಶ್‌ಗೆ ಈ ಬಗ್ಗೆ ಮೊದಲಿನಿಂದಲೂ ಕಾಳಜಿ ಇದೆ. ಆ ಅಭ್ಯಾಸವನ್ನು ಬದಲಾಯಿಸಲು, ಕರ್ನಾಟಕದಲ್ಲಿ ಟಾಕ್ಸಿಕ್‌ನ ಚಿತ್ರೀಕರಣವನ್ನು ಪ್ರಾರಂಭಿಸುತ್ತಿದ್ದೇವೆ." ಎಂದು ಹೇಳಿದ್ದಾರೆ.
"ಈಗಾಗಲೇ ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದೇವೆ, ಕರ್ನಾಟಕ ಜನರು, ತಂತ್ರಜ್ಞರು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಅನೇಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದ್ದೇವೆ. ನಾವು ಜಾಗತಿಕ ಗುಣಮಟ್ಟದ ಚಲನಚಿತ್ರವನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ." ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ತಂತ್ರಜ್ಞರಿಂದ ಕೆಲಸ
"ಭಾರತ ಮತ್ತು ವಿವಿಧ ದೇಶಗಳಲ್ಲಿ ವಿವಿಧ ಸ್ಥಳಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಲಾಗಿದೆ. ಅನೇಕ ಸಿನಿಮಾರಂಗದ ನಟರು, ತಂತ್ರಜ್ಞರು ಟಾಕ್ಸಿಕ್ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಸಿನಿಮಾಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು ಕೂಡ ಟಾಕ್ಸಿಕ್‌ಗಾಗಿ ಕೆಲಸ ಮಾಡಲಿದ್ದಾರೆ, ಚಿತ್ರದ ಉಳಿದ ಭಾಗವನ್ನು ಬೇರೆಡೆ ಶೂಟಿಂಗ್ ಮಾಡುವ ಮೊದಲು, ಕರ್ನಾಟಕದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ" ಎಂದು ನಿರ್ಮಾಪಕರು ಹೇಳಿದ್ದಾರೆ.
ಅದ್ಧೂರಿ ತಾರಾಗಣ
ಇನ್ನು ಸಿನಿಮಾದಲ್ಲಿ ಅದ್ಧೂರಿ ತಾರಾಗಣ ಇರಲಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಯಶ್ ಸಹೋದರಿಯಾಗಿ ನಟಿಸುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಕಿಯಾರ ಅಡ್ವಾಣಿ, ಶೃತಿ ಹಾಸನ್ ಮತ್ತು ಸಾಯಿ ಪಲ್ಲವಿ ಕೂಡ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಏಪ್ರಿಲ್ 10, 2025 ರಂದು ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ.












Click it and Unblock the Notifications